Scientific Name: Myristica fragrans
ಏಣಿಯಂತೆ ಅಂತರ ಅಂತರವಾಗಿ ಹರಡಿಕೊಂಡು ೪೦-೫೦ ಅಡಿವರೇಗೆ ಬೆಳೆಯುತ್ತದೆ. ತೊಗಟೆ, ಎಲೆ, ಕಾಯಿ ಜಾತಿಪತ್ರೆ ಎಲ್ಲವೂ ಸುಗಂಧಯುಕ್ತವಾಗಿದೆ. ಎಲೆ ೩-೩೧/೨ ಇಂಚು ಉದ್ದ, ಆಯತಾಕಾರ ಚೂಪಾದ ಅಗ್ರಭಾಗ, ನಸು ಪಚ್ಚೆ ಬಣ್ಣದ ಎಲೆಯ ಅಡಿಭಾಗ, ಸಣ್ಣ ಸಣ್ಣ ಸುಗಂಧ ಭರಿತ ಹೂಗಳು, ಹಳದಿ ವರ್ಣದಲ್ಲಿ ಕೊಡೆ ಬಿಡಿಸಿದಂತೆ ಸುಂದರವಾಗಿ ಕಂಡುಬರುವುದು. ಇದರ ಹಣ್ಣು ಗೋಲಾಕಾರ ಹಾಗೂ ಅಂಡಾಕಾರದಲ್ಲಿ ಕಂಡು ಬರುತ್ತದೆ. ಫಲ ಬೆಳೆದಂತೆ ಒಡೆದು ಬಿರುಕು ಬಿಟ್ಟ ಭಾಗದಲ್ಲಿ ಕೆಂಪಾದ ಪತ್ರೆ ಗೋಚರವಾಗುವುದು.ಮೆತ್ತಗಿನ ಹಣ್ಣಿನ ಮಧ್ಯೆ ಗಟ್ಟಿ ಕಪ್ಪು ಚಿಪ್ಪಿನ ಬೀಜ. ಇದನ್ನು ಹೊರಗಿನಿಂದ ಜಾತಿ ಪತ್ರೆ (ಪತ್ರೆ) ಆವರಿಸಿ ಕೊಂಡಿರುತ್ತದೆ.ಇದನ್ನು ಪ್ರತ್ಯೇಕಿಸಿ ಒಣಗಿಸಿ ಸಂಗ್ರಹಿಸಬಹುದು. ಗಟ್ಟಿ ಚಿಪ್ಪಿನ ಒಳಗೆ ಜಾಯಿ ಕಾಯಿ ಅಡಿಕೆಯಂತೆ ಕಂಡುಬರುವುದು. ಹಣ್ಣಿನ ಭಾಗವನ್ನು ಗೊಜ್ಜು, ಚಟ್ನಿ ತಯಾರಿಸಲು ಉಪಯೋಗಿಸುತ್ತಾರೆ.ಜಾಯಿ ಕಾಯಿಯಲ್ಲಿ ಸುಗಂಧ ಭರಿತ ಉಡನ ಶೀತಲ ತೈಲವಿದೆ. ಕೊಬ್ಬಿನ ಅಂಶ, ಪ್ರೋಟೀನ್, ಸ್ಟಾರ್ಚ್ಗಳೂ ಇದೆ.

ಸಾಂಬಾರ ಪದಾರ್ಥ, ಸಿಹಿ ತಿಂಡಿಗಳಲ್ಲಿ ಹಾಗೂ ಸೌಂರ‍್ಯ ಪ್ರಸಾದನವಾಗಿ ಬಳಸಲ್ಪಡುವ ಔಷಧಿ ಗುಣಗಳಿರುವ ವಿಶೇಷ ಬೀಜ ಜಾಯಿ ಕಾಯಿ.
ಹುಟ್ಟಿದ ಮಗುವಿಗೆ ವಿಟಮಿನ್ ಡ್ರಾಪ್ಸ್, ಕ್ಯಾಲ್ಸಿಯಂ ಡ್ರಾಪ್ಸ್ ಎಲ್ಲರೂ ಕೊಡುತ್ತಾರೆ. ಈ ಡ್ರಾಪ್ಸ್ಗಳು ತಲುಪದ ಹಳ್ಳಿ ಪ್ರದೇಶದ ಜನರು ಹಿಂದೆ ಇದೇ ಜಾಯಿ ಕಾಯಿ, ಹಿಪ್ಲಿ, ಶುಂಠಿ, ಬಜೆಗಳನ್ನು ಒಂದೊಂದು ಸುತ್ತು ಕಲ್ಲಿನ ಮೇಲೆ ತಿಕ್ಕಿ ಸಿಕ್ಕಿದ ನಯವಾದ ಔಷಧಿಯನ್ನು ಹುಟ್ಟಿದ ೧೦-೧೧ನೇ ದಿನದಿಂದ ಮಗುವಿನ ನಾಲಗೆಗೆ ನೆಕ್ಕಿಸುತ್ತಿದ್ದರು. ಇದರೊಂದಿಗೆ ಪೇರಳೆ ಕೊಡಿ, ಕೇಪುಳ ಹೂ ಇತ್ಯಾದಿಗಳನ್ನೂ ಅರೆದು ಸೋಸಿ ಮಗುವಿಗೆ ೨-೩ ಬಿಂದು ಕುಡಿಸುತ್ತಿದ್ದರು. ಇದರಿಂದ ಮಗುವಿಗೆ ಸ್ವಾಭಾವಿಕ ಕ್ಯಾಲ್ಸಿಯಂ, ವಿಟಮಿನ್‌ಗಳು ಸಿಗುವಂತೆ ಮಾಡುವ ಅವರ ಕಲ್ಪನೆ ಹಾಗೂ ಚಿಂತನೆಗಳು ನಮಗೆ ಆಶ್ರ‍್ಯ ಉಂಟುಮಾಡುತ್
ಹೊಟ್ಟೆ ಉಬ್ಬರ: ಜನರು ಅತ್ಯಧಿಕ ತಿನ್ನುತ್ತಾರೆ. ಸ್ವಲ್ಪವೂ ಕೆಲಸ ಅಥವಾ ವ್ಯಾಯಾಮ ಮಾಡುವುದಿಲ್ಲ. ಆಗ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಕೆಲಸ ಮಾಡದಿದ್ದರೂ ಅರ್ಧ ಚಮಚ(೧ ೧/೨ -೨ಗ್ರಾಂ)ಜಾಯಿ ಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಕುಡಿದರೆ ಹೊಟ್ಟೆ ಉಬ್ಬರ ಕಡಿಮೆಯಾಗುವುದು.
ನಿದ್ದೆ ಮತ್ತು ಮಾಂಸಖಂಡ ಸೆಳೆತ: ಜಾಯಿ ಕಾಯಿಯಲ್ಲಿ “ಟ್ರೆಂಟಿ ಮಿರಿಸ್ಟಿನ್” ಎಂಬ ರಾಸಾಯನಿಕ ವಸ್ತು ಇದೆ. ಇದಕ್ಕೆ ಉತ್ತಮ ನಿದ್ದೆ ಬರಿಸುವ ಹಾಗೂ ಮಾಂಸಖಂಡಗಳ ನರಗಳ ಸೆಳೆತ ಕಡಿಮೆ ಮಾಡುವ ಗುಣ ಇದೆ. ಒಂದು ಗ್ರಾಂ ನಷ್ಟು ಪುಡಿಯನ್ನು ಹಾಲಿನಲ್ಲಿ ಸೇವಿಸುವುದರಿಂದ ಮಾಂಸಖಂಡ ಸೆಳೆತ, ನಿದ್ರೆ ಬರಲು ಸಹಾಯ ಮಾಡುವುದು. ಹುಳಿ ಮಜ್ಜಿಗೆಯಲ್ಲಿ ಅರೆದು ಕಾಲು ಮರಕಟ್ಟಿದಂತೆ(neuritis) ಆಗುವ ಭಾಗಕ್ಕೆ ಹಚ್ಚುವುದರಿಂದ (೩-೪ ದಿನ) ಕಡಿಮೆಯಾಗುವುದು.
ಸೌಂದರ್ಯ ಪ್ರಸಾದಕ: ಆಧುನಿಕ ಔಷಧಿಗಳಲ್ಲಿ ಇದರ ಸತ್ವ(extract)ವನ್ನು ಉಪಯೋಗಿಸಿ ಸೌಂದರ್ಯ ವರ್ಧಕ ಔಷಧಿಗಳನ್ನು ತಯಾರಿಸುತ್ತಾರೆ. ಮೊಡವೆಗಳು ಮುಖದಲ್ಲಿ ಕಂಡು ಬಂದರೆ ಇದನ್ನು ನೀರಲ್ಲಿ ಅಥವಾ ಗುಲಾಬಿ ಅರ್ಕದಲ್ಲಿ ಅರೆದು ಹಚ್ಚುವುದರಿಂದ ಕಡಿಮೆಯಾಗುವುದು. ಹುಳಿ ಮಜ್ಜಿಗೆಯಲ್ಲಿ ಅರೆದು ಮುಖದ ಕಪ್ಪು ಮಚ್ಚೆಗಳಿಗೆ (melasma) ಹಚ್ಚುವುದರಿಂದಲೂ ಕಡಿಮೆಯಾಗುವುದು.
ಕಾಮೋತ್ತೇಜನ: ಲೈಂಗಿಕ ನಿಶ್ಯಕ್ತಿಯಲ್ಲಿ ವಿಶೇಷ ಪ್ರಯೋಜನ ಇದೆ. ಒಂದು ಗ್ರಾಂ ನಷ್ಟು ಜಾಯಿಕಾಯಿ ಪುಡಿಯನ್ನು ಪ್ರತಿನಿತ್ಯ ಹಾಲಿನೊಂದಿಗೆ ಸೇವಿಸುವುದರಿಂದ ಪರಿಣಾಮ ಕಂಡುಕೊಳ್ಳಬಹುದು.
ಬಾಯಿ ವಾಸನೆ ಬರುವುದಿದ್ದರೆ ಅರ್ಧ ಚಮಚ ಜಾಯಿ ಕಾಯಿ ಪುಡಿ, ಸ್ವಲ್ಪ ಲವಂಗ ಪುಡಿ, ಉಪ್ಪು ನೀರಲ್ಲಿ ಮಿಶ್ರಮಾಡಿ ಕಲಸಿ ಬಾಯಿ ಮುಕ್ಕಳಿಸುವುದರಿಂದ ಕಡಿಮೆಯಾಗುವುದು.
ನೀರಾಗಿ ಭೇದಿಯಾಗುವುದಿದ್ದರೆ ೧/೨ ಚಮಚ ಪುಡಿ ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ಕಡಿಮೆಯಾಗುವುದು.
ಜಾಯಿ ಕಾಯಿ ಪುಡಿಯನ್ನು ಜೇನಿನೊಂದಿಗೆ ಕಲಸಿ ದಿನಕ್ಕೆರಡು ಸಲ ೫-೭ ದಿನ ಸೇವಿಸಿದರೆ ಶೀತ ಕಡಿಮೆಯಾಗುವುದು. ಸ್ವರವೂ ಉತ್ತಮವಾಗುವುದು.ತುಂಬಾ ಪ್ರಯೋಜನಗಳು ಇದೆಯಾದರೂ ಪ್ರಮಾಣಕ್ಕಿಂತ ಅಧಿಕ ಸೇವಿಸಿದರೆ ನರದೌರ್ಬಲ್ಯ, ನರಗಳ ಸೆಳೆತ, ತಲೆ ತಿರುಕ ಉಂಟಾಗುವುದು. ತುಂಬಾ ಅಧಿಕ ಸೇವಿಸಿದರೆ ಜೀವಕ್ಕೆ ಅಪಾಯವೂ ಇದೆ.ಯಾವುದೇ ಔಷಧಿಯಾದರೂ ಸೇವನಾ ಪ್ರಮಾಣ ಸರಿಯಾಗಿ ತಿಳಿದು ಸೇವಿಸಬೇಕು.
ಕೃಷಿ: ಅಡಿಕೆ ತೋಟ, ತೆಂಗಿನ ತೋಟದಲ್ಲಿ ನೆಟ್ಟು ಬೆಳೆದು ಬೀಜ ಮತ್ತು ಪತ್ರೆಗಳನ್ನು ಪ್ರತ್ಯೇಕಿಸಿ ಮಾರಾಟ ಮಾಡಬಹುದು. ಉತ್ತಮ ವಾಣಿಜ್ಯ ಬೆಳೆ. ಹೆಚ್ಚಿನ ಆರೈಕೆ ಅಗತ್ಯವಿಲ್ಲದೆ ಬೆಳಸಬಹುದು.
