Scientific Name: Alstonia scholaris
ಏಳು ಎಲೆಗಳ ಗುಚ್ಚಗಳಾಗಿ ಕಂಡುಬರುವುದರಿಂದ “ಸಪ್ತಪರ್ಣ” ಅಲ್ಲದೆ “ಸಪ್ತಚ್ಚದ” ಎಂಬ ಹೆಸರೂ ಇದೆ. ದಕ್ಷಿಣ ಭಾರತದಲ್ಲಿ ಕಂಡುಬಂದರೂ ಪಶ್ಚಿಮ ಘಟ್ಟಗಳಲ್ಲಿ ಅಧಿಕ ಕಂಡುಬರುತ್ತದೆ. ಪ. ಬಂಗಾಳ ಹಿಮಾಲಯದ ವರೇಗೂ ಹರಡಿದೆ. ಎಲ್ಲೂ ಇರದ ವಿಶೇಷ ಉಪಯೋಗವನ್ನು ತುಳುನಾಡಿನ ಜನರು ಇದರಿಂದ ಪಡೆಯುತ್ತಿದ್ದಾರೆ. ಅದುವೇ ಆಟಿ ಅಮಾವಾಸ್ಯೆ(ಆಷಾಡ ಮಾಸದ ಅಮಾವಾಸ್ಯೆ) ದಿನ ಇದರ ಕಷಾಯ ಸೇವನೆ ಮಾಡಿ ಮೆಂತೆ ಗಂಜಿ ಊಟ ಮಾಡುವುದು. ಆಟಿ ಅಮಾವಾಸ್ಯೆ ದಿನ ಇದನ್ನು ಸೇವಿಸಿದರೆ ಮುಂದಿನ ೧೨ ತಿಂಗಳು ಬೇರೆ ಬೇರೆ ರೋಗರುಜಿನಗಳು ಬಾರದಂತೆ ತಡೆಯುತ್ತದೆ ಎಂಬ ನಂಬಿಕೆ ತುಳುವರಲ್ಲಿ ಇದೆ.

ಒಂದು ದಿನ ಮೊದಲೇ ನೋಡಿ ನಿಗದಿ ಪಡಿಸಿದ ಪಾಲೆ ಮರದ ಬುಡಕ್ಕೆ ಆಟಿ ಅಮಾವಾಸ್ಯೆ ದಿನ ಸರ್ಯೋದಯದ ಮೊದಲು ಹೋಗಿ ಕಲ್ಲಿನಿಂದ ಜಜ್ಜಿಯೋ ಕೆತ್ತಿಯೋ ಅದರ ತೊಗಟೆಯನ್ನು ಬೇರ್ಪಡಿಸಿ ತಂದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಅದಕ್ಕೆ ಓಮ, ಬೆಳ್ಳುಳ್ಳಿ, ಒಳ್ಳೆ ಮೆಣಸು ಅಥವಾ ಬೆಳ್ಳುಳ್ಳಿ, ಓಮ,ಶುಂಠಿ ಅಥವಾ ಬೆಳ್ಳುಳ್ಳಿ, ಅರಸಿನ,ಓಮ ಸೇರಿಸಿ ಅರೆದು ಸೋಸಿ ರಸ ಸಂಗ್ರಹಿಸಿ ಅದಕ್ಕೆ ಬೆಣಚು ಕಲ್ಲು (ಬೊಳ್ಳು ಕಲ್ಲು) ಬಿಸಿ ಮಾಡಿ ಹಾಕಿ ಸೋಸಿ ೧೦ ml ಅಥವಾ ೨೦ ml ನಷ್ಟು ಮನೆಯವರು ಎಲ್ಲರೂ ಕುಡಿಯುತ್ತಾರೆ. ನಂತರ ಮೆಂತೆ ಗಂಜಿಯನ್ನು ಕುಡಿಯುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ.
೪೦-೫೦ ಅಡಿ ಎತ್ತರ ಬೆಳೆಯುವ ದೊಡ್ಡ ವೃಕ್ಷ. ಮರದ ಹೊರಭಾಗ ಬಿಳಿ ಬೂದು ಬಣ್ಣದಿಂದ ಕೂಡಿದೆ.ದಪ್ಪ ತೊಗಟೆ ಒಳಭಾಗ ನಸು ಹಳದಿ ಬಣ್ಣದಿಂದ ಕಂಡುಬರುತ್ತದೆ. ೭-೭ ಎಲೆಗಳು ಗುಚ್ಚಗಳಾಗಿ ಹರಡಿ ಕೊಂಡಿರುತ್ತದೆ. ೪-೭ ಇಂಚು ಉದ್ದ ಹಾಗೂ ೧ ರಿಂದ ೧ ೧/೨ ಇಂಚು ಅಗಲ ಇರುತ್ತದೆ. ಎಲೆ ಮೇಲ್ಭಾಗ ಕಡು ಹಸಿರಾಗಿದ್ದರೆ ಅಡಿಭಾಗ ಬಿಳಿಯಾಗಿರುತ್ತದೆ. ಎಲೆಯನ್ನು ಕಿತ್ತರೆ ಬಿಳಿ ಸ್ರಾವ ಕಂಡುಬರುತ್ತದೆ. ಸುವಾಸನೆಯುಕ್ತ ಬಿಳಿ ಹೂ ಗೊಂಚಲಲ್ಲಿ ಕಂಡುಬರುವುದು. ನಂತರ ಜೋಡಿಯಾಗಿ ಅಥವಾ ಗೊಂಚಲಲ್ಲಿ ಫಲ ಜೋತಾಡಿಕೊಂಡಿರುತ್ತದೆ.

ಇದರ ಹೂ ಬಿಡುವ ಸಮಯದಲ್ಲಿ ಕೆಲವರಿಗೆ ಶೀತ, ಕೆಮ್ಮು,ದಮ್ಮು ಶುರುವಾಗುವುದು ಇದೆ. ಹೆಚ್ಚಿನವರಿಗೆ ಕೆಮ್ಮು, ದಮ್ಮು ಶುರು ಆಗದಿದ್ದರೂ ಮೂಗಿನಿಂದ ನೀರು ಇಳಿಯುವುದು ಸಾಮಾನ್ಯ.
ಇದರ ತೊಗಟೆಯನ್ನು ಔಷಧಿಯಾಗಿ ಬಳಸುತ್ತಾರೆ.ಜ್ವರ, ಅಜೀರ್ಣ, ಬೇಧಿ, ಕೆಮ್ಮು,ದಮ್ಮು, ಚರ್ಮ ರೋಗಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಪೂರ್ವಜರು ಇದರಲ್ಲಿ ಏನೋ ವಿಶೇಷತೆ ಕಂಡು ಕೊಂಡು ಆಟಿ ಅಮಾವಾಸ್ಯೆ ದಿನ ಇದರ ಕಷಾಯ ಕುಡಿಯುತ್ತಿದ್ದರು.ತೊಗಟೆಯ ಮೇಲೆ ಹಲವಾರು ರಿಸರ್ಚ್ಗಳು ನಡೆದಿದೆ. ಅದರಲ್ಲಿಯೂ ಈ ಔಷಧಿಗೆ ಕ್ಯಾನ್ಸರ್ ಜೀವಕೋಶಗಳನ್ನು ನಾಶಮಾಡುವ ಗುಣ ಇದೆ, ವಾತ ರೋಗ (ನೋವು) ವನ್ನು ಕಡಿಮೆ ಮಾಡುವ ಗುಣಗಳು ಇವೆ ಎಂದು ಕಂಡುಕೊಂಡಿದ್ದಾರೆ. ಆಯುರ್ವೇದ ಗ್ರಂಥಗಳಲ್ಲಿ ಕೆಲವೊಂದು ಔಷಧಿಗಳನ್ನು ನಿರ್ಧಿಷ್ಟ ನಕ್ಷತ್ರದಂದು, ರಾತ್ರಿ ಸಮಯ, ಬೆಳಗ್ಗಿನ ಜಾವ ಸಂಗ್ರಹಿಸಬೇಕು ಎಂಬುದಾಗಿ ನಿರ್ದೇಶಿಸಿದ್ದಾರೆ.ಅವರು ನಿಗದಿ ಪಡಿಸಿದ ಸಮಯದಲ್ಲಿ ಸಂಗ್ರಹಿಸಿದ ಗಿಡಮೂಲಿಕೆಗಳಲ್ಲಿ ಅದರ ಘಟಕ ದ್ರವ್ಯಗಳು (Active ingredients)ಅತ್ಯಧಿಕ ಪ್ರಮಾಣದಲ್ಲಿ ಕಂಡುಬಂದ ಬಗ್ಗೆ ಸಂಶೋಧನೆಗಳ ಆಧಾರ ಇದೆ. ಆಟಿ ಅಮಾವಾಸ್ಯೆ ದಿನ ಪಾಲೆ ರಸ ಕುಡಿದರೆ ಆ ದಿನ ಅದರಲ್ಲಿ ಔಷಧಿ ಗುಣ ಅಧಿಕ ಇದ್ದು ವ್ಯಾಕ್ಸಿನ್ನಂತೆ ಕೆಲಸ ಮಾಡಲೂಬಹುದು ಅಥವಾ ವ್ಯಾಧಿ ಕ್ಷಮತೆ ವೃದ್ಧಿಸಲು ಸಹಾಯ ಮಾಡಬಹುದು.
ಜ್ವರ: ಹತ್ತು ಗ್ರಾಂ ನಷ್ಟು ತೊಗಟೆಯನ್ನು ಕಷಾಯ ಮಾಡಿ ಸೋಸಿ ೧/೨ ಚಮಚ ಒಳ್ಳೆ ಮೆಣಸು ಪುಡಿ ಸೇರಿಸಿ ದಿನಕ್ಕೆ ಮೂರು ಸಲ ೨-೩ ದಿನ ಕುಡಿದರೆ ಜ್ವರ ಕಡಿಮೆಯಾಗುವುದು. ಜ್ವರ ಬಂದರೆ ಅಮೃತಾರಿಷ್ಟ ಕುಡಿಯಬೇಕೆಂದು ಹೆಚ್ಚಿನವರಿಗೆ ತಿಳಿದಿದೆ. ಈ ಅಮೃತಾರಿಷ್ಟದಲ್ಲಿ ಅಮೃತಬಳ್ಳಿ ಮುಖ್ಯವಾಗಿ ಉಪಯೋಗಿಸಿದರೂ ಇದರಲ್ಲಿ ಪಾಲೆಮರದ ತೊಗಟೆಯೂ ಒಂದು ಘಟಕ ದ್ರವ್ಯ.
ಕೆಮ್ಮು ದಮ್ಮು: ತೊಗಟೆಯನ್ನು ಒಣಗಿಸಿ ನಯವಾದ ಪುಡಿಮಾಡಿ ಜೇನು ಮಿಶ್ರ ಮಾಡಿ ಸೇವಿಸುವುದರಿಂದ ಕೆಮ್ಮು ದಮ್ಮು ಕಟ್ಟುವುದು ಪ್ರಾರಂಭದ ಹಂತದಲ್ಲಿ ಕಡಿಮೆಯಾಗುವುದು.
ಭೇದಿ: ಇದರ ತೊಗಟೆಗೆ ಆಂಟಿ ಬ್ಯಾಕ್ಟೀರಿಯಲ್ ಗುಣ ಇದೆ. ಅಜೀರ್ಣದಿಂದ ಅತಿಸಾರವಾದರೆ ೧೦ಗ್ರಾಂ ತೊಗಟೆ ಕಷಾಯ ಮಾಡಿ ಅರ್ಧ ಚಮಚ ದಾಳಿಂಬೆ ಸಿಪ್ಪೆ ಒಣ ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಲಿವರ್ ಸಂಬಂಧೀ ತೊಂದರೆಗಳಲ್ಲಿ, ಗಂಟು ನೋವುಗಳಲ್ಲಿ, ಗುಣವಾಗದಿರುವ ಹುಣ್ಣುಗಳಿದ್ದರೆ ತೊಳೆಯಲು, ಚರ್ಮರೋಗ, ತಲೆನೋವಿನಲ್ಲಿ ಕಷಾಯಮಾಡಿ ಉಪಯೋಗಿಸಲಾಗುತ್ತದೆ.ಬಾಣಂತಿಯರಿಗೆ ಜ್ವರ ಬಂದರೆ ಹಸಿವು ಉಂಟು ಮಾಡಿ ಜ್ವರ ಕಡಿಮೆ ಮಾಡಿ ಎದೆ ಹಾಲು ವೃದ್ಧಿಯಾಗುವುದು.
ಕೃಷಿ: ಇದೊಂದು ಔಷಧಿ ಯುಕ್ತ ಕಾಡು ಮರ. ಮೆತ್ತಗಿನ ಮರ. ಈಗ ಶಾಲೆಗಳಲ್ಲಿ ಡಿಜಿಟಲ್ ಬೋರ್ಡ್ ಬಂದಿದೆ. ಮೊದಲು ಇದರ ಮರದಿಂದ ಬೋರ್ಡ್ ತಯಾರಿಸುತ್ತಿದ್ದರು. ದೀಪಾವಳಿ ಸಮಯದಲ್ಲಿ ಬಲೀಂದ್ರ ಪೂಜೆ ಮಾಡುತ್ತೇವೆ . ಅಂಗಳದಲ್ಲಿ ಬಲೀಂದ್ರ ಮರ ಸ್ಥಾಪನೆ ಮಾಡಲು ಪಾಲೆ ಮರವನ್ನು ಉಪಯೋಗಿಸಲಾಗುತ್ತದೆ. ತೊಗಟೆಯನ್ನು ಒಣಗಿಸಿ ಸಂಗ್ರಹಿಸಿದರೆ ಆಯುರ್ವೇದ ಕಂಪೆನಿಗಳಿಂದ ಬೇಡಿಕೆ ಇದೆ. ಹಿತ್ತಲಲ್ಲಿ ಇದ್ದರೆ ಬಹಳಷ್ಟು ತೊಂದರೆಗಳಿಗೆ ಪ್ರಥಮ ಚಿಕಿತ್ಸೆಯಾಗಿ ಖಂಡಿತ ಬಳಸಬಹುದು.