Skip links

ಅಮೃತ ಬಳ್ಳಿ

Scientific  Name : Tinospora cordifolia

               ಹಲವಾರು ವರ್ಷಗಳ ವರೆಗೆ ಬದುಕಿಉಳಿಯುವ ಬಳ್ಳಿಯಂತಿರುವ ಔಷಧಿ ಸಸ್ಯ. ಮರದ ಮೇಲೆ, ಹಂಚಿನ ಛಾವಣಿ ಮೇಲೆ, ತಾರಸಿಯ ಮೇಲೆ ಹುಲುಸಾಗಿ ಹರಡಿ ಬೆಳೆದು ತಂಪನ್ನು ಕೊಡುತ್ತದೆ. ಬಳ್ಳಿಯ ಹೊರ ಮೈ ದೊರಗಾಗಿ ಇರುತ್ತದೆ. ಹೃದಯಾಕಾರದ ಎಲೆಗಳು.ತುಂಬಾ ಬೆಳೆದರೆ ಕೆಂಪು ಬಣ್ಣದ ಹಣ್ಣುಗಳು ಗೊಂಚಲುಗಳಾಗಿ ಕಂಡುಬರುತ್ತದೆ.ತುಂಡು ಮಾಡಿದರೂ ನಿಧಾನವಾಗಿ ಚಿಗುರುತ್ತದೆ. ಮರದಲ್ಲಿ ಹರಡಿರುವಾಗ ಅದರ ಕಾಂಡವನ್ನು ಕತ್ತರಿಸಿದರೆ  ಮರದ ಮೇಲಿನಿಂದ ಬಿಳಿಯಾದ ತಂತಿಯಾಕಾರದ ಬಿಳಲುಗಳು  ಭೂಮಿಗೆ ಇಳಿಯುತ್ತದೆ. ಅದರ ಮೂಲಕ ನೀರು ಸಂಗ್ರಹಿಸಿ ಬಳ್ಳಿ ಪುನಃ ಚೆನ್ನಾಗಿ ಬೆಳೆಯುತ್ತದೆ. ತುಂಡುಮಾಡಿದರೂ ಚಿಗುರುವುದರಿಂದ “ಅಮೃತ”(ಸಾವು ಇಲ್ಲದ್ದು) ಎಂದು ಹೆಸರು ಬಂದಿರಬಹುದು.

              ರಾಮಾಯಣದಲ್ಲಿ ರಾಮರಾವಣರ ಯುದ್ದದಲ್ಲಿ ಕಪಿ ಸೈನ್ಯವು ಸತ್ತು ಬೀಳುತ್ತದೆ. ರಾಮ ರಾವಣನನ್ನು ಕೊಲ್ಲುತ್ತಾನೆ. ದೇವೇಂದ್ರ ಕಪಿಗಳ ಮೇಲೆ ಅಮೃತದ ಸಿಂಚನ ಮಾಡುತ್ತಾನೆ. ಆಗ ಕಪಿಗಳು ಎದ್ದು ನಿಲ್ಲುತ್ತವೆ, ಅವುಗಳ ಮೈಯಿಂದ ಬಿದ್ದ ಅಮೃತದ ಬಿಂದುಗಳಿಂದ ಈ ಅಮೃತ ಬಳ್ಳಿ ಹುಟ್ಟಿತು ಎಂಬ ಕಥೆ ಇದೆ.

ಕೋವಿಡ್ ಸಮಯದಲ್ಲಿ ಹೆಚ್ಚು ಪ್ರಚಲಿತವಿದ್ದ ಮೂಲಿಕೆ. ಎಲ್ಲರ ಬಾಯಲ್ಲೂ ಅಮೃತಬಳ್ಳಿ, ಹೆಚ್ಚಿನವರು ಇದರ ಕಷಾಯ ಕುಡಿದವರೇ, ಇದೇ ಬಳ್ಳಿ ಚಿಕುನ್ ಗುನ್ಯಾ ಸಮಯದಲ್ಲೂಪ್ರಚಲಿತವಿತ್ತು. ಚಿಕುನ್ ಗುನ್ಯಾ ಬಹಳ ಬೇಗ  ಜನರಿಂದ ದೂರ ಹೋದ ಕಾರಣ ಆಗ ಪ್ರಸಿಧ್ಧಿ ಪಡೆಯಲಿಲ್ಲ.

              ಆದರೆ ಇಂತಹ ವೈರಾಣುಗಳ ವಿರುದ್ದ ಪರಿಣಾಮಕಾರಿಯಾಗಿ ಪ್ರಯೋಗಿಸಲ್ಪಡುವ ದಿವ್ಯೌಷಧಿ ಆಗಿ ತುಳಸಿ, ಅರಸಿನ, ಅಮೃತಬಳ್ಳಿ ಹೆಚ್ಚು ಜನರಿಗೆ ಪ್ರಯೋಜನವಾಗಿದೆ. ಇದರಲ್ಲಿ ಇರುವ ವೈರಾಣು ವಿರೋದಿ (Anti-viral) ಗುಣದಿಂದ ಜ್ವರ ಕಡಿಮೆಯಾಗುತ್ತದೆ. ವ್ಯಾದಿ ಕ್ಷಮತೆಯನ್ನು ವೃಧ್ಧಿಸುವುದು. ಸೇವಿಸುವ ಔಷಧಿ ಪ್ರಮಾಣ ಸರಿಯಾಗಿ ತಿಳಿದಿರಬೇಕು. ಪ್ರಮಾಣ ಜಾಸ್ತಿಯಾದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉಪ್ಪು ರುಚಿಗೆ ಅಗತ್ಯ. ಕಡಿಮೆಯಾದರೂ ಶರೀರ ತೊಂದರೆ ಅನುಭವಿಸುತ್ತದೆ. ಜಾಸ್ತಿಯಾದರೂ ತೊಂದರೆ ಕಂಡುಬರುತ್ತದೆ. ಹಾಗೆಯೇ ಔಷಧಿಯ ಪ್ರಮಾಣವೂ ತಿಳಿದಿರಬೇಕು.

ಕೆಲವೇ ರೋಗಿಗಳ ಮೇಲೆ ಪ್ರಯೋಗಿಸಿ (case study) ಅಮೃತ ಬಳ್ಳಿಯ ದುಷ್ಪರಿಣಾಮದ ಬಗ್ಗೆ ಅಪಪ್ರಚಾರ ನಡೆದಿತ್ತು.  ಆದರೆ ಇದನ್ನು ಕೆಲವು ರೋಗಗಳ (clinical Study) ಮೇಲೆ ಪ್ರಯೋಗಿಸಿ ಅದರ ನಿಜವಾದ ಪ್ರಯೋಜನವನ್ನು ಕಂಡುಕೊಂಡಿದ್ದಾರೆ. ಹಾಗೂ ಆಯುರ್ವೇದ ಗ್ರಂಥಗಳಲ್ಲಿ ಹೇಳಿದ್ದು ಸರಿ ಎಂದು ಸಮರ್ಥಿಸಿದ್ದಾರೆ.

            ಕೊರೊನದಲ್ಲಿ ಪ್ರಯೋಜನಕಾರಿಯೇ? ಇದನ್ನು ಸಾಬೀತು ಪಡಿಸಲು ತುಂಬಾ ಪ್ರಯೋಗಗಳು ನಡೆಯಬೇಕು. ಆದರೆ ಅಮೃತ ಬಳ್ಳಿಯಲ್ಲಿ ವೈರಸ್ ವಿರೋದಿ (Antiviral) ಗುಣ ಇದೆ ಖಂಡಿತ. ಆದ ಕಾರಣ ಕೊರೊನ ದಂತಹ ವೈರಸನ್ನು ದೇಹ ಎದುರಿಸಲು ಸಹಾಯ ಮಾಡಿದೆ.

ಆಮವಾತ (Rheumatoid arthritis):

            ಶರೀರದ ಸಂದುಗಳಲ್ಲಿ ನೋವು, ಬಾವು ಕಂಡುಬರುತ್ತದೆ. ಇದು ಶರೀರದ ವ್ಯಾದಿ ಕ್ಷಮತೆಕಡಿಮೆಯಾಗಿ ಬರುವ ಕಾಯಿಲೆ. ರೋಗಿಯನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಇಲ್ಲಿಯೂ ಅಮೃತಬಳ್ಳಿ ಅಥವಾ ಅದರಿಂದ ತಯಾರಿಸಿದ ಅನೇಕ ಔಷಧಿಗಳು ಪರಿಣಾಮ ಬೀರುತ್ತದೆ.  

ಶರೀರದ ವಿಷ ನಿವಾರಕ (Antioxidant):

              ಶರೀರದಲ್ಲಿ ಸಂಗ್ರಹಿಸಲ್ಪಟ್ಟ ಕೆಟ್ಟ ಅಂಶಗಳನ್ನು ಹೊರಹಾಕಲು Flavonols  ಅಥವಾ Phenolicಗಳು ಬೇಕೆಂದು ವಿಜ್ಞಾನ ಹೇಳುತ್ತದೆ. ಅಮೃತಬಳ್ಳಿಯಲ್ಲಿ ಇವುಗಳು ಇರುವುದರಿಂದ ಉತ್ತಮ Antioxidant ಆಗಿ ಶರೀರಕ್ಕೆ ಪ್ರಯೋಜನವಾಗುತ್ತದೆ.

ಮಧುಮೇಹ :

ಅಮೃತ ಬಳ್ಳಿಯಿಂದ ಸಂಗ್ರಹಿಸಿ (Extract) Ethyl acetate, Hexane Alpha- Glucosidase enzyme ನ್ನು ನಿಯಂತ್ರಿಸುವುದರಿಂದ ಮದುಮೇಹಿಗಳಲ್ಲಿಹಾಗೂ  ಸ್ತ್ರೀಯರ ಅನಿಯಮಿತ ಋತು ಸ್ರಾವ ಲಕ್ಷಣಗಳಿರುವಾಗ (PCOS)ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ ಪ್ರಯೋಜನಕಾರಿಯಾಗಿದೆ.

ಅಲರ್ಜಿ :

ಬೆಳಗ್ಗೆ ಎದ್ದ ತಕ್ಷಣ ಸೀನುವುದು, ಶೀತ ನಿರಂತರ ಬಾದಿಸುತ್ತಿರುವವರು ಇದರ ಕಷಾಯಕ್ಕೆ ಸ್ವಲ್ಪ ಅರಸಿನ ಪುಡಿ ಹಾಕಿ ಸೇವಿಸಬೇಕು.

ವಾಂತಿ :

ಎಲೆ ಸಹಿತ ಒಂದು ಮುಷ್ಠಿ ಬಳ್ಳಿಯನ್ನೂ ಜಜ್ಜಿ , ಒಂದು ಪಾತ್ರೆಗೆ ಹಾಕಿ ಕುದಿಯುವ ನೀರುಹಾಕಿ ಮುಚ್ಚಿಟ್ಟು, ತಣಿದ ನಂತರ ಸೋಸಿ ಜೇನು ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ.

ಜ್ವರ :

ಕೇವಲ ಜ್ವರ ಇರುವಾಗ ಒಂದು ಮುಷ್ಠಿ  ಅಮೃತ ಬಳ್ಳಿಗೆ 2-3 ಕಾಳು ಒಳ್ಳೆ ಮೆಣಸು ಸೇರಿಸಿ ಕಷಾಯ ಮಾಡಿ ಸೋಸಿ ಕುಡಿದರೆ ಜ್ವರ ಶಮನವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ವೃಧ್ಧಿಸುವುದರಿಂದ ಜ್ವರದಿಂದ ಬಾಯಿ ರುಚಿಯೂ ಕಡಿಮೆಯಾಗದೆ ಆಹಾರ ಸೇವಿಸುವುದರಿಂದ ಜ್ವರದ ನಿತ್ರಾಣವೂ ಉಂಟಾಗುವುದಿಲ್ಲ.

                ಶ್ವಾಸಕೋಶದ ತೊಂದರೆಯಿಂದ ಬರುವ ಕಫ , ಕೆಮ್ಮು, ರಕ್ತ ದೋಷದಿಂದ ಬರುವ ತುರಿಕೆ, ಕಜ್ಜಿಗಳು, ಆಗಾಗ ಬರುತ್ತಿರುವ ಜ್ವರ, ತಲೆನೋವುಗಳಲ್ಲಿ  ಇದನ್ನು ಉಪಯೋಗಿಸುತ್ತಾರೆ. ಇದರಿಂದ ತಯಾರಿಸಿದ ಅಮೃತಾರಿಷ್ಠ, ಅಮೃತೋತ್ತರ ಕಷಾಯ, ಕೈಶೋರಗುಗ್ಗುಲು, ಸಂಶಮನಿ ವಟಿಗಳು ಹೆಚ್ಚಾಗಿ ಉಪಯೋಗಿಸುವ ತಯಾರಿಕೆಗಳು. ವೈದ್ಯರ ಸಲಹೆಯೊಂದಿಗೆ ದೀರ್ಘಾವಧಿ ಉಪಯೋಗಿಸಬಹುದಾದ ಔಷಧಿಗಳಾಗಿವೆ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.