Scientific Name: Tamarindus indic
ಉಂಡೆ ಹುಳಿ, ದಾರೆ ಹುಳಿಗಳು ಲಭ್ಯವಿದ್ದರೂ ಆಹಾರ ಪದಾರ್ಥಗಳಿಗೆ ಅಧಿಕ ಬಳಸುವುದು ಓಟೆ ಹುಳಿ. ಓಟೆ ಹುಳಿ ಅಂದರೆ ಹುಣಸೆ ಹುಳಿ. ೪೦-೫೦ ವರ್ಷ ಮೊದಲು ಚಾಕಲೇಟು ಖರೀದಿಸಲೂ ಹಣವಿಲ್ಲದ ಸಮಯದಲ್ಲಿ ಶಾಲಾ ಮಕ್ಕಳ ಬ್ಯಾಗ್ ಹಾಗು ಪಾಕೇಟ್ ತಪಾಸಣೆ ಮಾಡಿದರೆ ಪುಳಿಂಗೊಟೆ (ಓಟೆ ಹುಳಿ ಬೀಜವನ್ನು ಹುರಿದು ಸಿಪ್ಪೆ ತೆಗೆದು ತಿನ್ನಲು ಉಪಯೋಗ) ಸಿಗುತ್ತಿತ್ತು.

ಇದು ಆಳ ಬೇರೂರುವ ಗಟ್ಟಿಮರ. ಭಾರತದ ಎಲ್ಲಾ ಕಡೆ ಕಂಡುಬಂದರೂ ಇದರ ಮೂಲ ಸ್ಥಾನ ಆಫ್ರಿಕ. ಸಣ್ಣ ಉರುಟು ಜೋಡಿ ಎಲೆಗಳು ಸೇರಿಕೊಂಡು ೩-೬ ಇಂಚು ಉದ್ದ ವೃಂತಗಳು ಕಂಡುಬರುತ್ತದೆ. ವಿಶೇಷವೆಂದರೆ ಈ ಎಲೆಗಳು ರಾತ್ರಿ ಮುದುಡಿ ಕೊಂಡಿರುತ್ತದೆ. ಹೂಗಳು ಕೆಂಪು ಹಳದಿ ವರ್ಣದಲ್ಲಿ ಕಂಡುಬರುತ್ತದೆ. ೩-೮ ಇಂಚು ಉದ್ದದ ಫಲಗಳು, ಒಳಗೆ ಕಂದು ಬಣ್ಣದ ನಾರಿನಿಂದ ಕೂಡಿದ ಮೆದುಭಾಗ. ಬೀಜ ಮತ್ತು ನಾರನ್ನು ಸುಲಭವಾಗಿ ಪ್ರತ್ಯೇಕಿಸಿ ಸಂಗ್ರಹಿಸಬಹುದು. ಎಳತಾಗಿರುವಾಗ ಗಟ್ಟಿಯಾಗಿರುವ ಕೋಡು ಬೆಳೆದು ಹಣ್ಣಾದಾಗ ಒಣಗಿ ಓಟೆಯಾಗುತ್ತದೆ.
ನರಕ ಪ್ರಾಪ್ತಿಯಾಗದೇ ಇರಬೇಕಾದರೆ ಜೀವನದಲ್ಲಿ ಒಂದು ಅಶ್ವತ್ಥ ಗಿಡ, ಒಂದು ಕೈ ಬೇವಿನ ಗಿಡ, ಒಂದು ಗೋಳಿ ಗಿಡ,. ಹತ್ತು ಹುಣಸೆ ಗಿಡ, ಮೂರು ಮೂರು ಕಪಿತ್ಥ, ಬಿಲ್ವ, ನೆಲ್ಲಿ, ಐದು ಮಾವಿನ ಮರದ ಗಿಡ ನೆಡಬೇಕೆಂದು ನಮ್ಮ ಪೂರ್ವಜರು ಒಂದು ಶ್ಲೋಕದಲ್ಲಿ ವಿವರಿಸಿದ್ದಾರೆ.ಈ ಮರ ದೆವ್ವಗಳ ಆವಾಸ ಸ್ಥಾನ ಎಂದು ಹೇಳುವವರೂ ಇದ್ದಾರೆ. ಹಣ್ಣನ್ನು ನೋಡಿದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಸಿಹಿ ಹುಳಿ ಎರಡೂ ಮಿಶ್ರವಾಗಿರುವ ವಿಶೇಷ ಫಲ. ಇದರಲ್ಲಿ ಸಿಟ್ರಿಕ್ ಆಸಿಡ್, ಟಾರ್ಟಾರಿಕ್ ಆಸಿಡ್, ಪೊಟಾಸಿಯಂ, ಸಕ್ಕರೆ ಅಂಶಗಳು ಸೇರಿಕೊಂಡಿವೆ, ಭಾರತದ ಸಾಂಪ್ರದಾಯಿಕ ತಿನಿಸುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದರ ಎಲೆ, ಹಣ್ಣು, ಹಣ್ಣಿನ ಸಿಪ್ಪೆಯನ್ನು ಕ್ಷಾರ ಮಾಡಿ ಔಷಧಿಗಳಲ್ಲಿ ಉಪಯೋಗಿಸಲಾಗುತ್ತದೆ.

ಹುಣಸೆ ಹುಳಿ ಶರ್ಬತ್: ಭಾರತದ ಖರ್ಜೂರ ಎನ್ನುವ ಹುಣಸೆ ಹಣ್ಣನ್ನು ಸ್ಪಲ್ಪ ಪ್ರಮಾಣದಲ್ಲಿ ನೀರಲ್ಲಿ ಹಿಸುಕಿ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಸೋಸಿ ಕುಡಿದರೆ ದಾಹ ಉರಿ ಕಡಿಮೆಯಾಗುವುದು. ಹಸಿವು ವೃದ್ಧಿಯಾಗುವುದು.ಮಲಬದ್ಧತೆ ನಿವಾರಿಸುವುದು. ಬೆಳಯದೇ ಇರುವ ಹುಳಿ ಕೋಡು ತಿನ್ನಲು ಖುಷಿಯಾದರೂ ಅತಿಯಾದರೆ ಹೊಟ್ಟೆನೂವು ರಕ್ತಬೇದಿ ಉಂಟುಮಾಡುವುದು.
ಕುರ: ಶರೀರದಲ್ಲಿ ನೋವಿನಿಂದ ಕೂಡಿದ ಕುರಗಳು ಅಲ್ಲಲ್ಲಿ ಏಳಬಹುದು. ರೆಸಿಗೆಯಿಂದ ಕೂಡಿದ ಈ ಕುರಗಳಿಗೆ ಹಣ್ಣಾದ ಹುಳಿಯ ದಪ್ಪನೆಯ ಕುಳ ಮಾಡಿ ಹಚ್ಚಿದರೆ ಸೋರಿಹೋಗುತ್ತದೆ.
ಕೆಮ್ಮು: ಒಣ ಕೆಮ್ಮು ಇರುವಾಗ ಹುಳಿ ಮತ್ತು ಬೆಲ್ಲ ಮಿಶ್ರ ಮಾಡಿ ಸಣ್ಣ ಪ್ರಮಾಣದಲ್ಲಿ ಬಾಯಲ್ಲಿ ಚಪ್ಪರಿಸಿ ನುಂಗಿದರೆ ಕಡಿಮೆಯಾಗುವುದು. ಕೆಮ್ಮಿನಲ್ಲಿ ಉಪಯೋಗಿಸುವ “ವ್ಯೊಷಾದಿ ವಟಿ” ಎಂಬ ಮಾತ್ರೆಯಲ್ಲಿ ಓಟೆಹುಳಿ ಒಂದು ಪ್ರಮುಖ ದ್ರವ್ಯ. ಇದು expectorent (ಕಫವನ್ನು ಹೊರಹಾಕಲು ಸಹಾಯ) ನಂತೆ ಕೆಲಸ ಮಾಡುವುದು.
ಓಟೆ ಹುಳಿಯಲ್ಲಿ ಪೊಟಾಸಿಯಂ ಸ್ವಲ್ಪ ಪ್ರಮಾಣದಲ್ಲಿ ಇದೆ. ಇದರಿಂದ ರಕ್ತನಾಳದಲ್ಲಿ ಸಂಗ್ರಹವಾಗುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದು ಇದರಿಂದ ರಕ್ತದ ಒತ್ತಡವೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲು ಸಹಾಯ ಮಾಡುವುದು.
ಮೈ ಕೈ ನೋವು : ಶರೀರದಲ್ಲಿ ನೋವಿನಿಂದ ಬಳಲುವವರು ಹುಣಸೆ ಹುಳಿ ಎಲೆಯನ್ನು ಕುದಿಸಿ ಕಷಾಯ ಮಾಡಿ ಸೋಸಿ ಅದರಲ್ಲಿ ಸ್ನಾನ ಮಾಡಿದರೆ ನೋವು ಸಿಡಿತ ಕಡಿಮೆಯಾಗುವುದು. ನೋವು ಇರುವಾಗ ನೋವು ನಿವಾರಕ ಔಷಧಿಗಳನ್ನು ಮೈಗೆ ಹಚ್ಚಿ ಎಲೆ ಕಷಾಯದಿಂದ ಸ್ನಾನ ಮಾಡಿದರೆ ಹೆಚ್ಚು ಪ್ರಯೋಜನ ಕಂಡುಕೊಳ್ಳಬಹುದು. ನೋವಿಗೆ ಹಚ್ಚಲು “ಕೊಟ್ಟಂ ಚುಕ್ಕಾದಿ ಚೂರ್ಣ” ಸಿಗುತ್ತದೆ. ಇದರಲ್ಲಿಯೂ ಹುಳಿ ಎಲೆ ಒಂದು ಘಟಕ ದ್ರವ್ಯವಾಗಿದೆ.
ಶರೀರದಲ್ಲಿ ರಕ್ತ ಕಡಿಮೆಯಾದವರಿಗೆ ಹುಳಿ ಪದಾರ್ಥಗಳಲ್ಲಿ ಇಷ್ಟವಾಗುತ್ತದೆ ಎಂದು ವಾಗ್ಬಟ ಸಂಹಿತೆಯಲ್ಲಿ ರಕ್ತ ಕಡಿಮೆಯಾದವರ ಲಕ್ಷಣವನ್ನು ಒಂದು ಶ್ಲೋಕದಲ್ಲಿ ವಿವರಿಸುತ್ತಾರೆ.
“ರಕ್ತೇಮ್ಲ ಶಿಶಿರ ಪ್ರೀತಿ ಶಿರಾ ಶೈಥಿಲ್ಯ ರೂಕ್ಷತಾ”.ಹುಳಿ ತಿನ್ನಲು ಹೆಚ್ಚು ಇಷ್ಟ ಪಡುವವರಿಗೆ ರಕ್ತ ಕಡಿಮೆ ಇರಬಹುದೆಂದು ಊಹಿಸಬಹುದು.
ಗರ್ಭಿಣಿಯರೂ ಹುಳಿ ಪದಾರ್ಥ ಇಷ್ಟಪಡುತ್ತಾರೆ. ಯಾಕೆಂದರೆ ಅವರ ಶರೀರದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುತ್ತದೆ.
ಕೃಷಿ: ಬೀಜದಿಂದ ಗಿಡಗಳು ಹುಟ್ಟಿಕೊಳ್ಳುತ್ತದೆ. ಜಮೀನಿನಲ್ಲಿ ಸ್ಥಳಾವಕಾಶ ಅಧಿಕ ಇದ್ದರೆ ಐದು ಹುಣಸೆ ಗಿಡ ನೆಟ್ಟು ಬೆಳೆಸಿದರೆ ಬೇಕಾದಷ್ಟು ಹಣ್ಣು ಸಿಗಬಹುದು. ಪೂರ್ವಜರು ಶ್ಲೋಕದಲ್ಲಿ ವಿವರಿಸಿದಂತೆ ನರಕವೂ ಪ್ರಾಪ್ತಿಯಾಗದು.
