Scientific Name: Mucuna prurita
ಅಳಸಂಡೆ ಜಾತಿಯ ಬಳ್ಳಿ, ಅಳಸಂಡೆ ಬಳ್ಳಿಯಲ್ಲಿ ಮೂರು ಎಲೆಗಳು ಜೊತೆಯಾಗಿ ಬೆಳೆಯುತ್ತದೆ. ದಟ್ಟವಾಗಿ ಬೇಗನೆ ಹಬ್ಬುವ ಬಳ್ಳಿ. ಮರವನ್ನು ಆಶ್ರಯಿಸಿ ಮರ ಏರಿದ ಬಳ್ಳಿ ಮರವನ್ನು ಪೂರ್ಣ ಆವರಿಸುವಷ್ಟು ತೀವ್ರವಾಗಿ ಬೆಳೆಯುತ್ತದೆ. ಇದಕ್ಕೆ ಕಪಿಕಚ್ಚು (ಕೋಡಿನ ಹೊರ ರೋಮ ಮೈಗೆ ತಾಗಿದರೆ ಕೋತಿಗಳು ಮೈ ತುರಿಸಿದಂತೆ ತುರಿಸಿಕೊಳ್ಳುತ್ತೇವೆ), ಆತ್ಮಗುಪ್ತ (ರೋಮಗಳಿಂದ ಕೂಡಿದ ಕೋಡಿನ ಒಳಗೆ ಸುರಕ್ಷಿತವಾದ ಬೀಜ) ಎಂಬುದಾಗಿ ಕರೆಯುತ್ತಾರೆ.

ಇದರ ಎಲೆಯ ಅಡಿಭಾಗ ಸ್ವಲ್ಪ ರೋಮಗಳಿಂದ ಕೂಡಿದೆ. ಹೂ ನೀಲಿ ನೇರಳೆ ವರ್ಣ(purple)ದಿಂದ ಕೂಡಿದೆ. ಅಳಸಂಡೆ ಹೂವಿನಂತೆ ಆದರೆ ಸ್ವಲ್ಪ ಉದ್ದವಾಗಿದೆ. ಇದರ ಕೋಡು ೨-೩ ಇಂಚು ಉದ್ದ ಅರ್ಧ ಇಂಚು ಅಗಲವಿದ್ದು ಹೊರಮೈ ರೋಮಗಳಿಂದ ಆವೃತವಾಗಿರುತ್ತದೆ. ಬೆಕ್ಕಿನ ಮರಿಯ ಮೈಯಂತೆ ಕೋಮಲವಾಗಿದೆ. ಆದರೆ ರೋಮ ಮೈಗೆ ತಾಗಿದರೆ ವಿಪರೀತ ತುರಿಕೆ ಉಂಟುಮಾಡುತ್ತದೆ. ಕೋಡಿನ ಒಳಗೆ ೪-೫ ಕಪ್ಪು ದಪ್ಪದ ಬೀಜಗಳಿರುತ್ತದೆ.
ನರಗಳ ಮೇಲೆ ಪ್ರಭಾವ ಬೀರುವ ವಿಶೇಷ ವನಸ್ಪತಿ. ಇದರ ಬೀಜ, ಕೋಡಿನ ಹೊರಗಿನ ರೋಮ, ಬೇರು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ. ನರದೌರ್ಬಲ್ಯ, ನಿಶ್ಯಕ್ತಿ, ಸ್ತ್ರೀ ಯರ ಋತುಸ್ರಾವದ ತೊಂದರೆಗಳಲ್ಲಿ, ಶರೀರ ಕ್ಷೀಣತೆಯಲ್ಲಿ ಇದನ್ನು ಉಪಯೋಗಿಸುತ್ತಾರೆ. ಬೀಜವನ್ನು ಔಷಧಿಯಾಗಿ ಹೆಚ್ಚು ಉಪಯೋಗಿಸಿದರೆ ಬೇರು ಬೀಜದ ಗುಣವನ್ನೇ ಹೊಂದಿರುವುದರಿಂದ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ.

ನರದೌರ್ಬಲ್ಯ: ಕೈ ಬೆರಳುಗಳು ನಿರಂತರ ನಡುಗುವುದು ಕಾಲುಗಳಲ್ಲಿ ನಡೆಯಲು ನಿಶ್ಯಕ್ತಿ ಕಂಡುಬರುವ ಪಾರ್ಕಿನ್ ಸಾನಿಸಂ ಕಾಯಿಲೆಯಲ್ಲಿ ಬೀಜವನ್ನು ಉಪಯೋಗಿಸಲಾಗುತ್ತದೆ. ಇದರ ಬೀಜದಲ್ಲಿ levodopa ಎಂಬ ರಾಸಾಯನಿಕ ಸಣ್ಣ ಪ್ರಮಾಣದಲ್ಲಿ ಇದೆ. levodopaವನ್ನು ಆಧುನಿಕ ವೈದ್ಯಕೀಯದಲ್ಲಿ ಪಾರ್ಕಿನ್ ಸಾನಿಸಂ ಕಾಯಿಲೆಯಲ್ಲಿ ಉಪಯೋಗಿಸುತ್ತಾರೆ. ಕಾಯಿಲೆಯ ಪ್ರಾರಂಭಿಕ ಹಂತದಲ್ಲಿ ಇದನ್ನು ಉಪಯೋಗಿಸಿದರೆ ಪ್ರಯೋಜನ ಲಭಿಸುವುದು. ೩ ರಿಂದ ೫ ಗ್ರಾಂ ನಷ್ಟು ಬೀಜದ ಪುಡಿಯನ್ನು ಹಾಲಿನಲ್ಲಿ ಕಲಸಿ ದಿನಕ್ಕೆರಡು ಸಲ ಕುಡಿಯುವುದು ಉತ್ತಮ. ಇದರ ಬೇರನ್ನು ಹತ್ತು ಗ್ರಾಂ ನಷ್ಟು ಕಷಾಯ ಮಾಡಿ ಕುಡಿದರೂ ಪ್ರಯೋಜನ ಸಿಗುವುದು. ನಮ್ಮ ಮನಸ್ಸು ಯಾವಾಗಲೂ ಖುಷಿಯಾಗಿರಬೇಕಾದರೆ ನಮ್ಮ ಶರೀರದಲ್ಲಿ serotonin ಹಾರ್ಮೊನ್ ಸರಿಯಾಗಿ ಸ್ರಾವವಾಗಬೇಕು. ಇದು ಕಡಿಮೆಯಾದರೆ ಖಿನ್ನತೆ ಗೋಚರಿಸುತ್ತದೆ. ನಾಯಿ ಸೊಣಗಿನ ಬೀಜದಲ್ಲಿ ಸೆರಟೊನಿನ್ ಅಂಶ ಅಲ್ಪ ಪ್ರಮಾಣದಲ್ಲಿ ಇದೆ. ಬೀಜದ ಪುಡಿಯನ್ನು ಹಾಲಿನಲ್ಲಿ ೨-೩ ತಿಂಗಳು ಸೇವಿಸಿದರೆ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಬೀಜವನ್ನು ಬೆಂಕಿಯಲ್ಲಿ ಹುರಿದು ಪುಡಿಮಾಡಿಟ್ಟುಕೊಂಡು ಹಾಲು ಸಕ್ಕರೆ ಸೇರಿಸಿ ಕಾಫಿಯಂತೆ ಕುಡಿಯಬಹುದು. ಮಾಂಸಖಂಡಗಳ ಸೆಳೆತ, ನಿಶ್ಯಕ್ತಿ, ಕೈ ಕಾಲುಗಳ ನಡುಕ, ನೋವು ಬಲಹೀನತೆ, ಮನಸ್ಸಿಗೆ ಭಯದ ಅನುಭವ ಆಗುತ್ತಿರುವಾಗ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು.
ಬೆಸರ್ಪು: ಮೈಯಲ್ಲಿ ದಡಿಕೆಯಂತೆ ದಪ್ಪ ಉಂಟಾಗಿ ತುರಿಸುವುದು ಕೆಲವರಿಗೆ ನಿರಂತರ ಇರುತ್ತದೆ. ಅವರು ಇದರ ಹತ್ತು ಗ್ರಾಂ ಬೇರನ್ನು ಹತ್ತು ಕಪ್ಪು ಒಣ ದ್ರಾಕ್ಷೆಯೊಂದಿಗೆ ಎಳನೀರಿನಲ್ಲಿ ರಾತ್ರಿ ನೆನಸಿಟ್ಟು ಮರುದಿನ ಬೆಳಗ್ಗೆ ಅದನ್ನು ಕಿವುಚಿ ಸೋಸಿ ೨೦-೩೦ ದಿನ ಕುಡಿಯಬೇಕು. ಮೂತ್ರದ ನಿಯಂತ್ರಣ ಕಷ್ಟವಾಗಿ ಕೆಮ್ಮುವಾಗ ಮೂತ್ರ ಹೊರ ಸೂಸುವುದು ಹೆಚ್ಚಾಗಿ ಮಧ್ಯಮ ಮತ್ತು ವಯಸ್ಕ ಸ್ತ್ರೀಯರಲ್ಲಿ ಕಂಡುಬರುತ್ತದೆ. ನರಗಳ ದೌರ್ಬಲ್ಯ, ಜನನಾಂಗ ಭಾಗದ ಮಾಂಸ ಪೇಳಿಗಳ ಶಿಥಿಲತೆಯಿಂದಲೂ ಇದು ಉಂಟಾಗುತ್ತದೆ. ಇದರ ಬೇರನ್ನು ಕಷಾಯ ಮಾಡಿ ಅಗಲದ ಪಾತ್ರೆ(ಟಬ್)ಯಲ್ಲಿ ಹಾಕಿ ೧೦-೧೫ ನಿಮಿಷ ಕಷಾಯದಲ್ಲಿ ಪ್ರತಿದಿನ ಕುಳಿತುಕೊಳ್ಳಬೇಕು. ೨-೩ ತಿಂಗಳ ಕಾಲ ಹೀಗೆ ಮಾಡುವುದರಿಂದ ಪ್ರಯೋಜನವಾಗುವುದು.
ಕ್ರಿಮಿ ಬಾಧೆ: ಇದರ ಕೋಡಿನ ಹೊರಭಾಗದ ರೋಮದಂತಿರುವ ಭಾಗವನ್ನು (೧೨೫ ರಿಂದ ೨೫೦ ಮಿಲಿ. ಗ್ರಾಂ) ಬೆಲ್ಲ, ತುಪ್ಪ, ಜೇನಿನೊಂದಿಗೆ ಮಿಶ್ರಮಾಡಿ ರಾತ್ರಿ ಒಂದು ದಿನ ಸೇವಿಸಿದರೆ ಹುಳದ ಬಾಧೆ ಕಡಿಮೆಯಾಗುವುದು.
ನಿತ್ರಾಣ: ನಾಯಿ ಸೊಣಗು ಬೀಜ, ಅಶ್ವಗಂಧ, ಶತಾವರಿ ಸೇರಿಸಿಕೊಂಡು ನಯವಾಗಿ ಪುಡಿಮಾಡಿ ಹಾಲಿನೊಂದಿಗೆ ಕುಡಿಯುವುದರಿಂದ ಆಯಾಸ ಕಡಿಮೆಯಾಗುವುದು.
ದೇಹಪುಷ್ಟಿ: ಶರೀರ ಕ್ಷೀಣ ಇರುವವರು ಬೀಜದ ಪುಡಿಯನ್ನು ಹಾಲಿನಲ್ಲಿ ಬೇಯಿಸಿ ಇಂಗಿಸಿ ದಪ್ಪ ಮಾಡಿ ನಂತರ ತುಪ್ಪದಲ್ಲಿ ಅರೆದು ಸಕ್ಕರೆ ಪಾಕದಲ್ಲಿ ಏಲಕ್ಕಿ, ಲವಂಗದೊಂದಿಗೆ ತಟ್ಟೆಯಲ್ಲಿ ಹಾಕಿ ತಣಿದ ನಂತರ ಬರ್ಫಿಯಂತೆ ೧೦-೨೦ ಗ್ರಾಂ ಪ್ರತಿ ದಿನ ತಿಂದರೆ ಶರೀರ ಪುಷ್ಟಿಯಾಗುವುದು.
ಲೈಂಗಿಕ ನಿಶ್ಯಕ್ತಿ: ಐದು ಗ್ರಾಂ ನಷ್ಟು ಬೀಜದ ಪುಡಿಯನ್ನು ಹಾಲಿನಲ್ಲಿ ಪ್ರತಿನಿತ್ಯ ಸೇವಿಸುವುದರಿಂದ ಲೈಂಗಿಕ ದೌರ್ಬಲ್ಯದಲ್ಲಿ ಪ್ರಯೋಜನವಾಗುವುದು. ವರ‍್ಯಾಣು ವೃದ್ಧಿಗೂ ಇದನ್ನು ಸೇವಿಸಬಹುದು.
ಗಿಡ ಮೂಲಿಕೆಗಳಿಗೆ ಪರಿಣಾಮಕಾರಿ ಗುಣಗಳಿವೆ. ನುರಿತ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಒಳ್ಳೆಯದು.
ಕೃಷಿ: ಇದೊಂದು ಕಾಡು ಬಳ್ಳಿ. ಬೆಳೆಸುವುದು ಸುಲಭ. ಬೀಜ ಮಳೆಗಾಲದಲ್ಲಿ ಮೊಳಕೆ ಬಂದು ಬೆಳೆದು ಚಳಿಗಾಲದಲ್ಲಿ ಕೋಡುಗಳು ಮೂಡಿ ಬಂದು ಬೇಸಿಗೆಯಲ್ಲಿ ಒಣಗಿ ಬೀಜ ಕೋಡು ಒಡೆದು ಹೊರ ಬರುವುದು. ಅಳಸಂಡೆ ಬೀಜದಂತೆ ಬಿತ್ತಿ ಗಿಡ ಮಾಡಬಹುದು.