Scientific Name: Cassia tora
ಮಳೆಗಾಲದ ಆರಂಭದಲ್ಲಿ ಮಳೆ ಬಿದ್ದು ಸ್ವಲ್ಪ ದಿನಗಳಲ್ಲಿ ದಾರಿ ಬದಿ, ತೋಡಿನ ಬದಿ, ಗದ್ದೆ ಮೈದಾನದಲ್ಲಿ ಹುಲುಸಾಗಿ ಬೆಳೆಯುವ ಗಿಡ. ೨-೪ ಅಡಿವರೇಗೆ ಬೆಳೆದು ನಿಲ್ಲುವ ಗಿಡದಲ್ಲಿ ಹಸಿರು ಎಲೆಗಳೊಂದಿಗೆ ಹಳದಿ ಹೂಗಳು ಕಂಡುಬರುತ್ತದೆ. ನಂತರ ಅಳಸಂಡೆ ಕೋಡಿನಂತೆ ಸ್ವಲ್ಪ ಸಣ್ಣ ಸಪುರ ಕೋಡುಗಳು ಮೂಡುತ್ತದೆ. ಕೋಡು ಒಣಗಿದರೆ ಅದರೊಳಗೆ ಗಿಜಿ ಗಿಜಿ ಶಬ್ದ ಉಂಟುಮಾಡುವ ಆಯಾತಾಕಾರದ ಬೀಜಗಳು ಇರುತ್ತದೆ. ಇದುವೇ ತುಳುವರ ತಜಂಕ್ ಅಥವಾ ತಗತೆ.
೪೦-೫೦ ವರ್ಷಗಳ ಮೊದಲು ಮಳೆಗಾಲದಲ್ಲಿ ಹಸಿವು ನೀಗಿಸುವ ಸಸ್ಯ ಇದಾಗಿತ್ತು. ಯಥೇಚ್ಚವಾಗಿ ಬೆಳೆಯುವ ಇದರ ಸೊಪ್ಪಿನ ಪಲ್ಯ ಹೊಟ್ಟೆ ತಣ್ಣಗೆ ಮಾಡುತ್ತಿತ್ತು. ಆಗ ಹಸಿವೆ ನೀಗಿಸಲು ತಿನ್ನುತ್ತಿದ್ದರೆ ಈಗ ಆಷಾಡದಲ್ಲಿ ಪತ್ರೊಡೆ, ದೋಸೆ, ಚಟ್ಟಂಬಡೆ ವಿಶೇಷವಾಗಿ ತಜಂಕ್ ಸುಕ್ಕ ಮಾಡಿ ಸವಿಯುತ್ತೇವೆ. ಅಂದು ಬಡವರ ಪಾಲಿಗೆ ತಜಂಕ್, ಹಲಸು, ಹಲಸಿನ ಬೀಜವೇ ಆಧಾರ ಆಗಿತ್ತು.

ಕನ್ನಡದಲ್ಲಿ ತಗತೆ ಸಂಸ್ಕೃತದಲ್ಲಿ ಚಕ್ರಮರ್ದ ಎಂಬುದಾಗಿ ಹೆಸರಿದ್ದರೆ ಆಂಗ್ಲ ಭಾಷೆಯಲ್ಲಿ ಅದರ ಔಷಧಿ ಗುಣಕ್ಕೆ ಅನುಗುಣವಾಗಿ Ring worm plant ಎನ್ನುತ್ತಾರೆ. ಮಳೆಗಾಲದಲ್ಲಿ ಕಂಡುಬಂದು ಚಳಿಗಾಲದಲ್ಲಿ ಕೋಡು ಒಣಗಿ ಗಿಡ ಸತ್ತು ಹೋದರೆ ಮತ್ತೆ ಕಾಣುವುದು ಮುಂದಿನ ಮಳೆಗಾಲದಲ್ಲಿ.
ಇದರ ಎಲೆ, ಬೀಜ, ಬೇರುಗಳನ್ನು ಔಷಧಿಯಾಗಿ ಬಳಸಲಾಗುತ್ತದೆ.
ಚರ್ಮ: ಇತ್ತೀಚಿನ ದಿನಗಳಲ್ಲಿ ಹಲವರನ್ನು ಹಲವು ವರ್ಷಗಳ ಕಾಲ ಪೀಡಿಸುತ್ತಿರುವ ರಿಂಗ್ ವರ್ಮ್ ಎಂಬ ಫಂಗಲ್ ಇನ್‌ಫೆಕ್ಷನ್‌ನಲ್ಲಿ ವಿಶೇಷ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಇದಕ್ಕೆ Ring worm plant ಎಂದು ಕರೆದಿದ್ದಾರೆ. ತೊಂದರೆ ಇರುವ ಭಾಗಕ್ಕೆ ಇದರ ಎಲೆಯನ್ನು ಅಥವಾ ಬೀಜವನ್ನು ಅರೆದು ಪ್ರತಿದಿನ ಹಚ್ಚಿ ೩-೪ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಗುಣವಾಗುವುದು. ಇದರ ಎಲೆಯಲ್ಲಿ chrysophanic acid ಇದೆ. ಇದೊಂದು Fungicide ರಾಸಾಯನಿಕ ಅಂದರೆ ಫಂಗಸನ್ನು ನಾಶಮಾಡುವ ಗುಣ. ಬೀಜವನ್ನು ಮೊಸರಿನಲ್ಲಿ ಒಂದು ದಿನ ಇಟ್ಟು ನಂತರ ಲಿಂಬೆ ರಸದಲ್ಲಿ ಅರೆದು ತುರಿಕೆ ಕಜ್ಜಿ ಇರುವಲ್ಲಿಗೆ ಹಚ್ಚಿದರೆ ಕಡಿಮೆಯಾಗುತ್ತದೆ. ಇದರ ಬೇರನ್ನು ಇದೇ ರೀತಿ ಮೊಸರಿನಲ್ಲಿ ಹಾಕಿ ಲಿಂಬೆರಸದೊAದಿಗೆ ಅರೆದು ಹಚ್ಚುವುದರಿಂದಲೂ ಪ್ರಯೋಜನ ಕಂಡುಬರುವುದು.

ಸೋರಿಯಾಸಿಸ್ ಎಂಬ ಚರ್ಮವ್ಯಾದಿಯಲ್ಲಿಯೂ ಇದರ ತೈಲ ತಯಾರಿಸಿ ಹಚ್ಚಿದರೆ ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಬಹುದು. ಎಳ್ಳೆಣ್ಣೆಗೆ ತಗತೆ ಎಲೆ ರಸ ಹಾಕಿ ಬೀಜವನ್ನು ಅರೆದು ಎಣ್ಣೆಗೆ ಸೇರಿಸಿ ಪಾಕ ಮಾಡಿ ಸಂಗ್ರಹಿಸಿ ತುರಿಕೆ ಹಾಗೂ ಸೋರಿಯಾಸಿಸ್‌ನಲ್ಲಿ ಉಪಯೋಗಿಸಬಹುದು.
“ದದ್ರು ಕಂಡೂಹರಃ ಕಾಂತಿ ಸಾಕುಮರ‍್ಯ ಕರೋ ಮತಃ”
ಎಂಬುದಾಗಿ ಧನ್ವಂತರಿ ನಿಘಂಟಿನಲ್ಲಿ ಉಲ್ಲೇಖಿಸಿದ್ದಾರೆ. ಕಜ್ಜಿ, ತುರಿಕೆ ಕಡಿಮೆ ಮಾಡುವುದರೊಂದಿಗೆ ಚರ್ಮದ ಸೌಂರ‍್ಯ ಹೆಚ್ಚಿಸುವುದೆಂದು ಈ ಶ್ಲೋಕದ ಅರ್ಥ.
ಬ್ಯಾಕ್ಟೀರಿಯಾ ನಾಶ ಮಾಡುವ ಗುಣವೂ ಇದರ ಎಲೆಗೆ ಇದೆ. ಇದರ ಂಟಿಣi Anti bacterial ಗುಣವನ್ನು ಅಲೊಪತಿ ಆಂಟಿಬಯೋಟಿಕ್ ಔಷಧಿಯಾದ ciproflaxacin ನೊಂದಿಗೆ ಸಂಶೋಧನೆ ಮಾಡಿದ್ದಾರೆ.
ಇದರ ನಿತ್ಯ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದು, ಬೀಜದಿಂದ ಕ್ರಿಮಿಬಾಧೆ ಕಡಿಮೆಯಾಗುವುದು. ಹಾಗೂ ಬೀಜದಿಂದ ಮಲಬಧ್ಧತೆ ನಿವಾರಣೆಯಾಗುವುದು. Anti geneto toxic, Anti hepeto toxic ಅಂದರೆ ಡಿಎನ್‌ಎ, ಲಿವರ್ ರಕ್ಷಣೆಯನ್ನು ಮಾಡುವುದು. ಕೀಟಗಳ ಕಡಿತದಲ್ಲಿ ಉಂಟಾಗುವ ದಡಿಕೆ ತುರಿಕೆಗೆ ಇದರ ಎಲೆ ಅರೆದು ಹಚ್ಚಬೇಕು.

ಕಾಫಿ ಪುಡಿ ಖರೀದಿಸಲು ಹಣವಿಲ್ಲದ ಕಾಲದಲ್ಲಿ ಬಡವರು ಕಾಫಿಯಾಗಿ ಇದರ ಬೀಜವನ್ನು ಉಪಯೋಗಿಸುತ್ತಿದ್ದರು. ಬೀಜವನ್ನು ಹುರಿದು ಪುಡಿ ಮಾಡಿ ಕಾಫಿಯಂತೆ ಕುಡಿಯಬಹುದು. ಬೀಜದಲ್ಲಿ Tannin, mannitol ಗಳು ಇವೆ. ಕಾಫಿ ಕುಡಿದರೆ ಮಲಬದ್ಧತೆ ಉಂಟಾಗುತ್ತದೆ. ಆದರೆ ಇದರ ಬೀಜದಿಂದ ತಯಾರಿಸಿ ಕಾಫಿಯಂತೆ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
ತಜಂಕ್ ಆಹಾರವೂ ಹೌದು, ಔಷಧಿಯೂ ಹೌದು. ಅಂದು ಬಡವರಿಗೆ ಸೀಮಿತವಾಗಿದ್ದರೆ ಇಂದು ಶ್ರೀಮಂತರೂ ಇದರ ವಿವಿಧ ಭಕ್ಷಗಳನ್ನು ಸವಿಯುತ್ತಾರೆ. ತಜಂಕ್ ರೋಗ ನಿವಾರಕ ಮತ್ತು ಆರೋಗ್ಯಕಾರಕ ವನಸ್ಪತಿಯಾಗಿದೆ.
ಡಾ| ಹರಿಕೃಷ್ಣ ಪಾಣಾಜೆ