Skip links
gaanja

ಗಾಂಜಾ

Scientific Name: Cannabis sativa

ಗಾಂಜಾ ಯಾರ ಜೇಬಿನಲ್ಲಿ ಸಿಕ್ಕಿದರೂ ಅವರನ್ನು ಹಿಡಿದು ಕಂಬಿಯೊಳಗೆ ಸೇರಿಸುತ್ತಾರೆ. ಗಾಂಜಾ ಅಂದರೆ ಕೇವಲ ಅಮಲು ಪದಾರ್ಥ ಎಂಬುದಾಗಿ ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಅದೊಂದು ಔಷಧಿ ಗುಣವುಳ್ಳ ಗಿಡ. ಗಾಂಜಾದಿಂದ ಮಜಾ ಮಾಡಬಹುದು ಕೊನೆಗೆ ವಿನಾಶವನ್ನು ಹೊಂದಬಹುದು. ಅದೇ ಗಾಂಜಾದಿಂದ ಮದ್ದು ಮಾಡಬಹುದು. ದೀರ್ಘಾಯುಷ್ಯ ಪಡೆಯಬಹುದು. ಭಸ್ಮಾಸುರ ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಸಾಯಬೇಕೆಂಬ ವರ ಪಡೆದ. ಅದನ್ನು ಅವನ ಜೀವ ರಕ್ಷಣೆಗೆ ಉಪಯೋಗಿಸುತ್ತಿದ್ದರೆ ಅವನು ತುಂಬಾ ವರ್ಷ ವಿಶೇಷ ವ್ಯಕ್ತಿಯಾಗಿ ಬಾಳಬಹುದಿತ್ತು. ಆದರೆ ಅವನು ತನಗೆ ಆ ಶಕ್ತಿ ಕೊಟ್ಟವನ ತಲೆಗೆ ಕೈ ಇಟ್ಟು ಪರೀಕ್ಷಿಸ ಬಯಸಿದ. ಕೊನೆಗೆ ಅವನು ಪಡೆದ ವರದಿಂದಲೇ ಸತ್ತು ಹೋದ. ಕಥೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ಗಾಂಜಾದಿಂದ  ಔಷಧಿ ಮೂಲಕ ಪ್ರಯೋಜನ ಪಡೆಯುವ ಬದಲು ಅದರ ಅಮಲು ಪದಾರ್ಥವನ್ನು ನೆಚ್ಚಿಕೊಂಡು ನಾಶವಾಗುತ್ತಾರೆ. ಗಾಂಜಾ ಅಫೀಮುಗಳು ಔಷಧಿಯಾಗಿ ಬಳಸಲಾಗುತ್ತದೆ. ಆದರೆ ಅದನ್ನು ಶೋಧಿಸಿ ಬಳಸಬೇಕು. ಹಾಗೂ ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಆಗ ಅದರಿಂದ ಔಷಧಿ ಗುಣಗಳು ಲಭಿಸುತ್ತದೆ.

ಇದು ಸಣ್ಣ ಸಣ್ಣ ಆಲುಂಬುಡದ ಗಿಡಗಳಂತೆ ಬೆಳೆಯುತ್ತದೆ. ೩-೬ ಅಡಿ ಎತ್ತರ ಇರುತ್ತದೆ. ಎಲೆಗಳ ಆಕಾರವೂ ಆಲುಂಬುಡದಂತೆ ಸಣ್ಣದಾಗಿರುತ್ತದೆ. ೫-೯ ಸಪುರ ಎಲೆಗಳು ಒಂದೇ ಕಡೆಯಿಂದ ಬೆಳೆದು ಗೊಂಚಲಿನಲ್ಲಿ ಕಂಡುಬರುತ್ತದೆ. ಸಣ್ಣ ಸಣ್ಣ ಹಸಿರು ಹೂಗಳ ತುದಿ ಸ್ವಲ್ಪ ಕೆಂಪಾಗಿರುತ್ತದೆ. ಗುಚ್ಚಗಳಾಗಿ ಕೊಂಬೆ ತುದಿಯಲ್ಲಿ ಕಂಡುಬರುತ್ತದೆ. ಗೋಧಿ ಬಣ್ಣದ ಏಲಕ್ಕಿ ಗಾತ್ರದ ಬೀಜಗಳು ಕಂಡುಬರುತ್ತದೆ.

ಎಲೆ, ಹೂ, ಬೀಜಗಳಿಂದ ಕೂಡಿದ ಸಣ್ಣ ಸಣ್ಣ ಶಾಖೆಗಳಿಗೆ “ಭಂಗಿ” ಎನ್ನುತ್ತಾರೆ. ಇದರ ಅಂಟು ಸಹಿತ ಹೂವಿನ ಗೊಂಚಲುಗಳಿಗೆ “ಗಾಂಜಾ” ಎನ್ನುತ್ತಾರೆ. ಎಲೆ ಹಾಗೂ ಅದರ ಶಾಖೆಗಳ ಮೇಲೆ ಕಂಡುಬರುವ ಅಂಟು ದ್ರವಕ್ಕೆ “ಚರಸ್” ಎನ್ನುತ್ತಾರೆ. ಭಾರತದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತದೆ. ಇರಾನ್, ಇರಾಕ್, ಏಷ್ಯಾದ ಕೆಲವು ಕಡೆ ಇದನ್ನು ಬೆಳೆಸುತ್ತಾರೆ.

ಆಂಗ್ಲ ಭಾಷೆಯಲ್ಲಿ Cannabis  ಎಂದು ಕರೆಯಲ್ಪಡುವ ಈ ಗಿಡದಲ್ಲಿ Cannabinol, Tetrahydro cannabinol, Canabolic acid ಇರುತ್ತದೆ. ಇದೊಂದು ಮದಬರಿಸುವ ದ್ರವ್ಯ. ಪ್ರಾರಂಭದ ಹಂತದಲ್ಲಿ ಮನಸ್ಸಿಗೆ ಹಿತ ಕಾರಿಯಾಗಿ ಕಂಡು ಬಂದು ನಂತರ ಮನಸ್ಸನ್ನು ಕ್ಷೋಭೆಗೊಳಿಸುವುದು.

gaanja

ಆಯುರ್ವೇದ ಗ್ರಂಥಗಳಾದ ಭಾವಪ್ರಕಾಶ, ರಸತರಂಗಿಣಿ, ರಾಜನಿಘಂಟು, ಶೋದಲ ನಿಘಂಟುಗಳಲ್ಲಿ ಅಲ್ಲದೆ ಟೀಕಾಕಾರ ಚಕ್ರದತ್ತನೂ ಉಲ್ಲೇಖಿಸಿದ್ದಾನೆ. ಮದನ ಕಾಮೇಶ್ವರೀ ಲೇಹ, ಜಾತೀ ಫಲಾದಿ ಚೂರ್ಣ, ಮಹಾಜ್ವರಾಂಕುಶ ರಸ, ಮದನಾನಂದ ಮೋದಕ ಮುಂತಾದ ತಯಾರಿಕೆಗಳಲ್ಲಿ ಗಾಂಜಾವನ್ನು ಶೋಧಿಸಿ ಸೇರಿಸಲಾಗುತ್ತದೆ. ನರಗಳ ತೊಂದರೆಗಳಿಗೆ ಆಧುನಿಕ ವಿಜ್ಞಾನವೂ ಬಹಳಷ್ಟು ಸಂಶೋಧನೆ ನಡೆಸಿ ಔಷಧಿಗಳನ್ನು ಗಾಂಜಾದಿಂದ ತಯಾರಿಸುತ್ತಿದೆ. ಆಯುರ್ವೇದ ಸಂಶೋಧನಾ ಕೇಂದ್ರಗಳಲ್ಲಿ ಇದರ ಸತ್ವವನ್ನು ನಾಲಗೆ ಅಡಿಯಲ್ಲಿ ಇರಿಸಿ, ಗುದದ್ವಾರದ ಮೂಲಕ ಪ್ರಯೋಗಿಸಿ ತಕ್ಷಣ ಪರಿಣಾಮ ಬೀರುವ ನೋವು ನಿವಾರಕಗಳನ್ನು ತಯಾರಿಸುತ್ತಾರೆ. ಇದರ ಎಲೆಗಳನ್ನು ಚರ್ಮದ ತುರಿಕೆಗಳಲ್ಲಿ ನೋವು ನಿವಾರಕವಾಗಿ ಉಪಯೋಗಿಸಲಾಗುತ್ತದೆ. ಜೀರ್ಣಕ್ರಿಯೆ ವೃದ್ಧಿ ಮಾಡುವುದು, ಹಸಿವು ಜಾಸ್ತಿ ಮಾಡುವುದು, ನಿದ್ದೆ ಬರಿಸುವುದು, ಕೆಮ್ಮು ಹಾಗೂ ಶ್ವಾಸ ವಿಕಾರಗಳಲ್ಲಿ, ಹೊಟ್ಟೆ ನೋವು, ರಕ್ತದ ಅತಿಸ್ರಾವದಲ್ಲಿ, ಲೈಂಗಿಕ ನಿಶ್ಯಕ್ತಿಯಲ್ಲಿ, ಶ್ರೀಘ್ರ  ಸ್ಖಲನದಲ್ಲಿ, ಋತು ಸ್ರಾವ ತೊಂದರೆಗಳಲ್ಲಿ ಬಳಸಲಾಗುತ್ತದೆ. ಗಾಂಜಾವನ್ನು ಕೆಟ್ಟ ಉದ್ದೇಶಕ್ಕೆ ಬಳಸಿದ ಕಾರಣ ಅದರ ನಿಜವಾದ ಉಪಯೋಗ ಜನರಿಗೆ ಎಟಕದಂತಾಯಿತು.

ಗಾಂಜಾವನ್ನು ಶೋಧಿಸದೆ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಶ್ವಾಸಾವರೋದ, ಮನೋಖಿನ್ನತೆ, ವರ‍್ಯಾಣು ನಾಶ, ನಪುಂಸಕತೆ ಉಂಟಾಗುತ್ತದೆ. ಗಾಂಜಾವನ್ನು ಬಟ್ಟೆಯಲ್ಲಿ ಕಟ್ಟಿ ಆವಿಯಲ್ಲಿ ಬೇಯಿಸಿ ತೊಳೆದು ನೀರು ಆರಿದ ನಂತರ ತುಪ್ಪದಲ್ಲಿ ಹದ ಬೆಂಕಿಯಲ್ಲಿ ಹುರಿದು ನಂತರ ಔಷಧಿ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಶೋಧಿಸಿದ ನಂತರ ೩೦ ರಿಂದ ೧೨೫ ಮಿಲಿ ಗ್ರಾಂ ನಷ್ಟು ಮಾತ್ರ ಔಷಧಿಯಾಗಿ ಸೇವಿಸಬಹುದು.

Drugs & Cosmetic rule 1945 ಇದನ್ನು schedule  ವರ್ಗದಲ್ಲಿ ಸೇರಿಸಿದೆ. ಅಂದರೆ ಗಾಂಜಾ ಸೇರಿಸಿದ ಔಷಧಿಗಳನ್ನು ತಜ್ಞ ವೈದ್ಯರ ಸುಪರ್ದಿಯಲ್ಲೇ ಸೇವಿಸಬೇಕೆಂದು ನಿರ್ದೇಶಿಸಿದ್ದಾರೆ. ಗಾಂಜಾದ ಬಗ್ಗೆ ಸಾವಿರಾರು ವರ್ಷಗಳ ಹಿಂದೆ ಅಮಲು ಪದಾರ್ಥವಾದರೂ ಔಷಧೀಯ ಗುಣಗಳನ್ನು ತಿಳಿಸಿದ ಆಯುರ್ವೇದ ವಿಜ್ಞಾನದ ಮಹತ್ವ ತಿಳಿಸುವ ಉದ್ದೇಶದಿಂದ ಈ ಲೇಖನ. ಯಾರೂ  ಗಾಂಜಾದಿAದ ಔಷಧಿ ತಯಾರಿಸಿ ಸ್ವಯಂ ವೈದ್ಯರಾಗಬಾರದು. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ.

Leave a comment

This website uses cookies to improve your web experience.