Skip links

ನೆಲಬೇವು

Scientific name : Andrographis paniculata

       ನೆಲಬೇವು ಅಂದರೆ ಎಲ್ಲರಿಗೂ ಬೇಗ ತಿಳಿಯದು. ನಮ್ಮಲ್ಲಿ ಇದಕ್ಕೆ ಕಿರಾತ (ಊರ ಕಿರಾತ) ಎಂದು ಕರೆಯುತ್ತಾರೆ. ಇದು ಕಿರಾತ ಗಿಡದ ಒಂದು ಪ್ರಬೇದ. ಕಿರಾತವೂ ಬಹಳ ಕಹಿ. ಉತ್ತರ ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ನೇಪಾಳದ ಕಿರಾತ ಹೆಚ್ಚ್ಚು ಔಷಧೀಯ ಗುಣ ಹೊಂದಿದೆ. ಸಂಸ್ಕøತದಲ್ಲಿ ನೆಲಬೇವಿಗೆ ಭೂನಿಂಬ ಎನ್ನುತ್ತಾರೆ. ಇದು ಕೈ ಬೇವಿನ ಸಣ್ಣರೂಪ. ಆದರೆ ಕಹಿ ಬೇವಿಗಿಂತಲೂ ಅಧಿಕ ಕಹಿ. ಅಂಗಳದ ಬದಿಯಲ್ಲಿ ಅಥವಾ ಗಾರ್ಡನ್‍ನಲ್ಲಿ  ಬಾರ್ಡರ್ ಪ್ಲಾಂಟ್ ಆಗಿ ನೆಡುತ್ತಾರೆ. ಕತ್ತರಿಸಿದಷ್ಟು ಬಹಳ ಸುಂದರವಾಗಿ ಚಿಗುರೊಡೆಯುತ್ತದೆ. ಬೇಕಾದ ಆಕಾರದಲ್ಲಿ ಗಿಡವನ್ನು ಕತ್ತರಿಸಿ ರೂಪಿಸಿಕೊಳ್ಳಬಹುದು.

ಚೌಕಾಕಾರದ ಕಾಂಡ ರೆಂಬೆಗಳು, ಸ್ವಲ್ಪ ಉದ್ದದ ಎಲೆಗಳು ಕಾಂಡದಲ್ಲಿ ಜೊತೆಯಾಗಿ ಮೂಡಿ ಬರುತ್ತವೆ. ಎಲೆ ಹುಟ್ಟಿದ ಬುಡದಿಂದಲೇ ಹೊಸ ಚಿಗುರು ಬಂದು ಹೂ ಗೊಂಚಲು ಹುಟ್ಟಿಕೊಳ್ಳುತ್ತದೆ. ಬಿಳಿ ಹೂವಿನಲ್ಲಿ ನೇರಳೆ ಬಣ್ಣದ ವಿಶೇಷ ಚಿತ್ತಾರ ಕಂಡುಬರುತ್ತದೆ. ನಂತರ ಕಡ್ಡಿಯಂತಹ ಕೋಡುಗಳು ಮೂಡಿ ಅದರೊಳಗೆ ಸಣ್ಣ ಸಣ್ಣ ಬೀಜಗಳು ಇರುತ್ತವೆ.

ನಮ್ಮ ಗಾರ್ಡನಲ್ಲಿ ಸೌಂದರ್ಯಕ್ಕಾಗಿ ಬೆಳೆದ ಗಿಡ ಜ್ವರವನ್ನು ಕಡಿಮೆ ಮಾಡುತ್ತದೆ ಎಂದರೆ ಆಶ್ಚರ್ಯವಾಗಬಹುದು. ಕೇವಲ ಜ್ವರ ಕಡಿಮೆ ಮಾಡುವುದಲ್ಲದೆ ಹಸಿವು ಉಂಟು ಮಾಡುವುದು. ಜೀರ್ಣಕ್ರಿಯೆ ಚೆನ್ನಾಗಿ ಮಾಡುವುದು, ಯಕೃತ ನ್ನೂ ಉದ್ದೀಪನಗೊಳಿಸುವುದು. ರಕ್ತ ಶುದ್ಧಿ ಮಾಡುವುದು. ಹೊಟ್ಟೆಯಲ್ಲಿ ಇರುವ ಹುಳವನ್ನು ಹೊರಹಾಕುವುದು.

∙ಜ್ವರ:

ಹಲವು ವರ್ಷಗಳ ಹಿಂದೆ  ಜ್ವರ ಕಡಿಮೆ ಮಾಡುವ ಪ್ಯಾರಸಿಟಮಾಲ್ ಎಲ್ಲರ ಕೈಗೆ ಎಟಕುತ್ತಿರಲಿಲ್ಲ. ಆಗ ಇದನ್ನು ಕಷಾಯ ಮಾಡಿ ಕುಡಿದು ಜ್ವರ ಮುಕ್ತರಾಗುತ್ತಿದ್ದರು. ಗಿಡವನ್ನು ತೊಳೆದು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಉಪಯೋಗಿಸುವುದಾದರೆ  2ರಿಂದ3 ಗ್ರಾಂನಷ್ಟು ಬಿಸಿ ನೀರಲ್ಲಿ ಕಲಸಿ 3-4 ಸಲ ಕುಡಿಯಬೇಕು. ಇದರ ರಸ (juice) ಕುಡಿಯುವುದಾದರೆ 5 ರಿಂದ 10l ದಿನಕ್ಕೆ 3 ಸಲ ಒಳ್ಳೆಮೆಣಸು ಪುಡಿ ಕಾಲು ಚಮಚ ಸೇರಿಸಿ ಸೇವಿಸಬೇಕು. ಕಷಾಯ ಮಾಡುವುದಾದರೆ ಒಂದು ಮುಷ್ಠಿಯಷ್ಟು ಗಿಡವನ್ನು ಕತ್ತರಿಸಿ ಕಷಾಯಮಾಡಿ  ಸೋಸಿ 20 ರಿಂದ 40ml ಕಷಾಯಕ್ಕೆ ಕಾಲು ಚಮಚ ಒಳ್ಳೆಮೆಣಸು ಪುಡಿ ಸೇರಿಸಿ  ಕುಡಿಯಬೇಕು. ಇದರಲ್ಲಿಇರುವ Andrographolide ಜ್ವರವನ್ನೂ ಕಡಿಮೆ ಮಾಡುವುದೆಂದು ಸಂಶೋಧನೆಯಲ್ಲಿ ಬೆಳಕು ಕಂಡಿದೆ.

∙ನಿತ್ರಾಣ:

ಜ್ವರ ಬಂದ ನಂತರ ನಿತ್ರಾಣ ಸ್ವಾಭಾವಿಕ. ಅಥವಾ ಇನ್ನಿತರ ಕಾರಣಗಳಿಂದ ನಿತ್ರಾಣವಿದ್ದರೂ ಇದರ ಒಂದು ಮುಷ್ಠಿಯಷ್ಟು ಗಿಡವನ್ನು ಜಜ್ಜಿ ಪಾತ್ರೆಗೆ ಹಾಕಿ, ಕುದಿಯುವ ನೀರು ಹಾಕಿ ಮುಚ್ಚಿಡಬೇಕು. ತಣಿದ ನಂತರ ಸೋಸಿ ಕಲ್ಲು  ಸಕ್ಕರೆ ಸೇರಿಸಿ  ಸೇವಿಸಿದರೆ ನಿತ್ರಾಣ, ಆಯಾಸ ಕಡಿಮೆಯಗುವುದು. ಜ್ವರ ಬಿಟ್ಟ ನಂತರ ಒಂದು ವಾರ ಹೀಗೆ ಕುಡಿಯಬೇಕು. ನಿತ್ರಾಣ ಪರಿಹಾರಕ್ಕಾಗಿ ಒಂದು ತಿಂಗಳು ಸೇವಿಸಬೇಕು.

∙ಯಕೃತ್ ಉತ್ತೇಜಕ:  

ಕೆಲವು ರಾಸಾಯನಿಕ ಯುಕ್ತ ಔಷಧಿ, ಆಹಾರ ಸೇವನೆಯಿಂದ ಯಕೃತ್ (liver) ತೊಂದರೆಗೊಳಗಾಗುವುದು. ಯಕೃತ್ ಕಾರ್ಯಕ್ಷಮತೆ ವೃಧ್ದಿಗೆ ಇದರ ಪುಡಿ ಅಥವಾ ಕಷಾಯ ಮಾಡಿ ಸೇವಿಸಬೇಕು. ಇದರಲ್ಲಿ ಇರುವ Neoandrographolide ಯಕೃತ್ ನ ರಕ್ಷಣೆ ಮಾಡುವುದೆಂದು ಸಂಶೋದಿಸಲ್ಪಟ್ಟಿದೆ.

ಹಸಿವು ಕಡಿಮೆ ಮತ್ತು ಅಜೀರ್ಣ:

ಜನರಿಗೆ ಇಂದಿನ ಕೃತ್ರಿಮ ಆಹಾರ ಸೇವನೆಯಿಂದ ಆಹಾರ ಜೀರ್ಣವಾಗದೆ ಹಸಿವು ಕಡಿಮೆಯಗುವುದು. ಇದರ ರಸ (juce)ಅಥವಾ ಕಷಾಯ ಮಾಡಿ 7-10 ದಿನ ಸೇವಿಸುವುದರಿಂದ ಜೀರ್ಣಕ್ರೀಯೆ ಸರಿಯಗುವುದು.

∙ರಕ್ತಶೋದಕ:  

ರಕ್ತ ದುಷ್ಠಿಯಿಂದ ತುರಿಕೆ, ಕಜ್ಜಿ, ಮೊಡವೆಗಳು ಕಂಡು ಬರುತ್ತದೆ.ಇದರ ಕಷಾಯ ಅಥವಾ ಪುಡಿಯ ಸೇವನೆಯಿಂದ ಪರಿಹಾರವಾಗುವುದು.

ಜಂತು ಹುಳ:

ಇದರ ಪುಡಿಯನ್ನು  2ರಿಂದ 3 ಗ್ರಾಂ ಮೂರು ವಾರ ಸೇವಿಸುವುದರಿಂದ ಜಂತು ಹುಳ(Roundworm) ಬಾದೆ ಕಡಿಮೆಯಾಗುವುದು

∙ಬೆವರು:  

ನಾವು ಅಧಿಕ ಬೆವರುವವರನ್ನು ನೋಡುತ್ತೇವೆ. ಆದರೆ ಬೆವರದೇ ಕಷ್ಟ ಪಡುವವರು ಕೆಲವರಿದ್ದಾರೆ. ಅವರು ಇದರ ಪುಡಿಯನ್ನು ನೀರಲ್ಲಿ ಮಿಶ್ರ ಮಡಿ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ನೆಲಬೇವನ್ನು “ಕಹಿಗಳ ರಾಜ”(king of bitters)ಎನ್ನುತ್ತಾರೆ. ಕಹಿಯನ್ನು ಸೇವಿಸಿದರೆ ಕಿಡ್ನಿ, ಲಿವರಿಗೆ ಹಾನಿಯಾಗುತ್ತದೆ ಎಂಬ ಅಜ್ಞಾನ ಕೆ ಲವರಲ್ಲಿ ಇದೆ. ಸೂಕ್ತ ಪ್ರಮಾಣದಲ್ಲಿ ನಿರ್ಧಿಷ್ಟಸಮಯದವರೆಗೆ ಸೇವಿಸಿದರೆ ಯಾವ ಕೆಟ್ಟ ಪರಿಣಾಮವೂ ಇರುವುದಿಲ್ಲ. ಈ ಅತಿ ಕಹಿ ಇರುವ ಗಿಡದಲ್ಲಿ ಲಿವರ್‍ನಲ್ಲಿರುವ ವಿಷಕಾರಕ ವಸ್ತು ನಿವಾರಿಸುವ ಅಂಶ (Anti liver toxic) ಇದೆ ಎಂದು ಸಂಶೋದನೆಯಲ್ಲಿ ತಿಳಿದುಬಂದಿದೆ.

ಡಾ|| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.