Skip links

ನೆಲನೆಲ್ಲಿ

Scientific Name : Phyllanthus urinaria

               ನೀರಿದ್ದರೆ ವರ್ಷವಿಡೀ ಕಂಡುಬರುವ ಸಸ್ಯ. ಇದನ್ನು ಭೂಮ್ಯಾಮಲಕಿ ಎಂದೂ ಕರೆಯುತ್ತಾರೆ. ಆಮಲಕಿಯ ಎಲೆ, ಬೀಜಗಳ ಆಕಾರ, ಸ್ಥಾನ ಒಂದೇ ರೀತಿಯಾಗಿದೆ. ಭೂಮ್ಯಾಮಲಕಿ ಸಣ್ಣದಾಗಿ ಕಂಡರೆ ನೆಲ್ಲಿಕಾಯಿ ಸ್ಥೂಲರೂಪದಲ್ಲಿ ಕಂಡು ಬರುತ್ತದೆ. ಒಂದರಿಂದ ಒಂದೂವರೆ ಅಡಿ ಎತ್ತರ ಬೆಳೆಯುವ ಗಿಡ. ಮಳೆ ಬಿದ್ದಕೂಡಲೇ ಅಲ್ಲಲ್ಲಿ ಹುಟ್ಟಿ ಬೆಳೆಯುತ್ತದೆ. ಸಣ್ಣ ಎಲೆಗಳು ಎದುರು ಬದುರು ಸಂಗಮ ಆದಲ್ಲಿ ಕೆಳಗೆ ಮಣಿಯಾಕಾರದ ಬೀಜಗಳು ಜೊತುಕೊಂಡಿರುತ್ತದೆ.ಇದರ ರುಚಿ ಕಹಿ, ಸಿಹಿ, ಚೊಗರು ರಸಗಳ ಮಿಶ್ರಣವಾಗಿದೆ.  

ಜಾಂಡೀಸ್ :

ಜಾಂಡೀಸ್ ಎಂದ ತಕ್ಷಣ ನಮ್ಮಲ್ಲಿ ಎಲ್ಲರಿಗೂ ನೆನಪಾಗುವುದು ನೆಲನೆಲ್ಲಿ ಗಿಡ. ಜಾಂಡೀಸ್ ಹಲವು ವಿಧದಲ್ಲಿ ಗೋಚರಿಸುತ್ತದೆ. ಕಣ್ಣು ಹಳದಿ ಕಂಡ ಕೂಡಲೇ ಜಾಂಡೀಸ್ಎ ನ್ನುತ್ತೇವೆ. ಪಿತ್ತಕೋಶದಲ್ಲಿ ಪಿತ್ತದ ಕಲ್ಲು ಅಡ್ಡ ಬಂದಾಗ ಲಿವರಿನಲ್ಲಿ ಕುರದಂತೆ ಮೂಡಿಬಂದಾಗ, ಲಿವರ್ ಬ್ಯಾಕ್ಟಿರಿಯಾ, ವೈರಸ್‍ನಿಂದಾಗಿ ಬಾತುಕೊಂಡಾಗ ಜಾಂಡೀಸ್ ಉಂಟಾಗುತ್ತದೆ. ಪಿತ್ತಕೋಶದ ಕಲ್ಲಿನಿಂದಾದ ಜಾಂಡೀಸ್‍ಗೆ ಶಸ್ತ್ರಕ್ರಿಯೆ ಅಗತ್ಯ. ಉಳಿದ ಕಡೆಗಳಲ್ಲಿ ನೆಲನೆಲ್ಲಿಯನ್ನು ಮಜ್ಜಿಗೆಯಲ್ಲಿ ಅರೆದು 2-3 ವಾರ ಸೇವಿಸುವ ಮೂಲಕ ಗುಣ ಪಡಿಸಲಾಗುತ್ತದೆ. ನೆಲನೆಲ್ಲಿಯಲ್ಲಿ ಇರುವ Phyllanthin, Hypophyllanthin, Niranthinಗಳು ಲಿವರಿಗೆ ಶಕ್ತದಾಯಕ ಹಾಗೂ ವಿಷದ ಪರಿಹಾರ (Detox) ಮಾಡುವುದು ಎಂದು ಸಂಶೋದಿಸಿದ್ದಾರೆ.

ವ್ಯಾಧಿ ಕ್ಷಮತೆ(Immunity):

ವ್ಯಾಧಿ ಕ್ಷಮತೆ ಕಡಿಮೆಯಾದಾಗ ಮಕ್ಕಳಲ್ಲಿ ಆಗಾಗ ಶೀತ, ಕೆಮ್ಮು, ಕಫ, ಜ್ವರಗಳು ಕಂಡುಬರುತ್ತದೆ.

ನೆಲನೆಲ್ಲಿಯೊಂದಿಗೆ 2-3 ಕಾಳು ಒಳ್ಳೆ ಮೆಣಸು ಸೇರಿಸಿ ಹಾಲಿನಲ್ಲಿ ಅರೆದು ಬೆಳಗ್ಗೆ ಪ್ರತಿನಿತ್ಯ 2 ಅಥವಾ 3 ವಾರ ಕುಡಿಸುವುದರಿಂದ ಪರಿಹಾರವಾಗುವುದು. ಇದರೊಂದಿಗೆ ಮಕ್ಕಳಿಗೆ ಐಸ್‍ಕ್ರೀಮ್, ಎಣ್ಣೆಯಲ್ಲಿ ಕರಿದ ತಿಂಡಿ ತಿನಿಸುಗಳನ್ನು ಕೊಟ್ಟರೆ ಪ್ರಯೋಜನವಾಗದು.

ಹಸಿವು:

ಹಸಿವು ಕಡಿಮೆ, ಜೀರ್ಣಕ್ರಿಯೆ ಕಡಿಮೆ, ಹೊಟ್ಟೆ ಉಬ್ಬರ ಇರುವವರು ಇದರ ಕಷಾಯವನ್ನು ಜೀರಿಗೆ ಪುಡಿ ಸೇರಿಸಿ ಕುಡಿಯಬೇಕು.  

ಕಣ್ಣು:

ಕಣ್ಣು ಅಥವಾ ಕಣ್ಣಿನ ರೆಪ್ಪೆ ಸಹಿತ ಭಾರ ಇರುವಾಗ ಇದರ ಎಲೆಗೆ ಇಂದುಪ್ಪು ಸೇರಿಸಿ ಅರೆದು ತಾಮ್ರದ ಪಾತ್ರೆಯಲ್ಲಿ ಒಂದು ದಿನ ಇರಿಸಿ ಕಣ್ಣಿನ ರೆಪ್ಪೆಗೆ ಹಚ್ಚುವುದರಿಂದ ಕಡಿಮೆಯಾಗುವುದು .

ಜ್ವರ :  

ಜ್ವರವು ಅಜೀರ್ಣದಿಂದ ಬಂದಿದ್ದರೆ, ವೈರಲ್ ಜ್ವರ ಆಗಿದ್ದರೆ ಇದರ ಕಷಾಯ ಮಾಡಿ ಸೇವಿಸುವುದರಿಂದ ಗುಣವಾಗುವುದು.  

ಕೊರೋನ ಸಮಯದಲ್ಲಿ ತುಂಬಾ ಸದ್ದು ಮಾಡಿದ ಗಿಡಮೂಲಿಕೆಯಾಗಿದೆ. ಆಂಟಿ ವೈರಲ್ ಗುಣ ಇರುವುದರಿಂದ, ಜೀರ್ಣಕ್ರಿಯೆಗೆ ಸಹಕಾರಿ ಆಗಿರುವುದರಿಂದ ವ್ಯಾಧಿ ಕ್ಷಮತೆ ವೃದ್ಧಿಗೆ ಪ್ರತಿದಿನ ಇದರ ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಕುಡಿಯಬೇಕು.  

 ಇದು ಕೇವಲ ಲಿವರ್ ಟಾನಿಕ್ ಮಾತ್ರವಲ್ಲ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ಅಡ್ಡ ಪರಿಣಾಮ ಬೀರದ ಔಷಧಿಯಾಗಿದೆ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.