Skip links

ನರೋಳು

Scientific Name:Sapindus emarginatus

ನೊರೆಕಾಯಿ ಎಲ್ಲರಿಗೂ ಗೊತ್ತಿದೆ. ನೊರೆಕಾಯಿ ಸಿಗುವುದು ನರೋಳು ಮರದಿಂದ. ಅಂಟುವಾಳದ ಮರ ಎಂದೂ ಕರೆಯುತ್ತಾರೆ. ಅರಿಷ್ಠಕ ಎಂದು ಸಂಸ್ಕೃತದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಸೋಪ್‌ನಟ್ ಟ್ರೀ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುತ್ತದೆ. ಅಮ್ಮ, ಅಜ್ಜಿಯಂದಿರು ಸಮಾರಂಭದ ಒಂದು ದಿನ ಮೊದಲು ೧-೨ ನೊರೆ ಕಾಯಿಯನ್ನು ಜಜ್ಜಿ ನೀರಲ್ಲಿ ಹಾಕಿ ಚಿನ್ನದ ಆಭರಣವನ್ನು ಅದರಲ್ಲಿ ಮುಳುಗಿಸಿ ಇಟ್ಟು ನಂತರ ಹಂದಿಯ ರೋಮವನ್ನು ಒಂದೇ ಅಳತೆಯಲ್ಲಿ ತುಂಡುಮಾಡಿ ಸರಿಗೆಯಲ್ಲಿ ಕಟ್ಟಿ ಬ್ರಶ್‌ನಂತೆ ಮಾಡಿರಿಸಿದ ಬ್ರಶ್‌ನಲ್ಲಿ ತೊಳೆಯುತ್ತಿದ್ದರು.
೧೦-೧೫ ಅಡಿ ಮಾತ್ರ ಬೆಳೆಯುವ ಸಣ್ಣ ಮರವಾಗಿ ಹಾಗೂ ೫೦ ಅಡಿಯಷ್ಟು ಎತ್ತರ ಬೆಳೆಯುವ ದೊಡ್ಡ ಮರವಾಗಿ ನಮ್ಮ ದೇಶದ ಉದ್ದಗಲಕ್ಕೂ ಕಂಡುಬರುತ್ತದೆ. ೬-೮ ಎಲೆಗಳು ಜೊತೆಯಾಗಿ ಬೆಳೆದು ತುದಿಯಲ್ಲಿ ಗೊಂಚಲು ಹೂ ಕಂಡುಬರುತ್ತದೆ. ಎಲೆ ೬-೧೨ ಇಂಚು ಉದ್ದವಾಗಿ ಕಂಡುಬರುತ್ತದೆ. ೧/೪ ಇಂಚು ಗಾತ್ರ ಬಿಳಿವರ್ಣದ ಹೂಗಳು ಕಂಡುಬರುತ್ತದೆ. ಕಾಯಿ ಮೂರು ಬೀಜಗಳು ಒಂದನ್ನೊAದು ಸೇರಿಕೊಂಡAತೆ ಗುಚ್ಚವಾಗಿ ಬೆಳೆಯುತ್ತದೆ. ಬೀಜ ಮೃದುವಾದ ಹಣ್ಣಿನ ಅಂಶದಿAದ ಆವೃತವಾಗಿದೆ. ಹಸಿರು ವರ್ಣದ ಕಾಯಿ ಹಣ್ಣಾಗುವಾಗ ಸ್ವರ್ಣ ವರ್ಣವಾಗಿ ಒಣಗಿದಾಗ ಕಪ್ಪಾಗಿ ಚಿರುಟಿಕೊಂಡಿರುತ್ತದೆ. ನವೆಂಬರ್- ಡಿಸೆಂಬರ್ ನಲ್ಲಿ ಹೂ ಕಂಡು ಬಂದರೆ ಫೆಬ್ರವರಿ-ಮಾರ್ಚ್ನಲ್ಲಿ ಹಣ್ಣು ಕಂಡು ಬರುತ್ತದೆ. ಸೇವಿಸಿದ ಪ್ರಮಾಣ ಅಧಿಕವಾದರೆ ವಾಂತಿ ಭೇದಿ ಮಾಡಿಸುವ ಹಣ್ಣು ಕ್ರಿಮಿ ನಾಶ ಮಾಡುವುದು, ರಕ್ತ ಶುದ್ಧಿ ಮಾಡುವುದು, ಕಫ ಹೊರಹಾಕುವುದು, ತುರಿಕೆ ಕಡಿಮೆ ಮಾಡುವುದು.

ಎಲೆ:

ತಲೆ ನೋವು ಇರುವಾಗ ಎಲೆಯನ್ನು ಜಜ್ಜಿ ರಸ ತೆಗೆದು ಒಂದು ಬೀಜ ಕಾಳು ಮೆಣಸು ಪುಡಿಮಾಡಿ ಸೇರಿಸಿ ಸೋಸಿ ೨-೩ ಬಿಂದು ಮೂಗಿಗೆ ಬಿಡುವುದರಿಂದ ತಲೆನೋವು ಕಡಿಮೆಯಾಗುವುದು. ಚೇಳು ಕಚ್ಚಿದ ವಿಷದಿಂದ ನೋವು, ಊತ ಕಂಡು ಬಂದರೆ ನರುವೊಳು ಒಣ ಎಲೆಯಲ್ಲಿ ನೊರೆಕಾಯಿಯನ್ನು ಪುಡುಮಾಡಿ ಇಟ್ಟು ಬತ್ತಿಯಂತೆ ಮಾಡಿ ಉರಿಸಿ ಧೂಮಪಾನ ಮಾಡಿದರೆ ಕಡಿಮೆಯಾಗುವುದು. ಕಫದಿಂದ ದಮ್ಮುಕಟ್ಟಿದಂತೆ ಆಗುವುದಿದ್ದರೆ ನರೋಳು ಎಲೆಯೊಂದಿಗೆ ಹಸಿ ಶುಂಠಿ ಮತ್ತು ಬೆಲ್ಲ ಸೇರಿಸಿ ಅರೆದು ಸಣ್ಣ ಮಾತ್ರೆಯಂತೆ ಮಾಡಿ ಒಣಗಿಸಿ ಬಾಯಲ್ಲಿ ಇರಿಸಿ ಚಪ್ಪರಿಸಿ ನುಂಗಿದರೆ ಕಫ ಕಡಿಮೆಯಾಗುವುದು.

ತೊಗಟೆ:

ಎದೆಯಲ್ಲಿ ಕಫದ ತೊಂದರೆ ಇರುವಾಗ ಮರದ ತೊಗಟೆಯನ್ನು ಜಜ್ಜಿ ೨ ಚಮಚ ರಸ ತೆಗೆದು ಸ್ವಲ್ಪ ಸ್ವಲ್ಪವೇ ಕುಡಿಯುವುದರಿಂದ ಕಫ ಹೊರಹಾಕಲ್ಪಡುವುದು. ಹೀಗೆ ಒಂದೆರಡು ಸಲ ಮಾತ್ರ ಮಾಡಬೇಕು.

ಬೇರು:

ಯಾವುದಾದರೂ ವಿಷ ಪದಾರ್ಥ ಸೇವಿಸಿದ್ದರೆ ವಾಂತಿ ಮಾಡಿಸಬೇಕಾದರೆ ಬೇರಿನ ಸಿಪ್ಪೆಯ ರಸವನ್ನು ತೆಗೆದು ೧೦ ಮಿಲಿಯಷ್ಟು ಕುಡಿಸಿದರೆ ವಾಂತಿಯಾಗಿ ಪ್ರಥಮ ಚಿಕಿತ್ಸೆ ಕೊಟ್ಟಂತೆ ಆಗುವುದು.

ಕಾಯಿ:

ಈ ಮರದ ಹೆಚ್ಚು ಉಪಯೋಗವಾಗುವ ಭಾಗ ಕಾಯಿ. ಅಜೀರ್ಣ, ಹೊಟ್ಟೆಉಬ್ಬರ, ಹೊಟ್ಟೆಭಾರ ಇದ್ದರೆ ೮-೧೦ಗ್ರಾಂ ನೊರೆಕಾಯಿ ಜಜ್ಜಿ ನೀರಲ್ಲಿ ಇಟ್ಟು ನಂತರ ಹಿಚುಕಿ ಕುಡಿದರೆ ೧-೨ ಸಲ ವಾಂತಿ ಭೇದಿಯಾಗಿ ಶರೀರ ಹಗುರವಾಗುವುದು. ತಲೆ ತಿರುಗಿ ಬಿದ್ದು ಎಚ್ಚರವಾಗದಿದ್ದರೆ ೧-೨ನೊರೆಕಾಯಿ ಜಜ್ಜಿ ನೀರಲ್ಲಿ ಹಾಕಿ ನಂತರ ಸೋಸಿದ ನೀರನ್ನು ೨-೩ ಬಿಂದು ಮೂಗಿಗೆ ಬಿಡುವುದರಿಂದ ಸ್ಮೃತಿ ಬರುವುದು. ಹೀಗೆ ಪ್ರಥಮ ಚಿಕಿತ್ಸೆಯಾಗಿ ಮಾತ್ರ ಉಪಯೋಗಿಸಬಹುದು. ಹಸಿನೊರೆಕಾಯಿ ಜಜ್ಜಿ ರಸ ತೆಗೆದು (ಒಂದು ಚಮಚ) ಸ್ವಲ್ಪ ಬೆಲ್ಲ ಸೇರಿಸಿ ಕಲಸಿ ರಾತ್ರಿ ಕುಡಿದರೆ ಮರುದಿನ ಕ್ರಿಮಿ ವಿಸರ್ಜನೆಯಾಗುವುದು. ಬೇಗ ಮುಟ್ಟು ನಿಂತಿದ್ದರೆ ಸೊಂಟನೋವು ಮೈಕೈನೋವನ್ನು ಕೆಲವರು ಅನುಭವಿಸುತ್ತಾರೆ. ಮುಟ್ಟು ಸರಿಯಾಗಿ ಜಾರಿಯಾದರೆ ಸಣ್ಣ ಸಣ್ಣ ತೊಂದರೆಗಳು ಕಡಿಮೆಯಾಗುವುದು. ಮುಟ್ಟು ಜಾರಿಯಾಗಲು ೧-೨ ಬೀಜ ನೊರೆಕಾಯಿಯನ್ನು ರಾತ್ರಿ ಜಜ್ಜಿ ನೀರಲ್ಲಿ ಹಾಕಿ ಬೆಳಗ್ಗೆ ಸೋಸಿ ಕುಡಿದರೆ ಅಕಾಲಿಕ ಸ್ಥಗಿತಗೊಂಡ ಋತುಸ್ರಾವ ಜಾರಿಯಾಗುವುದು. ಹೀಗೆ ೧-೨ಸಲ ಮಾತ್ರ ಸೇವಿಸಬೇಕು.
ನೊರೆಕಾಯಿಯನ್ನು ಗರ್ಭಿಣಿ ಸ್ತ್ರೀಯರು ಉಪಯೋಗಿಸಬಾರದು.

ಕೃಷಿ:

ಹಿತ್ತಲಲ್ಲಿ ಒಂದು ನರೋಳು ಮರ ಇದ್ದರೆ ಒಳ್ಳೆಯದು. ಇದರ ಬೀಜ ಒಡೆದು ಮೊಳಕೆ ಬರುತ್ತದೆ. ಕಾಡು ಮರವಾದ ಕಾರಣ ಸುಲಭದಲ್ಲಿ ಹೆಚ್ಚು ಆರೈಕೆ ಇಲ್ಲದೆ ಬೆಳೆಯುತ್ತದೆ. ಒಂದು ಮರ ಮನೆಯ ಔಷದೋಪಚಾರಕ್ಕೆ ಸಾಕು. ಒಣಗಿಸಿ ಸಂಗ್ರಹಿಸಿದರೆ ಮಾರ್ಕೆಟ್ಟಿನಲ್ಲಿ ಬೇಡಿಕೆ ಇದೆ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.