Scientific Name: Jasminum grandiflorum
ಮನಸ್ಸಿಗೆ ಆಹ್ಲಾದತೆ ನೀಡುವ ಸುಗಂಧ ಭರಿತ ಹೂ. ಸತ್ಯನಾರಾಯಣ ಪೂಜೆಯಲ್ಲಿ ಹಲವು ಹೂಗಳ ಹೆಸರು ಹೇಳಿ ದೇವರಿಗೆ ಸಮರ್ಪಣೆ ಮಾಡುತ್ತೇವೆ. ಅದರಲ್ಲಿ ಜಾಜಿ ಮಲ್ಲಿಗೆ ಹೂವು ಸೇರಿದೆ. ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಕಡು ಪಚ್ಚೆ ಎಲೆಗಳು. ಗಿಡದ ಎಲ್ಲಾ ಬದಿಗಳಿಂದಲೂ ಶಾಖೆಗಳು ಹುಟ್ಟಿಕೊಂಡು ದಟ್ಟವಾಗಿ ಬೆಳೆಯುತ್ತದೆ.ಶಾಖೆಯ ತುದಿಯಲ್ಲಿ ಗೊಂಚಲಾಗಿ ಹೂ ಕಂಡುಬರುತ್ತದೆ. ಬಿಳಿ ವರ್ಣದ ಬಾಹ್ಯವಾಗಿ ನಸು ಗುಲಾಬಿ ವರ್ಣವನ್ನು ಹೊಂದಿ ಪರಿಮಳಯುಕ್ತ ಹೂ ಕಂಡುಬರುತ್ತದೆ. ಜಾಜಿಗೆ ಸುಮನ, ಮಾಲತಿ, ಹೃದ್ಯಸಂಧೀ ಎಂಬ ಹೆಸರೂ ಇದೆ.
ಇದನ್ನು ಮೈಕೈನೋವು, ಬಾಯಿಹುಣ್ಣು, ಚರ್ಮದ ಹುಣ್ಣುಗಳನ್ನು ಗುಣಮಾಡಲು, ಚರ್ಮದ ಕಾಂತಿವೃದ್ಧಿಗಾಗಿ ಉಪಯೋಗಿಸಲಾಗುತ್ತದೆ. ಪರಿಮಳ ಆಸ್ವಾದಿಸಿ ತಲೆಗೆ ಮುಡಿದು ಸುಖ ಕಾಣುವ ಜಾಜಿಯಲ್ಲಿ ವಿಶೇಷ ಔಷಧಿ ಗುಣಗಳ ಬಗ್ಗೆ ತಿಳಿದರೆ ಆಶ್ರ್ಯವಾಗಬಹುದು. ಔಷಧಿ ಅಲ್ಲದ ಗಿಡಮೂಲಿಕೆಯೇ ಇಲ್ಲ.
ಹೂ:
ಅದರ ಪರಿಮಳವೇ ಮನಸ್ಸನ್ನು ಅಲರ್ಟ್ ಮಾಡುತ್ತದೆ. ಹೂವನ್ನು ಚೆನ್ನಾಗಿ ತೊಳೆದು ನೀರಿನ ಪಸೆ ತೆಗೆದು ರಸವನ್ನು ಸಂಗ್ರಹಿಸಿ ಸೋಸಿ ಕಣ್ಣಿಗೆ ಬಿಡುವುದರಿಂದ ಕೆಂಗಣ್ಣು ಕಡಿಮೆಯಾಗುತ್ತದೆ. ಹೂವು ಮತ್ತು ಜಾಜಿ ಬೇರನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚುವುದರಿಂದ ತಲೆನೋವು, ತಲೆ ತಿರುಗುವುದು ಕಡಿಮೆಯಾಗುವುದು. ಮುಟ್ಟುಸ್ರಾವ ಕಡಿಮೆ ಇರುವವರು ಹೂವಿನ ಜ್ಯೂಸ್ ಮಾಡಿ ಮೂರು ವಾರ ಸೇವಿಸಬೇಕು. ೧೬ ನೇ ಶತಮಾನದಲ್ಲಿ ಯುರೋಪಿಗೆ ಸುಗಂಧ ದ್ರವ್ಯವಾಗಿ ಹೂವಿನ ಸತ್ವ ಪರಿಚಯಿಸಲ್ಪಟ್ಟಿದೆ. ಸೋಪ್, ಸುಗಂಧ ದ್ರವ್ಯ, ಸೌಂರ್ಯ ಪ್ರಸಾದನಕಗಳಲ್ಲಿ ಉಪಯೋಗಿಸಲ್ಪಡುತ್ತದೆ.
ಎಲೆ:
ಚಿಕಿತ್ಸೆಯಲ್ಲಿ ಎಲೆ ಪ್ರಮುಖ ಪಾತ್ರವಹಿಸುತ್ತದೆ. ಬಾಯಿಹುಣ್ಣು, ವಸಡು ಸಿಡಿತ, ವಸಡು ಹುಣ್ಣುಗಳಿರುವಾಗ ಎಲೆಯನ್ನು ಜಗಿದು ೧೦-೧೫ ನಿಮಿಷ ಬಾಯಲ್ಲಿ ಇರಿಸಿ ಉಗುಳಬೇಕು. ಚರ್ಮದ ತುರಿಕೆಯಲ್ಲಿ ಎಲೆಯನ್ನು ಅರೆದು ಹಚ್ಚಬಹುದು.ಬೆರಳಿನ ಎಡೆಗಳಲ್ಲಿ ಕಂಡುಬರುವ ನಂಜು ಹುಣ್ಣಿಗೆ ಎಲೆಯನ್ನು ಅರೆದು ಹಚ್ಚಬೇಕು. ಕಿವಿನೋವು, ಕಿವಿಸೋರುವಿಕೆಯಲ್ಲಿ ಎಲೆಯ ರಸವನ್ನು ಹಾಕಿ ತಯಾರಿಸಿದ ತೈಲವನ್ನು ಉಪಯೋಗಿಸುವುದರಿಂದ ಪ್ರಯೋಜನವಾಗುವುದು. ಕಾಲಿನಲ್ಲಿ ಕಂಡುಬರುವ ಆಣಿ ತುಂಬಾ ನೋವನ್ನು ಉಂಟುಮಾಡುತ್ತದೆ. ನೀರು ಸೇರಿಸದೇ ತೆಗೆದ ರಸವನ್ನು ಕಾಲಿನ ಆಣಿ(ಛಿoಡಿಟಿ) ಯ ಮೇಲೆ ಸವರುವುದರಿಂದ ನೋವು ಕಡಿಮೆಯಾಗುವುದು. ಎಲೆಯನ್ನು ಉಪಯೋಗಿಸಿ ತಯಾರಿಸಿದ ಜಾತ್ಯಾದಿ ತೈಲ, ಜಾತ್ಯಾದಿ ಘೃತ ಮಾರುಕಟ್ಟೆಯಲ್ಲಿ ಲಭ್ಯ. ಇದು ಹುಣ್ಣುಗಳನ್ನು ಶೀಘ್ರ ಗುಣಮಾಡುವುದು. ತುಂಬಾ ಹಳೆಯದಾದ ಹುಣ್ಣುಗಳನ್ನು ತೈಲವನ್ನು ಹಚ್ಚುವುದರಿಂದ ಗುಣ ಪಡಿಸಲಾಗುತ್ತದೆ. ಬೆಂಕಿ ತಾಗಿದ ಗಾಯಗಳೂ ಬೇಗನೆ ಗುಣವಾಗುವುದು.
ಬೇರು:
ಬೇರನ್ನು ತೊಳೆದು ನೀರಲ್ಲಿ ಅರೆದು ಫೇಸ್ ಪ್ಯಾಕ್ ಮಾಡುವುದರಿಂದ ಮುಖದ ಸೌಂರ್ಯವೃದ್ಧಿಯಾಗುವುದು. ತಲೆ ನೋವು ಇರುವಾಗಲೂ ಹಣೆಗೆ ಅರೆದು ಹಚ್ಚುವುದರಿಂದ ನೋವು ಕಡಿಮೆಯಾಗುವುದು. ಹೊಟ್ಟೆ ಉಬ್ಬರಿಸುವಾಗ ಬೇರಿನ ಕಷಾಯ ಮಾಡಿ ಕುಡಿಯುವುದರಿಂದ ಶಮನವಾಗುತ್ತದೆ. ಬೇರು ಮತ್ತು ಎಲೆ ರಸದಿಂದ ತಯಾರಿಸಿದ ತೈಲವೂ ಹುಣ್ಣುಗಳನ್ನು ಗುಣ ಪಡಿಸಲು ಸಹಾಯ ಮಾಡುವುದು. ಚರ್ಮದ ಕೆಲವು ಕಲೆಗಳ ನಿವಾರಣೆಗೆ ಬೇರನ್ನು ನುಣ್ಣಗೆ ಅರೆದು ಹಚ್ಚುವುದರಿಂದ ಪ್ರಯೋಜನವಾಗುವುದು.
ಕೃಷಿ:
ಸುಲಭವಾಗಿ ಬೆಳೆಯಬಹುದು. ಇದರ ಕಟ್ಟಿಂಗ್ಸ್ಗಳು ಪಾಲಿಥೀನ್ ತೊಟ್ಟೆಯಲ್ಲಿ ನೆಟ್ಟರೆ ಚಿಗುರೊಡೆಯುತ್ತದೆ. ಬೇಕಾದಷ್ಟು ಇರಿಸಿಕೊಂಡು ಬೇಡದ ಬಳ್ಳಿಗಳನ್ನು ತುಂಡುಮಾಡಿ ಸ್ವಚ್ಚ ಮಾಡುತ್ತಿದ್ದರೆ ಉತ್ತಮ ಗಾರ್ಡನ್ ಗಿಡ. ಆಯುರ್ವೇದ ಕಂಪೆನಿಗಳ ಬೇಡಿಕೆಗೆ ಅನುಸಾರ ಬೆಳೆದು ವಾಣೆಜ್ಯ ಬೆಳೆಯಾಗಿಸಬಹುದು.
ಡಾ| ಹರಿಕೃಷ್ಣ ಪಾಣಾಜೆ.