Skip links

ಅಡಿಕೆ

Scientific Name: Areca catechu


ಇದಕ್ಕೆ ಪೂಗ, ಕ್ರಮುಕ ಎಂಬ ಹೆಸರೂ ಇದೆ. ರೆಂಬೆ ಕೊಂಬೆಗಳಿಲ್ಲದೆನೇರ ಎತ್ತರ ಬೆಳೆಯುವ ವೃಕ್ಷ. ಸಾಮಾನ್ಯವಾಗಿ 40-60 ಅಡಿ ಎತ್ತರ ಬೆಳೆದ ಮರಗಳು ಕಂಡುಬರುತ್ತದೆ. 100 ಅಡಿ ಬೆಳೆದು ನಿಂತ ಅಡಿಕೆ ಮರಗಳೂ ಅಪರೂಪಕ್ಕೆ ಇದೆ. ನಯವಾದ ಬಿಳಿ ಕಾಂಡದ ತುದಿಯಲ್ಲಿ ಸುತ್ತಲೂ ಹರಡಿಕೊಂಡಿರುವ ಎಲೆಗಳು (ಸೋಗೆ) ಅದರ ಕೆಳಗೆ ಹೂ (ಹಿಂಗಾರ) ಒಟ್ಟಿಗೆ ಅಡಿಕೆ ಗೊಂಚಲು. ಪ್ರಾರಂಭದಲ್ಲಿ ಪಚ್ಚೆ ಬಣ್ಣದ ಸಣ್ಣ ಅಡಿಕೆ ನಂತರ ದುಂಡಾಗಿ ಹಣ್ಣಾದಾಗ ಕೇಸರಿ ಬಣ್ಣವನ್ನು ಪಡೆದು ಸುಂದರವಾಗಿ ಕಾಣುತ್ತದೆ. ದಕ್ಷಿಣ ಕನ್ನಡದ ಶುಭ ಕಾರ್ಯಕ್ರಮಗಳಲ್ಲಿ ತೋರಣದೊಂದಿಗೆ, ದೇವಸ್ಥಾನದ ಜಾತ್ರೋತ್ಸವದಲ್ಲಿ ಧ್ವಜ ಸ್ಥಂಭದ ಬುಡದಲ್ಲಿ ಕಂಗೊಳಿಸುತ್ತದೆ. ಕಲ್ಪವೃಕ್ಷದಂತೆ ತುದಿಯ ಸೋಗೆಯಿಂದ ಬುಡದ ಬೇರಿನವರೆಗೆ ಇದರ ಎಲ್ಲಾ ಭಾಗಗಳನ್ನು ಉಪಯೋಗಿಸಲಾಗುತ್ತದೆ.

ಅಡಿಕೆ ಕ್ಯಾನ್ಸರ್ ಉಂಟುಮಾಡುತ್ತದೆ ಎಂಬ ತಪ್ಪು ಪ್ರಚಾರದ ಮದ್ಯೆ ಅಡಿಕೆಯ ಔಷಧೀಯ ಗುಣಗಳನ್ನು ತಿಳಿದು ಕೊಂಡರೆ ಆಶ್ಚರ್ಯ ಆಗಬಹುದು. ಅಡಿಕೆಯೊಂದಿಗೆ ಹೊಗೆಸೊಪ್ಪು ಸೇರಿದರೆ ಮಾತ್ರ ಕ್ಯಾನ್ಸರ್ಬ ರಬಹುದೇ ವಿನಃ ಕೇವಲ ಅಡಿಕೆಯಿಂದ ಬರಲಾರದು. ಸೋಗೆಯಿಂದ ಹಿಡಿಸೂಡಿ ಮಾಡುವುದಲ್ಲದೆ ಸೋಗೆ ಛಾವಣಿ ಮಾಡಿ ಮಳೆಗಾಲದಲ್ಲಿ ಬೆಚ್ಚನೆಯ ಮನೆ, ಕೊಟ್ಟಿಗೆ ರಚಿಸುವ ಕಾಲವಿತ್ತು. ಇದರ ಹಸಿ ಎಳತು ಎಲೆಯನ್ನು ಜಜ್ಜಿ ರಸ
ತೆಗೆದು ಜೇನು ಸೇರಿಸಿ ದಿನದಲ್ಲಿ 3-4 ಸಲ ಸೇವಿಸಿದರೆ ಕೆಲವು ವಿಧದ ಕೆಮ್ಮು ನಿವಾರಣೆಯಾಗುತ್ತದೆ. ಬೇರನ್ನು ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು, ತುಟಿ ಒಡೆಯುವುದು ಕಡಿಮೆಯಾಗುತ್ತದೆ. ಕಾಂಡವನ್ನು ಬೇಲಿ ರಚಿಸಲು ಹಾಗೂ ಛಾವಣಿ ನಿರ್ಮಾಣಕ್ಕೂ ಉಪಯೋಗಿಸುತ್ತಾರೆ.

ಅಡಿಕೆ ದೇವರಿಗೂ ಪ್ರಿಯವಾಗಿದೆ. ಮಂಗಳಕರ ಕಾರ್ಯ ಕ್ರಮಗಳಲ್ಲಿ ಅಡಿಕೆ ಅಗತ್ಯ ಬೇಕು. ಒಣಗಿಸಿ ಸುಲಿದ ಸಿಪ್ಪೆ ಗೊಬ್ಬರಕ್ಕಲ್ಲದೆ ಸ್ನಾನದ ಬಿಸಿ ನೀರಿನ   ಹಂಡೆ ಬಿಸಿ ಮಾಡಲೂ ಬೇಕಾಗುತ್ತದೆ. ಹಾಳೆ ಒಂದು ಕಾಲದಲ್ಲಿ ತೋಟದಲ್ಲಿ ನೀರು ಚೇಪಲು ಮಾತ್ರವಲ್ಲದೆ ಬಡವರ ಊಟದ ತಟ್ಟೆಯಾಗಿತ್ತು. ಈಗ ಇದೇ ಹಾಳೆ ತಟ್ಟೆ ಶ್ರೀಮಂತರ ಕೈಯಲ್ಲೂ ರಾರಾಜಿಸುತ್ತದೆ. ಅಡಿಕೆಯಲ್ಲಿ Arecoline, Guvacoline, Guvacineಎಂಬ ಸತ್ವಗಳು ಇವೆ. ಅಡಿಕೆಯನ್ನು ಸಣ್ಣ ಪ್ರಮಾಣದಲ್ಲಿ ಜಗಿದರೆ ಮನಸ್ಸಿಗೆ ಮುದನೀಡುತ್ತದೆ. ಜಾಸ್ತಿ ಸೇವಿಸಿದರೆ ತಲೆ ತಿರುಕ ವಾಂತಿಯಾಗುವುದು. ರಕ್ತದ ಒತ್ತಡ ಕಡಿಮೆ ಆಗುವುದು. ಕುತ್ತಿಗೆ ಭಾಗದ ನರಗಳನ್ನೂ ಬಿಗಿಗೊಳಿಸುವುದು. ಇಂತಹ ವಿಷ ಪರಿಣಾಮ ಕಂಡಾಗ ಕೊಬ್ಬರಿ ತುಂಡು ಜಗಿಯಬೇಕು ಅಥವಾ ಉಪ್ಪು, ಸಕ್ಕರೆ ಸೇವಿಸಬೇಕು.

ಅಡಿಕೆಯಲ್ಲಿ ಇರುವ Arecoline ಜಂತು ಹುಳಗಳನ್ನು ನಾಶಮಾಡುವುದು 3 ಗ್ರಾಂ ನಷ್ಟು ಅಡಿಕೆ ಪುಡಿಗೆ 10ml ಲಿಂಬೆ ರಸ ಅದರೊಂದಿಗೆ 5ml ಹರಳೆಣ್ಣೆ ಸೇರಿಸಿ ಕುಡಿದರೆ ಮರುದಿನ ಕ್ರಿಮಿಗಳು ವಿಸರ್ಜನೆಯಾಗುವುದು, ಕ್ರಿಮಿಬಾದೆ ಕಡಿಮೆಯಾಗುವುದು. ಅಡಿಕೆಯನ್ನು ಹುರಿದು ಉಪ್ಪು, ದಾಲ್ಚೀನಿ, ಲವಂಗ, ರೆಂಜೆ ಮರದ ತೊಗಟೆ ಸೇರಿಸಿ ಪುಡಿಮಾಡಿ ಹಲ್ಲು ಉಜ್ಜಿದರೆ ಹಲ್ಲಿನ ರಕ್ಷಣೆ ಮಾಡುವುದು. ಒಸಡಿನ ರಕ್ತಸ್ರಾವನಿಲ್ಲಿಸುವುದು. ಬಾಯಿ ಒಳಗಿನ ದುರ್ಗಂಧ ನಿವಾರಣೆಯಾಗುವುದು, ಹಲ್ಲು ನೋವು ಕಡಿಮೆಯಾಗುವುದು.
ಕೆಲವರಿಗೆ ಟೂತ್ ಪೇಸ್ಟ್ ಉಪಯೋಗಿಸಿ ಬಾಯಿ ಹುಣ್ಣಾಗುವುದಿದ್ದರೆ ಈ ಪುಡಿಯಿಂದ
ಹಲ್ಲು ಉಜ್ಜಬಹುದು.

ಇದೊದು ಉತ್ತಮ ಆಂಟಿ ಸೆಪ್ಟಿಕ್ ಲೋಷನ್ . ಎಳತು ಅಡಿಕೆ ಸಿಪ್ಪೆಯನ್ನು ಬೇರ್ಪಡಿಸಿ ನೀರು ಸೇರಿಸಿ ಕುದಿಸಿ ಸೋಸಿ ಸಂಗ್ರಹಿಸಬೇಕು. ಇದನ್ನು ಹಳೆಹುಣ್ಣುಗಳನ್ನು ತೊಳೆಯಲು ಉಪಯೋಗಿಸಬಹುದು. ಕಾಲಿನ  ಅಡಿಯಲ್ಲಿತುಂಬಾ ಸಮಯದಿಂದ ಗುಣವಾಗದ ಹುಣ್ಣುಗಳಿದ್ದರೆ ಅಡಿಕೆ ಮಸಿಯನ್ನುನಯವಾಗಿ ಪುಡಿಮಾಡಿ ಗಾಯಕ್ಕೆ ನಿತ್ಯ ಹಚ್ಚಿದರೆ ಬೇಗನೆ ಒಣಗುವುದು.ಇತ್ತೀಚಿನ ದಿನಗಳಲ್ಲಿ ರಿಂಗ್ ವರ್ಮ್ (Fungal infection) ಜನರನ್ನು ಅಧಿಕ ಪೀಡಿಸುತ್ತಿದೆ. ಒಣ ಅಡಿಕೆಯ ನಯವಾದ ಪುಡಿಯನ್ನು ಅಕ್ಕಿ ತೊಳೆದ  ನೀರಿನಲ್ಲಿ ಮಿಶ್ರಮಾಡಿ ದಿನದಲ್ಲಿ 2-3 ಸಲ ಹಚ್ಚುವುದರಿಂದ ಗುಣವಾಗುವುದು. ತುಂಬಾ ಕಡೆ ಹರಡಿದ್ದರೆ ಹೊಟ್ಟೆಗೆ ಬೇರೆ ಔಷಧಿ ಸೇವಿಸಬೇಕು.  

 ಡಯಾಬಿಟಿಸ್ ಕಡಿಮೆಮಾಡುವ ಅಸನಾದಿ ಗಣ ಕಷಾಯದಲ್ಲಿಯೂ ಅಡಿಕೆಯನ್ನು ಉಪಯೋಗಿಸಿದ್ದಾರೆ. ಪೂಗ ಖಂಡ, ಪೂಗ ಪಾಕ ಎಂಬ ಔಷಧಿಗಳು ಅಡಿಕೆಯಿಂದ ಮಾಡಲ್ಪಟ್ಟಿದೆ. ಇದು ಉತ್ತಮ ನಿಶ್ಯಕ್ತಿ ನಿವಾರಕ ಟಾನಿಕ್. 

 

ಡಾ|| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.