Skip links

ಆರಗ್ವದ

Scientific Name: Cassia fistula

ಆರಗ್ವದ ಮರಕ್ಕೆ ಕನ್ನಡದಲ್ಲಿ ಮತ್ತು ತುಳುವಿನಲ್ಲಿ ಕೊಂದೆ ಮರ (ಕಾಯಿಲೆಯನ್ನು ಕೊಲ್ಲುವ) ಎನ್ನುತ್ತಾರೆ. ಆರಗ್ವದ (ಆ+ರುಕ್) ಹೆಸರಿನಲ್ಲಿರುವ “ರುಕ್” ಶಬ್ಧಕ್ಕೆ ರೋಗ ಎಂದರ್ಥ. ಅಂದರೆ ರೋಗವನ್ನು ನಾಶ ಮಾಡುವ ಔಷಧಿ ಗುಣವುಳ್ಳ ಮರ. ಕೇರಳದಲ್ಲಿ ವಿಷುವಿಗೆ ಎಲ್ಲಾ ಫಲವಸ್ತುಗಳೊಂದಿಗೆ ಇದರ ಹೂವನ್ನು ಇಟ್ಟೇ ಇಡುತ್ತಾರೆ. ಇದಕ್ಕೆ “ಕೊನ್ನಪೂ” ಎನ್ನುತ್ತಾರೆ.
30-40 ಅಡಿ ಎತ್ತರ ಬೆಳೆಯುವ ಬೂದು ಮಿಶ್ರಿತ ಬಿಳಿ ಕಾಂಡವನ್ನು ಹೊಂದಿದ ಮರ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ತನ್ನ ಎಲೆಗಳನ್ನು ಉದುರಿಸಿ ಹಳದಿ ವರ್ಣದ ಹೂಗಳಿಂದ ಮರ ತುಂಬಿ ಕಂಗೊಳಿಸುತ್ತದೆ. ಮರ ಸುವರ್ಣಮಯವಾಗಿ ಕಾಣುವುದರಿಂದ “ಸುವರ್ಣಕ” ಎಂದೂ ಕರೆಯುತ್ತಾರೆ. 8-10 ಎದುರುಬದುರಾದ ಎಲೆಗಳಿಂದ ಕೂಡಿದ ಒಂದು ಅಡಿ ಉದ್ದದ ಪತ್ರವೃಂತ. ಪಚ್ಚೆ ಬಣ್ಣದ ಉದ್ದವಾದ ಕೋಡುಗಳು ಬೆಳೆದು ಕಪ್ಪಾಗಿ ಮಾರ್ಪಾಡಾಗಿ ಮರದಲ್ಲಿ ನೇತಾಡಿ ಕೊಂಡಿರುತ್ತದೆ. ಇದರೊಳಗೆ ಹಲ್ವದಂತಿರುವ ಸಿಹಿ ಪದಾರ್ಥ ತಿನ್ನಲು ಯೋಗ್ಯವಾಗಿದೆ. 30-60 ಬೂದು ಬಣ್ಣದ ಗಟ್ಟಿಯಾದ ಅಂಡಾಕಾರದ ಬೀಜಗಳು ಕೋಡಿನ ಒಳಗೆ ಇರುತ್ತದೆ. ಇದರ ಹೂ, ಎಲೆ, ತೊಗಟೆ, ಕೋಡಿನ ಒಳಗೆ ಇರುವ ಅಂಟಾದ ಪದಾರ್ಥ ಔಷಧಿಗಾಗಿ ಬಳಸಲಾಗುತ್ತದೆ.

ಹೂ:

8-10 ಗ್ರಾಂ ನಷ್ಟು ಹೂವಿನ ರಸ (ಜ್ಯೂಸ್) ತೆಗೆದು ಕುಡಿಯುವುದರಿಂದ ಶರೀರಕ್ಕೆ ತಂಪು ನೀಡುವುದು. ಸ್ತ್ರೀಯರ ಬಿಳಿ ಸ್ರಾವದಲ್ಲಿ ಇದನ್ನು ಒಂದು ವಾರ ಸೇವಿಸುವುದರಿಂದ ಪ್ರಯೋಜನ ಕಂಡುಕೊಳ್ಳಬಹುದು.

ಎಲೆ:

ಚರ್ಮದಲ್ಲಿ ಕಜ್ಜಿ, ತುರಿಕೆಗಳು ಇರುವಾಗ ಎಲೆಯನ್ನು ನಯವಾಗಿ ಅರೆದು ಹಚ್ಚಬೇಕು. ನೋವು ಬಾವುಗಳು ಇರುವಾಗಲೂ ಅರೆದು ಹಚ್ಚಬಹುದು. ಬಾಯಿಯ ಒಳಗೆ ಹುಣ್ಣುಇರುವಾಗ ಕಷಾಯ ಮಾಡಿ ಬಾಯಿ ಮುಕ್ಕಳಿಸಬೇಕು.

ತೊಗಟೆ:

ಚರ್ಮದ ಮೇಲೆ ಅಲ್ಲಲ್ಲಿ ಕುರ(Abscess)ಗಳು ಕಂಡುಬಂದರೆ 10ಗ್ರಾಂ ನಷ್ಟು ತೊಗಟೆಯ ಕಷಾಯ ಮಾಡಿ ದಿನಕ್ಕೆ 2 ಸಲ 14 ದಿನ ಕುಡಿಯಬೇಕು. ನೀರು ಸೂಸುವ ತುರಿಕೆ ಕಜ್ಜಿಗಳಿದ್ದರೆ ಇದರ ತೊಗಟೆ ಹಾಗೂ ಕೇಪುಳು ಬೇರಿನ ಸಿಪ್ಪೆ ಸೇರಿಸಿ ಅರೆದು ಹಚ್ಚಬೇಕು. ಗುಣವಾಗದ ಹುಣ್ಣುಗಳನ್ನು ತೊಳೆಯಲು ಇದರ ಕಷಾಯ
ಉಪಯೋಗಿಸಬಹುದು.

ಬಿಳಿಸ್ರಾವ, ತುರಿಕೆ, ಗರ್ಭಾಶಯ ದ್ವಾರ ನಂಜು (Cervix infection) ಇರುವಾಗ ಇದರ ಕಷಾಯ ಮಾಡಿ ತೊಳೆಯುವುದರಿಂದ ಅಥವಾ ಕಷಾಯದಲ್ಲಿ 10-15 ನಿಮಿಷ ಕುಳಿತುಕೊಳ್ಳುವುದರಿಂದ (Sitz bath) ಪರಿಹಾರ ಕಂಡುಕೊಳ್ಳಬಹುದು.

ಕೋಡಿನ ಒಳಗಿರುವ ಸಿಹಿಯಾದ ದ್ರವ್ಯ (Fruit pulp):

ಕಪ್ಪಾದ ಕೋಡನ್ನು 7 ದಿನ ಹೊೈಗೆಯ ಒಳಗೆ ಹುಗಿದಿಟ್ಟು ನಂತರ 7 ದಿನ ಬಿಸಿಲಲ್ಲಿ ಒಣಗಿಸಿ ಕೋಡನ್ನು ಮುರಿದು ಒಳಗಿನ ಸಿಹಿಯಾದ ಅಂಟು ದ್ರವ್ಯವನ್ನು ಸಂಗ್ರಹಿಸಬೇಕು. ಇದು ರುಚಿಯಲ್ಲಿ ಸಿಹಿಯಾಗಿರುವುದರಿಂದ ಮಕ್ಕಳು ಇಷ್ಟ ಪಡುತ್ತಾರೆ. ಇದನ್ನು ಮಲಬದ್ದತೆಯಲ್ಲಿ ಉಪಯೋಗಿಸಲಾಗುತ್ತದೆ. ದಿನದಲ್ಲಿ ಒಂದು ಗ್ರಾಂ ನಿಂದ ಹದಿನೈದು ಗ್ರಾಂ ವರೇಗೆ ಸೇವಿಸಬಹುದು. ಮೂರು ತಿಂಗಳ ಮಗುವಿನಿಂದ ನೂರು ವರ್ಷದ ವಯಸ್ಕರೂ ಇದನ್ನು
ಸೇವಿಸಬಹುದು.

ಪಿತ್ತ ಶಮನ (ಶರೀರ ಉರಿ) ಮಾಡುವುದು. ಹಾಲು, ಒಣ ದ್ರಾಕ್ಷೆಯೊಂದಿಗೆ ಸೇರಿಸಿ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದು. ಅಜೀರ್ಣದಿಂದ ಉಂಟಾಗುವ ಹೊಟ್ಟೆ ನೋವಿಗೂ ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು. ಮಾರುಕಟ್ಟೆಯಲ್ಲಿ ಪುಡಿರೂಪದಲ್ಲಿ “ಅಮ್ಲತಾಸ್” ಎಂಬ ಹೆಸರಿನಲ್ಲಿ ಮಾರಾಟವಾಗುತ್ತದೆ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.