Skip links

ನಾಚಿಕೆ ಮುಳ್ಳು

ನಮ್ಮ ಗಾರ್ಡನ್, ಅಡಿಕೆ ತೋಟದಲ್ಲಿ ಕಳೆಯಾಗಿ ಹರಡಿರುವ ಗಿಡ. ಗಿಡ ತುಂಬಾ ಮುಳ್ಳುಗಳಿಂದ ಆವೃತವಾಗಿದ್ದು ಚುಚ್ಚಿದರೆ ಸುಲಭದಲ್ಲಿ ಹೊರಕ್ಕೆ ಬಾರದು. ಹುಲಿ ಉಗುರಿನಂತೆ ಬಾಗಿಕೊಂಡಿರುತ್ತದೆ. ಮುಟ್ಟಿದ ಕೋಡಲೇ ನಮಸ್ಕರಿಸಿದಂತೆ ಮಡಚಿಕೊಳ್ಳುವ ಎಲೆಗಳು ಅದರೊಂದಿಗೆ ಮುರಿದುಬಿದ್ದಂತೆ ಜೋತು ಬೀಳುವ ಪತ್ರದಂಡಗಳು. ಇಂತಹ ಪ್ರತಿಕ್ರಿಯೆಯನ್ನು ಪ್ರಕೃತಿಯಲ್ಲಿ ಯಾವುದೇ ಗಿಡಗಳಲ್ಲಿ ಕಾಣಲಾಗದು. ಮೇವಿಗಾಗಿ ತಿನ್ನುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಗಿಡ ಈ ರೀತಿಯ ಚಲನೆಯನ್ನು ತೋರುವುದಿರಬಹುದು. ಇದರ ಬಗ್ಗೆ ತಿಳಿಯದವರಿಗೆ ಇದೊಂದು ಕಳೆಯಾಗಿ ಕಂಡರೆ ಆಯುರ್ವೇದ ಪಂಡಿತರಿಗೆ ಇದೊಂದು ದಿವ್ಯೌಷಧ. ದನಗಳು ಇದನ್ನು ಹೆಚ್ಚು ತಿನ್ನದಿದ್ದರೂ ಆಡುಗಳಿಗೆ ಇದು ಬಹಳ ಇಷ್ಟ.

ಯಾಕಾಗಿ ಈ ಗಿಡ ಮುಟ್ಟಿದರೆ ಮುದುಡಿಕೊಳ್ಳುತ್ತದೆ? ಮುಟ್ಟಿದ ಕ್ಷಣದಲ್ಲಿ ಮಡಚಿಕೊಳ್ಳುತ್ತದೆ. ಅಷ್ಟೊಂದು ಸೂಕ್ಷ ಸಂವೇದನೆ ಈ ಗಿಡಕ್ಕೆ ಇದೆ. ಎಲೆಯ ಬುಡದಲ್ಲಿ ಹಾಗು ಪತ್ರವೃಂತದ ಬುಡದಲ್ಲಿರುವ ವಿಶೇಷ ಜೀವಕೋಶಗಳ ಪ್ರಕ್ರಿಯೆಯಿಂದ ನಡೆಯುತ್ತದೆ. ಗಿಡದ ಯಾವ ಭಾಗವನ್ನು ಮುಟ್ಟುತ್ತೇವೆಯೋ ಆ ಭಾಗದ ನೀರು ಗಿಡದೊಳಗೇ ಹೊರಹರಿಸಲ್ಪಟ್ಟು ಆ ಜಾಗಬರಿದಾದಾಗ ಕೂಡಲೇ ಮುದುಡಿಕೊಳ್ಳುತ್ತದೆ ಅಥವಾ ಮಡಚಿಕೊಳ್ಳುತ್ತದೆ. ಇದರ ಮೂಲ ಬ್ರೆಜಿಲ್. ಆದರೆ ಭಾರತದ ಉದ್ದಗಲಕ್ಕೂ ಹರಡಿಕೊಂಡಿದೆ.  

ಅತಿಸಾರ, ಸ್ತ್ರೀಯರ ಮುಟ್ಟು ವೈಪರಿತ್ಯ, ಅತಿಸ್ರಾವ, ಚೇಳುಕಡಿತ, ರಕ್ತ ಸಹಿತ ಮೂಲವ್ಯಾಧಿ, ಸೊಂಟನೋವು, ಕಾಮವರ್ಧಕ ಔಷಧಿಯಾಗಿಯೂ ಉಪಯೋಗಿಸಬಹುದು. ಅಧಿಕ ಮಾಸಿಕ ರಕ್ತಸ್ರಾವ: ಮುಟ್ಟಾಗುವಾಗ ಅಧಿಕ ರಕ್ತ ಸ್ರಾವ ಅಥವಾ ತಿಂಗಳಲ್ಲಿ 2-3 ಸಲ ಋತು ಸ್ರಾವ ಆಗುವವರು ಇದರ ಬೇರು ಸಹಿತ ಗಿಡವನ್ನು ಅರೆದು ರಸ
ತೆಗೆದು ದಿನಕ್ಕೊಂದು ಸಲ 1 ವಾರ ಕುಡಿಯಬೇಕು ಅಥವಾ ಕಷಾಯ ಮಾಡಿ ದಿನಕ್ಕೆರಡು ಸಲ ಕುಡಿದರೆ ಅಧಿಕ ರಕ್ತಸ್ರಾವ ನಿಲ್ಲುವುದು.

ಚೇಳು ಕಡಿತ:

ಚೇಳು ಚುಚ್ಚಿದ ಸ್ಥಳ ಬಾವು ಹಾಗು ಅಧಿಕ ನೋವಿನಿಂದ ಕೂಡಿರುತ್ತದೆ. ಕಚ್ಚಿದ ಕೂಡಲೇ ನೋವನ್ನು ಸಹಿಸಲಾಗುವುದಿಲ್ಲ. ಚೇಳು ಕುಟುಕಿದ ಭಾಗಕ್ಕೆ ನಾಚಿಕೆ ಮುಳ್ಳಿನ ಗಿಡವನ್ನು ಅರೆದು ಲೇಪಿಸಿ ಬೇರನ್ನು ಜಗಿದು ನುಂಗುವ ಮೂಲಕ ನೋವು ಮತ್ತು ಬಾವು ಕಡಿಮೆಯಾಗುವುದು.

ಮೂಲವ್ಯಾಧಿ:

ಗುದದ್ವಾರದಿಂದ ಮಲವಿಸರ್ಜಿಸುವಾಗ ಮಾಂಸದ ಅಂಕುರ ಹೊರಬಂದು ನೋವು ಉಂಟಾಗುತ್ತದೆ. ಕೆಲವೊಮ್ಮೆ ರಕ್ತಸ್ರಾವವೂ ಆಗುತ್ತದೆ. ನಾಚಿಕೆ ಮುಳ್ಳನ್ನು ಬೇರು ಸಹಿತ ತುಂಡುಮಾಡಿ ಕಷಾಯ ಮಾಡಿ ಒಂದು ವಾರ ಕುಡಿಯುವ ಮೂಲಕ ರಕ್ತಸ್ರಾವ ಹಾಗು ನೋವು ಕಡಿಮೆಯಾಗುವುದು. ಎಲೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಹಾಲಿನೊಂದಿಗೆ ಸೇರಿಸಿ ಕುಡಿದರೂ ಪ್ರಯೋಜನವಾಗುವುದು.

ಮುಳ್ಳು ನಿವಾರಕ:

ಮುಳ್ಳು ಮಾಂಸದ ಒಳಗೆ ಸೇರಿಕೊಂಡಿರುವಾಗ ನಾಚಿಕೆ ಮುಳ್ಳು ಬೇರು ಸಹಿತ ನಯವಾಗಿ  ಅರೆದು ಸ್ವಲ್ಪ ಬಿಸಿ ಮಾಡಿ ಬಿಸಿ ಇರುವಾಗಲೇ ಮುಳ್ಳು ಸೇರಿಕೊಂಡಿರುವ ಭಾಗಕ್ಕೆ ಹಚ್ಚಿ ಬಟ್ಟೆಯಿಂದ ಸಡಿಲವಾಗಿ ಪಟ್ಟಿಕಟ್ಟಬೇಕು. ಮರುದಿನ ಪಟ್ಟಿ ತೆಗೆದು ಹಚ್ಚಿದ ಲೇಪವನ್ನು ತೆಗೆಯುವಾಗ ಮುಳ್ಳು ಹೊರಬರುವುದು.

ಬೀಜ:

ತುಂಬಾ ಸಮಯದಿಂದ ಬಾಧಿಸುತ್ತಿರುವ ಉರಿಮೂತ್ರ ತೊಂದರೆಯಲ್ಲಿ ಬೀಜವನ್ನು ಅರೆದು ಕುಡಿಯಬೇಕು. ಸ್ತ್ರೀಯರ ಬಂಜೆತನದಲ್ಲಿಯೂ ಇದನ್ನು ಉಪಯೋಗಿಸಿ ಪ್ರಯೋಜನ ಕಂಡುಕೊಳ್ಳಬಹುದು. ಇದರಿಂದ ಸಿಗುವ ಎಣ್ಣೆಯನ್ನು ಮರದ ವಾರ್ನಿಶ್ ಹಾಗು ಪಾಲಿಶ್ ಮಾಡಲು ಉಪಯೋಗಿಸುತ್ತಾರೆ.  

ಬೇದಿ:

ಅಜೀರ್ಣದಿಂದ ಉಂಟಾಗುವ ಬೇದಿ ಅಥವ ರಕ್ತದಿಂದ ಕೂಡಿದ ಮಲ ವಿಸರ್ಜನೆಯಲ್ಲಿ ನಾಚಿಕೆ ಮುಳ್ಳಿನ ಕಷಾಯ ಮಾಡಿ 2-3 ಸಲ ಕುಡಿಯಬಹುದು ಅಥವಾ ಎಲೆಯ ಜ್ಯೂಸ್ 15ml ನಷ್ಟು ಕುಡಿಯುವುದರಿಂದ ಶಮನವಾಗುವುದು.

ತಲೆನೋವು:

ಅತಿಯಾದ ತಲೆ ನೋವು ಅಥವಾ ಮೈಗ್ರೇನ್ ಇರುವಾಗ ನಾಚಿಕೆ ಮುಳ್ಳನ್ನು ನಯವಾಗಿ ಅರೆದು ಹಣೆಗೆ ಹಚ್ಚುವುದರಿಂದ ತಲೆನೋವಿನ ತೀವ್ರತೆಯನ್ನು ಕಡಿಮೆಮಾಡುವುದು.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.