Scientific Name: Syzygium aromaticum
ದ್ವೀಪಾಂತರಾನೀತ ಲವಂಗ ಪುಷ್ಪವು ದ್ವೀಪಗಳಿಂದಾಚೆಯಿಂದ ಬಂದ ಲವಂಗ ಪುಷ್ಪ ಎಂಬುದಾಗಿ ರಘು ವಂಶದಲ್ಲಿ ಕಾಳಿದಾಸ ಬರೆದ ಶ್ಲೋಕ ಇದೆ. ಲವಂಗದ ಮೂಲ ಸ್ಥಾನ ಇಂಡೊನೇಶಿಯಾ, ಜಾವಾ, ಸುಮಾತ್ರಾ, ಶ್ರೀಲಂಕ. ಈಗಲೂ ಲವಂಗದ ಅಧಿಕ ಉತ್ಪಾದನೆ ಈ ದ್ವೀಪಗಳಿಂದಲೇ. 200 BCಯಲ್ಲಿ ಚೀನಾದ ಹಾನ್ ರಾಜವಂಶದ ಆಸ್ಥಾನಕ್ಕೆ ಜಾವಾದಿಂದ ರಾಯಭಾರಿಗಳು ಬರುತ್ತಿದ್ದರು. ಅವರು ಬಾಯಲ್ಲಿ ಲವಂಗ ಕಡ್ಡಿಗಳನ್ನು ಇರಿಸಿ ಬಾಯಿವಾಸನೆ ಬರದಂತೆ ಮಾಡುತ್ತಿದ್ದರು ಎಂಬ ಉಲ್ಲೇಖವಿದೆ.
೩೦-೪೦ ಅಡಿ ಎತ್ತರ ಬೆಳೆಯುವ ನಿತ್ಯ ಹರಿದ್ವರ್ಣದ ಮರ. ಅಭಿಮುಖ ಬೆಳೆದ ಎಲೆಗಳು. ಕಡು ಪಚ್ಚೆ ಎಲೆಯಲ್ಲಿ ಉಬ್ಬಿ ಕಂಡುಬರುವ ನರಗಳು. ಕೊಂಬೆಯ ತುದಿಗಳಲ್ಲಿ ಗೊಂಚಲಾಕಾರದಲ್ಲಿ ಲವಂಗದ ಮೊಗ್ಗುಗಳು. ಪ್ರಾರಂಭದಲ್ಲಿ ಹಸಿರು ಬಣ್ಣದಲ್ಲಿ ಕಂಡುಬಂದರೆ ಬೆಳೆದಂತೆ ಕೆಂಪು ವರ್ಣಕ್ಕೆ ತಿರುಗುವುದು. ಕೋನ್ ಐಸ್‌ಕ್ರೀಂನ ಆಕೃತಿಯಲ್ಲಿ ದುಂಡಾದ ಅಗ್ರಭಾಗವು ಕಂಡುಬರುತ್ತದೆ.ಪರಿಮಳ ಹೂ ಅರಳಿದರೆ ತುಂಬಾ ಕೇಸರಗಳು ಹೊರಬಂದು ವೃತ್ತಾಕಾರದಲ್ಲಿ ಗಡ್ಡ ತೆಗೆಯುವ ಬ್ರಶ್‌ನಂತೆ ಕಾಣುತ್ತದೆ. ಕೆಂಪಾದ ಲವಂಗದ ಮೊಗ್ಗುಗಳ ಕೇಸರಗಳು ಹೊರಬರುವ ಮೊದಲು ಕೊಯ್ದು ಒಣಗಿಸಿ ಸಂಗ್ರಹಿಸಲಾಗುವುದು. ಒಣಗಿದ ನಂತರ ಕಂದು ಅಥವಾ ಕಪ್ಪು ಬಣ್ಣದಲ್ಲಿ ಕಂಡುಬರುವುದು. ಇದರಲ್ಲಿ ಇರುವ ತೈಲದ ಅಂಶದಿAದ ಲವಂಗ ಬೇಗ ಹಾಳಾಗುವುದಿಲ್ಲ. ಇತರ ಆಹಾರ ವಸ್ತುಗಳನ್ನು ಸಂರಕ್ಷಿಸಲೂ (ಪ್ರಿಸರ್‌ವೇಟಿವ್) ಇದನ್ನು ಉಪಯೋಗಿಸುತ್ತಾರೆ. ಮಸಾಲ ಪದಾರ್ಥಗಳ ರಾಜ. ಲಡ್ಡು ತಿನ್ನುವಾಗ ಸಿಗುವ ಲವಂಗ ಪಲಾವ್ ತಿನ್ನುವಾಗಲೂ ಸಿಗುತ್ತದೆ. ಜಗಿದರೆ ಜಗಿದಭಾಗ ಅನಸ್ತೇಶಿಯಾ ಕೊಟ್ಟು ಮರಗಟ್ಟಿದಂತೆ ಅನುಭವ ಆಗುತ್ತದೆ. ಹಲ್ಲು ನೋವಿನಲ್ಲಿ ಇದರ ಅನಸ್ತೇಶಿಯಾ ಗುಣದಿಂದ ತಾತ್ಕಾಲಿಕ ನೋವು ಶಮನ ಆಗುತ್ತದೆ.

ಹಲ್ಲು ನೋವು, ಹೊಟ್ಟೆಉಬ್ಬರ, ಹೊಟ್ಟೆ ನೋವು, ಬಾಯರಿಕೆ, ಭೇದಿ, ಕೆಮ್ಮು, ಕ್ರಿಮಿಯ ತೊಂದರೆಗಳಲ್ಲಿ ಲವಂಗವನ್ನು ಉಪಯೋಗಿಸಲಾಗುತ್ತದೆ.
ವಾಂತಿ ಭೇದಿ: ಸ್ವಲ್ಪ ಲವಂಗಕ್ಕೆ ಬಿಸಿನೀರು ಹಾಕಿ ಮುಚ್ಚಿಟ್ಟು ತಣಿದ ನಂತರ ಸೋಸಿ ೨-೩ ಚಮಚ ಕುಡಿಯುವುದರಿಂದ ಅಜೀರ್ಣ ಕಡಿಮೆಯಾಗುವುದು. ಭೇದಿ ಕಡಿಮೆಯಾಗುವುದು. ವಾಂತಿ ಇರುವಾಗ ಆಗಾಗ ೨ ಚಮಚದಷ್ಟು ಕುಡಿಯುವುದರಿಂದ ಕಡಿಮೆಯಾಗುವುದು. ಬಾಯರಿಕೆ ಕಡಿಮೆಯಾಗುವುದು.
ಹೊಟ್ಟೆಯ ಗ್ಯಾಸ್‌ಬಾಧೆ: ಹೊಟ್ಟೆ ಉಬ್ಬರಿಸಿ ಗಾಳಿ ತುಂಬಿದಂತೆ ಆಗುವುದಕ್ಕೆ ಗ್ಯಾಸ್ ಟ್ರಬಲ್ ಇದೆ ಎನ್ನುತ್ತಾರೆ. ಲವಂಗಕ್ಕೆ ಬಿಸಿ ನೀರು ಹಾಕಿ ಇರಿಸಿದ ನೀರನ್ನು ೧೫-೨೦ ಮಿಲಿ ಕುಡಿಯುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುವುದು. ಬಡೆಸೊಪ್ಪಿನೊಂದಿಗೆ ಲವಂಗ ಜಗಿದು ನುಂಗಿದರೂ ಹೊಟ್ಟೆ ಉಬ್ಬರ ಕಡಿಮೆಯಾಗುವುದು.
ಕೆಮ್ಮು: ಗಂಟಲುತುರಿಕೆ, ಕೆಮ್ಮು ಇರುವಾಗ ಲವಂಗ ಪುಡಿಯನ್ನು ಜೇನಿನಲ್ಲಿ ಮಿಶ್ರ ಮಾಡಿ ಬಾಯಲ್ಲಿ ಚಪ್ಪರಿಸುವುದರಿಂದ ಕಡಿಮೆಯಾಗುವುದು. ಗರ್ಭಿಣಿಯರ ಕೆಮ್ಮಿನಲ್ಲಿಯೂ ಇದನ್ನು ಬಳಸಬಹುದು.
ಶೀತ ತಲೆನೋವು: ಲವಂಗದ ಎಣ್ಣೆಯನ್ನು ಹಣೆಗೆ ಸವರುವುದರಿಂದ ಶೀತ, ತಲೆನೋವು ಕಡಿಮೆಯಾಗುವುದು. ಲವಂಗ ಹಾಕಿದ ಬಿಸಿ ನೀರನ್ನು ಬಟ್ಟೆಯಲ್ಲಿ ಒದ್ದೆಮಾಡಿ ಹಣೆಗೆ ಪಟ್ಟಿಯಂತೆ ಇಡುವುದರಿಂದ ತಲೆನೋವನ್ನು ತಾತ್ಕಾಲಿಕ ಶಮನ ಮಾಡಬಹುದು.
ಹಲ್ಲುನೋವು: ಹಲ್ಲು ಹುಳುಕಾಗಿ ನೋವು ಇರುವಾಗ ಲವಂಗದ ಎಣ್ಣೆಯನ್ನು ಹತ್ತಿಯಲ್ಲಿ ಒದ್ದೆಮಾಡಿ ನೋವಿರುವಲ್ಲಿಗೆ ಇರಿಸುವುದರಿಂದ ಕಡಿಮೆಯಾಗುವುದು. ಲವಂಗದ ಪುಡಿಯನ್ನು ಆ ಭಾಗಕ್ಕೆ ಇಟ್ಟರೂ ಕಡಿಮೆಯಾಗುತ್ತದೆ. ಲವಂಗ ತಾಗಿದ ಭಾಗ ಅನಸ್ತೇಶಿಯಾ ಕೊಟ್ಟ ಭಾಗ ಮರಗಟ್ಟಿದಂತೆ ಆಗಿ ನೋವಿನ ಅನುಭವ ಕೆಲಕಾಲ ಆಗಲಾರದು. ಇದು ತಾತ್ಕಾಲಿಕ ಚಿಕಿತ್ಸೆ ಮಾತ್ರ. ಪರ್ಮನೆಂಟ್ ಅಲ್ಲ.
ಬಾಯಿವಾಸನೆ: ಕೆಲವರಿಗೆ ಹಲ್ಲು ಹುಳುಕಾಗಿ ಒಸಡಿನ ತೊಂದರೆ ಇದ್ದರೆ ಬಾಯಿ ವಾಸನೆ ಬರುತ್ತದೆ. ಲವಂಗವನ್ನೂ ನಿಧಾನವಾಗಿ ಜಗಿಯುವುದರಿಂದ ಬಾಯಿ ದುರ್ಗಂಧ ಕಡಿಮೆಯಾಗುವುದು.

ಕೀಟನಾಶಕ: ಲವಂಗದ ಎಣ್ಣೆಯಿಂದ ರಾಸಾಯನಿಕ ರಹಿತ ಕೀಟನಾಶಕಗಳನ್ನು ತಯಾರಿಸುತ್ತಾರೆ. ಇದರ ಎಣ್ಣೆಯನ್ನು ಮೈಗೆ ಹಚ್ಚಿದರೆ ನುಸಿ ಕಚ್ಚುವುದಿಲ್ಲ.
ಕೃಷಿ: ಇದೊಂದು ವಾಣಿಜ್ಯ ಬೆಳೆ. ದೀರ್ಘಕಾಲೀನ ಬೆಳೆ. ಇತರ ಬೆಳೆಗಳ ಮದ್ಯೆ ನಾಟಿ ಮಾಡಿ ಬೆಳೆಸುತ್ತಾರೆ. ಇದು ಅಡಿಗೆ ಮನೆಗೆ, ಫಾರ್ಮಸಿಗಳಿಗೆ ಇದರ ತೈಲ ಅಥವಾ ಸಾರ ತೆಗೆದು ಉಪಯೋಗಿಸುವ ಕಂಪೆನಿಗಳಿಗೆ ಬೇಕಾಗಿದೆ. ಇದರಿಂದ ಸಿಗುವ “ಯುಜಿನಾಲ್” ಸಾರವು ಹಲವಾರು ಉಪಯೋಗವನ್ನು ಹೊಂದಿದೆ. ಟೂತ್ಪೇಸ್ಟ್, ಮೌತ್‌ವಾಶ್‌ಗಳಲ್ಲಿ ಬಳಸುತ್ತಾರೆ. ಲವಂಗದ ಮರ ತಂಪು ವಾತಾವರಣದಲ್ಲಿ, ನೆರಳಲ್ಲಿ ಉತ್ತಮ ಬೆಳೆ ನೀಡುತ್ತದೆ. ಒಂದು ಮರ ವರ್ಷಕ್ಕೆ ೨ ರಿಂದ ೪Kg ಲವಂಗ ನೀಡುತ್ತದೆ. ಇದನ್ನು ಬೆಳೆದು ಲಕ್ಷ ಲಕ್ಷ ಹಣ ಸಂಗ್ರಹಿಸುವ ಕೃಷಿಕರು ಇದ್ದಾರೆ.