Scientific Name: Cinnamomum zeylanica
ಪಲಾವು, ಬಿರಿಯಾನಿಯಲ್ಲಿ ಸಿಗುವ ಗರಂ ಮಸಾಲೆಯಲ್ಲಿ ಕಂಡುಬರುವ ಚೆಕ್ಕೆಯೇ ದಾಲ್ಚೀನಿ. ಹಲವು ಮಸಾಲೆ ಪದಾರ್ಥಗಳಲ್ಲಿ ಅಗತ್ಯವಾಗಿ ಇರಲೇ ಬೇಕಾದ ದಾಲ್ಚೀನಿ ಔಷಧಿಯಾಗಿಯೂ ಬಹಳ ಪ್ರಮುಖವಾಗಿದೆ. ದಾಲ್ಚೀನಿಯಲ್ಲಿಯೂ ಮೂರು ನಾಲ್ಕು ಪ್ರಬೇಧಗಳಿವೆ. ಅದರಲ್ಲಿ Cinnamomum zeylanica ಮತ್ತು Cinnamomum zeylanica ಎರಡು ವಿಧ. ಅದರಲ್ಲಿ Cinnamomum zeylanica ಹೆಚ್ಚು ಔಷಧೀಯ ಗುಣ ಉಳ್ಳದ್ದು. ಇದು ಸಿಂಹಳದಲ್ಲಿ ಅಧಿಕ ಬೆಳೆಯುತ್ತದೆ. ಇದಕ್ಕೆ ಮಾರ್ಕೆಟ್ ಭಾಷೆಯಲ್ಲಿ ಚುಟ್ಟಾ ಎನ್ನುತ್ತಾರೆ. Cinnamomum zeylanica ಚೀನ, ಇಂಡಿಯಾದಲ್ಲಿ ಅಧಿಕ ಬೆಳೆಯುತ್ತದೆ. ಇದರ ಅಧಿಕ ಸೇವನೆ ಲಿವರ್‌ಗೆ ತೊಂದರೆಯನ್ನು ಉಂಟುಮಾಡುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಸಿಗರೇಟ್ ಎನ್ನುತ್ತಾರೆ. ಆದ ಕಾರಣ ನಿತ್ಯ ಉಪಯೋಗಿಸುವವರು ಈ ಎರಡು ಪ್ರಬೇಧಗಳ ಬಗ್ಗೆ ತಿಳಿದುಕೊಂಡು ಉಪಯೋಗಿಸುವುದು ಸೂಕ್ತ.
ಇದು 15-25 ಅಡಿ ಎತ್ತರ ಬೆಳೆಯುವ ಮರ. ಎಳತು ಮರದ ತೊಗಟೆ ಕಿತ್ತರೆ ಬಿಳಿ ಬಣ್ಣದಲ್ಲಿ ಕಂಡುಬರುತ್ತದೆ. ಬೆಳೆದ ಮರದ ತೊಗಟೆ ಹೊರಗಿನಿಂದ ಕಂದು ಬಣ್ಣದಲ್ಲಿ ಇದ್ದರೆ ಒಳಭಾಗ ಕೆಂಪಾಗಿ ಕಂಡುಬರುತ್ತದೆ. ದಾಲ್ಚೀನಿ ಎಂಬುದಾಗಿ ನಮ್ಮ ಗುಡ್ಡೆಯಲ್ಲಿ ಬೆಳೆಯುವ ಇಜ್ಜಿನ್ ಮರದ ತೊಗಟೆಯನ್ನು ವಿಕ್ರಯಿಸುತ್ತಾರೆ. ಇದೇ ತೊಂದರೆಗೆ ಕಾರಣವಾಗಿದೆ. ಇದು ಲಿವರ್‌ಗೆ ಒಳ್ಳೆಯದಲ್ಲ. ನಿತ್ಯ ಪಚ್ಚೆ ಬಣ್ಣದಲ್ಲಿ ಕಂಗೊಳಿಸುವ ಮರ 5-6 ಇಂಚು ಉದ್ದದ ಅಭಿಮುಖ ಎಲೆಗಳನ್ನು ಹೊಂದಿದೆ. ಇದನ್ನು ಕಿವುಚಿದರೆ ಉತ್ತಮ ಪರಿಮಳ ಸೂಸುತ್ತದೆ. ಇದನ್ನು ಬಿರಿಯಾನಿ ತಯಾರಿಕೆಯಲ್ಲಿ ಗರಂ ಮಸಾಲೆ ತಯಾರಿಸಲು ಉಪಯೋಗಿಸುವುದಲ್ಲದೆ ಔಷಧಿ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ. ಹೂ ಉದ್ದದ ದಿಂಡನ್ನು ಹೊಂದಿದ್ದು ಗುಚ್ಚಾಕಾರದಲ್ಲಿ ಕಂಡು ಬರುತ್ತದೆ. ೧-೧ ೧/೨ ಇಂಚು ಉದ್ದದ ಅಂಡಾಕಾರದ ಫಲ ಹಾಗೂ ಅದರೊಳಗೆ ಸಣ್ಣ ಬೀಜ ಇರುತ್ತದೆ. ಜನವರಿಯಲ್ಲಿ ಹೂ ಕಂಡುಬಂದರೆ ಮೇಯಲ್ಲಿ ಹಣ್ಣುಗಳು ಗೋಚರಿಸುತ್ತದೆ.

ಇದರ ತೊಗಟೆ ಹಾಗೂ ಎಲೆಯನ್ನು ಜೀರ್ಣಕ್ರಿಯೆ ವೃದ್ಧಿಗಾಗಿ, ಮಧುಮೇಹದಲ್ಲಿ, ಹಲ್ಲಿನ ತೊಂದರೆಗಳಲ್ಲಿ ಸ್ತ್ರೀ ಸಂಬಂಧಿ ವ್ಯಾಧಿಗಳಲ್ಲಿ ಬಳಸುತ್ತಾರೆ.
ಅಜೀರ್ಣ: ಹಸಿವು ಕಡಿಮೆ ಇದ್ದು ಆಗಾಗ ಬರುವ ಹೊಟ್ಟೆ ನೋವು ಕ್ರಿಮಿಬಾಧೆಗಳಲ್ಲಿ ದಾಲ್ಚೀನಿ ಚೂರ್ಣವನ್ನು ಒಂದು ಗ್ರಾಂ ನಷ್ಟು ಬಿಸಿನೀರಿನೊಂದಿಗೆ ಕಲಸಿ ಕುಡಿಯಬೇಕು.
ಹಲ್ಲುನೋವು: ದಾಲ್ಚೀನಿ ಪುಡಿಯಿಂದ ಹಲ್ಲು ಉಜ್ಜಬಹುದು ಇಲ್ಲವೇ ಇದರ ಎಣ್ಣೆಯನ್ನು ಹಲ್ಲು ನೋವಿರುವಲ್ಲಿಗೆ ಹಚ್ಚುವುದರಿಂದ ಸ್ವಲ್ಪ ಸಮಯ ನೋವನ್ನು ತಡೆಗಟ್ಟಬಹುದು.
ಕೆಮ್ಮು: ಆಗಾಗ ಬರುವ ಕೆಮ್ಮಿಗೆ ದಾಲ್ಚೀನಿ ಪುಡಿಯನ್ನು ಜೇನಿನೊಂದಿಗೆ ಸೇವಿಸಿದರೆ ಕಡಿಮೆಯಾಗುವುದು. ದಾಲ್ಚೀನಿಯನ್ನು ಸೇರಿಸಿ ಹೆಚ್ಚು ಪ್ರಚಲಿತವಿರುವ ತಾಳಿಸಾದಿ ಚೂರ್ಣ, ಸಿತೋಪಲಾದಿ ಚೂರ್ಣಗಳನ್ನು ತಯಾರಿಸುತ್ತಾರೆ. ಇದು ಶೀತ, ಕೆಮ್ಮಿಗೆ ಉತ್ತಮ ಔಷಧಿ. ಅಲ್ಲದೆ ಚ್ಯವನ ಪ್ರಾಶದಂತಹ ಲೇಹ ತಯಾರಿಸುವಾಗಲೂ ದಾಲ್ಚೀನಿ ಬೇಕು. ಕೆಮ್ಮು, ದಮ್ಮು, ಶೀತದ ಆಯರ್ವೇದ ಔಷಧಿಗಳಲ್ಲಿ ದಾಲ್ಚೀನಿ ಬೇಕೇ ಬೇಕು.
ಮಧುಮೇಹ: ನಮ್ಮ ಅಡಿಗೆಗೆ ಉಪಯೋಗಿಸುವ ಎಲ್ಲಾ ಪದಾರ್ಥಗಳೂ ಔಷಧಿಗಳಾಗಿವೆ. ಅಡಿಗೆಗೆ ಉಪಯೋಗಿಸುವ ದಾಲ್ಚೀನಿ ಡಯಾಬಿಟೀಸ್‌ಗೂ ಆಗುತ್ತದೆ. ಇದು ಇನ್ಸುಲಿನ್ ರೆಸಿಸ್ಟೆನ್ಸ್ನ್ನು ಕಡಿಮೆಮಾಡುತ್ತದೆ. ಆದ ಕಾರಣ ಪ್ರತಿನಿತ್ಯ ೧/೨ಗ್ರಾಂ ನಿಂದ ೧ ೧/೨ ಗ್ರಾಂ ನಷ್ಟು ದಾಲ್ಚೀನಿ ಮಧುಮೇಹಿಗಳು ಉಪಯೋಗಿಸುವುದರಿಂದ ಮಧುಮೇಹವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.
ಬೊಜ್ಜು: ಸ್ಥೂಲ ಶರೀರಗಳು ಸಪುರ ಆಗಬೇಕಾದರೆ ಒಂದು ಗ್ಲಾಸ್ ನೀರಿಗೆ ೧/೨ ಚಮಚ ದಾಲ್ಚೀನಿ ಪುಡಿ ಅರ್ಧ ಲಿಂಬೆ ರಸ ಒಂದು ಚಮಚ ಜೇನು ಮಿಶ್ರ ಮಾಡಿ ೪-೬ ತಿಂಗಳು ಕುಡಿದರೆ ಬೊಜ್ಜು ಕರಗಿಸುವುದು.
ಮುಖಸೌಂರ‍್ಯ: ಮುಖದಲ್ಲಿ ಕಂಡುಬರುವ ಸಣ್ಣ ಸಣ್ಣ ಕಪ್ಪು ಕಲೆಗಳಿಗೆ ದಾಲ್ಚೀನಿಯನ್ನು ನೀರಲ್ಲಿ ಅರೆದು ಹಚ್ಚುವುದರಿಂದ ಕಡಿಮೆಯಾಗುತ್ತದೆ.
ಸ್ತ್ರೀಯರ ಖುತು ಸಂಬಂಧಿ ತೊಂದರೆಗಳಲ್ಲಿ ಪುರುಷರ ಲೈಂಗಿಕ ನಿಶ್ಯಕ್ತಿಯಲ್ಲಿ, ಮೂತ್ರದ ತೊಂದರೆಗಳಲ್ಲಿ ಇದರ ಉಪಯೋಗ ವಿಶೇಷವಾಗಿ ಮಾಡಲಾಗುತ್ತದೆ.
ಇದೊಂದು ವಾಣಿಜ್ಯ ಬೆಳೆ. ಉತ್ತಮ ಜಾತಿಯ ದಾಲ್ಚೀನಿ ಗಿಡಗಳನ್ನು ನೆಟ್ಟು ಬೆಳೆಸಿ ಆರ್ಥಿಕವಾಗಿಯೂ ಬೆಳೆಯಬಹುದು.
