Skip links
agnishikha

ಅಗ್ನಿಶಿಖಾ

Scientific Name: Gloriosa superba

ಮೂವತ್ತು ಅಡಿಗಳಷ್ಟು ಎತ್ತರ ಬೆಳೆಯುವ ಬಳ್ಳಿ ಜಾತಿ ಗಿಡ. ಮರದ ಮೇಲೆ ಹಬ್ಬಿಕೊಂಡು ಹೂ ಬಿಟ್ಟ ಸಮಯದಲ್ಲಿ ಮರದ ಮೇಲೆ ಬೆಂಕಿ ಜ್ವಾಲೆ ಹರಡಿದಂತೆ ಕಂಡುಬರುವುದು. ಇದನ್ನು ಲಾಂಗಲಿ, ವಿಶಲ್ಯ, ಕಲಿ ಹಾರಿ, ಶಿವಶಕ್ತಿ ಬಳ್ಳಿ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಇದರ ಮೂಲ ಆಫ್ರಿಕ. ಭಾರತದ ಎಲ್ಲಾ ಭಾಗಗಳಲ್ಲೂ ಬೆಳೆಯುತ್ತದೆ. ಕಾಡು ಬರಿದಾಗಿ ನಾಡು ಆದ ಈ ಸಮಯದಲ್ಲಿ ನಮ್ಮ ಸುತ್ತ ಮುತ್ತ ಗೋಚರಿಸುತ್ತಿಲ್ಲ. ಹಲವು ವರ್ಷಗಳ ಹಿಂದೆ ನಾವು ನಡೆಯುವ ದಾರಿ ಬದಿಯ ಪೊದೆಗಳ ಮೇಲೆ ಮರಗಳ ಮೇಲೆ ಕಂಡುಬರುತ್ತಿತ್ತು.  ೧೦-೧೨ ಸೆಂ.ಮೀ ಉದ್ದ, ೩-೫ ಸೆಂ.ಮೀ ಅಗಲದ ಶಂಖಾಕಾರದ ಎಲೆಗಳು, ಎಲೆ ತುದಿ ಸುರುಳಿಯಂತೆ ಸುತ್ತಿ ಕೊಂಡಿರುತ್ತದೆ. ತೊಟ್ಟು ಇರದ ಎಲೆ ಬುಡ ಕಾಂಡವನ್ನು ಆವರಿಸಿರುತ್ತದೆ. ಹಸಿರು ಹಳದಿ ಕೆಂಪು ವರ್ಣಗಳಿಂದ ಕಂಗೊಳಿಸುವ ಸುಂದರ ಹೂಗಳು. ಏಕಾಂಗಿಯಾಗಿ ಹಾಗೂ ಗೊಂಚಲುಗಳಲ್ಲಿ ಹೂಗಳು ಮೂಡಿಬರುತ್ತದೆ. ಓರೆಕೊರೆಯಾದ ದಳ ೨-೩ ಇಂಚು ಉದ್ದ, ಅರ್ಧ ಇಂಚು ಅಗಲ ಇರುತ್ತದೆ. ಎಲ್ಲರನ್ನು ತನ್ನತ್ತ ಸೆಳೆಯುವ ಸೌಂರ‍್ಯ ಈ ಹೂವಿಗಿದೆ. ಬೇರು ನೇಗಿಲಿನ ಆಕಾರ ಇರುತ್ತದೆ. ಒಂದು ಅಡಿ ಉದ್ದವಿದ್ದು ಅರ್ಧ ಇಂಚು ವ್ಯಾಸ ಹೊಂದಿರುತ್ತದೆ. ಬೂದು ಬಣ್ಣದಲ್ಲಿ ಹೊರ ಭಾಗವಿದ್ದರೆ ಒಳಗೆ ಬಿಳಿಯಾಗಿರುತ್ತದೆ.

agnishikha

ಇದನ್ನು  ಶುದ್ಧಿ ಮಾಡದೇ ಸೇವಿಸಿದರೆ ವಿಷವಾಗಿ ಪರಿಣಮಿಸುವುದು. ಲಕ್ಷ್ಮಣ ಯುದ್ಧ ಮಾಡುವಾಗ ರಾವಣನ ಮಗ ಮೇಘನಾಥನ ಬಾಣದಿಂದ ಮೂರ್ಛೆ  ಹೋದಾಗ ಲಂಕಾದ ಪ್ರಸಿದ್ಧ ವೈದ್ಯ ಸುಶೇಣ ಒಂದಷ್ಟು ಗಿಡ ಮೂಲಿಕೆಗಳಾದ ಸಂಜೀವಿನಿ, ವಿಶಲ್ಯ (ಅಗ್ನಿಶಿಖೆ)ಗಳು ಬೇಕೆಂದು ಹೇಳಿದಾಗ ಹನುಮಂತ ಇವುಗಳನ್ನು ತಂದೊಪ್ಪಿಸುತ್ತಾನೆ. ವಿಷಯುಕ್ತ ಬಾಣ ಶರೀರವನ್ನು ನಾಟಿದ ಕಾರಣ ಅದರ ವಿಷ ಶರೀರಕ್ಕೆ ಪಸರಿಸದಂತೆ, ಒಳಗಿದ್ದ ಬಾಣ ಸುಲಭವಾಗಿ ಹೊರ ಬರಲು ಇದರ ಬೇರನ್ನು ಅರೆದು ಹಚ್ಚಿ ನಂತರ ಸಂಜೀವಿನಿಯನ್ನು ಉಪಯೋಗಿಸಿ ಲಕ್ಷ್ಮಣನನ್ನ  ಬದುಕಿಸಲಾಯಿತು ಎಂಬ ಉಲ್ಲೇಖ ರಾಮಾಯಣದಲ್ಲಿದೆ.

ಇದು ಜಿಂಬಾಹ್ವೆಯ ರಾಷ್ಟ್ರ ಹೂ. ತಮಿಳುನಾಡಿನ ರಾಜ್ಯ ಪುಷ್ಪ. ಮುರುಗ (ಸುಬ್ರಮಣ್ಯ)ನಿಗೆ ಪ್ರಿಯವಾದ ಪುಷ್ಪ. ಇದು ಭಾರತದಲ್ಲಿ ಅವನತಿಯ ಹಾದಿಯಲ್ಲಿ ಇರುವ ಸಸ್ಯ.

ಇದು ವಿಷಯುಕ್ತವಾದ ಗಿಡವಾದರೂ ಶೋಧನೆ ಮಾಡಿ ಉಪಯೋಗಿಸಿದರೆ ಅಮೃತ ಸಮಾನ . ಇದರ ಬೇರನ್ನು  ಒಂದು ಗಂಟೆ ಕಾಲ ದನದ ಹಾಲಿನಲ್ಲಿ ಬೇಯಿಸಿ ತೊಳೆದು ಒಣಗಿಸಿ ಔಷಧಿಯಾಗಿ ಉಪಯೋಗಿಸಲಾಗುವುದು.

ವಿಷಕಡಿತ: ಚೇಳು, ಜೇನು ಹುಳ, ಚೇರಟೆ ಕಚ್ಚಿದರೆ ತುರಿಕೆ,ಅಲರ್ಜಿ, ಬಾವು, ನೋವುಗಳು ಉಂಟಾಗುತ್ತದೆ. ಇದರ ಬೇರನ್ನು ನೀರಲ್ಲಿ ಅರೆದು ಹಚ್ಚಿದರೆ ವಿಷ ಲಕ್ಷಣ ಕಡಿಮೆಯಾಗುವುದು. ಗಂಟು ನೋವಿನಲ್ಲಿಯೂ ಶೋಧನೆ ಮಾಡಿ ಅರೆದು ಹಚ್ಚುವುದರಿಂದ ನೋವು ಕಡಿಮೆಯಾಗುವುದು.

ಹೇನು: ತಲೆಯಲ್ಲಿ ಹೇನುಗಳಿದ್ದರೆ ಇದರ ಎಲೆಯ ರಸವನ್ನು ತಲೆಗೆ ಹಾಕಿ ೨-೩ ಗಂಟೆ ನಂತರ ಸ್ನಾನ ಮಾಡಿದರೆ ಹೇನು ನಾಶವಾಗುವುದು.

ನಿತ್ರಾಣ: ಶುದ್ಧ ಮಾಡಿದ ಬೇರನ್ನು ೨೫೦ ಮಿಲಿ ಗ್ರಾಂ ಅಥವಾ ೫೦೦ ಮಿಲಿ ಗ್ರಾಂ (೧/೪-೧/೨ ಗ್ರಾಂ) ಹಾಲಿನೊಂದಿಗೆ ಪ್ರತಿದಿನ ೩೦ ದಿನ ಸೇವಿಸುವುದರಿಂದ ನಿಶ್ಶಕ್ತಿ ಕಡಿಮೆಯಾಗುವುದು.

ಹುಳದ ಭಾದೆ: ೫೦೦ ಮಿಲಿ.ಗ್ರಾಂ ನಿಂದ ೭೫೦ ಮಿಲಿ.ಗ್ರಾಂ ನಷ್ಟು ರಾತ್ರಿ ಮೂರು ದಿನ ಸೇವಿಸಿವುದರಿಂದ ಮಿಜಿಲೆ ಹುಳ(pinworm)ಬಾಧೆ ಕಡಿಮೆಯಾಗುವುದು.

ಮುಳ್ಳು ಹೊರಹಾಕುವುದು: ಶರೀರದ ಭಾಗಗಳಿಗೆ ಚುಚ್ಚಿಕೊಂಡ ಮುಳ್ಳುಗಳು, ಕಲ್ಲು ಹುಡಿ, ಹೊರಬಾರದಿದ್ದರೆ ಇದರ ಬೇರನ್ನು ಅರೆದು ಹಚ್ಚಿದರೆ ಲಕ್ಷ್ಮಣನ ಶರೀರರಕ್ಕೆ ನಾಟಿದ ಬಾಣವನ್ನು ಹೊರಹಾಕಿದಂತೆ ಸುಲಭವಾಗಿ ಹೊರಬರುವುದು.

ಗರ್ಭಿಣಿಸ್ತ್ರೀಯರು ೪-೫ ಗ್ರಾಂ ನಷ್ಟು ಸೇವಿಸಿದರೆ ಗರ್ಭ ಸ್ರಾವ ಆಗುವುದು. ಆದರೆ ವೈದ್ಯರು ಇದನ್ನು ಶುದ್ಧಿಗೊಳಿಸಿ ಕಡಿಮೆ ಋತು ಸ್ರಾವ ಇರುವವರಿಗೆ, ಮುಟ್ಟಾಗುವಾಗ ಉಂಟಾಗುವ ಹೊಟ್ಟೆ ನೋವುಗಳಲ್ಲಿ ಸೂಕ್ತ ಪ್ರಮಾಣದಲ್ಲಿ  ನೀಡಿ ಉತ್ತಮ ಪರಿಣಾಮ ಕಂಡುಕೊಳ್ಳುತ್ತಾರೆ. ಇದೊಂದು ಉತ್ತಮ ನೋವು ನಿವಾರಕ ಔಷಧಿಯೂ ಹೌದು. ಗಿಡ ಮೂಲಿಕೆಗಳ ಜ್ಞಾನದಿಂದ ಅದರ ಮಹತ್ವದ ಅರಿವಾಗುತ್ತದೆ. ಆದರೆ ಅದರ ಉಪಯೋಗದ ಬಗ್ಗೆ ತಜ್ಞ ವೈದ್ಯರಿಂದ ಮಾಹಿತಿ ಪಡೆದು ಸೇವಿಸುವುದು ಸೂಕ್ತ.

ಕೃಷಿ: ಔಷಧಿ ಗಿಡದಂತೆ ಗಾರ್ಡನ್‌ನಲ್ಲಿ ಕಂಗೊಳಿಸುವ ಅಲಂಕಾರಿಕ ಗಿಡವೂ ಹೌದು. ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಇದರ ಸೌಂರ‍್ಯ ಸವಿಯಬಹುದು. ಚಳಿಗಾಲದ ನಂತರ ಗಿಡ ಒಣಗಿ ಹೋಗುತ್ತದೆ. ಬೀಜಗಳಿಂದ ಗಿಡಗಳನ್ನು ಮಾಡಬಹುದು. ಬೆಳೆದು ಕೃಷಿ ಮಾಡಿದರೆ ಬೇರುಗಳಿಗೆ ಆಯುರ್ವೇದ ಫಾರ್ಮಸಿಗಳಿಂದ ಬೇಡಿಕೆ ಇದೆ.

agnishikha

Leave a comment

This website uses cookies to improve your web experience.