Scientific Name: Adhatoda vasica
ಸಮೂಹವಾಗಿ 5-8 ಅಡಿ ಎತ್ತರಕ್ಕೆ ಬೆಳೆಯುವ ಗಿಡ. 3 ರಿಂದ 8 ಇಂಚು ಉದ್ದದ ಎಲೆಗಳು ಕಂಡುಬರುತ್ತದೆ. ಎಲೆಗಳನ್ನು ಸವರುವಾಗ ರೋಮಶವಾಗಿ ಘಾಟುವಾಸನೆಯಿಂದ ಕೂಡಿರುತ್ತದೆ. ಬಿಳಿ ಬಣ್ಣದ ಗೊಂಚಲು ಹೂಗಳನ್ನು ನೋಡಬಹುದು. ಭಾರತದ ಉದ್ದಗಲಕ್ಕೂ ಕಂಡುಬರುವ ಇದನ್ನು ನಮ್ಮ ಬೇಲಿಗಳಲ್ಲಿ ನಡುತ್ತಾರೆ. ದಟ್ಟವಾಗಿ ಬೆಳೆಯುವುದರಿಂದ ಬೇಲಿ ಗಟ್ಟಿಯಾಗುತ್ತದೆ. ಎಲ್ಲವನ್ನು ತಿನ್ನುವ ಆಡು ಇದರ ಎಲೆಯನ್ನು ಮುಟ್ಟುವುದಿಲ್ಲ . ಇದರ ಎಲೆ ತಿಂದರೆ ಅವುಗಳ ಸಂತಾನೋತ್ಪತ್ತಿ ಕಡಿಮೆ ಆಗುತ್ತದೆ ಎಂಬ ನಂಬಿಕೆ ಇದೆ.
ಕೆಮ್ಮು, ದಮ್ಮು, ಶೀತ, ರಕ್ತಪಿತ್ತ, ಚರ್ಮರೋಗ, ಅಜೀರ್ಣ, ಗಂಟುನೋವುಳಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ.
ಕೆಮ್ಮು, ದಮ್ಮು, ಶೀತ :
ಹೆಚ್ಚಾಗಿ ಇವು ಒಟ್ಟಾಗಿ ಕಂಡುಬರುತ್ತದೆ. ದಮ್ಮು ಕಟ್ಟುವುದು ಕೆಲವರಲ್ಲಿ ಕಂಡುಬಂದರೂ ಕೆಮ್ಮು ಶೀತ ಸಾಮಾನ್ಯವಾಗಿ ಅನುಭವಿಸುವ ತೊಂದರೆ. ಇದರ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ 10ml ನಷ್ಟು ರಸ ಹಿಂಡಿ ತೆಗೆದು ಜೇನು ಸೇರಿಸಿ ದಿನಕ್ಕೆ 2 ಸಲ 2 ವಾರ ಸೇವಿಸಬೇಕು . ಒಣ ಕೆಮ್ಮಿನಲ್ಲಿ ಹೆಚ್ಚು ಪ್ರಯೋಜನವಾಗದಿದ್ದರೂ ಕಫ ತುಂಬಿಕೊಂಡಿರುವ ಕೆಮ್ಮಿನಲ್ಲಿ ಕಫವನ್ನು ಹೊರಹಾಕಿ ಕೆಮ್ಮನ್ನು ಬೇಗನೆ ಕಡಿಮೆಮಾಡುವುದು. ಇದರ ಎಲೆಯನ್ನು ಒಣಗಿಸಿ ಪುಡಿಮಾಡಿ ಜೇನು ಸೇರಿಸಿ ಸೇವಿಸಿದರೆ ಇದರಲ್ಲಿ ಇರುವ ಗಿಚಿsiಛಿiಟಿe ಎಂಬ ರಾಸಾಯನಿಕ ಅಂಶ ಕೆಮ್ಮು ಕಫ ಕಡಿಮೆಮಾಡುವುದು. ಶ್ವಾಸ ಗ್ರಂಥಿಗಳನ್ನು (Bronchial glands) ಉತ್ತೇಜಿಸಿ ಕಫವನ್ನು ಹೊರಹಾಕುವುದು.
ರಕ್ತಪಿತ್ತ:
ಬಾಯಿ,ಮೂಗಿನ ಮೂಲಕ ರಕ್ತ ಹೊರಬರುತ್ತಿದ್ದರೆ ರಕ್ತಪಿತ್ತ ಎನ್ನುತ್ತಾರೆ. ಬೇರೆ ಬೇರೆ ಕಾರಣಗಳಿಂದ ಇದು ಕಂಡುಬರುವುದು. ಇದರ ಎಲೆಯ 30ml ರಸಕ್ಕೆ ಜೇನು ಮತ್ತು ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ 2 ಸಲ ಕುಡಿಯಬೇಕು. ಪ್ರಥಮ ಚಿಕಿತ್ಸೆಯಾಗಿ ಇದನ್ನು ಅನುಸರಿಸಬಹುದು. ರಕ್ತಬರುವುದು ಕಡಿಮೆಯಾದ ನಂತರ ತಜ್ಞ ವೈದ್ಯರನ್ನು ಸಂಪರ್ಕಿಸಿ ರಕ್ತಬರುವ ಕಾರಣಗಳನ್ನು ಕಂಡುಕೊಳ್ಳಬೇಕು.
ಚರ್ಮರೋಗ :
ಚರ್ಮದಲ್ಲಿ ದಡಿಕೆ ಬೀಳುವುದು ತುರಿಸುವ ಲಕ್ಷಣಗಳಿದಲ್ಲಿ ಇದರ ಎಲೆಯನ್ನು ಅರೆದು ಲೇಪಿಸಬಹುದು. ಇದರಲ್ಲಿ ಇರುವ ಔಷಧೀಯ ರಾಸಾಯನಿಕ ವಸ್ತು ಚರ್ಮದ ಕೆಲವು ತೊಂದರೆಗಳನ್ನು ನಿವಾರಿಸುವುದು.
ಹೊಟ್ಟೆ ಉರಿ :
ಪಿತ್ತದಿಂದ ಹೊಟ್ಟೆ ಉರಿ ಕಂಡುಬರುತ್ತದೆ. ನಾವು acidity ಎನ್ನುತ್ತೇವೆ. ಎಲೆ, ಬೇರು ಕಾಂಡದ ಕಷಾಯ ಪಿತ್ತವನ್ನು ಕಡಿಮೆಮಾಡುವುದರಿಂದ ಹೊಟ್ಟೆ ಉರಿಯನ್ನು ಕಡಿಮೆಮಾಡುವುದು .
ಗಂಟುನೋವ :
ಮೊಣಗಂಟು ದಪ್ಪವಾಗಿ ನೋವಿನಿಂದ ಕೂಡಿದ್ದರೆ ಗಂಟುವಾತವಾಗಿರಬಹುದು. ಆಡುಸೋಗೆಯಲ್ಲಿ Vasicol, Vasicinol ಇರುವುದರಿಂದ ಗಂಟಿನಲ್ಲಿ ಇರುವ ಊತವನ್ನು ಕಡಿಮೆಮಾಡಿ ನೋವನ್ನು ಕಡಿಮೆಮಾಡುವುದು. ಆಯುರ್ವೇದದಲ್ಲಿ ಗಂಟುನೋವಿಗೆ ಸಂಬದಿಸಿದ ಹಲವು ಕಷಾಯಗಳಲ್ಲಿ ಆಡುಸೋಗೆ ಉಪಯೋಗಿಸಲಾಗುತ್ತದೆ.
ಸ್ವರ :
ಮಾತಾಡಲು ಹಾಡಲು ಸ್ವರ ಬೇಕು, ಕಫ ಸ್ವರ ತಂತುಗಳಲ್ಲಿ ಆವರಿಸಿ, ಅಥವಾ ಸ್ವರ ತಂತುಗಳು ದಪ್ಪವಾಗಿ ಮಾತಾಡುವಾಗ ಸ್ವರ ಹೊರಡುವುದಿಲ್ಲ. ಆಡುಸೋಗೆ ಎಲೆಪುಡಿಯನ್ನು ಜೇನಿನಲ್ಲಿ ಮಿಶ್ರಮಾಡಿ ಸೇವಿಸಬೇಕು ಅಥವಾ ಕಷಾಯ ಮಾಡಿ ಜೇನು ಕಲ್ಲುಸಕ್ಕರೆ ಸೇರಿಸಿ ಕುಡಿದರೂ ಸ್ವರ ಸುಸ್ವರವಾಗುವುದು.
ಆಡುಸೋಗೆಯನ್ನು ಕೆಮ್ಮು ನಿವಾರಿಸುವ ವಾಸಕಾಸವದಲ್ಲಿ ಹೊಟ್ಟೆ ಉರಿ ನಿವಾರಿಸುವ ಭೂನಿಂಬಾದಿಖಾಡದಲ್ಲಿ ಚರ್ಮದ ತೊಂದರೆಗಳಲ್ಲಿ ಉಪಯೋಗಿಸುವ ಮಹಾಮಂಜಿಷ್ಟಾದಿ ಕಷಾಯಗಳಲ್ಲಿ ಮುಖ್ಯವಾಗಿ ಉಪಯೋಗಿಸುತ್ತಾರೆ
ಡಾ| ಹರಿಕೃಷ್ಣ ಪಾಣಾಜೆ