Scientific Name: Centratherum anthelminticum
ಹೆರಿಗೆಗೆ ರೆಡಿಯಾದ ಗರ್ಭಿಣಿ ಮನೆಯಲ್ಲಿ ಇದ್ದರೆ ಮನೆಯಲ್ಲಿ ಇರುವ ಹಿರಿಯರು ಕಾಳಜೀರಿಗೆ ಸಂಗ್ರಹಿಸಿ ಇಟ್ಟಿರುತ್ತಾರೆ. ಹೆರಿಗೆ ನಂತರ ಕಾಳಜೀರಿಗೆ ಕಷಾಯ ಕೊಡುವುದು ಬಾಣಂತಿ ಉಪಚಾರದ ಒಂದು ಭಾಗ. ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ಪ್ರಸವ ಆಗುತ್ತಿತ್ತು. ಆಗ ಆಂಟಿಬಯೋಟಿಕ್ಸ್ ಯಾವುದೂ ಕೊಡುತ್ತಿರಲಿಲ್ಲ. ನಮ್ಮ ಪ್ರಾಚೀನರ ನಂಜು ನಿವಾರಕ (antibiotic) ಇದೇ ಕಾಳಜೀರಿಗೇ ಆಗಿತ್ತು. ಅಂತಹ ಗುಣ ಅದಕ್ಕೆ ಇದೆ.
೪-೬ ಅಡಿ ಎತ್ತರ ಬೆಳೆಯುವ ಗಿಡ. ಒಂದು ವರ್ಷ ಬದುಕುಳಿಯುತ್ತದೆ. ಹೆರೆ ಮಣೆಯ ಕಾಯಿ ತುರಿಯುವ ಭಾಗದ ರಚನೆಯಂತೆ, ಗರಗಸದಂತೆ ಅಂಚುಳ್ಳ ಎಲೆಗಳು. ನೇರಳೆ ವರ್ಣದ ಹೂಗಳು. ೧/೪ ಇಂಚು ಉದ್ದದ ಕಂದು ಬಣ್ಣದ ಬೀಜಗಳು. ಸೂಕ್ಷ್ಮ ರೋಮ ಸದೃಶ ಹೊರ ಮೈಯಲ್ಲಿ ಸಪುರ ಸೂಕ್ಷ್ಮ ನೀಳದಾರೆಗಳು ಗೋಚರಿಸುತ್ತದೆ. ಮಳೆಗಾಲದಲ್ಲಿ ಹೂ ಕಂಡು ಬಂದರೆ ಚಳಿಗಾಲದಲ್ಲಿ ಬೀಜ ಸಂಗ್ರಹಿಸಬಹುದು.
ಭಾರತದ ಎಲ್ಲಾ ಭಾಗಗಳಲ್ಲಿ ಕಂಡುಬಂದರೂ ಹಿಮಾಲಯದ ತಪ್ಪಲಲ್ಲಿ ಅಧಿಕ ಕಂಡು ಬರುತ್ತದೆ. ಅತ್ಯಂತ ಕಹಿ ರುಚಿಯನ್ನು ಹೊಂದಿದ ಬೀಜ ಇದಾಗಿದೆ.
ಚರ್ಮ ರೋಗದಲ್ಲಿ, ರಕ್ತ ಶುದ್ಧಿಗಾಗಿ, ಬಾಣಂತಿಯರಿಗೆ ವಿಶೇಷ ಉಪಯೋಗವಾಗುವ ದ್ರವ್ಯವಾಗಿದೆ.

ಚರ್ಮ: ಚರ್ಮದ ಮೇಲಾಗುವ ಫಂಗಲ್, ಬ್ಯಾಕ್ಟೀರಿಯಾ ಇನ್‌ಫೆಕ್ಷನ್‌ಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಸದ್ಯ ೪-೫ ವರ್ಷಗಳಿಂದ ಹಲವು ಜನರಲ್ಲಿ ರಿಂಗ್ ವರ್ಮ್ ಎಂಬ ಫಂಗಲ್ ಇನ್‌ಫೆಕ್ಷನ್ ಅಧಿಕ ಕಂಡು ಬರುತ್ತಿದೆ. ಇದರಿಂದ ವರ್ಷ ಗಟ್ಟಲೆ ಬಳಲುವವರೂ ಇದ್ದಾರೆ. ಕಾಳಜೀರಿಗೆಯನ್ನು ನೀರಲ್ಲಿ ಅರೆದು ತುರಿಸುವ ಭಾಗಕ್ಕೆ ೩-೪ ವಾರ ಹಚ್ಚಿದರೆ ಕಡಿಮೆಯಾಗುತ್ತದೆ. ಚರ್ಮದ ಮೇಲೆ ಬಿಳಿ ಕಲೆಗಳು ಕಂಡುಬAದರೆ ಕಾಳಜೀರಿಗೆಯೊಂದಿಗೆ ಸಮಪ್ರಮಾಣದಲ್ಲಿ ಶುದ್ಧ ಹರತಾಳ (pure arsenic) ಗೋಮೂತ್ರದೊಂದಿಗೆ ಸೇರಿಸಿ ನಯವಾಗಿ ಅರೆದು ಹಚ್ಚುವುದರಿಂದ ಬಿಳಿ ಕಲೆಗಳು ಕಡಿಮೆಯಾಗುವುದು.
ಒಂದು ಗ್ರಾಂ ಕಾಳಜೀರಿಗೆ ಹಾಗೂ ಒಂದು ಗ್ರಾಂ ಕಪ್ಪು ಎಳ್ಳು ಪುಡಿ ಮಾಡಿ ಸೇವಿಸುವುದರಿಂದ ಚರ್ಮ ತುರಿಕೆ ಕಡಿಮೆಯಾಗುತ್ತದೆ.
ಹೇನು: ಕಾಳ ಜೀರಿಗೆಯನ್ನು ಹುಳಿ ಮಜ್ಜಿಗೆಯಲ್ಲಿ ಅರೆದು ತಲೆಗೆ ಹಾಕಿ ೩ ಗಂಟೆ ನಂತರ ಸ್ನಾನ ಮಾಡಿದರೆ ಹೇನು ನಾಶವಾಗುವುದು.
ಹುಳಬಾಧೆ: ೫ಗ್ರಾಂ ಕಾಳಜೀರಿಗೆಯನ್ನು ಮಜ್ಜಿಗೆಯಲ್ಲಿ ಸೇರಿಸಿ ೫ ದಿನ ಕುಡಿದರೆ ದೊಡ್ಡ ಹುಳ ಹಾಗೂ ಕ್ರಿಮಿ ಹುಳದ ಬಾಧೆ ಕಡಿಮೆಯಾಗುವುದು.
ಕೀಟಗಳ ಕಡಿತ: ಕೆಲವು ಕೀಟಗಳ ಕಡಿತದಿಂದ ಮೈಯಲ್ಲಿ ದಡಿಕೆ ಎದ್ದು ತುರಿಕೆ ಉಂಟಾಗುತ್ತದೆ. ಕರಿಜೀರಿಗೆ ಕಷಾಯ ಮಾಡಿ ಕುಡಿದರೆ ಕಡಿತದ ವಿಷ ಕಡಿಮೆಯಾಗಿ ತುರಿಕೆ ಕಡಿಮೆಯಾಗುವುದು.
ಬಾಣಂತಿ: ಹೆರಿಗೆಯಾದ ನಂತರ ಕಾಳಜೀರಿಗೆ ಅರೆದು ಕುಡಿಸುತ್ತಾರೆ ಅಥವಾ ಇದರೊಂದಿಗೆ ಒಳ್ಳೆ ಮೆಣಸು ಓಮ ಕಷಾಯ ಮಾಡಿ ಓಲೆ ಬೆಲ್ಲ ಸೇರಿಸಿ ಕುಡಿಯುತ್ತಾರೆ. ಇದರಿಂದ ಗರ್ಭಕೋಶದ ನಂಜು ನಿವಾರಣೆಯಾಗುವುದು. ಗರ್ಭಕೋಶ ಸುಸ್ಥಿತಿಗೆ ಬರಲು ಸಹಾಯ ಮಾಡುವುದು .ಕಾಳಜೀರಿಗೆ ಕಷಾಯ ಮಾಡಿ ಕುಡಿಯುವುದರಿಂದ ಎದೆ ಹಾಲು ಅಧಿಕವಾಗುವುದು.
ಹಲವು ವಿಧದ ಮೀನುಗಳು ಲಭ್ಯವಿದೆ. ಅದರಲ್ಲಿ ಬಂಗುಡೆ ಮೀನಿಗೆ ಅಧಿಕ ನಂಜು ಇದೆ ಎನ್ನುತ್ತಾರೆ. ಇದನ್ನು ತಿಂದರೆ ಕೆಲವರಿಗೆ ತುರಿಕೆಯೊಂದಿಗೆ ಚರ್ಮ ರೋಗ ಕಂಡುಬರುತ್ತದೆ. ಇದರ ನಂಜಿನ ಅಂಶ ತೆಗೆಯಲು ಈ ಕಾಳಜೀರಿಗೆಯನ್ನು ಉಪಯೋಗಿಸುತ್ತಾರೆ. ಅರ್ಧ ಚಮಚ ಕಾಳಜೀರಿಗೆ ತರಕಾರಿ ಪದಾರ್ಥಕ್ಕೆ ಬಿದ್ದರೆ ಕಹಿಯಿಂದ ತಿನ್ನಲಾಗದು. ಆದರೆ ಬಂಗುಡೆ ಮೀನು ಪದಾರ್ಥ ಮಾಡುವಾಗ ಕಾಳಜೀರಿಗೆ ೧-೨ ಚಮಚ ಹಾಕಿದರೂ ಪದಾರ್ಥ ಕಹಿಯಾಗುವುದಿಲ್ಲವಂತೆ. ಮೀನಿನ ನಂಜಿ ಅಂಶವನ್ನು ಕಡಿಮೆ ಮಾಡುವ ಗುಣ ಕಾಳಜೀರಿಗೆಗೆ ಇದೆ ಎನ್ನುತ್ತಾರೆ. ಗ್ರಾಮೀಣ ಜನರು ಇಂತಹ ವಿಶೇಷ ಗುಣಗಳನ್ನು ಕಂಡುಕೊಂಡಿದ್ದಾರೆ.
