Scientific Name: Achyranthus aspera
ಆಯುರ್ವೇದ ವೈದ್ಯರಿಗೆ ಮತ್ತು ವೈದಿಕರಿಗೆ ಇದೊಂದು ವಿಶೇಷ ಗಿಡವಾಗಿ ಕಂಡು ಬಂದರೆ ರೈತರಿಗೆ ಇದು ಉಪದ್ರವ ನೀಡುವ ಕಳೆ ಗಿಡ. ಹೊಲದಲ್ಲಿ, ಬೆಟ್ಟ, ಗುಡ್ಡ, ಕಾಡುಗಳಲ್ಲಿ ಬಲ್ಲೆಯಂತೆ ಬೆಳೆಯುತ್ತದೆ.ಕೆಂಪು ಮತ್ತು ಬಿಳಿ ಎಂಬ ಎರಡು ಪ್ರಬೇದಗಳಿವೆ. ವೇದ, ಆಯುರ್ವೇದ ಗ್ರಂಥಗಳಲ್ಲಿ ಸಂಸ್ಕೃತ ಭಾಷೆಯಲ್ಲಿ “ಅಪಾಮಾರ್ಗ” ಎಂಬುದಾಗಿ ಉಲ್ಲೇಖಿಸಲ್ಪಟ್ಟಿದೆ. ೧-೩ ಅಡಿ ಎತ್ತರ ಬೆಳೆಯುತ್ತದೆ.ಭಾರತದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತದೆ. ಸುಲಭವಾಗಿ ಹುಟ್ಟಿಕೊಳ್ಳುತ್ತದೆ, ಬೆಳೆಯುತ್ತದೆ. ಬುಡದಲ್ಲಿ ದೊಡ್ಡದಾದ ಎಲೆ ಕಂಡುಬಂದರೆ ಬೆಳೆದಂತೆ ಸಣ್ಣ ಎಲೆಗಳು ಉರುಟು ಉದ್ದವಾಗಿ ಕಂಡುಬರುತ್ತದೆ.೨-೪ ಇಂಚು ಉದ್ದವಿರುತ್ತದೆ.ಎಲೆ ಕಾಂಡ ಭಾಗ ಸೂಕ್ಷ ರೋಮಮಯವಾಗಿದೆ.ಸ್ಪರ್ಶಕ್ಕೆ ನಯವಾಗಿದೆ. ಹೂ ೧/೨ ದಿಂದ ೩/೪ ಅಡಿ ಉದ್ದ ಬೆಳೆದ ಕಡ್ಡಿಯಂತಹ ಭಾಗದಿಂದ ಕೆಂಪು ವರ್ಣದಲ್ಲಿ ಸುತ್ತಲೂ ಮೊಗ್ಗಾಗಿ ಅರಳುತ್ತದೆ. ನಂತರ ಅದು ಬತ್ತದ ತೆನೆಯೊಳಗಿರುವ ಅಕ್ಕಿಯಂತಹ ಧಾನ್ಯವಾಗಿ ಕಂಡುಬರುತ್ತದೆ.ಇದು ನಮ್ಮ ಚರ್ಮಕ್ಕೆ, ಬಟ್ಟೆಗೆ ಅಂಟಿಕೊಳ್ಳುತ್ತದೆ. ಚರ್ಮಕ್ಕೆ ತಾಗಿದರೆ ಕೆಲವರಿಗೆ ಸ್ವಲ್ಪ ತುರಿಕೆ ಉಂಟಾಗುತ್ತದೆ. ವೈದಿಕರು ಯಜ್ಞ ಯಾಗಾದಿಗಳಲ್ಲಿ ಸಮಿಧೆಯಾಗಿ ಬಳಸಿದರೆ ವೈದ್ಯರು ಔಷಧಿಯಾಗಿ ಬಳಸುತ್ತಾರೆ. ಮಾಂತ್ರಿಕರು ತಂತ್ರ ವಿದ್ಯೆಯಲ್ಲಿ ಉಪಯೋಗಿಸುತ್ತಾರೆ.
ಬೇರು, ಬೀಜ, ಎಲೆ, ಕಾಂಡಗಳು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ.

ಅಜೀರ್ಣ: ಗಿಡವನ್ನು ಬೇರುಸಹಿತ ತೊಳೆದು ತುಂಡು ಮಾಡಿ ಹತ್ತು ಗ್ರಾಂ ನಷ್ಟು ತೆಗೆದುಕೊಂಡು ನೀರು ಸೇರಿಸಿ ಕುದಿಸಿ ಕಷಾಯ ಮಾಡಿ ಆಹಾರದ ಮೊದಲು ಕುಡಿಯುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗಿ ಹಸಿವು ಉಂಟಾಗುವುದು. ಊಟ ಆಗಿ ೧ ರಿಂದ ೨ ಗಂಟೆ ನಂತರ ಕುಡಿದರೆ ಹೊಟ್ಟೆ ಉರಿ ಕಡಿಮೆಯಾಗುವುದು. ಫ್ಯಾಟೀ ಲಿವರ್ ನಂತಹ ತೊಂದರೆ ಕಡಿಮೆಯಾಗುವುದು. ಮೂಲವ್ಯಾಧಿಯ ನೋವಿಗೆ ಬೇರಿನ ೨ ರಿಂದ ೩ ಗ್ರಾಂ ಚೂರ್ಣ ಗಂಜಿ ತೆಳಿನೀರಿನೊಂದಿಗೆ ೧/೨ ಚಮಚ ಜೇನು ಸೇರಿಸಿ ಕುಡಿಯಬೇಕು.
ಮೂತ್ರದ ತೊಂದರೆ: ಮೂತ್ರ ಉರಿ ಹಾಗೂ ಮೂತ್ರ ಮಾಡುವಾಗ ನೋವಿದ್ದರೆ ಉತ್ತರಣೆಯೊಂದಿಗೆ ನೆಗ್ಗಿನಮುಳ್ಳು, ಯರಟಿಮಧುರ, ಹಾಡೆಗಡ್ಡೆ ಸೇರಿಸಿ ಒಟ್ಟು ೪೦ಗ್ರಾಂ ಕಷಾಯ ಮಾಡಿ ಕುಡಿಯುವುದರಿಂದ ಕಡಿಮೆಯಾಗುವುದು. ಮೂತ್ರ ಪಿಂಡಗಳು ಊದಿ ಕೊಂಡಿದ್ದರೂ ಕಡಿಮೆಯಾಗುವುದು.
ಉತ್ತರಣೆ ಕ್ಷಾರ: ಉತ್ತರಣೆಯನ್ನು ಬೆಂಕಿಕೊಟ್ಟು ಬೂದಿಮಾಡಿ, ಬೂದಿಗೆ ನೀರು ಸೇರಿಸಿ ೮ ಅಥವಾ ೧೬ ಸಲ ಬಟ್ಟೆಯಲ್ಲಿ ಸೋಸಿದ ತಿಳಿಯಾದ ನೀರನ್ನು ಪಾತ್ರೆಗೆ ಹಾಕಿ ಕುದಿಸಿ ಇಂಗಿಸಿದಾಗ ಸಿಗುವುದೇ ಕ್ಷಾರ.ಇದನ್ನು ವೈದ್ಯರ ಅನುಭವಕ್ಕನುಸಾರ ಚಿತ್ರಮೂಲದಂತಹ ತೀಕ್ಷ್ಣ ಔಷಧಿಗಳನ್ನು ಸೇರಿಸಿ ತಯಾರಿಸಿ ಮೂಲ ವ್ಯಾಧಿಗಳಲ್ಲಿ, ಟಾನ್ಸಿಲ್, ಮೂಗಿನಲ್ಲಿ ಬೆಳೆಯುವ ದುರ್ಮಾಂಸಗಳಲ್ಲಿ ಪ್ರಯೋಗಿಸಿ ಸಂಪೂರ್ಣ ಗುಣ ಪಡಿಸಲಾಗುವ ವಿಶಿಷ್ಟ ತಯಾರಿಕೆಯಾಗಿದೆ. ತೀಕ್ಷ್ಣ ಮಾಡದೆ ಹಿಪ್ಲಿ, ಅತಿವಿಷದಂತಹ ದ್ರವ್ಯಗಳೊಂದಿಗೆ ಜೇನು ಸೇರಿಸಿ ಕಫರೋಗದಲ್ಲಿಯೂ ಉಪಯೋಗಿಸಿ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಅಜೀರ್ಣ ಸಂಬಂಧಿ ಹೊಟ್ಟೆನೋವು, ಮೂತ್ತದ ಕಲ್ಲುಗಳಲ್ಲಿಯೂ ವೈದರ ಸಲಹೆಯಂತೆ ಉಪಯೋಗಿಸಬಹುದು.

ಚೇಳು,ಇಲಿ ಕಡಿತ: ಇವುಗಳ ಕಡಿತದಿಂದ ನೋವು ಬಾವು ಉಂಟಾಗುತ್ತದೆ. ಉತ್ತರಣೆ ಬೇರನ್ನು ಲಿಂಬೆರಸದಲ್ಲಿ ಅರೆದು ಕಚ್ಚಿದ ಭಾಗಕ್ಕೆ ಹಾಗೂ ದಪ್ಪವಾಗಿರುವ ಭಾಗಕ್ಕೆ ಹಚ್ಚುವ ಮೂಲಕ ನೋವು ಬಾವು ಕಡಿಮೆಯಾಗುವುದು.
ಕಣ್ಣಿನ ಪೊರೆ: ಉತ್ತರಣೆ ಬೇರನ್ನು ಶುಚಿಗೊಳಿಸಿ ಜೇನಿನಲ್ಲಿ ಅರೆದು ಕಣ್ಣಿಗೆ ಅಂಜನ (ಕಣ್ಣಿಗೆ ಔಷಧಿ ಹಾಕುವ ವಿಧಾನ) ಹಾಕುವುದರಿಂದ ಕಣ್ಣಿನ ಪೊರೆ ಕಡಿಮೆಯಾಗುವುದು. ಈ ಚಿಕಿತ್ಸೆ ಈಗ ಪ್ರಸ್ತುತವಲ್ಲ. ಯಾಕೆಂದರೆ ಶಸ್ತç ಚಿಕಿತ್ಸೆಯ ಮೂಲಕ ಸುಲಭವಾಗಿ ಪೊರೆ ತೆಗೆಯಲಾಗುತ್ತದೆ.

ಹಲ್ಲು ನೋವಿರುವಾಗ ಇದರ ಎಲೆಯನ್ನು ಅರೆದು ಹಲ್ಲು ವಸಡಿನ ಬಾಗಕ್ಕೆ ಹಚ್ಚುವುದರಿಂದ ತಾತ್ಕಾಲಿಕ ಶಮನವನ್ನು ಕಂಡುಕೊಳ್ಳಬಹುದು. ಕಿವಿನೋವಿಗೆ ಇದರ ಎಲೆಯ ರಸವನ್ನು ಉಪಯೋಗಿಸಿ ತಯಾರಿಸಿದ ಎಣ್ಣೆಯನ್ನು ಕಿವಿಗೆ ಹಾಕುವುದರಿಂದ ಕಡಿಮೆಯಾಗುವುದು. ಮೈ ತುರಿಕೆಗೆ ಇಡೀ ಗಿಡವನ್ನು ತುಂಡರಿಸಿ ಕಷಾಯ ಮಾಡಿ ಸ್ನಾನ ಮಾಡುವುದರಿಂದ ಕಡಿಮೆಯಾಗುವುದು.
ಮೂಗಿನ ಪಾಲಿಪ್(ದುರ್ಮಾಂಸ): ಮೂಗಿನಲ್ಲಿ ದುರ್ಮಾಂಸ ಬೆಳೆದರೆ ಉಸಿರಾಟಕ್ಕೆ ಕಷ್ಟವಾಗುತ್ತದೆ.ಮಾತು ಸ್ಪಷ್ಟವಾಗುವುದಿಲ್ಲ. ನೀರು ಸೇರಿಸದೆ ತೆಗೆದ ಎಲೆಯ ಒಂದು ಚಮಚ ರಸಕ್ಕೆ ಕಾಲು ಚಮಚ ಲಿಂಬೆರಸ ಸೇರಿಸಿ ಮಿಶ್ರಮಾಡಿ ಸೋಸಿ ೬-೮ ಬಿಂದುಗಳನ್ನು ಮೂಗಿಗೆ ೧೦-೧೪ ದಿನ ಬಿಡುವುದರಿಂದ ದುಮಾಂಸ ಕರಗುವುದು.
ಚರಕ ಸಂಹಿತೆ ಸೂತ್ರಸ್ಥಾನದ ಎರಡನೇ ಅಧ್ಯಾಯ “ಅಪಾಮಾರ್ಗ ತಂಡುಲೀಯ ಅಧ್ಯಾಯ” ಎಂಬ ಹೆಸರಿನಲ್ಲಿ ಈ ಗಿಡದ ಬಗ್ಗೆ, ಬೀಜದ ಬಗ್ಗೆ ವಿವರಿಸಲಾಗಿದೆ. ಸಂಸ್ಕೃತದಲ್ಲಿ ತಂಡುಲ ಅಂದರೆ ಬೀಜ. ಅತಿ ಹಸಿವು ಇರುವವರು ಇದರ ಬೀಜ ೧೦ಗ್ರಾಂ ನಷ್ಟು ರಾತ್ರಿ ಮಜ್ಜಿಗೆಯಲ್ಲಿ ನೆನೆಹಾಕಿ ಮರುದಿನ ಬೆಳಗ್ಗೆ ಅರೆದು ಕುಡಿದರೆ ತಿಂದ ಕೂಡಲೇ ಪುನಃ ತಿನ್ನಬೇಕೆಂಬ ಅತಿ ಹಸಿವು ಕಡಿಮೆಯಾಗುವುದು.
ಕೃಷಿ: ಇದೊಂದು ಕಳೆ ಗಿಡ. ಪ್ರಾಣಿಗಳ ಮನುಷ್ಯರ ಮೈಗೆ, ಬಟ್ಟೆಗೆ ಅಂಟಿ ಕೊಂಡು ಎಲ್ಲೆಲ್ಲಾ ಪಸರಿಸುತ್ತದೆ. ಬೀಜ ಬಿದ್ದಲ್ಲಿ ಗಿಡವಾಗಿ ಗುಂಪಾಗಿ ದಟ್ಟವಾಗಿ ಬೆಳೆಯುತ್ತದೆ. ಔಷಧಿ ತಯಾರಿಕಾ ಕಂಪೆನಿಗಳಿಂದ ಬೇಡಿಕೆ ಇದೆ.
ಡಾ| ಹರಿಕೃಷ್ಣ ಪಾಣಾಜೆ