Skip links

ಬಾಳೆ

Scientific Name: ಕದಳಿ = Musa paradisiaca

ಬಾಳೆಯಲ್ಲಿ ಕದಳಿ, ನೇಂದ್ರ, ಮೈಸೂರು, ಗಾಳಿ, ಬೂದು ಎಂಬ ಹಲವಾರು ವಿಧಗಳಿದ್ದರೂ ಔಷಧಿಗುಣ ಅಧಿಕ ಇರುವುದು ಕದಳಿಬಾಳೆ ಹಣ್ಣಿನಲ್ಲಿ. ಶುಭ ಸಂದರ್ಭಗಳಲ್ಲಿ ತೋರಣ ಕಟ್ಟಲು, ದೇವದೈವಗಳ ಆರಾಧನಾ ಸಮಯದಲ್ಲಿ ಬಾಳೆ ಎಲೆ, ಬಾಳೆ ಹಣ್ಣು ಬೇಕೇ ಬೇಕು. ಬಾಳೆ ಕಾಂಡದಿAದ ಮಾಡಿದ ಹಗ್ಗ ಹೂವಿನ ಮಾಲೆಯೊಂದಿಗೆ ದೇವರ ಶಿರವನ್ನು ಏರುವುದು. ದೇವರ ಪಂಚಾಮೃತಕ್ಕೂ, ಸೇಮಿಗೆ ರಸಾಯನಕ್ಕೂ ಬಾಳೆ ಹಣ್ಣು ಅಗತ್ಯ. ಬಾಳೆಯ ಸರ್ವಾಂಗ ಜನರ ಜೀವನದಲ್ಲಿ ದಿನ ನಿತ್ಯ ಉಪಯೋಗಕ್ಕೆ ಬರುತ್ತದೆ. ಆಹಾರ ರೂಪದಲ್ಲಿ ಹಾಗೂ ಔಷಧ ರೂಪದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ಬಾಳೆ ಗಡ್ಡೆಯ ಬೇರಿನಿಂದ ಪ್ರಾರಂಭಿಸಿ ಅದರ ಗಡ್ಡೆ, ದಿಂಡು, ಹೊರಗಿನ ಸಿಪ್ಪೆ, ಕಾಯಿ, ಹಣ್ಣು, ಹೂ (ಕೂಂಬೆ) ಎಲೆ ಹಸಿ ಹಾಗು ಒಣಗಿದ್ದು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ ಎಂದರೆ ಆಶ್ರ‍್ಯವಾಗಬಹುದು. ಗಡ್ಡೆಯಿಂದ ಬೆಳೆದು ಗೊನೆ ಹಾಕಿ ಹಣ್ಣು ಕೊಟ್ಟು ಕೊನೆಗೆ ಸತ್ತು ಹೋಗುವ ವಿಶೇಷ ಸಸ್ಯ.

ಬಾಳೆ ಹಣ್ಣು:

ಕ್ಷೀಣ ಶರೀರ ಇರುವವರು ತೂಕ ಜಾಸ್ತಿ ಮಾಡಲು ಪ್ರತಿದಿನ ೩-೪ ಬಾಳೆ ಹಣ್ಣು ಸೇವಿಸಬೇಕು.
ಮಲಬದ್ಧತೆ ಇರುವವರಿಗೂ ಸಹಕಾರಿಯಾಗಿದೆ. ಕದಳಿ ರಸಾಯನ ಎಂಬ ಲೇಹವನ್ನು ತಯಾರಿಸಲಾಗುತ್ತದೆ.ಇದರ ಸೇವನೆಯಿಂದ ಶರೀರಪುಷ್ಠಿ ಅಲ್ಲದೆ ಸ್ತ್ರೀಯರ ಋತು ಸಂಬಂದಿ ತೊಂದರೆಗಳು ನಿವಾರಣೆಯಾಗುತ್ತದೆ.

ಬಾಳೆ ಹಣ್ಣಿನ ಸಿಪ್ಪೆ:

ಚೆನ್ನಾಗಿ ಹಣ್ಣಾದ ಕದಳಿ ಬಾಳೆಹಣ್ಣಿನ ಸಿಪ್ಪೆ ೧೦ ಗ್ರಾಂ ನಷ್ಟು ಹಾಗೂ ಒಂದು ಗ್ರಾಂ ಓಮ ಹಾಗೂ ನೀರು ಸೇರಿಸಿ ಮಿಕ್ಸಿಯಲ್ಲಿ ಅರೆದು ಬೆಳಗ್ಗೆ ಖಾಲಿ ಹೊಟ್ಟೆಗೆ ೨ ಅಥವಾ ೩ ವಾರ ಸೇವಿಸಿದರೆ ಹೊಟ್ಟೆ ಉರಿ ಕಡಿಮೆ ಮಾಡುವುದು.

ಕೂಂಬೆ:

ಪಲ್ಯಕ್ಕೆ ಉತ್ತಮ. ಅತ್ಯಧಿಕ ನಾರಿನ ಅಂಶ ಇರುವ ತರಕಾರಿ. ಇದರ ಸೇವನೆಯಿಂದ ಜೀರ್ಣಾಂಗ ವಿಶೇಷವಾಗಿ ಕರುಳು ಕ್ಲೀನ್ ಆಗುವುದು. ಕ್ರೀಮ್‌ನಂತಹ ಆಹಾರ ಸೇವನೆಯಿಂದ ಕ್ಯಾನ್ಸರ್ನಂ ತಹ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದರೆ ಕೂಂಬೆ ಪಲ್ಯದಿಂದ ಕರುಳಿನ ಕ್ಯಾನ್ಸರನ್ನು ತಡೆಗಟ್ಟಬಹುದು.ಸ್ತ್ರೀಯರಲ್ಲಿ ಮುಟ್ಟಿನ ಅತಿಸ್ರಾವ ಇದ್ದರೆ ಕೂಂಬೆಯನ್ನು ಬಾಳೆ ಎಲೆಯಲ್ಲಿ ಸುತ್ತಿ ಕೆಂಡದಲ್ಲಿ ಸ್ವಲ್ಪ ಹೊತ್ತು ಇರಿಸಿ ನಂತರ ಜಜ್ಜಿ ೩೦ಮಿಲಿಯಷ್ಟು ರಸ ಸಂಗ್ರಹಿಸಿ ಮೊಸರಿನೊಂದಿಗೆ ೪-೫ ದಿನ ಸೇವಿಸಿದರೆ ಕಡಿಮೆಯಾಗುವುದು.

ಎಲೆ:

ವಿಕರಣ ಸೂಸುವ ವಸ್ತುಗಳನ್ನು ಬಾಳೆ ಎಲೆಯಲ್ಲಿ ಕಟ್ಟಿದರೆ ವಿಕರಣದ ಬಾಧೆ ಇರದು. ಇದರ ಬಗ್ಗೆ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್, ಮುಂಬೈ ಒಂದು ಲೇಖನವನ್ನು ಪ್ರಕಟಿಸಿತ್ತು. ನಾವು ಊಟಮಾಡುವಾಗ ಬಾಳೆ ಎಲೆಗೆ ಬಡಿಸಿದ ಬಿಸಿ ಅನ್ನ, ಸಾರು, ಸಾಂಬಾರು ಎಲೆಯೊಂದಿಗೆ ಸೇರಿದಾಗ ಉತ್ತಮ ಪರಿಮಳ ಅನುಭವಿಸುತ್ತೇವೆ. ಆದರೆ ಪ್ಲಾಸ್ಟಿಕ್ ಪ್ಲೇಟ್‌ನಲ್ಲಿ ಬಿಸಿ ಊಟ ಮಾಡಿದರೆ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಉತ್ಪತ್ತಿಯಾಗುತ್ತದೆ. ಬಾಳೆ ಎಲೆಯಲ್ಲಿ ಅಷ್ಟಮಿಗೆ ಮಾಡಿದ ಕೊಟ್ಟಿಗೆ ಚೌತಿಯವರೆಗೆ ಹಾಳಾಗದೆ ಉಳಿಯುತ್ತದೆ. ಯಾವುದೇ ಪ್ರಿಸರ್‌ವೇಟಿವ್ ಹಾಕದೆ ಉಳಿಯ ಬೇಕಾದರೆ ಅದರಲ್ಲೊಂದು ನೈಸರ್ಗಿಕ ಶಕ್ತಿ ಖಂಡಿತಾ ಇದೆ.

ಗಡ್ಡೆ:

ಬಾಳೆಯ ಗಡ್ಡೆಯನ್ನು ತುಂಡುಮಾಡಿ ಅರೆದು ರಸ ತೆಗೆದು ೧-೨ ಲೀಟರ್ ಕುಡಿಸಿದರೆ ವಿಷ ಸೇವಿಸಿದವರ ವಿಷದ ಪರಿಣಾಮ ಕಡಿಮೆಯಾಗುವುದು. ಹೊಟ್ಟೆಯ ಹುಳ ಹೊರ ಹಾಕಲು ಗಡ್ಡೆಯ ೧೦೦ಮಿಲಿ ರಸಕ್ಕೆ ಒಂದು ಚಮಚ ಅವಿಪತ್ತಿಕರ ಚೂರ್ಣ ಸೇರಿಸಿ ಮೂರು ದಿನ ಕುಡಿಯಬೇಕು

ಬಾಳೆದಿಂಡು:

ಅಧಿಕ ನಾರಿನಿಂದ (fibre) ಕೂಡಿದೆ. ಉಪ್ಪಿನಕಾಯಿ, ಪಲ್ಯಗಳನ್ನು ಮಾಡಿದರೆ ಕೂಂಬೆಯಂತೆ ಕರುಳನ್ನು ಶುದ್ಧ
ಮಾಡುವುದು. ಜೀರ್ಣಕ್ರಿಯೆ ವೃದ್ಧಿಸುವುದು. ಸ್ತ್ರೀಯರ ಅಧಿಕ ಮುಟ್ಟಿನ ಸ್ರಾವದಲ್ಲಿ ಇದರ ೧೦೦ಮಿಲಿ ರಸಕ್ಕೆ ಕಪ್ಪು ಬೆಲ್ಲ ಸೇರಿಸಿ ದಿನಕ್ಕೆ ೨ ಸಲ ೧ ವಾರ ಸೇವಿಸಿದರೆ ಪ್ರಯೋಜನವಾಗುವುದು. ಅಜೀರ್ಣದಿಂದ ಭೇದಿ ಆಗುವುದಿದ್ದರೂ ದಿಂಡಿನ ರಸವನ್ನು ಮಜ್ಜಿಗೆಯೊಂದಿಗೆ ಕುಡಿಯುವುದರಿಂದ ಗುಣವಾಗುವುದು. ಮೂತ್ರ ಕಲ್ಲು, ಉರಿಮೂತ್ರದಲ್ಲಿ ಇದರ ಜ್ಯೂಸ್‌ಗೆ ೧ ಚಮಚ ನೆಗ್ಗಿನ ಮುಳ್ಳು ಚೂರ್ಣ ಸೇರಿಸಿ ಕುಡಿಯಬೇಕು. ಕರುಳಿನ ಹುಣ್ಣು ಇರುವವರೂ ಇದರ ರಸವನ್ನು ಖಾಲಿ ಹೊಟ್ಟೆಗೆ ಒಂದು ತಿಂಗಳು ಕುಡಿಯುವುದರಿಂದ ಪ್ರಯೋಜನವಾಗುವುದು. ಇದರಲ್ಲಿ ಇರುವ ಕ್ಷಾರದ ಅಂಶ ಔಷಧಿಯಾಗಿ ಪರಿಣಾಮ ಬೀರುವುದು. ಗೊನೆ ಹಾಕಿದ ಬಾಳೆಯನ್ನು ತುಂಡು ಮಾಡಿ ಕಾಂಡದಲ್ಲಿ ಸ್ವಲ್ಪ ಗುಳಿ ಮಾಡಿದರೆ ಅದರಲ್ಲಿ ಸಂಗ್ರಹವಾಗುವ ನೀರು ಕ್ಷಾರದ ಅಂಶವನ್ನು ಹೊಂದಿರುತ್ತದೆ. ಇದು ಮೂತ್ರ ಉರಿ, ಮೂತ್ರ ಕಲ್ಲು ನಿವಾರಣೆಗೆ ಸಹಕಾರಿಯಾಗಿದೆ. ಸಾಂಬಾರಿಗೆ ಉಪ್ಪು ಜಾಸ್ತಿಯಾದರೆ ಅದರಲ್ಲಿ ಒಂದು ತುಂಡು ಬಾಳೆದಿಂಡು ಮುಳುಗಿಸಿ ಇಟ್ಟರೆ ಸ್ವಲ್ಪ ಹೊತ್ತಾದಾಗ ಹೆಚ್ಚಾದ ಉಪ್ಪಿನ ಅಂಶವನ್ನು ಹೀರಿಕೊಂಡು ಸಾಂಬಾರು ರುಚಿಯಾಗುವುದು.

ಡಾ| ಹರಿಕೃಷ್ಣ ಪಾಣಾಜೆ


Leave a comment

This website uses cookies to improve your web experience.