Scientific name : Saraca asoca
ಹೆಚ್ಚು ಎತ್ತರವೂ ಆಗಿರದ ಗಿಡ್ಡವೂ ಆಗಿರದ ಚಪ್ಪರದಂತೆ ದಟ್ಟವಾಗಿ ಬೆಳೆಯುವ ನೀಳ ಕಡು ಪಚ್ಚೆ ವರ್ಣದ ಎಲೆಗಳಿಂದ ಕಂಗೊಳಿಸುವ ಸುಂದರ ವೃಕ್ಷ. ಕಾಂಡ, ಕೊಂಬೆಗಳಿಂದ ಒಡೆದು ಗುಚ್ಚಾಕಾರದಲ್ಲಿ ಸುಂದರವಾಗಿ, ಗುಂಡಾಗಿ ಮರದ ತುಂಬಾ ಕಂಡುಬರುವ ಹೂಗಳು. ಪ್ರಾರಂಭದಲ್ಲಿ ಕಿತ್ತಳೆ ಬಣ್ಣ ನಂತರ ಹಳದಿ ಬಣ್ಣಕ್ಕೆ ತಿರುಗಿ ಕೊನೆಗೆ ಕೆಂಪಾಗಿ ಮಾರ್ಪಾಡು ಆಗುವ ಪರಿಮಳ ಯುಕ್ತ ಹೂಗಳು. ಪಶ್ಚಿಮ ಘಟ್ಟದಲ್ಲಿ ಹೇರಳವಾಗಿ ಕಂಡು ಬಂದರೂ ನೇಪಾಳ, ಇಂಡೋನೇಶಿಯಾ, ಉತ್ತರಭಾರತದಲ್ಲಿಯೂ ಕಂಡುಬರುತ್ತದೆ. 6-7 ಇಂಚು ಉದ್ದದ ಕೋಡುಗಳಲ್ಲಿ 4-5 ಬೀಜಗಳು ಕಂಡುಬರುತ್ತದೆ.
ಪೌರಾಣಿಕವಾಗಿಯೂ ಗುರುತಿಸಲ್ಪಟ್ಟ ಪೂಜನೀಯ ವೃಕ್ಷ. ನೇಪಾಳದ ಲಂಬನೀ ಉದ್ಯಾನವನದಲ್ಲ್ಲಿ ಅಶೋಕವೃಕ್ಷದ ಕೆಳಗೆ ಗೌತಮ ಬುದ್ದನ ಜನನವಾಯಿತು ಎಂಬ ಉಲ್ಲೇಖವಿದೆ.ರಾಮಾಯಣದಲ್ಲಿ ಹನುಮಂತ ಸೀತಾದೇವಿಯನ್ನು ಬೇಟಿಯಾದದ್ದು ಅಶೋಕವನದ ಅಶೋಕವೃಕ್ಷದ ನೆರಳಿನಲ್ಲಿ.
ಇದೊಂದು ಉತ್ತಮ ಗರ್ಭಾಶಯ ಟಾನಿಕ್. ಇದರಲ್ಲಿFlavonoids, Glycoside, Saponins, Tannins, Estersಗಳು ಕಂಡುಬರುತ್ತದೆ.
![](https://sdpayurveda.com/wp-content/uploads/Screenshot-2023-12-21-102835.png)
ಇದಕ್ಕೆ ಸ್ತ್ರೀಯರ ಋತುಸ್ರಾವವನ್ನು ನಿಯಮಿತಗೊಳಿಸುವ, ನೋವನ್ನು ಕಡಿಮೆಮಾಡುವ, ಅತಿಸ್ರಾವವನ್ನು ನಿಲ್ಲಿಸುವ, ಹಾರ್ಮೊನುಗಳನ್ನು ನಿಯಂತ್ರಿಸುವ, ಕೂದಲಿನ ರಕ್ಷಣೆ ಮಾಡುವ,ಸಂರಕ್ಷಿಸುವ, ಚರ್ಮದ ಕೆಲವು ತೊಂದರೆಗಳನ್ನು ನಿವಾರಿಸುವ ಗುಣವಿದೆ. ಸ್ತ್ರೀಯರಿಗೆ ಆಪ್ಯಾಯಮಾನವಾದ ವೃಕ್ಷ. ಯಾಕೆಂದರೆ, ಹಲವು ವಿಧದ ಸ್ತ್ರೀ ರೋಗಗಳಲ್ಲಿ ದಿವ್ಯೌಷಧಿಯಾಗಿದೆ.
ಸ್ತ್ರೀಯರ ಮುಟ್ಟಿನ ತೊಂದರೆ:
ಮುಟ್ಟಿನ ಸಮಯದಲ್ಲಿ ್ಲ ಹೊಟ್ಟೆ ನೋವು, ಅತಿಸ್ರಾವ ಆಗುವುದು, ಅನಿಯಮಿತವಾಗಿ ಮುಟ್ಟಾಗುವುದಿದ್ದರೆ ಇದರ ತೊಗಟೆಯ ಕಷಾಯ ಮಾಡಿ ಹದಿನಾಲ್ಕು ದಿನ ಸೇವಿಸಬೇಕು.
ಬಿಳಿಸ್ರಾವ :
ಹಲವರಿಗೆ ಋತುಸ್ರಾವದ ನಂತರ ಬಿಳಿಸ್ರಾವ ಕಂಡುಬರುತ್ತದೆ. ತುರಿಕೆ, ಇನ್ಫೆಕ್ಷನ್ ಉಂಟಾಗಿಯೂ ಸ್ತ್ರೀಯರು ಬಹಳ ತೊಂದರೆ ಅನುಭವಿಸುತ್ತಾರೆ. ಅಶೋಕದ ತೊಗಟೆಯ ಹಾಲು ಕಷಾಯ ಮಾಡಿ 2-3 ವಾರ ಸೇವಿಸುವುದರಿಂದ ನಿವಾರಣೆಯಾಗುವುದು.
ಬಂಜೆತನ :
ಹಾರ್ಮೊನುಗಳಾದ FSH, LHಹಾಗೂ ಗರ್ಭಾಶಯದ Ph ವ್ಯತ್ಯಾಸದಿಂದಲೂ ಬಂಜೆತನ ಕಂಡು ಬರುತ್ತದೆ. ಅಂತಹ ಸಂದರ್ಭದಲ್ಲಿ ಅಶೋಕದ ಕಷಾಯ ಅಲ್ಲದೆ ಅಶೋಕವನ್ನು ಸೇರಿಸಿ ತಯಾರಿಸಿದ ಅರಿಷ್ಠ, ಚೂಣ, ತುಪ್ಪಗಳು ಪರಿಣಾಮಕಾರಿ ಫಲ ನೀಡುತ್ತದೆ.
ಚರ್ಮರೋಗ :
ಚರ್ಮದಲ್ಲಿ ಕಂಡುಬರುವ ಕೆಲವು ತುರಿಕೆ, ಕಜ್ಜಿಗಳಿಗೆ ಅಶೋಕದ ಎಲೆ, ಹೂಗಳನ್ನು ಅರೆದು ತೆಂಗಿನೆಣ್ಣೆಯಲ್ಲಿ ಪಾಕ ಮಾಡಿ ಹಚ್ಚಿದರೆ ಪ್ರಯೋಜನವಾಗುತ್ತದೆ.
![](https://sdpayurveda.com/wp-content/uploads/Screenshot-2023-12-21-102921.png)
ಸೌಂದರ್ಯವರ್ಧಕ :
ಮುಖದಲ್ಲಿ ಮೊಡವೆ, ಕಪ್ಪು ಕಲೆಗಳು (Melasma) ಕೂದಲು ಉದುರುವುದರಿಂದ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲವೂ ಹಾರ್ಮೊನ್ ವ್ಯತ್ಯಯದಿಂದ ಕಂಡುಬರುತ್ತದೆ. ಹಾರ್ಮೊನುಗಳನ್ನು ನಿಯಮಿತಗಿಳಿಸುವ ಗುಣ ಅಶೋಕದ ತೊಗಟೆಗೆ ಇರುವುದರಿಂದ ಇದು ಸ್ತ್ರೀಯರ ಸೌಂದರ್ಯವರ್ಧಕವಾಗಿದೆ.
ಡಾ| ಹರಿಕೃಷ್ಣ ಪಾಣಾಜೆ