Skip links
Kasaraka

ಕಾಸರಕ

Scientific Name: Strychnos nux vomica

ಆಟಿ ತಿಂಗಳಲ್ಲಿ ಬೆಳಗಿನ ಜಾವ ಪಾಲೆ ಮರದ ತೊಗಟೆ ತರುವ ಬದಲು ಕಾಸರಕ ತೊಗಟೆ ತಂದು ಗುದ್ದಿ, ಅರೆದು ರಸ ತೆಗೆದು ಕುಡಿದು  ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಬಗ್ಗೆ ವಾರ್ತೆ ಕೇಳಿದ್ದೇವೆ. ಅಂತಹ ವಿಷಯುಕ್ತ ಕಾಸರಕ ಹೇಗೆ ಔಷಧಿ ಆಗಲು ಸಾಧ್ಯ? ಆಡು ಮುಟ್ಟದ ಗಿಡ ಇಲ್ಲ! ಎನ್ನುವಂತೆ ಆಯುರ್ವೇದ ಗ್ರಂಥಗಳು ಉಲ್ಲೇಖಿಸದ ಮರ ಗಿಡ ಮೂಲಿಕೆಗಳಿಲ್ಲ. ವಿಷವಾದರೂ ಅದನ್ನು ಶೋಧನೆ ಮಾಡಿ ಶರೀರಕ್ಕೆ ಬಾಧಿಸಿದ ರೋಗಗಳನ್ನು ಗುಣಪಡಿಸಲು ಉಪಯೋಗಿಸುವ ವಿಧಿ ವಿಧಾನಗಳನ್ನು ಆಯುರ್ವೇದ ತಿಳಿಸಿ ಕೊಟ್ಟಿದೆ. ಕಾಸರಕದ ಹಣ್ಣಿನ ಒಳಗಿರುವ  ಬೀಜ ವಿಷ ಗುಣವನ್ನು ಹೊಂದಿದೆ. ಅದನ್ನು ತಿಂದರೆ ೧೫-೨೦ ನಿಮಿಷಗಳಲ್ಲಿ ಶರೀರ ಕಂಪಿಸಲು ತೊಡಗುವುದು. ಧನುರ್ವಾಯು (Tetanus) ರೋಗ ಬಂದಂತೆ ಕಂಡು ಬರುವುದು. ಶ್ವಾಸಾವರೋದ ಆಗಿ ಮರಣ ಹೊಂದಬಹುದು. ಇಂತಹ ವಿಷ ಬೀಜವನ್ನು ಶೋಧನೆಗೆ ಒಳಪಡಿಸಿ ನೋವು ನಿವಾರಕ ಔಷಧಿಯಾಗಿ ತಯಾರಿಸಲಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ವಿಷಭರಿತ ಮೂಲಿಕೆಯನ್ನು ಶೋಧನೆ ಮಾಡಿ ಅದರ ವಿಷಕಾರಕ ಅಂಶವನ್ನು ತೆಗೆದು ಯೋಗ್ಯ ಔಷಧಿಯ ಗುಣವನ್ನು ಮನುಷ್ಯರಿಗೆ ಸಿಗುವಂತೆ ತಿಳಿಸಿದ ಆಯುರ್ವೇದದ ಮಹತ್ವ ತಿಳಿಸಲೆಂದೇ ಕಾಸರಕದ ಬಗ್ಗೆ ಬರೆಯಲು ಮನಸ್ಸಾಯಿತು.

ಜನ ಸಾಮಾನ್ಯರು ಇದನ್ನು ಔಷಧಿಯಾಗಿ ಉಪಯೋಗಿಸಲು ಸಾಧ್ಯವಿಲ್ಲ. ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಕಾಸರಕದ ಶೋಧನೆ ನಡೆಯಬೇಕು. ಕಾಸರಕ ಸೇರಿಸಿದ ಔಷಧಿಗಳ ತಯಾರಿಕೆ, ಸೇವನೆ ಆಯುರ್ವೇದ ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಯಬೇಕೆಂದು “ಡ್ರಗ್ಸ್ ಆಂಡ್ ಕಾಸ್ಮೆಟಿಕ್ ಆ್ಯಕ್ಟ್” ಹೇಳುತ್ತದೆ. ಹಲವಾರು ಔಷಧಿಗಳನ್ನು ಇದರಿಂದ ತಯಾರಿಸಿದರೂ ಯಾವುದೇ ಅಡ್ಡ ಪರಿಣಾಮ ಬೀರಿ ತೊಂದರೆಯಾದ ಘಟನೆಗಳು ಸಂಭವಿಸಿಲ್ಲ. ಅದರ ವಿಷಕಾರಿಗುಣಕ್ಕಾಗಿ ಈ ಶಾಸನವನ್ನು ವಿಧಿಸಿದೆ.

ಹಾಲು ನೀಡುವ ಹಸು ಅಪ್ಪಿ ತಪ್ಪಿ ಇದರ ಎಲೆ ತಿಂದರೆ ಮರುದಿನ ಹಾಲು ತುಂಬಾ ಕಹಿಯಾಗಿರುತ್ತದೆ. ಕಟ್ಟಿಗೆಗೂ ಬೇಡದ ಮರ ಕಾಸರಕ. ಸಂಸ್ಕೃತದಲ್ಲಿ ಕುಪೀಲು, ವಿಷತಿಂದುಕ ಎಂದು ಕರೆಯಲ್ಪಡುವ ಮರ ೩೫-೪೫ ಅಡಿ ಎತ್ತರ  ಬೆಳೆಯುತ್ತದೆ. ಗಟ್ಟಿ ಮರ, ಬೂದು ಬಣ್ಣದ ತೊಗಟೆ, ತೊಗಟೆ ಕೆತ್ತಿದರೆ ಹಳದಿ ಬಣ್ಣ ಸ್ರಾವ ಹೊರಬರುತ್ತದೆ. ಆಯಾತಕಾರ ಅಥವಾ ವೃತ್ತಾಕಾರದ ಅಭಿಮುಖ ಎಲೆಗಳು, ಒಂದು ಇಂಚು ಉದ್ದದ ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿ ಹೂ ಕಂಡು ಬರುತ್ತದೆ. ಹಳದಿ ಉರುಟಾದ ಫಲ ಬೆಳೆದು ಹಣ್ಣಾದಾಗ ಕೇಸರಿ ಬಣ್ಣದ ಕವರಿಂಗ್ ಬಾಲಿನಂತೆ ಕಂಡು ಬರುತ್ತದೆ. ಹಣ್ಣಿನೊಳಗೆ ಕಹಿ ಪೇಸ್ಟ್ ನಂತಹ ಸಂಗ್ರಹ ಇದ್ದರೆ ಚಟ್ಟೆ ಬೀಜಗಳೂ ಅದರೊಂದಿಗೆ ಸೇರಿರುತ್ತದೆ. ಕಾಸರಕದ ಬೀಜವನ್ನೇ ಶೋಧನೆ ಮಾಡಿ ಔಷಧಿಯಾಗಿ ಉಪಯೋಗಿಸಲಾಗುತ್ತದೆ.

ಬೀಜವನ್ನು ಏಳು ದಿನ ಗೋಮೂತ್ರದಲ್ಲಿ ಇರಿಸಿ ಅದರ ಸಿಪ್ಪೆ ತೆಗೆದು ಹಾಲಿನಲ್ಲಿ ಬೇಯಿಸಿ ತುಪ್ಪದಲ್ಲಿ ಹುರಿದು ನಂತರ ಔಷಧಿಯಾಗಿ ಉಪಯೋಗಿಸಲಾಗುತ್ತದೆ.

Kasaraka

ಶುದ್ಧಿ ಮಾಡಿದ ಬೀಜದಿಂದ ಅಗ್ನಿತುಂಡಿ, ವಿಷಮುಷ್ಟಿ ವಟಿ, ಲಕ್ಷಿö್ಮÃ ವಿಲಾಸ ರಸ, ಏಕಾಂಗ ವೀರ ರಸ, ಕ್ರಿಮಿ ಮುದ್ಗರ ರಸ, ವಿಷಗರ್ಭ ತೈಲ ಮುಂತಾದ ವಿಶೇಷ ಔಷಧಿಗಳನ್ನು ತಯಾರಿಸಲಾಗುತ್ತದೆ. ಈ ಔಷಧಿಗಳಿಂದ ಗೃದ್ರಸಿ (sciatica) ಯಂತಹ ರೋಗದಲ್ಲಿ ಬರುವ ನೋವು ನಿವಾರಣೆ ಮಾಡುವುದು. ಪಕ್ಷಾಘಾತದಲ್ಲಿ ಪ್ರಯೋಜನಕಾರಿ. ಜೀರ್ಣ ವೃದ್ಧಿ ಮಾಡುವುದು,  ಹಸಿವು ಹೆಚ್ಚಿಸುವುದು, ಹೊಟ್ಟೆ ನೋವು ಕಡಿಮೆ ಮಾಡುವುದು, ಜ್ವರ ನಿವಾರಿಸುವುದು, ಹೊಟ್ಟೆ ಕ್ರಿಮಿಯನ್ನು ಕಡಿಮೆಮಾಡುವುದು. ಬೀಜ ಸೇರಿಸಿ ಎಣ್ಣೆ ಪಾಕ ಮಾಡಿ ಮೈಗೆ ಹಚ್ಚುವ ಮೂಲಕ ನೋವು ನಿವಾರಣೆ ಮಾಡುವುದು. ಕೆಲವು ಚರ್ಮ ತೊಂದರೆಗಳನ್ನು ನಿವಾರಿಸುವುದು.

ಶೋಧನೆ ಮಾಡುವ ಮೊದಲು ನರವನ್ನು ದುರ್ಬಲಗೊಳಿಸಿ ಮರಣ ಉಂಟು ಮಾಡುವ ಕಾಸರಕ ಬೀಜ ಶೋಧನೆ ಮಾಡಿ ನರ ದೌರ್ಬಲ್ಯದಲ್ಲಿ ಔಷಧಿಯಾಗಿ ನರ ತೊಂದರೆಯಿಂದ ಉಂಟಾದ ನೋವು ನಿವಾರಕವಾಗಿ ಉಪಯೋಗಿಸಲ್ಪಡುತ್ತದೆ. ಇಂತಹ ವಿಜ್ಞಾನವನ್ನು ನಮಗೆ ನೀಡಿದ ಆಯುರ್ವೇದದ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು.

Leave a comment

This website uses cookies to improve your web experience.