Scientific Name: Solanum indicum
ಬದನೆಯ ಗಿಡದಂತೆ ಆದರೆ ೩-೬ ಅಡಿ ಎತ್ತರ ಬೆಳೆಯುತ್ತದೆ. ಎಲೆ ಹಾಗೂ ಹೂಗಳು ಬದನೆಯಂತೆ ಕಂಡು ಬರುತ್ತದೆ. ಗಿಡ ಮುಳ್ಳುಗಳಿಂದ ಕೂಡಿರುತ್ತದೆ. ಕಾಂಡದಲ್ಲಿ ಮತ್ತು ಎಲೆಯ ಅಡಿಭಾಗದಲ್ಲಿ ಮುಳ್ಳುಗಳು ಕಂಡುಬರುತ್ತದೆ. ಗೊಂಚಲಾಗಿ ಹೂಗಳು ಮೂಡುತ್ತದೆ. ನೀಲ, ನೇರಳೆ ಬಣ್ಣದಿಂದ ಕೂಡಿದೆ. ಸಣ್ಣ ಹಣ್ಣುಗಳು ಗೊಂಚಲಲ್ಲಿ ಗೋಚರಿಸುತ್ತದೆ. ಬೆಳೆದಾಗ ಹಣ್ಣು ಹಳದಿಯಾಗುತ್ತದೆ. ನೋಡಲು ಸಣ್ಣ ಸಣ್ಣ ಹಣ್ಣುಗಳು ಆದರೆ ಬದನೆಯ ಸೂಕ್ಷ್ಮರೂಪ. ಬದನೆ ಬೀಜದಂತೆ ಚಟ್ಟೆಯಾಗಿ ಅನೇಕ ಬೀಜಗಳು ಇರುತ್ತದೆ.
ಇದಕ್ಕೆ ಸಂಸ್ಕೃತದಲ್ಲಿ ಬೃಹತಿ, ಸಿಂಹಿ ಎಂಬುದಾಗಿ ಹೇಳುತ್ತಾರೆ. ನಮ್ಮ ಊರಲ್ಲಿ ಕಾಟು ಬದನೆ ಎನ್ನುತ್ತಾರೆ. ಇದು ಸ್ವರವನ್ನು ಉತ್ತಮಗೊಳಿಸುತ್ತದೆ. ಇದರ ಸೇವನೆಯಿಂದ ಸಿಂಹದಂತೆ ಸ್ವರ ಉಂಟಾಗುತ್ತದೆ. ಆದ ಕಾರಣ “ಸಿಂಹಿ” ಎಂಬ ಹೆಸರಿದೆ. ಇದೇ ಜಾತಿಯ ಇದೇ ಗುಣವಿರುವ ಗಿಡವಿಡೀ ಮುಳ್ಳುಗಳಿಂದ ಕೂಡಿದ ಗಿಡಕ್ಕೆ “ಕಂಠಕಾರಿ” ಎನ್ನುತ್ತಾರೆ. ಇದು ಎತ್ತರ ಬೆಳೆಯುವುದಿಲ್ಲ. ಇದರ ಹೂಗಳೂ ಕಾಯಿಗಳು ಬದನೆಯಂತೆ. ಇದರ ಗುಣವೂ ಕುದನೆಯಂತೆ ಕಫ ಕೆಮ್ಮಿನಲ್ಲಿ ಉಪಯೋಗಿಸಲಾಗುತ್ತದೆ.

ಹತ್ತು ವಿವಿಧ ಮೂಲಿಕೆಗಳನ್ನು ಸೇರಿಸಿ ದಶಮೂಲ ಎನ್ನುತ್ತಾರೆ. ಈ ದಶಮೂಲಗಳಲ್ಲಿ ಒಂದು ಮೂಲಿಕೆ ಕುದನೆಯಾಗಿದೆ. ಕೆಮ್ಮು ಕಫ ಹಾಗೂ ಕಂಠದಲ್ಲಿ ಉಂಟಾಗುವ ತೊಂದರೆಯಿಂದ ಸ್ವರಭೇದದಲ್ಲಿ ವಿಶೇಷ ಪರಿಣಾಮಕಾರಿ ಔಷಧಿಯಾಗಿದೆ. ಇದಲ್ಲದೆ ಹತ್ತು ಹಲವು ಇನ್ನಿತರ ರೋಗಗಳಿಗೂ ರಾಮಬಾಣವಾಗಿದೆ.
ಕೆಮ್ಮು ಕಫ: ಬೃಹತಿ (ಕುದನೆ)ಯ ಬೇರನ್ನು ೧೦ಗ್ರಾಂ ಕಷಾಯ ಮಾಡಿ ಸಕ್ಕರೆ ಜೇನು ಸೇರಿಸಿ ಕುಡಿದರೆ ಕೆಮ್ಮು, ದಮ್ಮು ಕಟ್ಟುವುದು ಕಡಿಮೆಯಾಗುತ್ತದೆ. ಗಂಟಲು ಒಣಗಿ ತುರಿಸಿ ಕೆಮ್ಮು ಇರುವಾಗ ಪಚ್ಚೆಹೆಸ್ರಿನೊಂದಿಗೆ ೧೦ಗ್ರಾಂ ಬೃಹತಿ ಬೇರು ಬೇಯಿಸಿ ಸೋಸಿ ಉದ್ದಿನ ಕಾಳಿನಷ್ಟು ಶುಧ್ಧ ಹಿಂಗು ಸೇರಿಸಿ ೩ ದಿನ ಕುಡಿದರೆ ಕಡಿಮೆಯಾಗುವುದು. ತುಂಬಾ ಸಮಯದಿಂದ ಇರುವ ಕೆಮ್ಮಿನಲ್ಲಿ ಬೃಹತಿಯನ್ನು ಜಜ್ಜಿ ರಸ ತೆಗೆದು ಇದರ ಅರ್ಧ ಪಾಲು ತುಪ್ಪ ಸೇರಿಸಿ ಪಾಕ ಮಾಡಿ ದಿನಕ್ಕೆ ಮೂರು ಸಲ ಒಂದೊಂದು ಚಮಚ ಸೇವಿಸಿದರೆ ಕಡಿಮೆಯಾಗುವುದು. ಮಕ್ಕಳಿಗೆ ಬರುವ ಕೆಮ್ಮಿಗೆ ತಾವರೆ ಕೇಸರ ಮತ್ತು ಬೃಹತಿ ಒಣಗಿಸಿ ಪುಡಿ ಮಾಡಿಟ್ಟು ಸಮಪ್ರಮಾಣದಲ್ಲಿ ಸೇರಿಸಿ ಜೇನಿನಲ್ಲಿ ಮಿಶ್ರಮಾಡಿ ನೆಕ್ಕಿಸಿದರೆ ಉತ್ತಮ ಪ್ರಯೋಜನವಾಗುವುದು.


ಬೃಹತಿಯೊಂದಿಗೆ ಹಿಪ್ಲಿ ಮತ್ತು ಶುಂಠಿ ಸೇರಿಸಿ ಪುಡಿ ಮಾಡಿ ಜೇನಿನೊಂದಿಗೆ ಸೇವಿಸಿದರೆ ಉತ್ತಮ ಸ್ವರ ಬರುವುದು. ಕೆಮ್ಮು ಕಡಿಮೆಯಾಗುವುದು.
ಮೂತ್ರದ ಕಲ್ಲು: ಬೃಹತಿಯೊಂದಿಗೆ ಇನ್ನೂ ಅಧಿಕ ಮುಳ್ಳಿನಿಂದ ಕೂಡಿದ ಇದೇ ಫ್ಯಾಮಿಲಿಯ ಕಂಠಕಾರಿ ಸೇರಿಸಿ ಕಷಾಯ ಮಾಡಿ ಕುಡಿದರೆ ಮೂತ್ರದ ಕಲ್ಲು ಹೊರಬರುವುದು. ಕಲ್ಲು ತುಂಬಾ ದೊಡ್ಡದಿದ್ದರೆ ಪ್ರಯೋಜನವಾಗದು. ಕೂದಲು ಉದುರುವುದು, ತಲೆಯಲ್ಲಿ ಅಥವಾ ಮುಖದಲ್ಲಿ ವೃತ್ತಾಕಾರದಲ್ಲಿ ಅಲ್ಲಲ್ಲಿ ಕೂದಲು ಉದುರುವ alopecia areata ಎಂಬ ತೊಂದರೆಯಲ್ಲಿ ಇದರ ಬೀಜವನ್ನು ನಯವಾಗಿ ಅರೆದು ಕೂದಲು ಉದುರಿದ ಭಾಗಕ್ಕೆ ಹಚ್ಚುವುದರಿಂದ ನಿಧಾನವಾಗಿ ಕೂದಲು ಬರುವುದು.
ತುರಿಕೆ: ಗುಪ್ತಾಂಗ ತುರಿಕೆ ಇರುವಾಗ ಕುದನೆೆ ಬೀಜ, ಅರಸಿನ, ಮರದರಸಿನ ಕಷಾಯ ಮಾಡಿ ತೊಳೆಯುವುದರಿಂದ ತುರಿಕೆ ಕಡಿಮೆಯಾಗುವುದು. ಗುಡ್ಡಗಾಡುಗಳಲ್ಲಿ ಬೆಳೆಯುವ ಕುದನೆ ಗಿಡದ ಉಪಯೋಗ ಹಲವು. ಸ್ತ್ರೀಯರ ಮುಟ್ಟುದೋಷ, ಪುರುಷರ ಲೈಂಗಿಕ ನಿಶ್ಯಕ್ತಿ, ಜೀರ್ಣಕ್ರಿಯೆ ತೊಂದರೆಗಳನ್ನು ನಿವಾರಿಸುವ ವಿಶೇಷ ಗಿಡಮೂಲಿಕೆ.