Skip links

ನೆಕ್ಕಿ

Scientific Name: Vitex negundo

ಹಳ್ಳಿಗಳಲ್ಲಿ ನೆಕ್ಕಿ ಸೊಪ್ಪಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಂಸ್ಕೃತದಲ್ಲಿ ನಿರ್ಗುಂಡಿ ಎಂದು ಕರೆದರೆ ಮಲಯಾಳದಲ್ಲಿ ನೊಚ್ಚಿ ಸೊಪ್ಪು ಎನ್ನುತ್ತಾರೆ. ಮುಸಲ್ಮಾನರು ದಫನ ಮಾಡಿದ ನಂತರ ಅದರ ಮೇಲೆ ನೆಕ್ಕಿ ರೆಂಬೆಯನ್ನು ನೆಡುತ್ತಾರೆ. ಗುಡ್ಡಕಾಡುಗಳಲ್ಲಿ ಅಲ್ಲದೆ ಬೇಲಿ ಬದಿ ನದಿಯ ಬದಿಗಳಲ್ಲಿ ಹುಲುಸಾಗಿ ಮರದಷ್ಟು ಎತ್ತರ ಬೆಳೆಯದೆ ದೊಡ್ಡ ಪೊದೆಯಾಕಾರದಲ್ಲಿ ೧೦ ರಿಂದ ೨೦ ಅಡಿ ಎತ್ತರವೂ ಬೆಳೆಯುತ್ತದೆ. ಬಿಳಿ ಮತ್ತು ಕಪ್ಪು ನೆಕ್ಕಿಗಳೆಂದು ಎರಡು ವಿಧ. ಕಪ್ಪು ನೆಕ್ಕಿಯಲ್ಲಿ ಔಷಧಿ ಗುಣ ಅಧಿಕ. ಬಿಳಿ ನೆಕ್ಕಿ ಎಲೆ ಸೂಕ್ಷ್ಮ ರೋಮಶವಾಗಿರುತ್ತದೆ. ಕಪ್ಪು ನೆಕ್ಕಿ ಮೇಲ್ಭಾಗ ಹಸುರಾಗಿದ್ದರೆ ಅಡಿಭಾಗ ಕಡುಕಪ್ಪು ಮಿಶ್ರಿತ ಕೆಂಪಾಗಿ ಕಾಣುತ್ತದೆ.ಬೂದು ಬಣ್ಣದ ತೊಗಟೆ, ಕೆಲವೊಮ್ಮೆ ಮೂರು ಹೆಚ್ಚಾಗಿ ಐದು ಎಲೆಗಳಿಂದ ಕೂಡಿದ ಪತ್ರವೃಂತ. ಎಲೆಗಳು ೨ ರಿಂದ ೫ ಇಂಚು ಉದ್ದ ಅರ್ಧದಿಂದ ಒಂದೂವರೆ ಇಂಚು ಅಗಲವಾಗಿರುತ್ತದೆ. ೨-೮ ಇಂಚು ಉದ್ದದ ಗುಚ್ಚಾಕಾರದ ಹೂ ಬಿಳಿ ಅಥವಾ ನೀಲಿ ವರ್ಣಗಳಲ್ಲಿ ಕಂಡುಬರುತ್ತದೆ.

ಇದರ ಬೇರು, ತೊಗಟೆ, ಹೂ, ಬೀಜ, ಎಲೆಗಳೆಲ್ಲವೂ ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಎಲೆಯಲ್ಲಿ ವಿಶೇಷವಾದ ಎಣ್ಣೆಯ ಅಂಶ ಇದೆ. ತೆರೆದಿಟ್ಟರೆ ಆವಿ ಆಗುವ ಗುಣ ಹೊಂದಿದೆ ಇದರ ಎಣ್ಣೆ ನೋವು ನಿವಾರಕ ಗುಣವನ್ನು ಹೊಂದಿದೆ.

ನೋವು ಬಾವು:

ವಿಶೇಷವಾಗಿ ನೋವು ನಿವಾರಕವಾಗಿ ಉಪಯೋಗಿಸಲ್ಪಡುತ್ತದೆ. ರುಮೆಟಾಯ್ಡ್ನೋ ವುಗಳಲ್ಲಿ ನೆಕ್ಕಿ ಎಲೆಯನ್ನು ಮತ್ತು ತುಳಸಿ ಎಲೆ ಸೇರಿಸಿ ಅರೆದು ರಸ ತೆಗೆದು ಓಮ ಪುಡಿ ಅರ್ಧ ಚಮಚ ಸೇರಿಸಿ ಕುಡಿಯಬೇಕು. ಅಥವಾ ಇದನ್ನು ನೀರು ಹಾಕಿ ಕುದಿಸಿ ಸೋಸಿ ಓಮ ಪುಡಿ ಹಾಕಿ ಕುಡಿಯಬಹುದು. ನೋವು ಬಾವು ಇರುವಲ್ಲಿಗೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಸೇಕ ಕೊಡಬಹುದು ಅಥವಾ ನೀರಲ್ಲಿ ಅರೆದು ಹಚ್ಚಿ ೩-೪ ಗಂಟೆ ನಂತರ ತೊಳೆಯಬಹುದು.

ಸಯಾಟಿಕಾ:

ಸೊಂಟದಿಂದ ಕಾಲಿನ ವರೇಗೆ ನರ ಎಳೆದಂತೆ ನೋವು ಕಂಡುಬಂದರೆ ಸಯಾಟಿಕಾ ಎನ್ನುತ್ತಾರೆ. ಇದರ ಎಲೆಯನ್ನು ನೀರಿನಲ್ಲಿ ಬೇಯಿಸಿ ಸೋಸಿ ದಿನಕ್ಕೆರಡು ಸಲ ಕುಡಿಯುವುದರಿಂದ ಸಯಾಟಿಕಾ ನೋವು ಕಡಿಮೆಯಾಗುವುದು. ಕಫದಿಂದ ಕೂಡಿದ ಜ್ವರ, ಲಂಗ್ಸ್ ಇನ್‌ಫೆಕ್ಷನ್ ಇರುವಾಗ ಇದರ ಎಲೆ ಕಷಾಯಕ್ಕೆ ಸ್ವಲ್ಪ ಹಿಪ್ಲಿ ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಲಂಗ್ಸ್ ಇನ್‌ಫೆಕ್ಷನ್‌ನಲ್ಲಿ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಯೋಗ್ಯವಾಗಿರುತ್ತದೆ.

ಜ್ವರ:

ಎಲೆಯೊಂದಿಗೆ ಬೇರು ಸೇರಿಸಿ ಕಷಾಯ ಮಾಡಿ ಕುಡಿದರೆ ಜ್ವರ ಕಡಿಮೆಯಾಗುವುದು. ಕೆಲವೊಂದು ಜ್ವರಗಳಲ್ಲಿ ಪ್ಲೀಹಾ ದೊಡ್ಡದಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಎಲೆ ಕಷಾಯ ಅಥವಾ ರಸಕ್ಕೆ ಅಣಿಲೆ ಚೂರ್ಣ ಹಾಗೂ ಗೋಮೂತ್ರ ಅರ್ಕ ಸೇರಿಸಿ ಉಪಯೋಗಿಸುವುದರಿಂದ ಶೀಘ್ರ ಪರಿಣಾಮ ಕಂಡುಬರುತ್ತದೆ. ಜ್ವರದಲ್ಲಿ ಬಾಯಾರಿಕೆ ಅತಿಯಾಗಿದ್ದರೆ ಇದರ ಹೂವನ್ನು ಜ್ಯೂಸ್‌ನಂತೆ ಅರೆದು ಜೇನು ಮಿಶ್ರ ಮಾಡಿ ಕುಡಿಯಬೇಕು.

ನೋವು:

ಇದರ ಎಲೆ ರಸ, ಬೇರು, ತೊಗಟೆ ಎಳ್ಳೆಣ್ಣೆಯಲ್ಲಿ ಮಿಶ್ರಮಾಡಿ ತೈಲ ತಯಾರಿಸಿ ನೋವು ಇರುವ ಭಾಗಕ್ಕೆ ಹಚ್ಚಿದರೆ ನೋವು ನಿವಾರಣೆಯಾಗುವುದು.

ತಲೆನೋವು:

ಸಣ್ಣ ಪ್ರಮಾಣದ ತಲೆನೋವುಗಳಿಗೆ ಎಲೆಯನ್ನು ಅರೆದು ಹಣೆಗೆ ಲೇಪಿಸಬೇಕು. ಇದರ ಬೀಜವನ್ನು ಸಂಗ್ರಹಿಸಿ ನಯವಾಗಿ ಪುಡಿಮಾಡಿ ನಸ್ಯಮಾಡುವುದರಿಂದಲೂ ತಲೆನೋವು ಕಡಿಮೆಯಾಗುತ್ತದೆ.

ಕೆಂಗಣ್ಣು:

ಎಲೆಯನ್ನು ಬಿಸಿ ನೀರಿನಲ್ಲಿ ಮುಳುಗಿಸಿಟ್ಟು, ತಣಿದ ನಂತರ ಕಣ್ಣು ಮುಖ ತೊಳೆಯುವುದರಿಂದ ಕೆಂಗಣ್ಣು ಬೇಗ ಉಪಶಮನವಾಗುವುದು.

ವ್ಯಾಧಿ ನಿವಾರಕ:

ಇದರ ಹೂ, ಬೀಜ, ಎಲೆ, ತೊಗಟೆ, ಬೇರು ತುಪ್ಪದಲ್ಲಿ ಸೇರಿಸಿ ತಯಾರಿಸಿದ ಘೃತ ಪಾಕ ನಿತ್ಯ ಸೇವನೆಯಿಂದ ವ್ಯಾಧಿ ಕ್ಷಮv ೆ(Immunity) ವೃದ್ಧಿಯಾಗುವುದು.

ಸೊಂಟ ನೋವು:

ನೆಕ್ಕಿ ಎಲೆ ಅರೆದು ರಸ ತೆಗೆದು ಅದಕ್ಕೆ ಹರಳೆಣ್ಣೆ (Castor oil) ಸೇರಿಸಿ ಕುಡಿದರೆ ದೀರ್ಘಕಾಲದ ಅಲ್ಪ ಪ್ರಮಾಣದ ಸೊಂಟನೋವು ನಿವಾರಣೆಯಾಗುತ್ತದೆ.

ಹುಣ್ಣು:

ಬೇರು ಮತ್ತು ಎಲೆಯನ್ನು ಸೇರಿಸಿ ತಯಾರಿಸಿ ಎಣ್ಣೆಯನ್ನು ಹಚ್ಚುವುದರಿಂದ ತುರಿಕೆ ಹಾಗೂ ಸಣ್ಣ ಸಣ್ಣ ಹುಣ್ಣುಗಳು ಕಡಿಮೆಯಾಗುವುದು.

ಕೀಟನಾಶಕ:

ಇದರ ಎಲೆಯನ್ನು ಧಾನ್ಯದೊಂದಿಗೆ, ಪುಸ್ತಕ, ಬಟ್ಟೆಯ ಮಧ್ಯೆ ಇಡುವುದರಿಂದ ಕೀಟಬಾಧೆಯನ್ನು ತಡೆಯಬಹುದು. ದನದ ಹಟ್ಟಿಯಲ್ಲಿ ನೊಣದ ಹಾವಳಿ ಜಾಸ್ತಿ ಇದ್ದರೆ ಇದರ ಎಲೆ ಸಹಿತ ರೆಂಬೆಗಳನ್ನು ಹಟ್ಟಿಯಲ್ಲಿ ತೂಗು ಹಾಕಬೇಕು.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.