Scientific Name: Butea monosperma
ಔಷಧಿಯಾಗಿ, ಧಾರ್ಮಿಕ ಆಚರಣೆಗಳಲ್ಲಿ ಹಾಗೂ ಮಾಂತ್ರಿಕ ಕ್ರಿಯೆಗಳಲ್ಲಿ ಪಲಾಶವನ್ನು ಬಳಸುತ್ತಾರೆ. ಈ ಮರಗಳ ಸಮೂಹ ಕಾಡಿನಲ್ಲಿ ಹೂ ಬಿಟ್ಟರೆ ದೂರದಿಂದ ನೋಡುವಾಗ ಕಾಡಿಗೆ ಬೆಂಕಿ ಬಿದ್ದಂತೆ ಕಾಣುತ್ತದೆ. ಹೂ ಬಿಡುವಾಗ ತನ್ನ ಎಲ್ಲಾ ಎಲೆಗಳನ್ನು ಉದುರಿಸಿ ಕೇವಲ ಹೂ ಮಾತ್ರ ಕಾಣುತ್ತದೆ. ಪಕ್ಷಿಯ ಕೊಕ್ಕಿನಂತೆ ಕಾಣುವ ಪುಷ್ಪಗಳು ಇರುವುದರಿಂದ “ಕಿಂಶುಕ”, ಯಜ್ಞ ಯಾಗಾದಿಗಳಲ್ಲಿ ಉಪಯೋಗಿಸುವುದರಿಂದ “ಯಾಜ್ಞಿಕ” ಎಂಬುದಾಗಿ ಕರೆಯುತ್ತಾರೆ. ಕನ್ನಡದಲ್ಲಿ ಮುತ್ತುಗ ಎಂದು ಹೇಳುತ್ತಾರೆ.

೪೦ ರಿಂದ ೫೦ ಅಡಿ ಎತ್ತರ ಬೆಳೆಯುತ್ತದೆ. ಅಂಕು ಡೊಂಕಾಗಿ ಬೆಳೆಯುವ ಕಾಂಡ, ಬೂದು ಬಣ್ಣದ ಒರಟಾದ ತೊಗಟೆ. ೬-೧೦ ಸೆಂ.ಮೀ ಉದ್ದದ ತೊಟ್ಟುಗಳಿಂದ ಕೂಡಿದ ಮೂರು ಮೂರು ಎಲೆಗಳು ಸೇರಿಕೊಂಡು ಬೆಳೆಯುತ್ತದೆ. ತೊಗಟೆಗೆ ಚೂರಿ ಹಾಕಿದರೆ ಕೆಂಪುವರ್ಣದ ನರ್ಯಾಸ (ಗೊಂದು) ಹೊರಬರುವುದು. ಎಲೆಗಳು ೧೦-೧೫ ಸೆಂ.ಮೀ ಉದ್ದಗಲ ಇರುತ್ತದೆ. ಇದರ ಎಲೆಗಳನ್ನು ಒಂದಕ್ಕೊAದು ಸೇರಿಸಿ ಊಟದ ತಟ್ಟೆ ಮಾಡುತ್ತಾರೆ. ಕಡು ಕೆಂಪು ವರ್ಣದ ಹೂಗಳು ಗೊಂಚಲು ಗೊಂಚಲಾಗಿ ಮೂಡಿ ಬರುವುದು. ಹೂಗಳು ಬಾಯಿ ತೆರೆದು ನಿಂತ ಹಾವಿನಂತೆ, ಗಿಳಿಯ ಕೊಕ್ಕಿನಂತೆ ಕಂಡುಬರುತ್ತದೆ. ಹಳದಿ ವರ್ಣದ ಹೂವಿನ ಪಲಾಶ ಮರಗಳೂ ಇವೆ. ಇದರ ೬-೮ ಇಂಚು ಉದ್ದದ ಚಪ್ಪಟೆ ಕೋಡಿನ ಒಳಗೆ ಚಪ್ಪಟೆ ಉರುಟಾದ ಒಂದೂವರೆ ಇಂಚು ವ್ಯಾಸದ ಬೂದು ಬಣ್ಣದ ಒಂದು ಬೀಜ ಇರುತ್ತದೆ.

ವಿದ್ಯಾದೇವತೆ ಸರಸ್ವತಿಗೆ ಪ್ರಿಯವಾದ ಹೂ. ಇದರ ಕಾಂಡದಿಂದ ಯಜ್ಞಯಾಗಾದಿಗಳಿಗೆ ಅವಶ್ಯ ಇರುವ ಪಾತ್ರೆಗಳನ್ನು ಮಾಡುತ್ತಾರೆ. ಬ್ರಹ್ಮರ್ಯದ ಸಂಕೇತ. ಉಪನಯನ ಆಗುವಾಗ ದೀಕ್ಷೆ ಪಡೆಯುವ ವಟುವಿನ ಕೈಯಲ್ಲಿ ಪಲಾಶದ ಕೋಲು ಇರುತ್ತದೆ. ಪ್ರಾಣಿ ಬಲಿಕೊಡುವ ಬದಲು ಪಲಾಶದ ಹೂಗಳನ್ನು ಅರ್ಪಿಸುತ್ತಾರೆ. ಮೃತ ದೇಹ ಸಿಗದ ಸಂದರ್ಭದಲ್ಲಿ ಪಲಾಶದ ಕಾಂಡವನ್ನೂ ಮೃತದೇಹದ ಬದಲಿಗೆ ಸಂಸ್ಕಾರಕ್ಕೆ ಉಪಯೋಗಿಸುವ ಪದ್ಧತಿ ಇದೆ. ಹೋಮ ಹವನಗಳಲ್ಲಿ ಪಲಾಶದ ಎಲೆ, ಕೊಂಬೆ, ಕಾಂಡಗಳನ್ನು ಉಪಯೋಗಿಸುತ್ತಾರೆ. ಹೋಳಿ ಆಚರಣೆ ಸಂದರ್ಭದಲ್ಲಿ ಪಲಾಶದ ಹೂಗಳನ್ನು ಹಾಕಿಟ್ಟ ನೀರನ್ನು ಪರಸ್ಪರ ಎರಚಲು ಬಳಸುತ್ತಾರೆ. ಹೋಮಕ್ಕೆ ತುಪ್ಪ ಸುರಿಯಲು ಇದರ ಎಲೆಯನ್ನೂ ಉಪಯೋಗಿಸುತ್ತಾರೆ.

ಪಲಾಶದ ಎಲೆ, ತೊಗಟೆ, ತೊಗಟೆಯ ಕೆಂಪುಸ್ರಾವ, ಬೀಜಗಳನ್ನು ಔಷಧಿಯಾಗಿ ಬೇರೆಬೇರೆ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ.
ಋತು ಸ್ರಾವ: ಅನಿಯಮಿತ ಮುಟ್ಟಿನ ಸ್ರಾವ ಇರುವಾಗ ೧೦-೧೫ ಗ್ರಾಂ ತೊಗಟೆಯನ್ನು ಜಜ್ಜಿ ಕಷಾಯ ಮಾಡಿ ಮುಟ್ಟಾದ ೧೫ ನೇ ದಿನದಿಂದ ಎರಡು ವಾರ ಕುಡಿಯಬೇಕು. ಅತಿಯಾದ ಮುಟ್ಟು ಸ್ರಾವವನ್ನು ಕಡಿಮೆ ಮಾಡುವುದು.
ಹುಳದ ಬಾಧೆ: ೩-೫ ಗ್ರಾಂ ಪುಡಿ ಮಾಡಿದ ಪಲಾಶ ಬೀಜವನ್ನು ಬೆಳಗ್ಗೆ ಮತ್ತು ರಾತ್ರಿ ೩ ದಿನ ಸೇವಿಸಬೇಕು. ೪ ನೇ ದಿನ ಹರಳೆಣ್ಣೆ (Castor oil)ಯನ್ನು ೩೦-೪೦ml ನಷ್ಟು ಕುಡಿಯುವುದರಿಂದ ಚೆನ್ನಾಗಿ ಬೇಧಿಯಾಗಿ ಹೊಟ್ಟೆಯೂ ಹಗುರ ಆಗುವುದು. ಹುಳಗಳೂ ವಿಸರ್ಜನೆಯಾಗಿ ಹೋಗುವುದು. ಕಾಂಡದಿAದ ಸಿಗುವ ಗೊಂದನ್ನು ೨-೩ ಗ್ರಾಂ ನಷ್ಟು ಮಜ್ಜಿಗೆಯಲ್ಲಿ ಕಲಸಿ ೩ ದಿನ ಸೇವಿಸುವುದರಿಂದ ಹುಳಬಾಧೆ ಕಡಿಮೆಯಾಗುವುದು.
ಗರ್ಭಿಣಿಯರಿಗೆ: ಗರ್ಭ ಧರಿಸಿದ ೩ ತಿಂಗಳ ನಂತರ ಒಂದು ಪಲಾಶ ಎಲೆಯನ್ನು ಹಾಲಿನೊಂದಿಗೆ ಪ್ರತಿ ತಿಂಗಳೂ ೩ ದಿನ ಕುಡಿಯುವುದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಹೂ : ಹಾಲಿನಲ್ಲಿ ಹೂವಿನ ದಳವನ್ನು ಅರೆದು ಕುಡಿಯುವುದರಿಂದ ಬಿಳಿ ಸ್ರಾವ ಕಡಿಮೆಯಾಗುವುದು. ಮೂತ್ರ ಉರಿ ಕಡಿಮೆಯಾಗುವುದು. ಬಾಯಾರಿಕೆ ಕಡಿಮೆಯಾಗುವುದು. ರಕ್ತ ವೃದ್ಧಿಸುವುದು, ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ವೃದ್ಧಿಸುವುದು.
ಬೀಜ: ಬೀಜವನ್ನು ಒಣಗಿಸಿ ಪುಡಿಮಾಡಿ ನೀರಲ್ಲಿ ಮಿಶ್ರಮಾಡಿ ಹಚ್ಚುವುದರಿಂದ ತುರಿಕೆ ಕಡಿಮೆಯಾಗುವುದು. ಎರಡು ಗ್ರಾಂ ನಷ್ಟು ೨ ವಾರ ಸೇವನೆ ಮಾಡುವುದರಿಂದ ಬೇಗನೆ ಗುಣವಾಗುವುದು.
ತೊಗಟೆ: ೧೦ಗ್ರಾಂ ತೊಗಟೆ ಕಷಾಯ ಮಾಡಿ ಕುಡಿಯುವುದರಿಂದ ರಕ್ತದಲ್ಲಿ ಸ್ವಲ್ಪ ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು. ಚರ್ಮದ ಮೇಲಿನ ಹುಣ್ಣುಗಳನ್ನು ಒಣಗಿಸುವುದು.

ಇದು “ ಕ್ಷಾರ ಶ್ರೇಷ್ಟ” ಮರ. ಇದರಿಂದ ತಯಾರಿಸಿದ ಕ್ಷಾರವನ್ನೂ ಕೆಲವು ಕಾಯಿಲೆಗಳಲ್ಲಿ ಉಪಯೋಗಿಸಲಾಗುತ್ತದೆ.
…..ವೃದ್ದೊಪಿ ಮಾಸಾತ್ತರುಣತ್ವ ಮೇತಿ”. ಇದು ರಾಜಾಮಾರ್ತಾಂಡ ಗ್ರಂಥದಲ್ಲಿ ಇರುವ ಶ್ಲೋಕದ ಕೊನೆಯ ಭಾಗ. ಅಂದರೆ ಪಲಾಶಬೀಜ, ವಿಡಂಗ ಬೀಜ, ನೆಲ್ಲಿಕಾಯಿ ಸೇರಿಸಿ ತಯಾರಿಸಿದ ಔಷಧಿಯು ಒಂದು ತಿಂಗಳಲ್ಲಿ ವೃದ್ಧರನ್ನು ತರುಣನನ್ನಾಗಿ ಮಾಡಿಸುತ್ತದೆ.
ಕೃಷಿ: ಪಲಾಶ ಮರದ ಆಕಾರ ನೋಡಲು ಸುಂದರವಾಗಿರದ ಕಾರಣ, ಬೀಜಗಳು ಹೊಸದು ಇದ್ದರೆ ಮಾತ್ರ ಹುಟ್ಟಿಕೊಳ್ಳುವುದರಿಂದ, ಬೆಳವಣಿಗೆ ನಿದಾನ ಗತಿಯಾಗಿರುವುದರಿಂದ ರಸ್ತೆ ಬದಿ, ಉದ್ಯಾನಗಳಲ್ಲಿ ಬೆಳೆಸುವುದು ಕಡಿಮೆ. ಇದೊಂದು ದೈವೀ ವೃಕ್ಷ. ಸ್ವಂತ ಜಮೀನಿನಲ್ಲಿ ಬೆಳೆಸುವುದು ಒಳ್ಳೆಯದು.
ಡಾ| ಹರಿಕೃಷ್ಣ ಪಾಣಾಜೆ