Scientific Name: Barleria prionitis
ಹೂ ತೋಟದಲ್ಲಿ ಹಳದಿ, ನೀಲ, ಕೆಂಪು ಬಣ್ಣಗಳ ಹೂಗಳಿಂದ ಕಂಗೊಳಿಸುವ ಅಲಂಕಾರಿಕ ಗಿಡ. ಒಂದರಿಂದ ಒಂದೂವರೆ ಮೀಟರ್ ಎತ್ತರ ಬೆಳೆಯುವ ಪೊದೆಯಾಕಾರದ ಗಿಡ. ಹಲವು ಪ್ರಭೇದಗಳಿಂದ ಕೂಡಿದ ಸಸ್ಯವಾಗಿದೆ. ನೀಲ ಗೋರಟೆ ಎಲೆ ದೊರಗಾಗಿದ್ದರೆ ಹಳದಿ ಗೋರಟೆ ಎಲೆ ನಯವಾಗಿರುತ್ತದೆ. ಕೆಂಪು ಗೋರಟೆಯ ಎಲೆಗಳು ಹಾಗೂ ಕಾಂಡ ಸ್ವಲ್ಪ ಕಪ್ಪು ಬಣ್ಣದಿಂದ ಕಂಡುಬರುತ್ತದೆ. ಮುಳ್ಳುಗಳಿಂದಲೂ ಆವೃತವಾಗಿರುತ್ತದೆ. ಎಲೆಗಳು ಎದುರುಬದುರಾಗಿ ಹುಟ್ಟಿಕೊಳ್ಳುತ್ತದೆ. ತುದಿಯಲ್ಲಿ ಗುಚ್ಚಗಳಾಗಿ ಹೂ ಅರಳುತ್ತದೆ.
ಸಂಸ್ಕೃತದಲ್ಲಿ ಸಹಚರ, ಸೈರೇಯಕ ಹಾಗೂ ಮಲಯಾಳದಲ್ಲಿ ಕರಿಂಕುರಿನ್ನಿ ಎನ್ನುತ್ತಾರೆ. ಕೆಲವು ವಾತ
ರೋಗದಲ್ಲಿ ಪ್ರಮುಖವಾಗಿ ಗೋರಟೆಯೊಂದಿಗೆ ಇತರ ಗಿಡಮೂಲಿಕೆ ಸೇರಿಸಿ ಕಷಾಯ, ಎಣ್ಣೆ ತಯಾರಿಸಿ ಉಪಯೋಗಿಸುತ್ತಾರೆ.

ನೋವು ಮತ್ತು ಬಾವು :
ಎಲೆಯನ್ನು ನೀರಲ್ಲಿ ಅರೆದು ನೋವು ಬಾವು ಇರುವಲ್ಲಿಗೆ ಹಚ್ಚುವುದರಿಂದ ಕಡಿಮೆಯಾಗುವುದು. ನರಗಳಿಗೆ ಹಾಗೂ ಮಾಂಸ ಖಂಡಗಳಿಗೆ ಸಂಬಂದಸಿದ ನೋವುಗಳಲ್ಲಿ ಎಲೆ, ಕಾಂಡ, ಬೇರು ಸಹಿತ ಕಷಾಯ ಮಾಡಿ ಕುಡಿಯುವುದರಿಂದ ನೋವು ಕಡಿಮೆಯಾಗುವುದು. ಎಲೆಯ ರಸ ಮತ್ತು ಉಂಡೆ ಹುಳಿಯನ್ನು ಎಳ್ಳೆಣ್ಣೆಯಲ್ಲಿ ಕಾಯಿಸಿದರೆ ಉತ್ತಮ ನೋವು ನಿವಾರಕ ತೈಲ ಲಭಿಸುತ್ತದೆ.
ಕಜ್ಜಿ ತುರಿಕೆ:
ಚರ್ಮದ ಮೇಲೆ ಮೂಡುವ ಕೆಲವು ವಿಧ ಕಜ್ಜಿ ತುರಿಕೆಗಳಲ್ಲಿಯೂ ಇದರ ಎಲೆಯನ್ನು ಅರೆದು ಹಚ್ಚುವುದರಿಂದ ಕಡಿಮೆಯಾಗುವುದು. ಎಲೆ ಹಾಗೂ ಉಂಡೆ ಹುಳಿ ಹಾಕಿ ಕಾಯಿಸಿದ ಎಣ್ಣೆಯೂ ತುರಿಕೆಗೆ ಪ್ರಯೋಜನವಾಗುವುದು. ಗಾಯಗಳನ್ನು ಗುಣಪಡಿಸಲು ಉಪಯೋಗಿಸಬಹುದು.
ಮೂತ್ರ:
ಉರಿಮೂತ್ರ ಇರುವಾಗ ಇದರ ಎಲೆಯನ್ನು ಬೇಯಿಸಿ ಕಷಾಯ ಮಾಡಿ ಕುಡಿಯಬೇಕು. ಮೂತ್ರ ಮಾಡುವಾಗ ನೋವಾಗುವುದಿದ್ದರೆ ಇದರ ಬೇರನ್ನು ಜಜ್ಜಿ ಕಷಾಯ ಮಾಡಿ ಕುಡಿಯುವುದರಿಂದ ನೋವು ಕಡಿಮೆಯಾಗುವುದು. ಮೂತ್ರ ದಪ್ಪ ಬಿಳಿಯಾಗಿ ವಿಸರ್ಜನೆಯಾಗುತ್ತಿದ್ದರೆ ಎಲೆಯನ್ನು ಜ್ಯೂಸ್ ಮಾಡಿ ಸೋಸಿ ಅರ್ಧ ಚಮಚ ಜೀರಿಗೆ ಪುಡಿ ಸೇರಿಸಿ ಕುಡಿಯಬೇಕು.

ಜ್ವರ,ಕಫ:
ಮಕ್ಕಳಲ್ಲಿ ಕಂಡುಬರುವ ನಿಧಾನ ಗತಿಯ ಕಫದಿಂದ ಕೂಡಿದ ಜ್ವರ ಇರುವಾಗ ಗೋರಟೆ ಎಲೆ ರಸಕ್ಕೆ
ಜೇನು ಅಥವಾ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ೩ ಸಲ ೩ ದಿನ ಕೊಡಬೇಕು.
ಹಲ್ಲು ನೋವು:
ಹಲ್ಲು ನೋವಾಗುವಾಗ ಕೆಲವರು ಟೂತ್ ಪೇಸ್ಟ್, ಬೀಡಿ ಹೊಗೆಸೊಪ್ಪು ನೋವು ಇರುವಲ್ಲಿಗೆ ಇಟ್ಟು
ತೊಂದರೆ ಅನುಭವಿಸುತ್ತಾರೆ. ಆದರೆ ಗೊರಟೆ ಎಲೆ ಜಜ್ಜಿ ನೋವಿರುವಲ್ಲಿಗೆ ಇಟ್ಟರೆ ಬೇರೆ ಯಾವುದೇ ಅಡ್ಡ ಪರಿಣಾಮ ಆಗದೆ ನೋವು ಕಡಿಮೆ ಆಗುವುದು. ನಂತರ ದಂತ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ
ಪಡೆಯಬಹುದು.
ಕೂದಲು :
ಭಾವ ಪ್ರಕಾಶ ಗ್ರಂಥದಲ್ಲಿ “ಕೇಶರಂಜಕ” ಎಂಬುದಾಗಿ ಹೇಳಿದ್ದಾರೆ. ಅಂದರೆ ಕೂದಲಿಗೆ ಬಣ್ಣ ಕೊಡುವುದು
ಎಂದರ್ಥ. ಇದರ ಉಪಯೋಗದಿಂದ ದುರ್ಬಲ ಕೂದಲು ಗಟ್ಟಿಯಾಗುವುದು. ವಿರಳವಾದ ಕೂದಲಿರುವಲ್ಲಿ ದಪ್ಪ
ಕೂದಲು ಮೂಡಲು ಸಹಾಯ ಮಾಡುವುದು. ಗೋರಟೆ ಎಲೆಯ ರಸ ನಾಲ್ಕು ಪಾಲು ಹಾಗೂ ಒಂದು ಪಾಲು ಎಳ್ಳೆಣ್ಣೆಗೆ ಸ್ವಲ್ಪ ಯರಟಿ ಮಧುರ ಪುಡಿ ಹಾಕಿ ಪಾಕ ಮಾಡಿದ ಎಣ್ಣೆ ಕೂದಲಿನ ಬೆಳವಣಿಗೆಗೆ ಹಾಗೂ ಕಪ್ಪಾಗಿ ಕಾಣಲು ಸಹಾಯ ಮಾಡುವುದು. ಗೋರಟೆೆಯ ಎಲೆಯನ್ನು ನೀರು ಹಾಕದೆ ರಸ ತೆಗೆದು ಕೂದಲಿಗೆ ಹಚ್ಚಿಕೊಂಡು
ಕೂದಲನ್ನು ಕೆಮಿಕಲ್ ಇಲ್ಲದೆ ಕಪ್ಪಾಗಿಸಲು ಪ್ರಯತ್ನಿಸಬಹುದು.

ಗೋರಟೆಯನ್ನು ಮುಖ್ಯವಾಗಿ ಉಪಯೋಗಿಸಿ ತಯಾರಿಸಿದ ಸಹಚರಾದಿ ಕಷಾಯ, ಸಹಚರಾದಿ ತೈಲ,
ವಾತರೋಗದಲ್ಲಿ ಅತ್ಯಧಿಕ ಉಪಯೋಗಿಸಲ್ಪಡುವ ಔಷಧಿಗಳಾಗಿವೆ.
ಡಾ| ಹರಿಕೃಷ್ಣ ಪಾಣಾಜೆ