Scientific Name: Sesamum indicum
ಗಣ ಹೋಮಕ್ಕೂ ಹಾಗು ತಿಲ ಹೋಮಕ್ಕೂ ಎಳ್ಳು ಬೇಕು. ಗಣ ಹೋಮ ಸರ್ವವಿಘ್ನ ನಿವಾರಣೆಗೆ ಯಾವುದೇ ಕರ‍್ಯಗಳ ಪ್ರಾರಂಭದಲ್ಲಿ ಮಾಡುವ ಹೋಮವಾದರೆ, ತಿಲ ಹೋಮ ಮೃತ ಪಟ್ಟವರ ಸದ್ಗತಿಗಾಗಿ ನಡೆಸುವ ಹೋಮವಾಗಿದೆ. ಎಳ್ಳು ವೈದಿಕ ಕರ‍್ಯಗಳಿಗೆ ಅಲ್ಲದೆ ಔಷಧಿಯಾಗಿಯೂ ಶ್ರೇಷ್ಟವಾಗಿದೆ.
ಎಳ್ಳು ದೇಶದ ಎಲ್ಲಾ ಕಡೆ ಬೆಳೆದರೂ ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್, ಆಂದ್ರ, ತೆಲಂಗಾಣಗಳಲ್ಲಿ ಅಧಿಕ ಬೆಳೆಯುತ್ತಾರೆ. ಒಂದು ವರ್ಷದ ಆಯುಷ್ಯ ಇರುವ ಗಿಡ. ೨ ರಿಂದ ೩ ಅಡಿ ಎತ್ತರ ಬೆಳೆಯುತ್ತದೆ. ಕಾಂಡದ ಹೊರಭಾಗ ಸೂಕ್ಷಮ ರೋಮದಂತೆ ಕಂಡುಬರುತ್ತದೆ. ಎಲೆಗಳು ಕೆಟ್ಟ ವಾಸನೆಯಿಂದ ಕೂಡಿದೆ. ೩-೫ ಇಂಚು ಉದ್ದ ಬೆಳೆಯುತ್ತದೆ. ಹೂಗಳು ಬೆಂಡೆ ಹೂವಿನಂತಿದೆ. ಎಲೆಯ ಬುಡದಿಂದ ಹುಟ್ಟುವ ಹೂವು ಗಿಡದ ತುದಿಯಲ್ಲಿ ಗುಚ್ಚಾಕಾರದಲ್ಲಿ ಕಂಡುಬರುತ್ತದೆ. ಒಂದು ಇಂಚು ಉದ್ದ ಬೆಳೆಯುವ ಇದರ ಫಲ ನಾಲ್ಕು ದಾರೆಗಳಿಂದ ಕೂಡಿದೆ. ಸಣ್ಣ ಸಣ್ಣ ಎಳ್ಳು ಇದರೊಳಗೆ ಇರುತ್ತದೆ.

ಬೀಜದ ಬಣ್ಣಗಳಿಗನುಸಾರ ಮೂರು ವಿಧ. ಕಪ್ಪು, ಬಿಳಿ, ಕೆಂಪು ವರ್ಣಗಳಲ್ಲಿ ಕಂಡುಬರುತ್ತದೆ. ಬಿಳಿ ಎಳ್ಳಿನಲ್ಲಿ ಎಣ್ಣೆಯ ಅಂಶ ಅಧಿಕ. ಕಪ್ಪು ಎಳ್ಳು ಔಷಧಿಗಾಗಿ ಶ್ರೇಷ್ಟ.
ಬೀಜದಲ್ಲಿ ೪೦% ಎಣ್ಣೆ ಇರುತ್ತದೆ. ೨೫% ಪ್ರೋಟೀನ್ ಇದೆ. ಎಣ್ಣೆಯಲ್ಲಿ Vit E, vitk, Zinc, Magnesium, vit B12, omega-6 fatty acids ಗಳು ಕಂಡು ಬರುತ್ತದೆ.
ಬೀಜದಲ್ಲಿ ೨೫% ಪ್ರೋಟೀನ್ ಇರುತ್ತದೆ. ಎಣ್ಣೆಯಲ್ಲಿ ಪ್ರೋಟೀನ್ ಇರುವುದಿಲ್ಲ.

ಚರ್ಮ ರಕ್ಷಣೆ ಮಾಡುವ ವಿಶೇಷ ಗುಣ ಹೊಂದಿದೆ. ಎಳ್ಳೆಣ್ಣೆಯಿಂದ ಹಾಗು ಎಳ್ಳಿನಿಂದ ಕೂದಲಿನ ಬೆಳವಣಿಗೆ, ಹಲ್ಲಿನ ರಕ್ಷಣೆ, ಶರೀರದ ದೃಢತೆ, ಗಾಯ, ಒಡೆದ ಚರ್ಮದ ತೊಂದರೆಗಳಲ್ಲಿ ಸಹಕಾರಿ.
ಕೂದಲು : ತಲೆ ಹೊಟ್ಟು ಕೂದಲು ಉದುರುವ ತೊಂದರೆಗಳಲ್ಲಿ ಉತ್ತಮ. ಎಳ್ಳೆಣ್ಣೆಯನ್ನು ತಲೆಗೆ ಹಾಕಿ ೩ ರಿಂದ ೫ ಗಂಟೆ ನಂತರ ಸ್ನಾನ ಮಾಡಿದರೆ ಪ್ರಯೋಜನವಾಗುವುದು. ಎಲೆ ಮತ್ತು ಬೇರುಗಳನ್ನು ಸೇರಿಸಿ ಕಷಾಯ ಮಾಡಿ ತಲೆ ತೊಳೆದರೆ ಕೂದಲು ಉದುರುವುದು ನಿಲ್ಲುತ್ತದೆ.
ಕಾಲು ಒಡೆಯುವುದು: ಚರ್ಮದ ಒಣಗುವಿಕೆಗೆ ಪ್ರತಿದಿನ ಎಳ್ಳೆಣ್ಣೆ ಮೈಗೆ ಹಚ್ಚಿ ೨-೩ ಗಂಟೆ ಬಿಟ್ಟು ಸ್ನಾನ ಮಾಡಬೇಕು. ಕಾಲು ಒಡೆಯುವಿಕೆಗೆ ಜೇನು ಮಯಣವನ್ನು ಬಿಸಿ ಮಾಡಿ ಸ್ವಲ್ಪ ಎಳ್ಳೆಣ್ಣೆಗೆ ಸೇರಿಸಿದರೆ ತಣಿದ ನಂತರ ಮುಲಾಮಿನಂತಾಗುವುದು. ಇದನ್ನು ಕಾಲಿನ ಒಡೆದ ಭಾಗಕ್ಕೆ ಹಚ್ಚುವುದರಿಂದ ಗುಣವಾಗುವುದು.
ಹಲ್ಲು ಮತ್ತು ಒಸಡಿನ ರಕ್ಷಣೆ: ಪ್ರತಿದಿನ ಒಂದು ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಲ್ಲಿ ಇರಿಸಿ ಹತ್ತು ನಿಮಿಷ ಗುಳುಗುಳು ಮಾಡುತ್ತಿದ್ದರೆ (oil pulling) ಹಲ್ಲು ಒಸಡಿನಲ್ಲಿ ಸ್ಥಿರವಾಗುವುದು.
ಹಾಸಿಗೆಯಲ್ಲಿ ಮೂತ್ರ( bed wetting): ೪-೫ ವರ್ಷಗಳ ನಂತರವೂ ಮಕ್ಕಳು ರಾತ್ರಿ ನಿದ್ದೆಯಲ್ಲಿಯೇ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದರೆ ಪ್ರತಿದಿನ ೧-೨ ಎಳ್ಳುಂಡೆಯನ್ನು ತಿನ್ನಿಸಬೇಕು ಅಥವಾ ಎಳ್ಳು ಹುರಿದು ಬೆಲ್ಲದೊಂದಿಗೆ ಮಿಶ್ರಮಾಡಿ ತಿನ್ನಿಸಬೇಕು.
ವಾತ: ಸಂದುಗಳಲ್ಲಿ ನೋವು ಕಂಡುಬಂದರೂ ವಾತದ ಲಕ್ಷಣ. ಶರೀರದ ಒಂದು ಭಾಗ ಬಲ ಹೀನವಾಗುವ ಪಕ್ಷಪಾತ ರೋಗದಲ್ಲಿಯೂ ಎಳ್ಳೆಣ್ಣೆಯಿಂದ ತಯಾರಿಸಿದ ತೈಲಗಳನ್ನು ಶರೀರಕ್ಕೆ ತಿಕ್ಕಿ ಬಿಸಿನೀರ ಶೇಖ ಕೊಟ್ಟು ಗುಣಪಡಿಸಲಾಗುವುದು.

ಎಳ್ಳೆಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿದ್ದರೂ ಎಳ್ಳೆಣ್ಣೆಯನ್ನು ಮೂಲವಾಗಿಟ್ಟು ಅದಕ್ಕೆ ಬೇರೆ ಬೇರೆ ಔಷಧಿಗಳನ್ನು ಸೇರಿಸಿ ಬೇರೆ ಬೇರೆ ರೋಗ ಗುಣಮಾಡಲು ಉಪಯೋಗಿಸಲಾಗುತ್ತದೆ. ಎಳ್ಳೆಣ್ಣೆಯಿಂದ ತ್ರಿಫಲಾದಿ ತೈಲ ಮಾಡಿದರೆ ಕಣ್ಣಿಗೆ ಪ್ರಯೋಜನ, ಅಸನಬಿಲ್ವಾದಿ ತೈಲ ಮಾಡಿದರೆ ತಲೆನೋವು ಕಡಿಮೆ ಮಾಡುವುದು. ಮಹಾನಾರಾಯಣ ತೈಲ ಮಾಡಿದರೆ ಗಂಟು ನೋವು ಕಡಿಮೆ ಮಾಡುವುದು.
ಮೆದುಳಿನ ಆರೋಗ್ಯ: ವಯಸ್ಸಾದಂತೆ ನೆನಪು ಶಕ್ತಿ ಕಡಿಮೆಯಾಗುತ್ತದೆ. ಅದು ಮೆದುಳಿನಲ್ಲಿ ಕೆಲವು ಜೀವಕೋಶಗಳು ನಾಶವಾಗುವುದರಿಂದ ಆಗುತ್ತದೆ. ಎಳ್ಳು ಅಥವಾ ಎಳ್ಳೆಣ್ಣೆಯ ಸೇವನೆಯಿಂದ ಅದರಲ್ಲಿ ಇರುವ omega-6 fatty acids ಮೆದುಳಿನ ಜೀವ ಕೋಶಗಳಿಗೆ ರಕ್ತ ಚಲನೆಯನ್ನು ವೃದ್ಧಿಮಾಡುವುದು.

ಒಂದು ಕಿಲೊ ಎಳ್ಳಿನಿಂದ ೪೦೦ ml ನಷ್ಟು ಎಳ್ಳೆಣ್ಣೆ ಸಿಗುವುದು. ಎಳ್ಳಿಗೆ ಉತ್ತಮ ಬೆಲೆ ಇದೆ. ಎಳ್ಳಿನ ಬೆಲೆಗಿಂತಲೂ ಕಡಿಮೆ ಬೆಲೆಗೆ ಎಳ್ಳೆಣ್ಣೆ ಸಿಗುತ್ತದೆ. ಹಾಗಾದರೆ ಎಳ್ಳೆಣ್ಣೆಯಲ್ಲಿ ಮೋಸ ಇದೆ. ಈ ಕಲಬೆರಕೆಯ ಎಳ್ಳೆಣ್ಣೆಯಿಂದ ನಾವು ನಿರೀಕ್ಷಿಸಿದ ಪರಿಣಾಮ ಸಿಗದು. ಉತ್ತಮ ಎಳ್ಳೆಣ್ಣೆಯನ್ನು ಉಪಯೋಗಿಸಿದರೆ ಮಾತ್ರ ರೋಗ ಗುಣವಾಗುವುದು ಹಾಗೂ ರೋಗಬಾರದಂತೆ ತಡೆಗಟ್ಟುವುದು.
ಡಾ| ಹರಿಕೃಷ್ಣ ಪಾಣಾಜೆ