Skip links

ಪಾರಿಜಾತ

Nyctanthes arbor – tristis

ಹರಿಸಿಂಗಾರ, ಶೇಫಾಲಿಕ ಎಂಬ ಹೆಸರಿದ್ದರೂ ಇದರ ಅನ್ವರ್ಥ ನಾಮವಾಗಿ “ರಾತ್ರಿ ಮಲ್ಲಿಗೆ” ಹಾಗೂ ರಾತ್ರಿ ನಗುವನ್ನು ರೂಪಿಸುವ ಅರ್ಥದಲ್ಲಿ “ರಜನಿ ಹಾಸ” ಎಂಬುದಾಗಿ ಹೇಳುತ್ತಾರೆ. ರಾತ್ರಿ ಅರಳಿ ಬೆಳ್ಳಗ್ಗೆ ನೆಲಕ್ಕೆ ಬೀಳುತ್ತದೆ. ದುಂಡು ಮಲ್ಲಿಗೆಯಂತೆ ಬಿಳಿಯಾದ ಹೂಗಳು, ತೊಟ್ಟು ಕೇಸರಿ ವರ್ಣದಿಂದ ಕೂಡಿರುತ್ತದೆ. ಮನಸ್ಸಿಗೆ ಖುಷಿ ಕೊಡುವ ಸೌಮ್ಯ ಪರಿಮಳ ಸೂಸುತ್ತದೆ. ಪಾರಿಜಾತದ ಮರ 20ರಿಂದ 25 ಅಡಿ ಎತ್ತರ ಬೆಳೆಯುತ್ತದೆ. ದಾಸವಾಳದ ಎಲೆಯಂತಿರುವ ಎಲೆಗಳು 4ಸೆ.ಮೀ ಉದ್ದ ಹಾಗೂ 2 1/2ಸೆ.ಮೀ ಅಗಲವಾಗಿ ಇರುತ್ತದೆ. ಮೇಲ್ಭಾಗ ಮುಟ್ಟುವಾಗ ದೊರಗಾಗಿದ್ದರೆ ಅಡಿಭಾಗ ಮೃದುವಾಗಿ ಸೂಕ್ಷ್ಮ ರೋಮಮಯವಾಗಿರುತ್ತದೆ. ಎಲೆಯ ಬದಿಗಳು ಅಲಗಿನಂತೆ ಇರುತ್ತದೆ. ಭಾರತದ ಎಲ್ಲಾ ಕಡೆ ಕಂಡು ಬರುವ ಈ ವೃಕ್ಷ ಹಿಮಾಲಯ ತಪ್ಪ¯ಲ್ಲಿ ಅಧಿಕ ಕಂಡುಬರುತ್ತದೆ.

 ಇದು ದೇವಲೋಕದ ಪುಷ್ಪ. ಭೂಲೋಕಕ್ಕೆ ಬಂದುದಕ್ಕೆ ಕಥೆ ಇದೆ. ಸಮುದ್ರ ಮಥನ ಕಾಲದಲ್ಲಿ ಜನಿಸಿದ ದೈವಿಕ ಪುಷ್ಪವೃಕ್ಷ. ಅದನ್ನು ದೇವೇಂದ್ರ ಕೊಂಡು ಹೋಗಿ ದೇವಲೋಕದಲ್ಲಿ ನೆಟ್ಟನು. ದೇವಲೋಕದಲ್ಲಿ ನರಕಾಸುರನನ್ನು ಕೊಂದ ನಂತರ ಕೃಷ್ಣನ ಸತಿ ಸತ್ಯಭಾಮಗೆ ಪಾರಿಜಾತ ವೃಕ್ಷದ ಮೇಲೆ ಆಸೆ ಆಯಿತು. ಇಂದ್ರ ಕೊಡಲೊಪ್ಪಲಿಲ್ಲ. ಆದರೆ ಕೃಷ್ಣ ಅದನ್ನು ಕಿತ್ತು ತಂದು ಭೂಲೋಕದಲ್ಲಿ ಸತ್ಯಭಾಮೆಯ ಹೂ ತೋಟದಲ್ಲಿ ನೆಟ್ಟನು. ಹೀಗೆ ಪಾರಿಜಾತದ ಆಗಮನ ಭೂಲೋಕಕ್ಕೆ ಆಯಿತು.

ತೋಟದಲ್ಲಿ ಪರಿಮಳಯುಕ್ತ ಅಲಂಕಾರಿಕ ಮರವಾದರೂ ಔಷಧಿಯಾಗಿ ಜ್ವರ, ಚರ್ಮವ್ಯಾಧಿ, ಕ್ರಿಮಿಬಾಧೆ ವಾತರೋಗ, ಮಲಬದ್ಧತೆಯಲ್ಲಿ ಉಪಯುಕ್ತವಾಗಿದೆ.

ಜ್ವರ:

ವಿಶೇಷವಾಗಿ ತುಂಬಾ ಸಮಯದಿಂದ ನಿಧಾನಗತಿಯಲ್ಲಿ ಆಗಾಗ ಜ್ವರ ಬರುತ್ತಿದ್ದರೆ 7-8 ಎಲೆಗಳನ್ನು ತೊಳೆದು ರಸ ತೆಗೆದು ಶುಂಠಿ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಮೂರು ಸಲ ಒಂದು ವಾರ ಸೇವಿಸಬೇಕು. ಕೆಲವರಿಗೆ ವರ್ಷದಲ್ಲಿ 4-5 ಸಲ ಮಲೇರಿಯಾ ಅಟ್ಯಾಕ್ ಆಗುವುದಿದೆ. ಅಂತವರೂ ಮಲೇರಿಯಾ ಚಿಕಿತ್ಸೆಯೊಂದಿಗೆ ಇದನ್ನು ಸೇವಿಸಿದರೆ ಜ್ವರ ಪುನರಾವರ್ತಿ ಆಗುವುದಿಲ್ಲ. ಮಲೇರಿಯಾ ಆಗಾಗ ಬಂದು ಯಕೃತ್ಮ ತ್ತು ಪ್ಲೀಹಾ ವೃದ್ಧಿ ಆಗುವುದೂ ಇದೆ. ಅಂತಹ ಸಂದರ್ಭದಲ್ಲಿಯೂ ಇದು ಪ್ರಯೋಜನಕಾರಿಯಾಗಿದೆ.

ಕ್ರಿಮಿ ಹರ:

ಇದರ ಎಲೆಯ ರಸ ತೆಗೆದು ಕಲ್ಲು ಸಕ್ಕರೆ ಸೇರಿಸಿ ಮಕ್ಕಳಿಗೆ ಕುಡಿಸಿದರೆ(1-2 ಎಲೆಯ ರಸ) ಇದರಲ್ಲಿ ಇರುವ “ಸೆಂಟೋನಿನ್” ಮಕ್ಕಳ ಕ್ರಿಮಿಬಾಧೆ ಕಡಿಮೆ ಮಾಡುವುದು ಹಾಗೂ ಮಲಬದ್ಧತೆ ನಿವಾರಿಸುವುದು. ಎಲೆಯನ್ನು ನೀರಲ್ಲಿ ತೊಳೆದು ಎಲೆಯಲ್ಲಿ ಇರುವ ನೀರಿನ ಅಂಶವನ್ನು ಶುದ್ಧ ಬಟ್ಟೆಯಲ್ಲಿ ಒರಸಿ ತೆಗೆದು ರಸ ತೆಗೆದು ಉಪಯೋಗಿಸುವಷ್ಟು ಶುಚಿತ್ವವನ್ನು ಪಾಲಿಸಬೇಕು.

ಕೆಮ್ಮು ದಮ್ಮು:

ಕೆಲವು ವಿಧದ ಕೆಮ್ಮುಗಳಿಗೆ ಇದರ ಕಾಂಡದ ತೊಗಟೆಯನ್ನು ಒಣಗಿಸಿ ಪುಡಿ ಮಾಡಿ  1-2 ಗ್ರಾಂ ಪುಡಿಯನ್ನು ವೀಳ್ಯದೆಲೆಯೊಂದಿಗೆ ಜಗಿದು ನುಂಗಿದರೆ ಕಡಿಮೆಯಾಗುವುದು.  

ವಾತವ್ಯಾಧಿ:

ಸೊಂಟದಿಂದ ಕಾಲಿನವರೆಗೆ ಸೆಳೆತ ಉಂಟಾಗಿ ತೀವ್ರ ನೋವು ಅನುಭವಿಸುವ ಸಯಾಟಿಕಾ ಎಂಬ ತೊಂದರೆ ಇರುವಾಗ 8-10 ಎಲೆಯನ್ನು ಮಂದಾಗ್ನಿಯಲ್ಲಿ ಕುದಿಸಿ ಸೋಸಿ ದಿನಕ್ಕೆ ಎರಡು ಸಲ ಕುಡಿಯುವುದರಿಂದ ನೋವು ಕಡಿಮೆಯಾಗುವುದು.

ರಕ್ತ ಹೀನತೆ:

ಎಲೆ ರಸವನ್ನು ಲೋಹಭಸ್ಮದೊಂದಿಗೆ ಸೇವಿಸುವುದರಿಂದ ರಕ್ತವೃಧ್ಧಿ ಮಾಡುವುದು. ಕೂದಲು ಉದುರುವುದು: ಅಲ್ಲಲ್ಲಿ ವೃತ್ತಾಕಾರದಲ್ಲಿ ಕೂದಲು ಉದುರುತ್ತಾ ಕ್ರಮೇಣ ಅಗಲವಾಗುತ್ತಾ ಹೋಗುತ್ತಿದ್ದರೆ ಇದರ ಬೀಜವನ್ನು ನೀರಲ್ಲಿ ಅರೆದು ಕೂದಲು ಹೋದ ಭಾಗಕ್ಕೆ ಹಚ್ಚುವುದರಿಂದ ಕೂದಲು ನಿಧಾನವಾಗಿ ಹುಟ್ಟುವುದು.

ಕೆಲವು ಕ್ರಿಮಿಗಳಿಂದ ಚರ್ಮದ ಮೇಲೆ ತುರಿಕೆ ಅಥವಾ ತುರಿಕೆಯಿಂದ ಕೂಡಿದ ಕಪ್ಪಾದ ಚರ್ಮದ ಭಾಗಕ್ಕೆ ಇದರ ತೋಗಟೆಯನ್ನು ನೀರಲ್ಲಿ ಅರೆದು ಹಚ್ಚುವುದರಿಂದ ಕಡಿಮೆಯಾಗುವುದು.

ಪಾರಿಜಾತದ ಹೂವು ಅದರ ಪರಿಮಳದ ಬಗ್ಗೆ ಖುಷಿ ಪಡುವವರು ಅದರ ಔಷಧ ಗುಣ ತಿಳಿದರೆ ಶ್ರೀ ಕೃಷ್ಣ ದೇವಲೋಕದಿಂದ ತಂದಂತೆ ನರ್ಸರಿಯಿಂದ ತಂದು ತಮ್ಮ ಹೂ ತೋಟದಲ್ಲಿ ನೆಟ್ಟು ಬೆಳೆಸಿಯಾರು.  

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.