Scientific Name: Bambusa bambos
ಇದೊಂದು ಹುಲ್ಲು ಜಾತಿಯ ಸಸ್ಯ. ಆದರೆ ಗುಂಪಾಗಿ ಬೆಳೆದು ಮರಗಳಿಗಿಂತಲೂ ಎತ್ತರ ಬೆಳೆಯುತ್ತದೆ. “ವಂಶವೃಕ್ಷ” ಎಂಬ ಒಂದು ಪದವಿದೆ. ಅಂದರೆ ಒಂದು ಕುಟುಂಬದ ವಂಶ ಪಾರಂರ‍್ಯದ ಚಾರ್ಟ್. ಒಂದು ಕುಟುಂಬ ಎಂದರೆ ಒಬ್ಬ ಇಬ್ಬರು ಇರುವುದಲ್ಲ ಹಾಗೆ ಬಿದಿರು ಒಂದು ಅಥವಾ ಎರಡು ಮಾತ್ರ ಕಂಡು ಬರುವುದಿಲ್ಲ. ಅದು ದೊಡ್ಡ ಗುಂಪಾಗಿರುತ್ತದೆ. ಆದ ಕಾರಣವೇ ಸಂಸ್ಕೃತದಲ್ಲಿ ಬಿದಿರಿಗೆ “ವಂಶ” ಎಂಬ ಅನ್ವರ್ಥ ನಾಮ.
ಬಿದಿರು ಬಹು ಉಪಯೋಗಿ. ಮನೆ, ಬೇಲಿ, ಸೇತುವೆ ಕಟ್ಟಲು ಬೇಕು. ಬುಟ್ಟಿ, ಕುರ್ಚಿ,ಮೇಜು, ಮಂಚ, ಚಪ್ಪಲಿ, ಪೇಪರ್, ಬಟ್ಟೆ ತಯಾರಿಸಲೂ ಬಿದಿರು ಬೇಕು. ಆಹಾರವಾಗಿ ಬಿದಿರಿನ ಅಕ್ಕಿ, ಕಣಿಲೆ ಉಪಯೋಗವಾಗುತ್ತದೆ. ಸಂಗೀತ ಲೋಕದಲ್ಲಿ ಕೊಳಲಿನ ನಾದ ಸವಿಯದವರು ಯಾರೂ ಇಲ್ಲ. ಕೃಷ್ಣನ ಕೈಯಲ್ಲಿ ಇರುವುದೂ ಇದೇ ಬಿದಿರಿನ ಕೊಳಲು. ವೇಗವಾಗಿ ಬೆಳೆಯುತ್ತದೆ, ಇಂಗಾಲದ ಡೈ ಆಕ್ಸೆಡನ್ನು ಹೀರಿಕೊಳ್ಳುತ್ತದೆ. ಆಮ್ಲಜನಕವನ್ನು ಅಧಿಕ ಬಿಡುಗಡೆ ಮಾಡುತ್ತದೆ. ಬಿದಿರು ಅಧಿಕ ಬೆಳೆಯುವಲ್ಲಿ ಮಣ್ಣಿನ ಸವಕಳಿ ಇರುವುದಿಲ್ಲ. ಇದರೊಂದಿಗೆ ಔಷಧಿಯಾಗಿಯೂ ಅತ್ಯಂತ ಉಪಯೋಗಿ.
ಇದರ ಚಿಗುರು, ಎಲೆ, ಬೇರು, ತೊಗಟೆ, ಬೀಜ ಔಷಧಿಯಾಗಿದೆ. ಕೆಲವು ಜಾತಿಯ ಬಿದಿರಿನ ಟೊಳ್ಳಾದ ಭಾಗದಲ್ಲಿ ಸಂಗ್ರಹವಾಗುವ ಗಟ್ಟಿ ಹಾಗೂ ಬಿಳಿಯಾದ ವಸ್ತುವಿಗೆ ವಂಶಲೋಚನ ಎನ್ನುತ್ತಾರೆ. ಇದು ಔಷಧಿಯಾಗಿ ತುಂಬಾ ಉಪಯೋಗವಾಗುತ್ತದೆ. Bambusa arundinacea ಎಂಬ ಜಾತಿಯ ಬಿದಿರು silicaವನ್ನು ಭೂಮಿಯಿಂದ ಹೀರಿ ಟೊಳ್ಳಾದ ಜಾಗದಲ್ಲಿ ತುಂಬಿಸಿಕೊಳ್ಳುತ್ತದೆ. ಇದು ಬಿಳಿಯಾಗಿ ಸ್ವಚ್ಚ ಹರಳುಗಳಂತೆ ಇರುತ್ತದೆ. ಇದು ಅತ್ಯಂತ ಬೆಳೆ ಬಾಳುವ ಔಷಧಿಯಾಗಿದೆ.

ಬಿದಿರಿನ ಎಳೆ ಚಿಗುರು : ಇದರ ಕಷಾಯ ಮಾಡಿ ಒಣಗದಿರುವ ಹಳೆ ಹುಣ್ಣುಗಳನ್ನು ತೊಳೆಯಬಹುದು. ಇದರಿಂದ ಹುಣ್ಣುಗಳು ಬೇಗ ಒಣಗುತ್ತದೆ. ಕಷಾಯವನ್ನು ಕುಡಿದರೆ ಹಸಿವು ಕಡಿಮೆ ಇದ್ದವರಿಗೆ ಹಸಿವು ಜಾಸ್ತಿ ಮಾಡುವುದು. ಕ್ರಿಮಿ ಬಾಧೆಯೂ ಕಡಿಮೆಯಾಗುವುದು.
ಬಿದಿರಿನ ಎಲೆ : ಸ್ತ್ರೀಯರ ಮುಟ್ಟಿನ ಸಮಯದ ಹೊಟ್ಟೆನೋವು ಇದ್ದರೆ ಹಾಗೂ ಕಡಿಮೆ ಸ್ರಾವ ಇರುವಾಗ ಬಿದಿರಿನ ಎಲೆಯ ಕಷಾಯ ಮಾಡಿ ೧೪ರಿಂದ ೨೧ ದಿನ ಕುಡಿಯಬೇಕು. ಹೆರಿಗೆಯಾಗಿ ಒಂದು ವಾರ ಇದರ ಕಷಾಯ ಕುಡಿದರೆ ಗರ್ಭಾಶಯದ ಆರೋಗ್ಯ ಉತ್ತಮವಾಗುವುದು.ಬಿದಿರಿನ ಬೇರು: ಚರ್ಮದ ಕಲೆ, ತುರಿಕೆಗಳಿಗೆ ಬೇರನ್ನು ಅರೆದು ಹಚ್ಚಬೇಕು. ಬೇರನ್ನು ಕಷಾಯ
ಬಿದಿರಿನ ಬೇರು: ಚರ್ಮದ ಕಲೆ, ತುರಿಕೆಗಳಿಗೆ ಬೇರನ್ನು ಅರೆದು ಹಚ್ಚಬೇಕು. ಬೇರನ್ನು ಕಷಾಯ ಮಾಡಿ ಕುಡಿಯುವುದರಿಂದ ಚರ್ಮ ತುರಿಕೆ ಕಡಿಮೆಯಾಗುವುದು, ಮೂತ್ರ ಉರಿ ಕಡಿಮೆಮಾಡುವುದು. ನಾಯಿ ಕಚ್ಚಿದ ಗಾಯಗಳಿಗೆ ಹಚ್ಚುವುದರಿಂದ ಬೇಗ ಗುಣವಾಗುವುದು.
ಬಿದಿರಿನ ಬೀಜ : ಬಿದಿರಕ್ಕಿ ಎನ್ನುತ್ತಾರೆ. ಇದನ್ನು ಮಧುಮೇಹಿಗಳು ಗಂಜಿ ಅಥವಾ ಅನ್ನ ಮಾಡಿ ಊಟ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದಿಲ್ಲ. ಇದರಲ್ಲಿ ಕೊಬ್ಬಿನ ಅಂಶ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಡಯಾಬಿಟೀಸ್ ರೋಗಿಗಳಿಗೆ ಒಳ್ಳೆಯದು.
ಬಿದಿರಿನ ತೊಗಟೆ: ಬಿದ್ದು ಪೆಟ್ಟಾದಾಗ ಮಾಂಸಖAಡ ನೋವು, ಟೆಂಡಾನ್, ಲಿಗಮೆಂಟ್ ನೋವು ಇದ್ದರೆ ಬಿದಿರಿನ ಸಿಪ್ಪೆ ಕಷಾಯ ಮಾಡಿ ೧೪ ರಿಂದ ೨೮ ದಿನ ಕುಡಿದರೆ ಕಡಿಮೆಯಾಗುವುದು. “ವಂಶತ್ವಗಾದಿ” ಎಂಬ ಕಷಾಯ ಇಂತಹ ನೋವುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಮೆಡಿಕಲ್ಸ್ಗಳಲ್ಲಿ ಲಭ್ಯವಿದೆ.
ವಂಶಲೋಚನ: ಇದಕ್ಕೆ ಬಿದಿರುಪ್ಪು ಎನ್ನುತ್ತಾರೆ. ಹಲವು ಆಯುರ್ವೇದ ಔಷಧಿ ತಯಾರಿಕೆಗಳಲ್ಲಿ ಉಪಯೋಗಿಸಲಾಗುತ್ತದೆ. ಕೆಮ್ಮು, ಕಫ, ದಮ್ಮು ಕಟ್ಟುವವರು ಇದರ ನಯವಾದ ಪುಡಿಯನ್ನು ಜೇನಿನಲ್ಲಿ ಮಿಶ್ರ ಮಾಡಿ ದಿನಕ್ಕೆ ೨-೩ ಸಲ ಸೇವಿಸಬೇಕು. ಹಳೆ ಜ್ವರ, ನಿತ್ರಾಣವನ್ನು ಕಡಿಮೆಮಾಡುವುದು.ಹೃದ್ರೋಗದಿಂದ ನಿತ್ರಾಣ ಅನುಭವಿಸುವವರು ವಂಶಲೋಚನ ಪುಡಿಯನ್ನು ಹಾಲಿನಲ್ಲಿ ಇತರ ಔಷಧಿಗಳೊಂದಿಗೆ ಸೇವಿಸಬಹುದು. ಕೆಮ್ಮಿನ ಪುಡಿಗಳಾದ ತಾಳೀಸಾದಿ ಚೂರ್ಣ, ಸಿತೋಪಲಾದಿ ಚೂರ್ಣ ಲೇಹಗಳಾದ ಚ್ಯವನ ಪ್ರಾಶ, ಅಗಸ್ತö್ಯ ರಸಾಯನಗಳಲ್ಲಿಯೂ ವಂಶಲೋಚನವನ್ನು ಬಳಸುತ್ತಾರೆ.
ಕಣಿಲೆ(Bamboo shoot) : ಮಳೆಗಾಲದಲ್ಲಿ ಲಭ್ಯವಿರುವ ಉತ್ತಮ ಆಹಾರ. ಆದರೆ ಕಾಡಿನಿಂದ ತಂದು ಕೊಯ್ದು ಬೇಯಿಸಿ ತಿಂದರೆ ಅಪಾಯವೂ ಇದೆ. ಯಾಕೆಂದರೆ ಇದರಲ್ಲಿ Cyanogenic glycosides ಇರುವುದರಿಂದ ಕ್ರಮೇಣ ಸಯನೈಡ್ ಬಿಡುಗಡೆಯಾಗಿ ವಿಷ ಲಕ್ಷಣಗಳು ಗೋಚರವಾಗುವುದು. ಆದರೆ ಅದನ್ನು ತುಂಡು ಮಾಡಿ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಿದರೆ ಏನೂ ತೊಂದರೆ ಆಗದು.

ಇದರಲ್ಲಿ ಅಧಿಕ Dietary Fiber ಇರುವುದರಿಂದ ಜೀರ್ಣಕ್ಕೆ ಒಳ್ಳೆಯದು.ಮಲಬದ್ಧತೆ ನಿವಾರಣೆ ಮಾಡುವುದು. ಉಳಿದ ತರಕಾರಿಗಳಿಗಿಂತ ಅಧಿಕ ಪ್ರೋಟೀನ್ ಇದೆ. vit B6, B12, vit C, vit E, ಪೊಟಾಸಿಯಂ, ಮೆಗ್ನೇಷಿಯಂ, ಕ್ಯಾಲ್ಸಿಯಂ ಕಬ್ಬಿಣದ ಅಂಶಗಳು ಇವೆ. ಸಾವಿರಾರು ಜಾತಿಯ ಬಿದಿರುಗಳಿವೆ. ವಂಶವೃಕ್ಷದ ಅಂದರೆ ಕುಟುಂಬದ ಅನೇಕ ಪೀಳಿಗೆಯಂತೆ ಅನೇಕ ಗುಣಗಳನ್ನು ಹೊಂದಿದ ಬಿದಿರು ಅತ್ಯಂತ ಶ್ರೇಷ್ಠ ವನಸ್ಪತಿ.
ಡಾ| ಹರಿಕೃಷ್ಣ ಪಾಣಾಜೆ