Skip links
benga

ಬೇಂಗ

Scientific Name: Pterocarpus marsupium

ಎಂಬತ್ತರಿದ ನೂರು ಅಡಿ ಎತ್ತರ ಬೃಹದಾಕಾರದಲ್ಲಿ ಬೆಳೆಯುವ ಸುಂದರ ಮರ. ಸಂಸ್ಕೃತದಲ್ಲಿ ಬೀಜಕ, ಅಸನ ಎಂದು ಕರೆದರೆ ತುಳುವಿನಲ್ಲಿ  ಬೇಂಗದ ಮರ ಎನ್ನುತ್ತಾರೆ. ಕಾಂಡ ಹೊರಗಿನಿಂದ ಕಪ್ಪಾಗಿ ಕಂಡರೂ ತೊಗಟೆಯನ್ನು ಕೆತ್ತಿದರೆ ಕೆಂಪು ರಸ ಮಯಣದಂತೆ ಸೂಸುವುದು. ಎಲೆಗಳು ಸಮಾನಾಂತರವಾಗಿ ಬೆಳೆಯದೆ ಮೇಲೆ ಕೆಳಗೆ ಹುಟ್ಟಿಕೊಳ್ಳುತ್ತದೆ. ೫-೬ ಇಂಚು ಉದ್ದದ ಎಲೆಯ ಬದಿ ಓರೆಕೋರೆಯಾಗಿ ಕಂಡುಬರುವುದು. ಹಳದಿ ವರ್ಣದ ಗುಚ್ಚಾಕಾರದಲ್ಲಿ ಮೂಡಿಬರುವ ಸುಗಂಧಿತ ಪುಷ್ಪಗಳು. ಒಂದರಿಂದ ಒಂದೂವರೆ ಇಂಚು ವ್ಯಾಸದ ಚಕ್ರಕಾರದ ಫಲಗಳು. ಮದ್ಯದ ಉಬ್ಬಿರುವ ಭಾಗದಲ್ಲಿ ೧-೨ ಗಟ್ಟಿ ಬೀಜಗಳು ಹುದುಗಿ ಕೊಂಡು ಇರುತ್ತದೆ.

  ತೊಗಟೆಯನ್ನು ನೀರಲ್ಲಿ ಹಾಕಿದರೆ ರಕ್ತ ವರ್ಣ ಕಂಡುಬಂದರೆ ಬೇಂಗದ ತಿರುಳನ್ನು ನೋಡಲು ನಸು ಹಳದಿ ಅಥವಾ ನಸು ಕೆಂಪಾಗಿ ಇದ್ದು ನೀರಲ್ಲಿ ಇಟ್ಟರೆ ನೀರು ಹಳದಿ ವರ್ಣವನ್ನು ಪಡೆದು ನಂತರ ನೀಲಿಯಾಗುವುದು.

benga

ಇದರ ಎಲೆ, ತೊಗಟೆ, ಮಯಣ, ಕಾಂಡಗಳನ್ನು ಔಷಧಿಯಾಗಿ ಮಧುಮೇಹ, ಚರ್ಮರೋಗ, ಬೊಜ್ಜು ಕರಗಿಸಲು ಅಲ್ಲದೆ ಇನ್ನೂ ಹಲವಾರು ತೊಂದರೆಗಳನ್ನು ರೋಗಿ ಹಾಗೂ ವ್ಯಾಧಿಗನುಸಾರ ಪ್ರಯೋಗಿಸಿ ಪ್ರಯೋಜನ ಪಡೆಯಲಾಗುತ್ತದೆ.

ನೋವು: ಎಲುಬು, ಮಾಂಸಖಡಗಳಲ್ಲಿ ನೋವಿರುವಾಗ ಇದರ ಎಲೆಯನ್ನು ನಯವಾಗಿ ಅರೆದು ಸ್ವಲ್ಪ ಬಿಸಿ ಮಾಡಿ ನೋವು ಹಾಗೂ ಬಾವು ಇರುವಲ್ಲಿಗೆ ಲೇಪಿಸುವುದರಿಂದ ನೋವು ಕಡಿಮೆಯಾಗುವುದು.

ಚರ್ಮರೋಗ: ಮೈ ಮೇಲೆ ತುರಿಕೆ ಕಜ್ಜಿ, ರಿಂಗವರ್ಮನಂಥಹ ತ ಫಂಗಲ್ ಕಾಯಿಲೆ ಚರ್ಮದಲ್ಲಿ ಹರಡಿರುವಾಗ ಇದರ ಎಲೆಯನ್ನು ಅರೆದು ೭-೧೪ ದಿನ ಲೇಪಿಸುವುದರಿಂದ ಕಡಿಮೆಯಾಗುವುದು. ಬೆಸರ್ಪು, ತುರಿಕೆಗಳಿರುವಾಗ ೧೦ ಗ್ರಾಂ ಕಾಂಡದ ದೊರಗಾದ ಪುಡಿಯನ್ನು 400ml ನೀರು ಹಾಕಿ ಕುದಿಸಿ ಕಷಾಯ ಮಾಡಿ 100 ml ಸಂಗ್ರಹಿಸಿ ೨ ಸಲ ಕುಡಿಯುವುದರಿಂದಲೂ ರಿಂಗ್‌ವರ್ಮ್ ತುರಿಕೆ ಕಡಿಮೆಯಾಗುವುದು.

ಬಿಳಿತೊನ್ನು ಚರ್ಮದಲ್ಲಿ ಇರುವವರು ಇದರ ಕಾಂಡದ ಕಷಾಯವನ್ನು ಹಾಲಿನಲ್ಲಿ ತಯಾರಿಸಿ ೫-೬ ತಿಂಗಳು ಕುಡಿಯಬೇಕು. ೨೮ ದಿನ ನಿರಂತರ ಕುಡಿದು ೭ ದಿನ ಬಿಟ್ಟು ಪುನಃ ೨೮ ದಿನ ಮುಂದುವರಿಸಬೇಕು.

ರಕ್ತ ಹೀನತೆ: ಇದರ ನಯವಾದ ಪುಡಿಯನ್ನು (೩-೪ ಗ್ರಾಂ) ನೀರಿನಲ್ಲಿ ಅಥವಾ ತ್ರಿಫಲಾ(ಅಣಿಲೆ, ನೆಲ್ಲಿ, ಶಾಂತಿ) ಕಷಾಯದೊಂದಿಗೆ ೩೦ ದಿನ ಸೇವಿಸುವುದರಿಂದ ರಕ್ತ ವೃದ್ಧಿಯಾಗುವುದು.

ಮಧುಮೇಹ : ಬೇಂಗ ಡಯಾಬಿಟೀಸ್‌ನಲ್ಲಿ ಅಧಿಕ ಉಪಯೋಗಿಸಲಾಗುತ್ತದೆ. ಕಾಂಡದ ತಿರುಳಿನ ಕಷಾಯವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹ ( ಟೈಪ್-||) ಸ್ವಲ್ಪ ಮಟ್ಟಿಗೆ ನಿಯಂತ್ರಿಸಲಾಗುವುದು.

ರಿಂಗವರ್ಮನಂಥಹ  ಈಗಿನ ಆಹಾರಕ್ಕೆ ಅನುಗುಣವಾಗಿ ಹೆಚ್ಚಿನವರು ಸ್ಥೂಲ ಶರೀರಿಗಳಾಗಿದ್ದಾರೆ. ಸ್ಥೌಲ್ಯತೆ ಹಲವು ರೋಗಗಳಿಗೆ ಬಾಗಿಲು ತೆರೆದಿಡುತ್ತದೆ. ಆರೋಗ್ಯಕರ ಜೀವನಕ್ಕೆ ಶರೀರದ ಬೊಜ್ಜು ಒಳ್ಳೆಯದಲ್ಲ. ಕಾಂಡದ ಪುಡಿಯ ಕಷಾಯ ಮಾಡಿ ೧ ಚಮಚ ಜೇನು ಸೇರಿಸಿ ಪ್ರತಿನಿತ್ಯ ಕುಡಿಯುವುದರಿಂದ ಬೊಜ್ಜು ಕರಗುವುದು. ಇದರೊಂದಿಗೆ ವ್ಯಾಯಾಮ ಹಾಗೂ ಆಹಾರದಲ್ಲಿ ನಿಯತ್ತು ಪಾಲಿಸಿದರೆ ಉತ್ತಮ ಪರಿಣಾಮ ಕಂಡು ಬರುವುದು.

ಕೈ ಕಾಲು ಮರಕಟ್ಟುವಿಕೆ: ಕೈ ಕಾಲು ಮಿರಿ ಮಿರಿಯಾಗುವುದು ಅಥವಾ ಮರಗಟ್ಟಿದಂತೆ ಅನುಭವ ಆಗುವವರು ಇದರ ತೊಗಟೆಯ ಕಷಾಯ ಮಾಡಿ ಒಂದೆರಡು ವಾರ ಕುಡಿಯುವುದರಿಂದ ಕಡಿಮೆಯಾಗುವುದು.

ಅಜ್‌ಮೀರಿನ ಮಾಲಿಕ್ಯುಲಾರ್ ಡೆವಲಪ್‌ಮೆಂಟಲ್ ಬಯಾಲಜಿ ಲೇಬೋರೇಟರಿಯವರು ಇದರ ಮೇಲೆ ಸಂಶೋಧನೆ ಮಾಡಿ ಇದರಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಔಷಧಿಯ ಗುಣಗಳಿರುವುದರಿಂದ ಕರುಳಿನ ಹುಣ್ಣು, ಬೇದಿ, ಹಲವು ಚರ್ಮ ರೋಗಗಳಲ್ಲಿ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. ಇದರಲ್ಲಿ ಇರುವ ಕೀನೋ ಟೇನಿಕ್‌ಆಸಿಡ್, ಕೀನೋರೆಡ್, ಗ್ಯಾಲಿಕ್ ಆಸಿಡ್‌ಗಳು ಹಲವಾರು ರೋಗಗಳನ್ನು ಗುಣ ಮಾಡಲು ಸಹಾಯ ಮಾಡುತ್ತದೆ.

ಬೇಂಗದ ತೊಗಟೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ದಿನಕ್ಕೆ ೧-೨ ಸಲ “ಬೇಂಗದ ಟೀ” ಮಾಡಿ ಕುಡಿದರೆ ಅಜೀರ್ಣ ಸಂಬಧಿ ತೊಂದರೆಗಳು, ದಡಿಕೆ ತುರಿಕೆಗಳು ಕಡಿಮೆಯಾಗುವುದು.

ಕೃಷಿ: ಇದೊಂದು ಕಾಡು ಮರ. ಎಕರಗಟ್ಟಲೆ ಜಾಗ ಇರುವವರು ಇದರ ಗಿಡ ಮಾಡಿ ಬೆಳೆಸಬಹುದು. ಯಾವುದೇ ಆರೈಕೆ ಇಲ್ಲದೆ ಬೆಳೆಯುತ್ತದೆ. ಬೇಂಗದ ತಿರುಳಿಗೆ ಅತ್ಯಂತ ಬೇಡಿಕೆ ಇದೆ. ಮಧುಮೇಹಕ್ಕೆ ಆಯುರ್ವೇದ ಔಷಧಿಗಳ ಬಗ್ಗೆ ಜನರು ಆಸಕ್ತಿ ತೋರಿಸುತ್ತಿದ್ದು ಮಧುಮೇಹ ನಿಯಂತ್ರಕ ಔಷಧಿಗಳ ಬಗ್ಗೆ ಬೇಡಿಕೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಮಧುಮೇಹಕ್ಕೆ ಉಪಯೋಗಿಸುವ ಅಸನಾದಿ ಕಷಾಯ, ತಲೆನೋವಿಗೆ ಉಪಯೋಗಿಸುವ ಅಸನಬಿಲ್ವಾದಿ ತೈಲ, ಚರ್ಮವ್ಯಾಧಿಗಳಿಗೆ ಉಪಯೋಗಿಸುವ ಮಹಾಮಂಜಿಷ್ಟಾದಿ ಕಷಾಯಗಳಲ್ಲಿ ಬೇಂಗದ ತಿರುಳು ಇದೆ.

benga

Leave a comment

This website uses cookies to improve your web experience.