Skip links

ಬಜೆ

Scientific Name: Acorus calamus

ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತ ಬಜೆ ಗಿಡ ಕಾಣದಿದ್ದರೂ ಬಜೆಯ ಕಾಂಡದ ತುಂಡು ಹೆಚ್ಚಿನ ಮನೆಗಳಲ್ಲಿ ಇರಬಹುದು. ಹುಟ್ಟಿದ ಮಗುವಿಗೆ ಬಜೆಯನ್ನು ಜೇನು ಮತ್ತು ತುಪ್ಪದಲ್ಲಿ ಅರೆದು ನಾಲಗೆಗೆ ಸವರುವುದು ನಮ್ಮ ಅಜ್ಜಿ ಅಮ್ಮ ಮಾಡುತ್ತಿದ್ದರು. ಈಗಲೂ ಅದು ರೂಡಿಯಲ್ಲಿದೆ. ತೊದಲು ಮಾತುಗಳನ್ನಾಡುವ ಮಗುವನ್ನು ನೋಡಿದರೆ ಕೂಡಲೇ ಬಜೆ ಅರೆದು ನೆಕ್ಕಿಸಿ ಎಂದು ಉಚಿತ ಸಲಹೆ ಕೊಡುತ್ತಾರೆ. ಅಧಿಕ ನೀರು ಕೆಸರು ದಾರಾಳ ಇರುವಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹುಲ್ಲು ಜಾತಿಯ ಸಣ್ಣ ಗಿಡ. ೩-೪ ಅಡಿ ಎತ್ತರ ಬೆಳೆಯುತ್ತದೆ. ಕಾಂಡದಲ್ಲಿ ಹತ್ತಿರ ಹತ್ತಿರ ಗಿಣ್ಣುಗಳಿರುತ್ತದೆ. ಕಾಂಡದ ನಾಲ್ಕು ಬದಿಯಿಂದಲೂ ಶಾಖೆಗಳು ಕವಲೊಡೆಯುತ್ತದೆ. ಕಾಂಡ ಅಂಗುಷ್ಟದಷ್ಟು ದಪ್ಪವಿರುತ್ತದೆ. ಒಣಗಿದಾಗ ಚಟ್ಟೆಯಾಗುತ್ತದೆ. ಎಲೆಕಾಂಡದಿAದ ಹುಟ್ಟಿಕೊಳ್ಳುತ್ತದೆ. ಸಪುರ ಉದ್ದವಾದ ಎಲೆ ಹರಿತ ಅಲಗಿನಿಂದ ಕೂಡಿರುತ್ತದೆ. ಪಿಪ್ಪಲಿ(ಹಿಪ್ಲಿ) ಹಣ್ಣಿನಂತೆ ಹೂ ಕಂಡುಬರುತ್ತದೆ. ಹೂ ಹಳದಿ ಹಸಿರು ಬಣ್ಣದಿಂದ ಕಂಡುಬರುತ್ತದೆ. ೨-೪ ಇಂಚು ಉದ್ದ ಇರುತ್ತದೆ. ಹೂ ಎಲೆಯ ಪಾರ್ಶ್ವದಿಂದ ಹುಟ್ಟಿಕೊಳ್ಳುತ್ತದೆ. ಇಡೀ ಗಿಡವೇ ಪರಿಮಳದಿಂದ ಕೂಡಿದೆ. ಸಪುರವಾದ ಬೇರುಗಳು ಕಾಂಡದಿAದ ಹುಟ್ಟಿಕೊಂಡು ಕೆಸರಿನಲ್ಲಿ ಹೂತು ಗಿಡ ಹುಲುಸಾಗಿ ಬೆಳೆಯುತ್ತದೆ. ವಚ ಎಂಬುದಾಗಿ ಸಂಸ್ಕೃತದಲ್ಲಿ ಕರೆಯಲ್ಪಡುವ ಬಜೆ ಉಗ್ಗು, ವಾಕ್ ಶುದ್ಧಿಗೆ ದಿವ್ಯೌಷಧಿ. ತಲೆನೋವು ಗಂಟಲುನೋವು, ಕೆಮ್ಮು, ಅಪಸ್ಮಾರ ಕಾಯಿಲೆಗಳಲ್ಲಿಯೂ ಪ್ರಯೋಜನಕಾರಿಯಾಗಿದೆ.

ಮೆದುಳಿನ ಮೇಲೆ ಪ್ರಭಾವ:

ಬಜೆಯು ಮೆದುಳಿನ ಲಿಪಿಡ್ ಪೆರಾಕ್ಸೆöÊಡ್‌ನ್ನು ಕಡಿಮೆ ಮಾಡುವುದು. ಇದರಿಂದ ನೆನಪಿನ ಶಕ್ತಿ ವೃದ್ಧಿಯಾಗುವುದು. ಕಲಿಕೆಗೆ ಸಹಾಯ ಮಾಡುವುದು. ಬ್ರಾಹ್ಮಿ, ಶಂಖಪುಷ್ಪಿ ಮತ್ತು ಬಜೆ ಸೇರಿದಾಗ ವಿಶೇಷ ಪರಿಣಾಮ ಉಂಟು ಮಾಡುವುದು. ಇದು ಹಿರಿಯರಲ್ಲಿ ಕಡಿಮೆಯಾಗುವ ನೆನಪಿನ ಶಕ್ತಿಯನ್ನು ವೃದ್ಧಿಸುವುದು. ಮರೆವುತನ, ಮನಸ್ಸಿನ ಗೊಂದಲ ನಿವಾರಿಸಿ ಜಾಗೃತಾವಸ್ಥೆ ಉಂಟುಮಾಡುವುದು.
ಸಣ್ಣ ಮಕ್ಕಳಿಗೆ ಪ್ರತಿನಿತ್ಯ ತುಪ್ಪ ಮತ್ತು ಜೇನಿನೊಂದಿಗೆ ಬಜೆಯನ್ನು ಸ್ವಲ್ಪ ಅರೆದು ನೆಕ್ಕಿಸುವುದರಿಂದ ವ್ಯಾಧಿ ಕ್ಷಮತೆ ವೃದ್ಧಿಸುವುದು ಅಲ್ಲದೆ ಉಚ್ಚಾರದಲ್ಲಿ ಸ್ಪಷ್ಟತೆ ಉಂಟುಮಾಡುವುದು, ಜ್ಞಾನ ಶಕ್ತಿಯನ್ನು ವೃದ್ಧಿಸುವುದು. ಉತ್ತಮ ಹಾಗೂ ಕ್ಷಿಪ್ರ ಪ್ರಯೋಜನಕ್ಕೆ ಶುದ್ಧ ಚಿನ್ನದ ಸರಿಗೆಯನ್ನು ಬಜೆಯ ತುಂಡಿನ ಮಧ್ಯೆ ತುರುಕಿಸಿ ಜೇನು ಮತ್ತು ತುಪ್ಪದೊಂದಿಗೆ ಅರೆದು ನೆಕ್ಕಿಸುವುದು ಉತ್ತಮ.

ಕೆಮ್ಮು ಕಫ:

ಬಜೆಯೊಂದಿಗೆ ತುಳಸಿ, ಒಳ್ಳೆ ಮೆಣಸು ಸೇರಿಸಿ ಕಷಾಯ ಮಾಡಿ ಕುಡಿದರೆ ಕಫ ಸಹಿತ ಕೆಮ್ಮು ನಿವಾರಣೆಯಾಗುವುದು.

ಹೊಟ್ಟೆ ಹುಳ ಹಾಗು ವಾಯು ಬಾಧೆ:

ಕೊತ್ತಂಬರಿ, ಬಡೆಸೊಪ್ಪುನೊಂದಿಗೆ ಬಜೆ ಸೇರಿಸಿ ಕಷಾಯ ಮಾಡಿ ಕುಡಿದರೆ ಹೊಟ್ಟೆ ಉಬ್ಬರಿಸುವುದು. ಕ್ರಿಮಿ ಹಾಗೂ ಹುಳದ ಬಾಧೆ ಕಡಿಮೆಯಾಗುವುದು.

ತಲೆನೋವು:

ಬಜೆಯೊಂದಿಗೆ ಹಿಪ್ಲಿ ಸೇರಿಸಿ ನಯವಾದ ಪುಡಿಮಾಡಿ ನಸ್ಯದಂತೆ ಉಪಯೋಗಿಸುವುದರಿಂದ ಒಂದು ಭಾಗದ ತಲೆನೋವು (ಒರ್ಕೆನ್ನಿ) ಕಡಿಮೆಯಾಗುವುದು.

ಶೀತ ಜ್ವರ:

ಬಜೆಯೊಂದಿಗೆ ಸ್ವಲ್ಪ ಶುಂಠಿ ಮತ್ತು ಲವಂಗ ಸೇರಿಸಿ ಕಷಾಯ ಮಾಡಿ ಕುಡಿದರೆ ಶೀತ ಜ್ವರ ಕಡಿಮೆಯಾಗುವುದು.

ಹೊಟ್ಟೆ ಭಾಗದ ಕೊಬ್ಬು:

ತಿನ್ನುವುದು ಜಾಸ್ತಿಯಾಗಿ ವ್ಯಾಯಾಮ ಮಾಡದಿದ್ದರೆ ಕೆಲಸ ಕಡಿಮೆಯಾದರೆ ಹೊಟ್ಟೆ ಭಾಗ ದಪ್ಪ ಆಗುತ್ತದೆ. ತ್ರಿಫಲಾ ಚೂರ್ಣದೊಂದಿಗೆ ಬಜೆ ಚೂರ್ಣ ಮಿಶ್ರ ಮಾಡಿ ಹೊಟ್ಟೆಭಾಗಕ್ಕೆ ದೀರ್ಘ ಕಾಲ ಹಚ್ಚುವುದರಿಂದ ಹೊಟ್ಟೆ ಸ್ವಲ್ಪ ತೆಳುವಾಗುವುದು.

ಅಪಸ್ಮಾರ:

ತೀವ್ರತೆಗೆ ಅನುಸಾರ ವಿಧ ವಿಧವಾಗಿ ಜನರಲ್ಲಿ ಕಂಡುಬರುತ್ತದೆ. ಅಪಸ್ಮಾರ ಚಿಕಿತ್ಸೆಗೆ ಉತ್ತಮ ಆಧುನಿಕ ಔಷಧಿಗಳಿವೆ.ಆದರೂ ಕೆಲವರಲ್ಲಿ ನಿಯಂತ್ರಣಕ್ಕೆ ಬಾರದಿರುವುದೂ ಇದೆ. ಅಂತಹ ಸಂದರ್ಭಗಳಲ್ಲಿ ಬಜೆಯನ್ನು ಹಾಲಲ್ಲಿ ಬೇಯಿಸಿ ನಂತರ ನೆರಳಲ್ಲಿ ಒಣಗಿಸಿ ಪುಡಿಮಾಡಿ ತುಪ್ಪದೊಂದಿಗೆ ಪ್ರತಿ ನಿತ್ಯ ಸೇವಿಸಲು ಕೊಡಬಹುದು.

ಹೊಟ್ಟೆನೋವು:

ಬಜೆ ಚೂರ್ಣ (ಪುಡಿ)ವನ್ನೂ ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ಅಜೀರ್ಣ ಸಂಬAಧೀ ಹೊಟ್ಟೆನೋವು ಕಡಿಮೆಯಾಗುವುದು.

ಅಡ್ಡಪರಿಣಾಮ:

ಬಜೆಯ ಪ್ರಮಾಣ ಅಧಿಕವಾದರೆ ವಾಂತಿಯಾಗುತ್ತದೆ. ಜಾಸ್ತಿ ವಾಂತಿಯಾದರೆ ಬಡೇಸೊಪ್ಪು ಜಗಿದು ನುಂಗುವುದರಿAದ ಅಥವಾ ಕಷಾಯ ಮಾಡಿ ಕುಡಿಯುವುದರಿಂದ ಕಡಿಮೆಯಾಗುವುದು

ಕೃಷಿ:

ಅತ್ಯಧಿಕ ಬೇಡಿಕೆ ಇರುವ ಔಷಧಿ ಬಜೆ.ಇದರ ಸತ್ವ(extract) ತೆಗೆದು ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಉತ್ತಮ ನೀರು ಇರುವಲ್ಲಿ ಕೆಸರು ಗದ್ದೆಗಳಲ್ಲಿ ಬೇರು ಬಿಟ್ಟು ದಟ್ಟವಾಗಿ ಬೆಳೆಯುತ್ತದೆ. ಕಾಂಡ ಭಾಗ ಔಷಧಿಗೆ ಉಪಯೋಗವಾಗುತ್ತದೆ. ಬೆಳೆಸಿ ಕಾಂಡವನ್ನು ತುಂಡುಮಾಡಿ ಒಣಗಿಸಿ ಮಾರಾಟ ಮಾಡಬಹುದು.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.