Skip links
ಶಾಂತಿ

ಶಾಂತಿ

Scientific Name:  Terminalia bellerica  

ಇದು ನಮ್ಮ ಊರಿನ ಅಥವಾ ಮನೆಯ ಹತ್ತಿರದ ಸಹೋದರಿ ಅಥವಾ ಮಾತೆಯರ ಹೆಸರಲ್ಲ. ನಮ್ಮ ಊರಿನಲ್ಲಿ ಹೆಚ್ಚಿನವರಿಗೆ ತಿಳಿದಿರುವ ಶಾಂತಿ ಮರದ ವೃತಾಂತ. ಸಂಸ್ಕೃತದಲ್ಲಿ ವಿಭಿತಕೀ ಎನ್ನುತ್ತಾರೆ. ಅಂದರೆ ಭೀತಿ (ಹೆದರಿಕೆ) ಕಡಿಮೆ ಮಾಡುವುದು ಎಂದು ಅರ್ಥ. ಅಕ್ಷ (ಕಣ್ಣಿನ ತೊಂದರೆಗಳಿಗೆ ಉತ್ತಮ) ಎಂಬುದಾಗಿಯೂ ಕರೆಯುತ್ತಾರೆ. ೫೦- ೮೦ ಅಡಿ ಎತ್ತರ ಬೆಳೆಯುವ ಬೃಹದಾಕಾರದ ಮರ ನೇರ ಎತ್ತರ ಬೆಳೆಯುತ್ತದೆ. ೫-೬ ಇಂಚು ಉದ್ದ ಇರುವ ಎಲೆಗಳು ದಪ್ಪ ಹಾಗೂ ಆಯತಾಕಾರ ಅಥವಾ ಅಂಡಾಕಾರವಾಗಿರುತ್ತದೆ. ಉದ್ದಕ್ಕೆ ಚಾಚಿರುವ ಗುಚ್ಚಾಕಾರದ ಬಿಳಿ ಅಥವಾ ಹಳದಿ ವರ್ಣದ ಹೂಗಳು ಕಂಡುಬರುತ್ತದೆ. ಗೊಂಚಲಾಗಿ ಕಾಯಿಗಳು ಮೂಡುತ್ತದೆ. ಕಾಯಿಗಳು ಬೆಳೆದಾಗ ಐದು ದಾರೆಗಳಿಂದ ಕೂಡಿರುತ್ತದೆ. ಹಣ್ಣಿನ ಒಳಗೆ ಒಂದು ಬೀಜ ಇರುತ್ತದೆ. ಗಟ್ಟಿಯಾದ ಬೀಜದೊಳಗೆ ತಿನ್ನಲು ಯೋಗ್ಯ ತಿರುಳು ಇರುತ್ತದೆ. ಇದನ್ನು ಜಾಸ್ತಿ ತಿಂದರೆ ತಲೆ ತಿರುಗುತ್ತದೆ.

ಆಯುರ್ವೇದ ಆಸಕ್ತರಿಗೆ “ತ್ರಿಫಲಾ ಚೂರ್ಣ” ಖಂಡಿತಾ ಗೊತ್ತಿರುತ್ತದೆ. ಅದರಲ್ಲಿ ಇದೇ ಶಾಂತಿ (ಹಣ್ಣಿನ ಸಿಪ್ಪೆ), ಅಣಿಲೆ ಮತ್ತು ನೆಲ್ಲಿ ಕಾಯಿ ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಪುಡಿ ಮಾಡಿದ್ದಾಗಿದೆ. ಇದನ್ನು ಅಜೀರ್ಣ ಮಲಬದ್ದತೆಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ತ್ರಿಫಲವನ್ನು ಇತರ ಆಯುರ್ವೇದ ಔಷಧಿ ತಯಾರಿಗಳಲ್ಲಿ ಬಹಳಷ್ಟು ಉಪಯೋಗಿಸುತ್ತಾರೆ. ಕೆಮ್ಮು, ಚರ್ಮರೋಗ, ಕಣ್ಣಿನ ತೊಂದರೆ ಹಾಗೂ ನೋವು ನಿವಾರಕವಾಗಿ ಉಪಯೋಗಿಸಲಾಗುತ್ತದೆ.

ಅಲರ್ಜಿ: ಕೆಲವರಿಗೆ ಚೇರೆ ಮರದ ಅಡಿಗೆ ಹೋದರೆ ಅಥವಾ ಅದನ್ನು ತುಂಡುಮಾಡಿದರೆ ಮೈಯಲ್ಲಿ ಸಣ್ಣ ಸಣ್ಣ ದಡಿಕೆ ಏಳುತ್ತದೆ. ೧-೨ ದಿನ ಕಳೆದರೆ ಚರ್ಮದಿಂದ ನೀರೂ ಸೋರುತ್ತದೆ. ಇದು ಚೇರೆ ಮರದ ವಿಷ ಲಕ್ಷಣ. ಶಾಂತಿ ಮರದ ಕೆತ್ತೆಯನ್ನು ನೀರಲ್ಲಿ ಅರೆದು ಹಚ್ಚುವುದು ಹಾಗೂ ೫ ಗ್ರಾಂ ನಷ್ಟು ಅರೆದು ಕುಡಿದರೆ ಅಲರ್ಜಿ ಕಡಿಮೆಯಾಗುವುದು. ಚೇರೆ ಮರದ ಇನ್ನೊಂದು ಪ್ರಭೇದ ಭಲ್ಲಾತಕ ( ಗಟ್ಟದ ಗೇರು) ಬೀಜ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ. ಭಲ್ಲಾತಕ ಬಹಳ ತೀಕ್ಷಣ ಗುಣ ಉಳ್ಳದ್ದು. ಚರ್ಮಕ್ಕೆ ತಾಗಿದರೆ ಬೆಂಕಿ ಗುಳ್ಳೆಯಂತೆ ಬರುತ್ತದೆ. ಇದನ್ನು ಔಷಧಿಗಾಗಿ ಉಪಯೋಗಿಸಬೇಕಾದರೆ ಶುದ್ಧ ಮಾಡಲೇ ಬೇಕು. ಶಾಂತಿ ತೊಗಟೆಯೊಂದಿಗೆ ಭಲ್ಲಾತಕ ಬೇಯಿಸಿದರೆ ಶುದ್ಧ ಆಗುತ್ತದೆ. ಅಂತಹ ವಿಶೇಷ ಗುಣ ಇರುವ ಔಷಧಿ ಇದಾಗಿದೆ. ಹಲವು ವರ್ಷಗಳಿಂದ ತುರಿಸುವ (urticaria) ತೊಂದರೆ ಇರುವವರೂ ಶಾಂತಿ ಕೆತ್ತೆಯ ಉಪಯೋಗ ಪಡೆಯಬಹುದು.

ಶ್ವಾಸಮಾರ್ಗ ತೊಂದರೆ: “ಸ್ವರಭೇದ ಕಪೋತ್ಲೇದ ಪಿತ್ತರೋಗ ವಿನಾಶನಂ”|| ಚರಕ ಸಂಹಿತೆಯಲ್ಲಿ ಹೇಳಿದಂತೆ ಇದರ ಕಾಯಿ ಸಿಪ್ಪೆಯನ್ನು ಚಪ್ಪರಿಸಿ ನುಂಗುವುದರಿಂದ ಸ್ವರದ ತೊಂದರೆ ಇದ್ದರೆ ಸರಿಯಾಗುವುದು. ಜೇನಿನೊಂದಿಗೆ ಸೇವಿಸಿದರೆ ಕಫ ಕಡಿಮೆಯಾಗುವುದು. ಹಾಲಿನೊಂದಿಗೆ ಅಥವಾ ನೀರಿನೊಂದಿಗೆ ಐದು ಗ್ರಾಂ ನಷ್ಟು ಸೇವಿಸಿದರೆ ತಲೆತಿರುಗುವುದು ಕಡಿಮೆಯಾಗುವುದು.

ಶಾಂತಿ ಕಾಯಿ ಬೀಜದ ಎಣ್ಣೆ: ಇದನ್ನು ನೋವು ಇರುವಲ್ಲಿಗೆ ಹಚ್ಚಿದರೆ ನೋವು ಕಡಿಮೆಯಾಗುವುದು. ವೃತ್ತಾಕಾರದಲ್ಲಿ ಕೂದಲು ಉದುರುವ ತೊಂದರೆ ಇರುವಲ್ಲಿಗೆ ಇದನ್ನು ಹಚ್ಚಿದರೆ ಕೂದಲು ಹುಟ್ಟುವುದು. ಚರ್ಮ ತುರಿಕೆ ಇರುವಲ್ಲಿಗೂ ಎಣ್ಣೆಯನ್ನು ಹಚ್ಚಬಹುದು.

ಮಲಬಧ್ಧತೆ: ಶಾಂತಿ ಸಿಪ್ಪೆ ಚೂರ್ಣ ನಿತ್ಯ ಸೇವಿಸಿದರೆ ಮಲಬದ್ಧತೆ, ಕಣ್ಣಿನ ತೊಂದರೆಗಳು ನಿವಾರಣೆ ಆಗುತ್ತದೆ. ವಿಶೇಷವೆಂದರೆ ಕಾಯಿಯಾಗಿರುವಾಗ ಉಪಯೋಗಿಸಿದರೆ ಮಲಬದ್ಧತೆ ನಿವಾರಣೆ ಮಾಡುವುದು. ಚೆನ್ನಾಗಿ ಬಲಿತ ಕಾಯಿ ಸಿಪ್ಪೆ ಅತಿಸಾರ ಕಡಿಮೆ ಮಾಡುವುದು. ಒಂದೇ ಮರದ ಫಲ ಕಾಯಿಯಾಗಿರುವಾಗ ಒಂದು ಗುಣವಿದ್ದರೆ ಹಣ್ಣಾದಾಗ ಇನ್ನೊಂದು ಗುಣ ಹೊಂದಿದೆ. ಲೂಸ್‌ಮೋಷನ್ ಇರುವಾಗ ಶಾಂತಿ ಕಾಯಿ ಸಿಪ್ಪೆ ಮತ್ತು ಸ್ವಲ್ಪ ಉಪ್ಪು ಸೇರಿಸಿ ೩-೪ ಸಲ ಸೇವಿಸಬೇಕು ಅಥವಾ ೧-೨ ಲವಂಗ ಮತ್ತು ಜೇನು ಸೇರಿಸಿ ಸೇವಿಸಿದರೆ ಕಡಿಮೆಯಾಗುವುದು.

ಸರ್ಪಸುತ್ತಿನಲ್ಲಿ ಶಾಂತಿ ಮರದ ಕೆತ್ತೆ ಅರೆದು ಹಚ್ಚುವುದರಿಂದ ನೋವು ಉರಿ ಕಡಿಮೆಯಾಗುತ್ತದೆ. ದೃಷ್ಟಿ ಕಡಿಮೆಯಾಗುತ್ತಿರುವಾಗ ಶಾಂತಿ ಚೂರ್ಣದೊಂದಿಗೆ ಸಕ್ಕರೆ ಸೇರಿಸಿ ಸೇವಿಸಬೇಕು. ಕಾಲಿನಲ್ಲಿ ಬಾವು (ನೀರು) ಇರುವಾಗ  ಐದು ಗ್ರಾಂ ಶಾಂತಿಕಾಯಿ ಸಿಪ್ಪೆ ಪುಡಿ ಬರ‍್ಲಿ ನೀರಿನಲ್ಲಿ ಸೇರಿಸಿ ಕುಡಿಯಬೇಕು.

ವೈದ್ಯರ ಸೂಕ್ತ ಸಲಹೆಯೊಂದಿಗೆ ಸೇವಿಸಿದರೆ ಅಜೀರ್ಣ, ಲೈಂಗಿಕ ನಿಶ್ಯಕ್ತಿ, ಅಲರ್ಜಿ ಶೀತಗಳನ್ನು ನಿವಾರಿಸುವ ಔಷಧಿಯಾಗಿದೆ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.