Scientific Name: Hibiscus rosa-sinensis
ಬೆಳಗ್ಗೆ ತೋಟದಲ್ಲಿಯೋ ಬೇಲಿಯಲ್ಲಿಯೋ ಅರಳಿದ ದಾಸವಾಳ ಹೂಗಳನ್ನು ತಂದು ದೇವರಿಗೆ ಅಲಂಕರಿಸಿ ಕೈ ಮುಗಿದು ದಿನವನ್ನು ಆರಂಭಿಸುತ್ತೇವೆ. ಮರುದಿನ ತೆಂಗಿನ ಬುಡಕ್ಕೆ ಹಾಕುತ್ತೇವೆ. ದಾಸವಾಳ ದೇವರಿಗೆ ಮುಡಿಯುವುದನ್ನು ಬಿಟ್ಟರೆ ನಮ್ಮ ಹಳೆ ತಲೆಮಾರಿನ ಹೆಂಗಸರು ತಲೆಗೆ ಮುಡಿಯುತ್ತಾರೆ. ಗಿಡ ತುಂಬಾ ಹೂವಾಗಿ ಮನೆಯಂಗಳವನ್ನು ಅಲಂಕರಿಸುತ್ತದೆ. ಸುಲಭವಾಗಿ ಕಸಿ ಮಾಡಲು ಒಗ್ಗುವುದರಿಂದ ನೂರಾರು ವಿವಿಧ ದಾಸವಾಳಗಳು ಕಂಡು ಬರುತ್ತದೆ. ಇವು ಅಲಂಕಾರಕ್ಕೆ ಸೀಮಿತ. ಹೆಚ್ಚಿನವರ ಮನೆಯಂಗಳದಲ್ಲಿ ಕಂಡುಬರುವ ಐದು ಎಸಳುಗಳ ಕೆಂಪು ದಾಸವಾಳ ಔಷಧಿಗೆ ಸೂಕ್ತ.
ಇದರ ಮೊಗ್ಗು, ಹೂ, ಎಲೆ, ಬೇರು ಔಷಧಿಗಾಗಿ ಉಪಯೋಗಿಸಲಾಗುತ್ತದೆ.
ಮೊಗ್ಗು:
ಮೈ ಮೇಲೆ ಸಣ್ಣ ಸಣ್ಣ ಕುರಗಳು ಮೂಡುವುದಿದ್ದರೆ, ತುರಿಕೆ ಸಹಿತ ದಡಿಕೆಗಳು ಕಂಡುಬಂದರೆ ಹೂವಿನ ಮೊಗ್ಗನ್ನು ಕೆಂಡದಲ್ಲಿ ಹುದುಗಿಸಿ ಸ್ವಲ್ಪ ಬಾಡಿಸಿ ತೊಳೆದು ಕಲ್ಲು ಸಕ್ಕರೆ, ನೀರು ಸೇರಿಸಿ ಮಿಕ್ಸಿಯಲ್ಲಿ ಅರೆದು ಒಂದು ವಾರ ಕುಡಿಯಬೇಕು.
ಹೂ:
ತಲೆ, ಹುಬ್ಬು, ಮೀಸೆ, ಗಡ್ಡದ ಭಾಗದಲ್ಲಿ ವಿವಿಧ ಆಕಾರದಲ್ಲಿ ಕೂದಲು ಸಂಪೂರ್ಣ ಉದುರಿ ಮತ್ತೇ ಹುಟ್ಟದೇ ಇರುವ ಒಂದು ವಿಧದ ಚರ್ಮ ವ್ಯಾಧಿ ಇದೆ. ಸಂಪೂರ್ಣ ಕೂದಲು ಬಿದ್ದು ನುಣುಪಾದ ಚರ್ಮಕ್ಕೆ ದಾಸವಾಳದ ಹೂವನ್ನು ಚೆನ್ನಾಗಿ ಅರೆದು ಹಚ್ಚಿ 5-6 ಗಂಟೆಯ ನಂತರ ತೊಳೆಯಬೇಕು. ಒಂದೆರೆಡು ತಿಂಗಳು ಹಚ್ಚಿದರೆ ಆ ಭಾಗದಲ್ಲಿ ಸಂಪೂರ್ಣ ಕೂದಲು ಹುಟ್ಟುತ್ತದೆ. ಉರಿಮೂತ್ರ ಅಥವಾ ಮೂತ್ರ ಮಾಡುವಾಗ ನೋವಾಗುತ್ತಿದ್ದರೆ ಒಂದು ಮುಷ್ಠಿ ಹೂವನ್ನು ಪಾತ್ರೆಗೆ ಹಾಕಿ ಅದಕ್ಕೆ ಒಂದು ಲೀಟರ್ಕು ದಿಯುವ ನೀರನ್ನು ಸೇರಿಸಿ ಮುಚ್ಚಿಡಬೇಕು. ತಣಿದ ನಂತರ ಕೈಯಲ್ಲಿ ಚೆನ್ನಾಗಿ ಕಿವುಚಿ ಸೋಸಿ ಕುಡಿಯಬೇಕು.
“ಜಪಾ ಸಂಗ್ರಾಹಿಣೀ ಕೇಶ್ಯಾ” ದಾಸವಾಳ (ಜಪಾ) ಕೇಶವೃದ್ಧಿ ಮಾಡುವುದು ಎಂದು ಭಾವಪ್ರಕಾಶ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಕೂದಲು ಉದುರಿ ಚೋಟುದ್ದ ಕೂದಲು ಆದವರೂ ಹೂವಿನ ರಸವನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಸವರಿ 3-4 ಗಂಟೆಯ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.
ಮುಟ್ಟಿನ ಸ್ರಾವ ಅಧಿಕ ಇರುವವರೂ ಇದರ ಹೂವನ್ನು ಹಾಲಿನೊಂದಿಗೆ ಅರೆದು 7 ದಿನ ಕುಡಿಯುವುದರಿಂದ ಶಮನವಾಗುವುದು.
ದಾಸವಾಳ ಟೀ:
ಇದು ಈಗ ತುಂಬಾ ಪ್ರಚಲಿತ. ಚಾ ಗಿಡದ ಎಲೆಯ ತಯಾರಿಕೆಗೆ “ ಟೀ” ಎನ್ನುತ್ತೇವೆ. ಆದರೆ ಯಾವುದೋ ಗಿಡ ಮೂಲಿಕೆಗಳನ್ನು ಹಾಕಿ ತಯಾರಿಸಿದರೆ ಗ್ರೀನ್ ಟೀ ಎನ್ನುತ್ತೇವೆ. ಹಾಗೆಯೇ ದಾಸವಾಳ ಟೀ ದಾಸವಾಳದ ಹೂಗಳನ್ನು ಒಣಗಿಸಿ ಪುಡಿಮಾಡಿ ಉತ್ತಮ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ. ದಾಸವಾಳದ ಹೂವಿನಲ್ಲಿ
ಕ್ಯಾಲ್ಸಿಯಂ, ಫಾಸ್ಪರಸ್ , ಕಬ್ಬಿಣ ಅಂಶ, ಮಿಟಮಿನ್ ಗಳು ಇವೆ. ಈ ಪುಡಿಯೊಂದಿಗೆ ಏಲಕ್ಕಿ, ಚೆಕ್ಕೆಗಳನ್ನು ಸೇರಿಸಿ ಉತ್ತಮ ರುಚಿ ಹಾಗೂ
ಪರಿಮಳವನ್ನು ಪಡೆಯಬಹುದು. ಪುಡಿಯನ್ನು ಕುದಿಯುವ ನೀರಿಗೆ ಹಾಕಿ ರುಚಿಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಬಹುದು. ಟೀ, ಕಾಫಿಗೆ ಪರ್ಯಾಯವಾಗಿ ಇದನ್ನು ಉಪಯೋಗಿಸಬಹುದು. ತಂಪುಗುಣವನ್ನು ಹೊಂದಿರುವುದರಿಂದ ಶರೀರದ ಕೆಲವು ತೊಂದರೆಗಳನ್ನು ನಿವಾರಿಸುವುದು. ಆರೋಗ್ಯವನ್ನು ವೃದ್ಧಿಸುವುದು. ಅಲ್ಲದೆಯಾವುದೇ ಅಡ್ಡ ಪರಿಣಾಮಗಳೂ ಇಲ್ಲ. ಹೂ ಮೊಗ್ಗುಗಳನ್ನು ಸಾರು, ಸಾಂಬಾರು ಪಲ್ಯಗಳಾಗಿ ಬಳಸಬಹುದು.
ಎಲೆ:
ಈಗ ಶ್ಯಾಂಪೂ ಇಲ್ಲದೆ ಸ್ನಾನವಿಲ್ಲ. ಎಲ್ಲರಿಗೂ ಶ್ಯಾಂಪೂ ಬೇಕೇ ಬೇಕು. ಸ್ತ್ರೀಯರು ಶ್ಯಾಂಪೂ ಇಲ್ಲದಿದ್ದರೆ ತಲೆಗೆ ಸ್ನಾನ ಮಾಡಲಾರರು. ಅಷ್ಟೊಂದು ವ್ಯಾಮೋಹ ಶ್ಯಾಂಪೂವಿನ ಬಗ್ಗೆ ಬೆಳೆದಿದೆ. ಆಯುರ್ವೇದಿಕ್ ಶ್ಯಾಂಪೂವಿಗೆ ಬೇಡಿಕೆ ಅಧಿಕ. ಆದರೆ ಅದರಲ್ಲಿ ಇರುವ ಕೆಮಿಕಲ್ ಖಂಡಿತ ಒಳ್ಳೆಯದಲ್ಲ. ಇದರಿಂದಾಗಿ ಹಲವರ ದಪ್ಪ ಹಾಗೂ ಉದ್ದ ಕೂದಲು ಕಡಿಮೆಯಾಗಿದೆ. ಕೂದಲಿನ ಹಿತಕ್ಕೆ ರಾಸಾಯನಿಕ ರಹಿತ ದಾಸವಾಳದ ಎಲೆಗಳನ್ನು ಚೆನ್ನಾಗಿ ನೀರಲ್ಲಿ ಕಿವುಚಿ, ಸೋಸಿ ಸಂಗ್ರಹಿಸಿದ ಲೋಳೆಯಂತಹ ದ್ರವ ಶ್ಯಾಂಪೂವಿನಂತೆ ಇರುತ್ತದೆ. ಎಣ್ಣೆ ಹಚ್ಚಿ ಸ್ನಾನ ಮಾಡುವಾಗ ಇದರಿಂದ ತೊಳೆದರೆ ತಲೆ ಹೊಟ್ಟು , ಕೂದಲು ಉದುರುವುದು ಕಡಿಮೆಯಾಗುವುದು. ಕೂದಲು ನೀಳವಾಗಿ ಬೆಳೆಯುವುದು. ಇದರಲ್ಲಿ ಯಾವುದೇ ರಾಸಾಯನಿಕ ವಸ್ತು ಇಲ್ಲದೇ ಇರುವುದರಿಂದ ಅಕಾಲಿಕ ತಲೆಕೂದಲು ಬಿಳಿಯಾಗುವುದನ್ನು ತಡೆಗಟ್ಟುವುದು.
ಬೇರು:
ಮೂತ್ರಬಂದಂತೆ ಆಗಾಗ ಆಗುವುದು, ಹೆಚ್ಚು ಹೊತ್ತು ತಡೆದಿಟ್ಟು ಕೊಳ್ಳಲಾಗದೇ (ಕೆಲವು ನಿರ್ದಿಷ್ಟ ಕಾಯಿಲೆಗಳನ್ನು ಹೊರತು ಪಡಿಸಿ) ಕಷ್ಟ ಅನುಭವಿಸುತ್ತಿರುವವರು ಇದರ ಒಂದು ತುಂಡು ಬೇರನ್ನು ಕುಚ್ಚಲಕ್ಕಿಯೊಂದಿಗೆ ಗಂಜಿಮಾಡಿ ಸ್ಪಲ್ಪ ಉಪ್ಪು ಸೇರಿಸಿ ಒಂದು ವಾರ ಊಟ ಮಾಡಿದರೆ ನಿಯಂತ್ರಣಕ್ಕೆ ಬರುವುದು.
ದೇವರ ಮುಡಿ ಏರುವ ತಪ್ಪಿದರೆ ಮರು ದಿನ ಭೂಮಿಗೆ ಸೇರುವ ಹೂವು ಮನುಷ್ಯನ ಹೊಟ್ಟೆ ಅಥವಾ ಶರೀರಕ್ಕೆ ಸೇರಿದರೆ ಎಷ್ಟೊಂದು ಪ್ರಯೋಜನ ….!
ಡಾ| ಹರಿಕೃಷ್ಣ ಪಾಣಾಜೆ