Scientific Name: Azadirachta indica
“ನಿಂಬತಿ ಸಿಂಚತಿ ಸ್ವಾಸ್ಥ್ಯಂ” ನಿಂಬ (ಕಹಿಬೇವು) ಉಪಯೋಗದಿಂದ ನಿತ್ಯವೂ ಆರೋಗ್ಯ ಲಭಿಸುವುದು ಎಂಬುದಾಗಿ ಕಹಿಬೇವಿನ ಮಹತ್ವವನ್ನು ಹೇಳಿದ್ದಾರೆ. ಒಣ ಹವೆಯಲ್ಲಿ ಸಮೃದ್ಧವಾಗಿ ಬೆಳೆಯುವ ಕಹಿಬೇವು 40-60 ಅಡಿ ಎತ್ತರ ಬೆಳೆಯುತ್ತದೆ. ತೊಗಟೆಯ ಹೊರಗಿನ ಭಾಗ ಅತ್ಯಂತ ದೊರಗಾಗಿದ್ದು ಅಧಿಕ ನಾರಿನಿಂದ ಕೂಡಿದೆ. ಎಪ್ರಿಲ್-ಮೇಯಲ್ಲಿ ಬಿಳಿ ಮಿಶ್ರಿತ ಹಳದಿ ಹೂಗಳು ಗೊಂಚಲಿನಲ್ಲಿ ಕಂಡುಬರುತ್ತದೆ. ಮುಂದೆ ಪಚ್ಚೆ ಬಣ್ಣದ ಫಲ ಕಾಟು ಮಾವಿನ ಗೊಂಚಲಿನಂತೆ ನೇತಾಡಿಕೊಂಡಿರುತ್ತದೆ. ಹಣ್ಣಿನ ಒಳಗೆ ಒಂದು ಬೀಜವಿದ್ದು ಒಣಗಿದ ನಂತರ ಸಿಪ್ಪೆ ತೆಗೆದ ನೆಲಗಡಲೆ ಬೀಜದಂತೆ ಕಂಡುಬರುತ್ತದೆ.
ಮೈಯಲ್ಲಿ ಕೋಟ್ಲೆ ಬಿದ್ದಾಗ, ಸಣ್ಣ ಸಣ್ಣ ತುರಿಕಜ್ಜಿಗಳು ಕಂಡುಬಂದಾಗ ಶುರುವಿಗೆ ನೆನಪಾಗುವುದು ಕಹಿಬೇವು. ಪ್ರತಿ ಯುಗಾದಿಗೆ ಬೆಲ್ಲದೊಂದಿಗೆ ಬೇವು ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಕೀಲಿಕೈ ಎಂಬುದನ್ನು ನೆನಪಿಸುವುದರೊಂದಿಗೆ ಜೀವನದಲ್ಲಿ ಕಷ್ಟ ಮತ್ತು ಸುಖವನ್ನು ಸಮವಾಗಿ ಅನುಭವಿಸು ಎಂಬ ಜೀವನ ಮೌಲ್ಯವನ್ನು ಕಲಿಸುತ್ತದೆ. ಆಧ್ಯಾತ್ಮದಲ್ಲಿ ನಂಬಿಕೆ ಇರುವವರಿಗೆ ಕಹಿಬೇವಿನ ಬಗ್ಗೆ ಒಂದು ಶ್ಲೋಕದಲ್ಲಿ ಉಲ್ಲೇಖವಿದೆ.
ಅಶ್ವತ್ಥಮೇಕಂ ಪಿಚುಮಂದಮೇಕಂ
ನ್ಯಗ್ರೋದಮೇಕಂ ದಶಚಿಂಚಣೀಕಂ|
ಕಪಿತ್ಥ ಬಿಲ್ವಾಮಲಕ ತ್ರಯಂಚ
ಪಂಚಾಮ್ರರೋಪಿ ನರಕಂ ನಯಾತಿ||
ಒಂದು ಅಶ್ವತ್ಥ ಗಿಡ ಒಂದು ಕಹಿ ಬೇವಿನ(ಪಿಚುಮಂದ) ಗಿಡ, ಒಂದು ಗೋಳಿ ಗಿಡ ಹತ್ತು ಹುಣಸೆ ಗಿಡ, ಕಪಿತ್ಥ, ಬಿಲ್ವ, ನೆಲ್ಲಿಕಾಯಿ ಪ್ರತಿಯೊಂದು ಮೂರು ಹಾಗು ಐದು ಮಾವಿನ ಗಿಡಗಳನ್ನು ಯಾರು ನೆಟ್ಟು ಬೆಳೆಸುತ್ತಾರೋ ಅವರಿಗೆ ನರಕ ಪ್ರಾಪ್ತಿ ಆಗದು. ಸ್ವರ್ಗ ಪ್ರಾಪ್ತಿ ಆಗಲು ಇಷ್ಟು ಗಿಡ ನೆಟ್ಟರೆ ಸಾಕು ! ಸಮಾಜಕ್ಕೂ ಇದರಿಂದ ಪ್ರಯೋಜನ ಇದೆ.
ಎಲೆ:
ಕಹಿಬೇವಿನ ಎಲೆಯಲ್ಲಿ ಅತ್ಯಧಿಕ ವಿವಿಧ ಜೈವಿಕ ಕ್ರಿಯಾಶೀಲ ಸಂಯುಕ್ತ ವಸ್ತುಗಳು ಇವೆ. ಭೂಮಿಯ ಮೇಲೆ ಇಷ್ಟೊಂದು ಕ್ರಿಯಾಶೀಲ ವಸ್ತುಗಳು ಬೇರೆ ಯಾವ ಎಲೆಯಲ್ಲಿಯೂ ಇಲ್ಲ. ಪ್ರತಿದಿನ 2-3 ಎಲೆಗಳನ್ನು ಜಗಿದು ನುಂಗಿದರೆ ಆರೋಗ್ಯ ರಕ್ಷಣೆ ಮಾಡುವುದು. 8-10 ಎಲೆಗಳನ್ನು ಕುದಿಸಿ ಸೋಸಿ ಕುಡಿದರೆ ಅಸಿಡಿಟಿ ಕಡಿಮೆಯಾಗುವುದು. ಆಗಾಗ ಕ್ರಿಮಿಬಾಧೆಯಿಂದ ಬಳಲುವವರು ಒಣಗಿಸಿದ ಎಲೆಯಪುಡಿ ಒಂದು ಚಮಚ, ಓಮದ ಪುಡಿ ಅರ್ಧ ಚಮಚ, ಜೇನು ಒಂದು ಚಮಚ ಸೇರಿಸಿ ಮಿಶ್ರ ಮಾಡಿ ರಾತ್ರಿ ಏಳುದಿನ ಸೇವಿಸಬೇಕು. ತುರಿಕೆ ಕಜ್ಜಿಗಳಿರುವಾಗಲೂ ಎಲೆಯನ್ನು ಅರೆದು ಹಚ್ಚಿ 3-4 ಗಂಟೆ ನಂತರ ಸ್ನಾನ ಮಾಡಬೇಕು. ಕೋಟ್ಲೆ ಬೀಳುವಾಗಲೂ ಕಹಿಬೇವು, ಅರಸಿನ, ಪಲ್ಲಿಸೊಪ್ಪು ಸೇರಿಸಿ ನಯವಾಗಿ ಅರೆದು ಹಚ್ಚಬೇಕು. ಎಲೆಯನ್ನು ನೀರಲ್ಲಿ ಕುದಿಸಿ ತಣಿದನಂತರ ಅದರಲ್ಲಿ ಸ್ನಾನಮಾಡುವುದರಿಂದಲೂ ತುರಿಕೆ ಕಡಿಮೆ ಆಗುತ್ತದೆ. ಪುಸ್ತಕದ ಕಪಾಟಿನಲ್ಲಿ ಎಲೆಯನ್ನು ಇಡುವುದರಿಂದ silver fish ಕ್ರಿಮಿಯಿಂದ ಪುಸ್ತಕಗಳು ಹಾಳಾಗುವುದಿಲ್ಲ.
ತೊಗಟೆ:
ಚರ್ಮವ್ಯಾಧಿ, ಆಮ್ಲಪಿತ್ತ(ಅಸಿಡಿಟಿ) ದಲ್ಲಿ ಇದರ ತೊಗಟೆಯನ್ನು ಸೇರಿಸಿದ ಕಷಾಯ ಪರಿಣಾಮಕಾರಿಯಾಗಿದೆ. ಇದು ಜಠರದಲ್ಲಿ ಆಮ್ಲದ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ. ಆಮಾಶಯದ ಭಿತ್ತಿಯನ್ನು ರಕ್ಷಣೆ ಮಾಡುತ್ತದೆ. ಆಂಟಿ ಬ್ಯಾಕ್ಟೀರಿಯಲ್, ಆಂಟಿ ಆಕ್ಸಿಡೆಂಟ್ ಗುಣವಿದೆ. ಇದನ್ನು ಬ್ರಶ್‍ನಂತೆ ಮಾಡಿ ಹಲ್ಲುಉಜ್ಜಲು ಉಪಯೋಗಿಸಬಹುದು. ಜ್ವರ ಇರುವಾಗ ಕಷಾಯಮಾಡಿ ಕುಡಿಯಬಹುದು.
ಬೀಜ:
ಕಹಿಬೇವಿನ ಬೀಜದಿಂದ ಎಣ್ಣೆಯನ್ನು ತೆಗೆಯುತ್ತಾರೆ. ಇದಕ್ಕೆ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ನಾಶಮಾಡುವ ಗುಣವಿದೆ. ಮನುಷ್ಯರಿಗೆ ಅಲ್ಲದೆ ದನದ ಮೇಲಿನ ಹುಣು,್ಣ ನುಸಿ, ನೊಣದಬಾಧೆಗಳನ್ನು ನಿವಾರಿಸುತ್ತದೆ. Fatty oil ಅಧಿಕ ಇರುವುದರಿಂದ ಚರ್ಮದ ಸ್ವಾಸ್ಥ್ಯತೆಯನ್ನು ಕಾಪಾಡುತ್ತದೆ. ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸಲ್ಪಡುತ್ತದೆ.
ತುಂಬಾ ಕೂದಲು ಉದುರುವುದಿದ್ದರೆ ಶುದ್ಧ ಕಹಿಬೇವಿನ ಎಣ್ಣೆ 3-4 ಬಿಂದು ಮೂಗಿಗೆ 1-2 ತಿಂಗಳು ಬಿಡಬೇಕು. ಒಂದು ಚಮಚ ಶುದ್ಧ ಬೇವಿನ ಎಣ್ಣೆಯನ್ನು ಒಂದು ಲೋಟ ಬಿಸಿ ಹಾಲಿಗೆ ಹಾಕಿ ಪ್ರತಿನಿತ್ಯ (5-6 ತಿಂಗಳು) ಕುಡಿಯುವುದರಿಂದ ಅಕಾಲಿಕ ಬಿಳಿಕೂದಲು ಕಪ್ಪಾಗುತ್ತದೆ.
ಡಾ| ಹರಿಕೃಷ್ಣ ಪಾಣಾಜೆ