ಪಂಚಪಾಂಡವರಲ್ಲಿ ಮಧ್ಯಮನಾದ ಅರ್ಜುನನ ಬಗ್ಗೆ ಬರೆಯುತ್ತಿಲ್ಲ. ಅರ್ಜುನ ವೃಕ್ಷ ಅಂದರೆ ತುಳುವಿನಲ್ಲಿ ನಾವು ಗುರುತಿಸುವ ಬನ್ಪು ಮರ. ೫೦ ರಿಂದ ೭೦ ಅಡಿಗಳ ವರೇಗೆ ಬೆಳೆಯುವ ಬೃಹತ್ ಮರ. ಇದರ ತೊಗಟೆ ಹೊರಗಿನಿಂದ ನಯವಾಗಿದ್ದು ನಸು ಬಿಳಿ ಬಣ್ಣದಲ್ಲಿ ಇರುತ್ತದೆ. ಒಳಭಾಗ ಕೆಂಪು ವರ್ಣದಿಂದ ಕೂಡಿರುತ್ತದೆ. ೫-೬ ಇಂಚು ಉದ್ದದ ಎಲೆಗಳು. ರೆಂಬೆ, ಎಲೆಗಳು ಅದೊಮುಖವಾಗಿ ಬಾಗಿರುತ್ತದೆ. ಎಲೆಯ ಮೇಲ್ಭಾಗ ಹಸಿರಾಗಿದ್ದು ಅಡಿಭಾಗ ನಸು ಬೂದು ಬಣ್ಣದಿಂದ ಕೂಡಿದೆ. ಎಲೆಯ ಅಡಿಭಾಗ ಎಲೆ ತೊಟ್ಟಿನ ಹತ್ತಿರ ಎರಡು ಗ್ರಂಥಿಗಳು ಇರುತ್ತದೆ. ಹೂ ಬಿಳಿ ಹಳದಿ ವರ್ಣದಲ್ಲಿ ಗುಚ್ಚಾಕಾರ ಬಾಟ್ಲಿ ತೊಳೆಯುವ ಬ್ರಶ್‌ನಂತೆ ಉದ್ದವಾಗಿರುತ್ತದೆ. ಇದರ ಕಾಯಿ ದಾರೆ ಹುಳಿಯಂತೆ ದಾರೆಗಳಿಂದ ಕೂಡಿದೆ. ಜನವರಿ ಫೆಬ್ರವರಿಯಲ್ಲಿ ಕಾಯಿ ಹಣ್ಣಾಗಿ ಕಂಡುಬರುತ್ತದೆ. ಅಲಗುಗಳು ಚಟ್ಟೆಯಾಗಿರುತ್ತದೆ. ಒಣಗಿದರೆ ಗಾಳಿಯಲ್ಲಿ ದೂರ ಹಾರಿ ಹೋಗುವ ವಿನ್ಯಾಸ ಹೊಂದಿದೆ. ತೊಗಟೆ ಹಲವು ಜೀವ ಸತ್ವಗಳೊಂದಿಗೆ calcium, magnesiumಗಳನ್ನು ಹೊಂದಿದೆ

ನವದ್ವಾರಗಳಿಂದ ಕೂಡಿದ ಈ ಶರೀರವನ್ನು ಮನೆಗೆ ಹೋಲಿಸಿದರೆ ಈ ಮನೆಯಲ್ಲಿ ಜೀವ ನೀಡುವ ಆತ್ಮ ಇದೆ. ಶರೀರದ ಯಾವ ಭಾಗದಲ್ಲಿಯೂ ಆತ್ಮ ಇರಬಹುದೆಂದು ಹೇಳಿದರೂ ಹೃದಯವನ್ನು ಆತ್ಮದ ಮುಖ್ಯ ಆವಾಸ ಸ್ಥಾನವೆನ್ನುತ್ತಾರೆ. ಪುರಾಣದ ಅರ್ಜುನ ಹಾಗೂ ಕೃಷ್ಣನ ಸಂಬಂಧವೂ ಅಷ್ಟೊಂದು ಅನ್ಯೋನ್ಯ. ಕೃಷ್ಣ ಇದ್ದರೆ ಮಾತ್ರ ಅರ್ಜುನನ ಅಸ್ತಿತ್ವ. ಅರ್ಜುನನ ಹೃದಯ ಶ್ರೀಕೃಷ್ಣನ ಆವಾಸ ಸ್ಥಾನ. ಹಾಗೆಯೇ ಹೃದಯಕ್ಕೆ ಸಂಬಂಧಪಟ್ಟ ಔಷಧಿ ಹೇಳುವಾಗ ಅರ್ಜುನ ವೃಕ್ಷವನ್ನು ಹೇಳಿದ್ದಾರೆ. ಹೃದಯ ರಕ್ಷಣೆ ಮಾಡುವ ಔಷಧಿಗಳಲ್ಲಿ ಅರ್ಜುನ ಮರಕ್ಕೆ ವಿಶೇಷ ಸ್ಥಾನ.
ನಿತ್ರಾಣ : ಕಡಿಮೆ ಬ್ಲಡ್ ಪ್ರಶರ್ ಇರುವಾಗ ಶಕ್ತಿ ಕಡಿಮೆಯಾದಂತೆ ಅನುಭವ ಆಗುತ್ತದೆ. ನಿತ್ರಾಣ ಇರುತ್ತದೆ. ತಲೆ ತಿರುಗುವುದು ಇರುತ್ತದೆ. ಅರ್ಜುನ ಮರದ ತೊಗಟೆಯನ್ನು (೧೦ಗ್ರಾಂ) ಹಾಲು ಹಾಕಿ ಕಷಾಯ ಮಾಡಿ ೩-೪ ವಾರ ಕುಡಿದರೆ ನಿತ್ರಾಣ ಕಡಿಮೆಯಾಗುವುದು. ಆಗಾಗ ಸಣ್ಣ ಪ್ರಮಾಣದಲ್ಲಿ ಕಂಡುಬರುವ ಎದೆ ನೋವಿನಲ್ಲಿಯೂ ಹಾಲು ಸೇರಿಸಿ ಇದರ ತೊಗಟೆ ಕಷಾಯ ಕುಡಿಯುವುದರಿಂದ ಕಡಿಮೆಯಾಗುವುದು. ಕೊಲೆಸ್ಟ್ರಾಲ್ ಶರೀರದಲ್ಲಿ ಜಾಸ್ತಿಯಾದರೂ ಹೃದಯ ಸಂಬಂಧಿ ತೊಂದರೆಗಳು ಕಂಡುಬರುತ್ತದೆ. ಬೊಜ್ಜು ಕರಗಿಸುವ ಗುಣ ಇದರ ತೊಗಟೆಗೆ ಇದೆ. ಆದ ಕಾರಣ ಹೃದ್ರೋಗ ಸಂಬಂಧೀ ತೊಂದರೆಗಳಲ್ಲಿ ಇದರ ಸೇವನೆಯಿಂದ ಹೃದಯಕ್ಕೆ ಶಕ್ತಿ ನೀಡುವುದು.

ಗಂಟು ನೋವು: ಇದರ ತೊಗಟೆಯಲ್ಲಿ ಕ್ಯಾಲ್ಸಿಯಂ ಅಂಶ ಇದೆ. ಸಂಧಿ ನೋವುಗಳು ಕ್ಯಾಲ್ಸಿಯಂ ಕಡಿಮೆಯಾದರೆ ಕಂಡುಬರುತ್ತದೆ. ತೊಗಟೆಯ ಹಾಲು ಕಷಾಯ ೪೮ ದಿನ ಅಥವಾ ೫೦ ದಿನ ಸೇವಿಸಿದರೆ ಪರಿಣಾಮ ಕಂಡುಬರುವುದು. ಎಲುಬು ಮುರಿತಕ್ಕೊಳಗಾದವರೂ ಇದರ ಹಾಲು ಕಷಾಯ ಮಾಡಿ ಕುಡಿದರೆ ಉತ್ತಮ ಪ್ರಯೋಜನವಾಗುವುದು.
ಕೆಮ್ಮು: ಕೆಮ್ಮುವಾಗ ಕಫ ರಕ್ತ ಹೋಗುವುದಿದ್ದರೆ ಇದರ ತೊಗಟೆ ಚೂರ್ಣವನ್ನು ಆಡುಸೋಗೆ ಎಲೆರಸದಲ್ಲಿ ಮಿಶ್ರ ಮಾಡಿ ಸಕ್ಕರೆ ಮತ್ತು ಜೇನು ಸೇರಿಸಿ ೨ ವಾರ ಕುಡಿಯಬೇಕು.
ಉರಿಮೂತ್ರ, ಸ್ತ್ರೀಯರ ಬಿಳಿ ಸ್ರಾವ: ಇದರ ತೊಗಟೆ ಮತ್ತು ಶ್ರೀಗಂಧ ಮಿಶ್ರಮಾಡಿ ಕಷಾಯ ಮಾಡಿ ಕುಡಿಯುವುದರಿಂದ ಬಿಳಿಸ್ರಾವ ಉರಿಮೂತ್ರ ಕಡಿಮೆಯಾಗುವುದು. ಇದರಿಂದ ಎದೆ ಉರಿ ಅಸಿಡಿಟಿಗಳು ಕಡಿಮೆಯಾಗುವುದು.
ಮಧುಮೇಹ: ಅರ್ಜುನ ತೊಗಟೆ ಮತ್ತು ಅಸನ (ಬೇಂಗ)ದ ತಿರುಳು ಒಟ್ಟು ೨೦ಗ್ರಾಂ ನಷ್ಟು ಕಷಾಯ ಮಾಡಿ ರಾತ್ರಿ ಕುಡಿದರೆ ಮಧುಮೇಹ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು.
ಬೆರಳಿನ ಎಡೆಯ ತುರಿಕೆ: ಹೆಚ್ಚು ಪಾತ್ರೆ ತೊಳೆಯುವುದು, ಬಟ್ಟೆ ತೊಳೆಯುವ ಕೆಲಸ ಮಾಡುವವರಿಗೆ ಪಾತ್ರೆ ತೊಳೆಯುವ ಕೆಮಿಕಲ್ಸ್ನಿಂದಾಗಿ ಬೆರಳಿನ ಸಂದುಗಳಳ್ಲಿ ಹುಣ್ಣಾಗುತ್ತದೆ. ಅರ್ಜುನದ ಬೆಳೆದ ಹಣ್ಣನ್ನು ಜಜ್ಜಿ ಕಷಾಯ ಮಾಡಿ ಅದರಲ್ಲಿ ಕೈಯನ್ನು ೧೦ ನಿಮಿಷ ಮುಳುಗಿಸಿಟ್ಟರೆ ೧೫ ರಿಂದ ೩೦ ದಿನಗಳಲ್ಲಿ ಕಡಿಮೆಯಾಗುವುದು.
ಕೂದಲು : ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕಿವುಚಿ ರಸವನ್ನು ಸೋಸಿ ಸಂಗ್ರಹಿಸಿ ತಲೆಗೆ ಹಾಕಿ ಸ್ನಾನ ಮಾಡಿದರೆ ತಲೆ ಹೊಟ್ಟು ಕಡಿಮೆಯಾಗಿ ಕೂದಲು ನಯವಾಗಿ ಕಂಡುಬರುವುದು.
ಅರ್ಜುನ ತೊಗಟೆಯಿಂದ ತಯಾರಿಸಿದ ಅರ್ಜುನಾರಿಷ್ಟ ಮಾರ್ಕೆಟ್ಟಿನಲ್ಲಿ ಲಭ್ಯವಿದೆ. ಇದರ ಸೇವನೆಯಿಂದ ಹೃದಯಕ್ಕೆ ಉಂಟಾಗುವ ಕೆಲವು ತೊಂದರೆಗಳು ನಿವಾರಣೆಯಾಗುವುದು. ಹೃದ್ರೋಗಿಗಳು ಹೃದಯ ತಜ್ಞರಿಂದ ಆಗಾಗ ಪರೀಕ್ಷೆ ಮಾಡಿಸುತ್ತಿರಬೇಕು. ಅವರ ಸಲಹೆ ಸೂಚನೆಗಳನ್ನು ಪಾಲಿಸಬೇಕು.