scientific name: Piper longum
ಹಿಪ್ಲಿ ಎಂದು ಕರೆಯುವ ಈ ವನಸ್ಪತಿಗೆ ಮಾಗಧಿ (ಮಗದ ದೇಶದಲ್ಲಿ ಬಳೆಯುವ) ವೈದೇಹಿ (ವಿದೇಶದಲ್ಲಿ ಬೆಳೆಯುವುದು) ಎಂಬ ಹೆಸರೂ ಇದೆ.
ಇದು ಭೂಮಿಯ ಮೇಲೆ ಹರಡಿ ಬೆಳೆಯುತ್ತದೆ ಅಥವಾ ಹತ್ತಿರದ ವೃಕ್ಷವನ್ನು ಆಶ್ರಯಿಸಿ ಬೆಳೆಯುವ ಬಳ್ಳಿ. ಇದರ ಎಲೆ 2-3 ಇಂಚು ಉದ್ದವಾಗಿದ್ದು ಹೃದಯಾಕಾರದಲ್ಲಿ ಇರುತ್ತದೆ. ಕರಿಮೆಣಸಿನ ಎಲೆಯಂತೆ ಕಂಡು ಬರುತ್ತದೆ. ಆದರೆ ಬುಡದಲ್ಲಿ ಎಲೆಗಳು ಆಯಾತಾಕಾರದಲ್ಲಿ ಉದ್ದವಾಗಿ ಎಲೆಗಳ ಬದಿಗಳು ಸ್ವಲ್ಪ ಓರೆ ಕೋರೆಯಾಗಿ ಕಂಡು ಬರುತ್ತದೆ. ಅಂತೋರಿಯಂ ಹೂವಿನೊಂದಿಗಿರುವ ಕೋಡಿನಂತೆ ಎಲೆಯ ಬುಡದಿಂದಲೇ ಪಿಪ್ಪಲಿಯ ಮೃದುವಾದ ಹಣ್ಣಿನ ಕೋಡು ಮೂಡುತ್ತದೆ. ಹೂವು ಬೆಳ್ಳಗಾಗಿದ್ದು ಸುತ್ತಲೂ ಬ್ರಶ್ನಂತಿರುವ ಬಾಚಣಿಗೆಯಂತೆ ಕಂಡುಬರುತ್ತದೆ. ಇದೇ ಹೂವು ಮುಂದೆ ಸಾಸಿವೆ ಆಕಾರದ ಬೀಜಗಳನ್ನು ಹತ್ತಿರ ಹತ್ತಿರ ಪೋಣಿಸಿದಂತೆ ಸುತ್ತಲೂ ದೃಡವಾಗಿ ಸುತ್ತುವರೆದಿರುತ್ತದೆ. ಪ್ರಾರಂಭದಲ್ಲಿ ಹಸಿರು ಬಣ್ಣದಿಂದ ಕಂಡುಬರುವ ಪಿಪ್ಪಲಿ ಬೆಳೆದಾಗ ಹಳದಿ ನಂತರ ಕೆಂಪಾಗಿ ಒಣಗಿದಾಗ ಕಪ್ಪಾಗಿ ಕಂಡುಬರುತ್ತದೆ.
ಊರಲ್ಲಿ ಬೆಳೆಯುವ ಪಿಪ್ಪಲಿ ಕಪ್ಪಾಗಿರದೆ ನಸು ಕೆಂಪು ಬಣ್ಣದಲ್ಲಿದ್ದೂ ಎಷ್ಠು ಒಣಗಿಸಿದರೂ ಒಣಗಿದಂತೆ ಕಂಡುಬರುವುದಿಲ್ಲ ಆದರೆ ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ನೇಪಾಳ, ಮಲೇಶಿಯಾ, ಶ್ರಿಲಂಕಾದ ಪಿಪ್ಪಲಿ ಗುಣಮಟ್ಟದಲ್ಲಿ ಉತ್ತಮವಾಗಿರುತ್ತದೆ, ಕಪ್ಪಾಗಿರುತ್ತದೆ. ಸಣ್ಣ ಮಕ್ಕಳಿಗೆ ಒಂದೊಂದು ಸುತ್ತು ಕಲ್ಲಿನಲ್ಲಿ ಅರೆದು ಕೊಡುವ ಅಂಗಡಿ ಮದ್ದಿನಲ್ಲಿ ಶುಂಠಿ, ಅಗ್ರದಕಾಯಿ, ಜಾಯಿ ಕಾಯಿಯೊಂದಿಗೆ ಪಿಪ್ಪಲಿಯನ್ನು ಅರೆದು ನಾಲಗೆಗೆ ನೆಕ್ಕಿಸುತ್ತಾರೆ. ಇದರಿಂದ ಮಕ್ಕಳಿಗೆ ಆಗಾಗ ಬರುವ ಜ್ವರ ಕಫದ ಬಾಧೆಗಳು ಕಡಿಮೆಯಾಗುತ್ತದೆ.
ರುಚಿಯಲ್ಲಿ ತುಂಬಾ ಖಾರ ಇದ್ದರೂ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಶರೀರಕ್ಕೆ ಹೆಚ್ಚು ಉಷ್ಣವನ್ನು ಉಂಟುಮಾಡದ ಔಷಧಿ. ಇದರ ಸೇವನೆಯಿಂದ ಕೆಮ್ಮು, ಕಫ, ಕಡಿಮೆ ಆಗುವುದು. ಜೀರ್ಣಕ್ರಿಯೆ ವೃದ್ಧಿಸುವುದು. ಬುದ್ಧಿ ವರ್ಧನೆ ಮಾಡುವುದು, ಬೊಜ್ಜು ಕರಗಿಸುವುದು, ಗಂಟು ನೋವಿನಂತಹ ವಾತ ರೋಗವನ್ನು ಕಡಿಮೆ ಮಾಡುವುದು.
∙ನಿಶ್ಯಕ್ತಿ:
ಎರಡು ಗ್ರಾಂ ಪಿಪ್ಪಲಿ ಪುಡಿಯನ್ನು ಹಾಲು, ಸಕ್ಕರೆ, ಜೇನು, ತುಪ್ಪ ಸೇರಿಸಿ ಸೇವನೆ ಮಾಡಿದರೆ ಜ್ವರವನ್ನು ಕಡಿಮೆ ಮಾಡಿ ಶರೀರಕ್ಕೆ ಶಕ್ತಿ ತುಂಬುವುದು.
∙ನೋವು:
ಪಿಪ್ಪಲಿ ಪುಡಿಯನ್ನು ಗೋಮೂತ್ರ ಅಥವಾ ಗೋಮೂತ್ರ ಅರ್ಕ, ಹರಳೆಣ್ಣೆಯೊಂದಿಗೆ ಸೇವಿಸಿದರೆ ಸೊಂಟದಿಂದ ಕಾಲಿನವರೆಗೆ ಎಳೆಯುವ ಗೃದ್ರಸಿವಾತದಂತಹ (sciatica) ನೋವನ್ನು ಕಡಿಮೆ ಮಾಡುವುದು.
∙ಮೇದ್ಯ:
ಪಿಪ್ಪಲಿ ಚೂರ್ಣವನ್ನು ತಿಮರೆ ಪುಡಿಯೊಂದಿಗೆ ಸೇರಿಸಿ ಪ್ರತಿ ದಿನ ಸೇವನೆಯಿಂದ ನೆನಪಿನ ಶಕಿ ್ತವೃದ್ದಿಸುವುದರೊಂದಿಗೆ ಮನಸ್ಸನ್ನು ಉಲ್ಲಾಸದಿಂದಿರಲು ಸಹಾಯ ಮಾಡುವುದು.
∙ಬೊಜ್ಜು:
ಸ್ಥೂಲ ಶರೀರ ಇರುವವರು ತೂಕ ಕಡಿಮೆ ಮಾಡಲು ಪಿಪ್ಪಲಿ ಪುಡಿಯನ್ನು ಜೇನಿನೊಂದಿಗೆ ದಿನಕ್ಕೆ ಎರಡು ಸಲ ಎರಡು ಅಥವಾ ಮೂರು ತಿಂಗಳು ಸೇವಿಸಬೇಕು.
∙ಕೆಮ್ಮು ಕಫ:
ಜೇನಿನೊಂದಿಗೆ ಒಂದು ಗ್ರಾಂನಷ್ಟು ಪುಡಿಯನ್ನು ಸೇರಿಸಿ ದಿನಕ್ಕೆ ಮೂರು ಸಲ 5 ರಿಂದ 7 ದಿನ ಸೇವಿಸಬೇಕು. ಅಜೀರ್ಣ ಹಸಿವು ಕಡಿಮೆ ಇರುವವರು ಪಿಪ್ಪಲಿ ಪುಡಿಯನ್ನು ಮಜ್ಜಿಗೆಯೊಂದಿಗೆ ಕುಡಿಯಬೇಕು.
ಪಿಪ್ಪಲಿ, ಶುಂಠಿ, ಒಳ್ಳೆಮೆಣಸು ಮೂರು ಸೇರಿಸಿದರೆ ‘ತ್ರಿಕಟು’ (ಮೂರು ಖಾರವಿರುವ ಔಷಧಿಗಳು) ಎಂದು ಕರೆಯುತ್ತಾರೆ. ಹೆಚ್ಚಿನ ಆರ್ಯುವೇದ ತಯಾರಿಕೆಗಳಲ್ಲಿ ಪ್ರಮುಖವಾಗಿ ಉಪಯೋಗಿಸುವ ಸಂಯೋಜಿಸಿದ ಔಷದಿ ಇದಾಗಿದೆ.
ಡಾ|| ಹರಿಕೃಷ್ಣ ಪಾಣಾಜೆ