Scientific Name: Lawsonia intermis
ಮಲಯಾಳದಲ್ಲಿ “ಮಯಿಲಾಂಜಿ” ಹಿಂದಿಯಲ್ಲಿ ಮೆಹಂದಿ ಆಂಗ್ಲ ಭಾಷೆಯಲ್ಲಿ Henna ಎನ್ನುವ ಮದರಂಗಿ ಗಿಡ ಬಲ್ಲೆಯಾಗಿ ಬೆಳೆಯುತ್ತದೆ. ೫-೬ ಅಡಿ ಎತ್ತರ ಬೆಳೆಯುವ ಗಿಡ ಕೆಲವೊಮ್ಮೆ ೧೦ ಅಡಿ ಎತ್ತರಕ್ಕೂ ಹುಲುಸಾಗಿ ಬೆಳೆಯುತ್ತದೆ. ಅಭಿಮುಖವಾಗಿ ಮೂಡುವ ಎಲೆಗಳು ಸಣ್ಣ ತೊಟ್ಟು ಅಂಡಾಕಾರದ ಎಲೆಗಳು ಬಿಳಿ ಬಣ್ಣದ ಪರಿಮಳಯುಕ್ತ ಹೂ ಗೊಂಚಲಾಗಿ ಕಂಡುಬರುತ್ತದೆ. ನಂತರ ಗೊಂಚಲಲ್ಲಿ ಉರುಟಾದ ಫಲ ಕಂಡುಬರುತ್ತದೆ. ಇದರೊಳಗೆ ಪಿರಮಿಡ್ ಆಕೃತಿಯ ಬೀಜಗಳು ಇರುತ್ತದೆ. ಇದು ಕರ್ನಾಟಕ, ಗುಜರಾತ್, ಪಂಜಾಬ್, ಮಧ್ಯಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

ಶುಭ ಕರ‍್ಯಗಳಲ್ಲಿ ಸ್ತ್ರೀ ಯರು ಕೈ ಕಾಲಿನ ಅಂದ ಹೆಚ್ಚಿಸಲು ಮದರಂಗಿ ಸೊಪ್ಪನ್ನು ಬಳಸುತ್ತಾರೆ. ಮದುವೆಯ ಮೊದಲ ದಿನ “ಮೆಹಂದಿ” ಕರ‍್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ. ಹಿರಿಯರು “ಮದರಂಗಿ” ಶಾಸ್ತ್ರ ನಡೆಸುತ್ತಿದ್ದರು. ಇದು ಸೌಂರ‍್ಯ ಪ್ರಜ್ಞೆಯ ಒಂದು ಭಾಗ. ಈಗ ಮದರಂಗಿ ಎಂದು ಹೇಳುತ್ತಾ “ ಕೋನ್” ಗಳ ಮೂಲಕ ಕಲಾತ್ಮಕವಾಗಿ ಕೈಯಲ್ಲಿ ಅಂಗೈಯಲ್ಲಿ ಚಿತ್ರಿಸುತ್ತಾರೆ. ಇದರಲ್ಲಿ ರಾಸಾಯನಿಕ ಅಂಶಗಳು ತುಂಬಿಕೊಂಡಿದ್ದು ಕೆಲವರಿಗೆ ಇದನ್ನು ಹಚ್ಚಿದ ಕೆಲವು ಗಂಟೆಗಳಲ್ಲಿ ಕೈ ಬಾತುಕೊಳ್ಳುವುದನ್ನು ನಾವು ನೋಡುತ್ತೇವೆ. ಮದರಂಗಿ ಎಲೆಯಿಂದ ತಯಾರಿಸಿದರೆ ಅಲರ್ಜಿ ಆಗುವುದಿಲ್ಲ.
ಚರ್ಮವ್ಯಾದಿ, ಭೇದಿ, ತಲೆನೋವು, ಕೂದಲಿನ ಆರೋಗ್ಯಕ್ಕಾಗಿ ಇದರ ಎಲೆ, ಹೂ ಹಣ್ಣುಗಳನ್ನು ಔಷಧಿಯಾಗಿ ಉಪಯೋಗಿಸಲಾಗುತ್ತದೆ.
ಕೂದಲಿಗೆ ಬಣ್ಣ: ಕೂದಲಿಗೆ ಬಣ್ಣವನ್ನು ನಾವು ಕೃತಕವಾಗಿ ಕೊಡುವುದರಿಂದ ಎಂಬತ್ತು ವರ್ಷದವರ ಕೂದಲು ೨೦ ವರ್ಷದವರಂತೆ ಇರುತ್ತದೆ. ತಲೆಗೆ ತೈಲಗಳನ್ನು ಹಚ್ಚದಿರುವುದರಿಂದ ಹಾಗೂ ಅತಿಯಾದ ಶ್ಯಾಂಪೂ ಬಳಕೆಯಿಂದ ಕೂದಲು ಬೇಗನೆ ಬಿಳಿಯಾಗುತ್ತದೆ. ಎಲ್ಲಾ ಹೇರ್ ಟ್ರೆಂಡ್ ಗಳಲ್ಲಿ PPD(Paraphynylene diamine) ಎಂಬ ರಾಸಾಯನಿಕ ವಸ್ತು ಇರುತ್ತದೆ. ಇದು ಕೂದಲಿಗೆ ಹಾನಿಕಾರ ಹಾಗೂ ಕೆಲವರಿಗೆ ಅತಿಯಾದ ತುರಿಕೆ ಅಲರ್ಜಿ ಉಂಟುಮಾಡುತ್ತದೆ.
ಮದರಂಗಿ ಎಲೆರಸ, ಲಿಂಬೆರಸ, ಚಾ ಡಿಕಾಕ್ಷನ್ ಮಿಶ್ರ ಮಾಡಿ ತಲೆಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಇದರೊಂದಿಗೆ ಮದರಂಗಿ ಎಲೆ ರಸ ಹಾಗೂ ನೀಲಿ ಸೊಪ್ಪು ರಸ ಹಾಕಿ ತಯಾರಿಸಿದ ತೈಲಗಳನ್ನು ತಲೆಗೆ ಹಾಕಿ ಸ್ನಾನ ಮಾಡುವುದರಿಂದಲೂ ಕೂದಲು ಕಪ್ಪಾಗುತ್ತದೆ. ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಚರ್ಮ ತುರಿಕೆ: ಮದರಂಗಿ ಎಲೆ ಅರಸಿನ ಮತ್ತು ಲಿಂಬೆರಸ ಸೇರಿಸಿ ಅರೆದು ತುರಿಕೆ ಇರುವಲ್ಲಿಗೆ ಹಚ್ಚಿದರೆ ಕೆಲವು ಕ್ರಿಮಿಗಳಿಂದ ಉಂಟಾಗುವ ತುರಿಕೆ ಕಜ್ಜಿಗಳು ಕಡಿಮೆಯಾಗುವುದು.
ತಲೆನೋವು: ಮದರಂಗಿ ಸೊಪ್ಪು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ೧/೨ ಚಮಚ( ೨-೩gm) ಪುಡಿಗೆ ಸ್ವಲ್ಪ ಬೆಲ್ಲ ಜೇನು ಮಿಶ್ರ ಮಾಡಿ ದಿನಕ್ಕೆ ೨ ಸಲ ಸೇವನೆ ಮಾಡಿದರೆ ಆಗಾಗ ಬರುವ ತಲೆನೋವು ಕಡಿಮೆಯಾಗುತ್ತದೆ. ಇದರ ಹೂವನ್ನು ಸಂಗ್ರಹಿಸಿ (೧೦ gm) ಒಂದು ಗ್ಲಾಸಿನಲ್ಲಿ ಹಾಕಿ, ಅದಕ್ಕೆ ಕುದಿಯುವ ನೀರು ಹಾಕಿ ಮುಚ್ಚಿಟ್ಟು ತಣಿದ ನಂತರ ಸೋಸಿ ಕುಡಿದರೆ ತಲೆ ತಿರುಗುವುದು. ತಲೆ ನೋವು ಕಡಿಮೆಯಾಗುತ್ತದೆ. ಕಡಿಮೆ ನಿದ್ದೆ ಬರುವವರಿಗೂ ಪ್ರಯೋಜನವಾಗುವುದು.
ಚೇಳು ಕಡಿದರೆ ಇದರ ಬೇರನ್ನು ನೀರಲ್ಲಿ ಅರೆದು ಹಚ್ಚಿದರೆ ಉರಿ ನೋವು ಕಡಿಮೆಯಾಗುವುದು.
ಬಾಯಿ ಹುಣ್ಣು ಇರುವವರು ಇದರ ಎಲೆಯನ್ನು ಜಗಿದು ನುಂಗಿದರೆ ಕಡಿಮೆಯಾಗುವುದು.
ಬೇದಿಯಾಗುತ್ತಿದ್ದರೆ ಇದರ ಹಣ್ಣನ್ನು ಅರೆದು ಕುಡಿದರೆ ಕಡಿಮೆಯಾಗುತ್ತದೆ.

ಮೂತ್ರ ಉರಿ ಇದ್ದರೆ ಮದರಂಗಿ ಎಲೆ (೧೦ gm) ರಸಕ್ಕೆ ಸಕ್ಕರೆ ಸೇರಿಸಿ ಕುಡಿದರೆ ಕಡಿಮೆಯಾಗುವುದು. ಜಾಸ್ತಿ ಉರಿ ಇದೆ ಎಂದು ಅಧಿಕ ಎಲೆ ಉಪಯೋಗಿಸಿ ಅರೆದು ಕುಡಿದರೆ ವಾಂತಿ ಆಗಬಹುದು.
ಸೌಂದರ್ಯ ವರ್ಧಕ ಹಾಗೂ ಔಷಧಿಯಾಗಿ ಬೆಳೆಸಲ್ಪಡುವ ವಿಶೇಷ ಗಿಡಮೂಲಿಕೆ.
ಕೃಷಿ: ಬೀಜದಿಂದ ಮೊಳಕೆ ಒಡೆದು ಗಿಡವಾಗುತ್ತದೆ. ಆದರೆ ಇದರ ಒಂದು ಅಡಿ ಉದ್ದದ ಕಟ್ಟಿಂಗ್‌ಗಳು ಒಂದು ತಿಂಗಳಲ್ಲಿ ಬೇರು ಬಿಡುತ್ತದೆ. ಎಲೆಗಳನ್ನು ತೆಗೆದು ನೆಡಬೇಕು. ಸಣ್ಣ ಗಿಡ ಇರುವಾಗ ನೀರು ಪ್ರತಿದಿನ ಬೇಕು. ನಂತರ ನೀರು ಇಲ್ಲದಿದ್ದರೂ ಬೆಳೆಯುತ್ತದೆ. ಪ್ರೂನಿಂಗ್ ಮಾಡುತ್ತಿದ್ದರೆ ಹುಲುಸಾಗಿ ಎಲೆಗಳು ಸಿಗುತ್ತದೆ.