Skip links

ಹಾಗಲಕಾಯಿ

Scientific Name: Momordica charantia

ತುಳುವಿನಲ್ಲಿ ಕಂಚೊಳು ಅನ್ನುವ ಹಾಗಲಕಾಯಿ ರುಚಿಯಲ್ಲಿ ಬಹಳ ಕಹಿಯಾದರೂ ನಾವು ನಮ್ಮ ಬುದ್ಧಿ ಶಕ್ತಿ ಉಪಯೋಗಿಸಿ ಆಹಾರವಾಗಿ ಹಾಗೂ ಔಷಧಿಯಾಗಿ ಉಪಯೋಗಿಸುತ್ತಿದ್ದೇವೆ. ಮಲೆಯಾಳದಲ್ಲಿ “ಮಾಂಙಕ್ ತೇಙ, ಚಕ್ಕಕ್ ಚುಕ್” ಎಂಬ ಮಾತಿದೆ. ಅಂದರೆ……… ಮಾವು ತಿಂದು ಅಜೀರ್ಣ ಆದರೆ ತೆಂಗಿನಕಾಯಿ ಒಂದು ತುಂಡು ಜಗಿದು ನುಂಗಬೇಕು. ಹಲಸಿನ ಹಣ್ಣು ತಿಂದು ಅಜೀರ್ಣ ಆದರೆ ಶುಂಠಿ ಒಂದು ತುಂಡು ಜಗಿದು ನುಂಗಿದರೆ ಪರಿಹಾರವಾಗುವುದು ಎಂದು ಅರ್ಥ. ಹಾಗೆಯೇ ತುಳುವಿನಲ್ಲಿ “ಕಂಚೊಳು ಕಯಿಪೆ ಪಂಡ್‌ತ್ ದಕ್ಕರೆ ಬಲ್ಲಿ ಅಂಬಟೆ ಪಾಡತ್ ಆಜಾವೊಡು” ಹಾಗಲಕಾಯಿ ಕಹಿ ಎಂದು ಬಿಸಾಡಬಾರದು ಅಂಬಟೆಯನ್ನು ಸೇರಿಸಿ ಪಲ್ಯ ಮಾಡಿದರೆ ಕಹಿ ಅಂಶ ಹೋಗಿ ತಿನ್ನಲು ರುಚಿಯಾಗುವುದು ಎಂದಿದ್ದಾರೆ.

ಪಾಕ ಪ್ರಿಯರು ಇದರ ಪಲ್ಯ, ಬೋಳು ಕೊದ್ಲು, ಕೊದ್ಲು, ಮೆಣಸುಕಾಯಿ, ಕಾಯಿ ಹುಳಿ, ಉಪ್ಪು ಮಜ್ಜಿಗೆಯಲ್ಲಿ ಹಾಕಿ ಒಣಗಿಸಿ ಸೆಂಡಿಗೆ, ಹಣ್ಣಾದರೆ ಚಟ್ನಿ ಮಾಡಿ ಉಪಯೋಗಿಸುತ್ತಾರೆ. ಬಳ್ಳಿಯಾಗಿ ಬೆಳೆಯುತ್ತದೆ. ಇದರ ಎಲೆಗಳು ಅಲಗುಗಳಿಂದ ಕೂಡಿದೆ. ಐದು ಎಲೆಗಳು ಒಟ್ಟು ಸೇರಿದಂತೆ ವೃತ್ತಾಕಾರದಲ್ಲಿ ಹರಡಿ ಹಳದಿ ಹೂಗಳು ಮೂಡಿ ನಂತರ ಹಾಗಲಕಾಯಿ ಕಂಡುಬರುತ್ತದೆ. ಕಡು ಪಚ್ಚೆ ಮತ್ತು ಬಿಳಿ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕಡು ಪಚ್ಚೆ ಕಹಿ ಜಾಸ್ತಿ. ಪಿತ್ತ ಕಫ ಕಡಿಮೆಮಾಡಲು, ಯಕೃತ್ ಮತ್ತು ಪ್ಲೀಹಾ ತೊಂದರೆಯಲ್ಲಿ, ಚರ್ಮರೋಗ, ಕ್ರಿಮಿಬಾಧೆ, ಡಯಾಬಿಟಿಸ್‌ನಲ್ಲಿ ಹಾಗಲಕಾಯಿಗೆ ಹಾಗೂ ಅದರ ಎಲೆಗಳಿಗೆ ವಿಶಿಷ್ಟ ಸ್ಥಾನವಿದೆ.

ಡಯಾಬಿಟೀಸ್:

ದಿನದಿಂದ ದಿನಕ್ಕೆ ಡಯಾಬಿಟೀಸ್ ಸದಸ್ಯರ ಸಂಖ್ಯೆ ಜಾಸ್ತಿಯಾಗುತ್ತಿದೆ. ಎಲ್ಲರೂ ಸುಲಭದಲ್ಲಿ ಡಯಾಬಿಟೀಸ್‌ಗೆ ಯಾವುದಾದರೂ ಪರಿಹಾರವಿದೆಯಾ ಎಂದು ಹುಡುಕುತ್ತಿರುತ್ತಾರೆ. ಡಯಾಬಿಟೀಸ್ ಹೆಸರಿನೊಂದಿಗೆ ಹಾಗಲಕಾಯಿ ಚಿತ್ರ ಬಂದರೆ ನೋಡುವವರ ಕಣ್ಣು ಅರಳುತ್ತದೆ. ಇದರಲ್ಲಿ Polypeptide-P ಎಂಬ ರಾಸಾಯನಿಕ ಇದೆ. ಇದು ಇನ್ಸುಲಿನ್‌ನಂತೆ ಸಕ್ಕರೆ ಪ್ರಮಾಣವನ್ನು ಕಡಿಮೆಮಾಡುವ ಗುಣ ಹೊಂದಿದೆ. ಆದರೆ ಇದು ತೀರಾಕಡಿಮೆ ಪ್ರಮಾಣದಲ್ಲಿ ಸಕ್ಕರೆಯನ್ನು ರಕ್ತದಲ್ಲಿ ಕಡಿಮೆ ಮಾಡುವುದರಿಂದ Food & Drug Administration (FDA) ಔಷಧಿಯಾಗಿ ಉಪಯೋಗಿಸಿಲ್ಲ. ಪ್ರತಿನಿತ್ಯ ಕಷ್ಟಪಟ್ಟು ಕಹಿ ಕುಡಿದರೂ ನಿರೀಕ್ಷಿತ ಪರಿಣಾಮ ಕಾಣಲಾರದು. ಬೇರೆ ಔಷಧಿಗಳೊಂದಿಗೆ ರ‍್ಯಾಯ ಚಿಕಿತ್ಸೆಯಾಗಿ ಇದನ್ನು ಉಪಯೋಗಿಸಬಹುದು. ಆದರೆ ಹಾಗಲಕಾಯಿ ಸೇವನೆಯಿಂದ ತಿಂದ ಆಹಾರದಲ್ಲಿನ ಗ್ಲುಕೋಸನ್ನು ಶಕ್ತಿಯಾಗಿ ಉಪಯೋಗಿಸಲು ಸಹಾಯ ಮಾಡುವುದು. ಬೊಜ್ಜು ಶರೀರದಲ್ಲಿ ಸಂಗ್ರಹವಾಗಲು ಬಿಡುವುದಿಲ್ಲ. ಜೀವಸತ್ವಗಳು(ವಿಟಮಿನ್ ಇತ್ಯಾದಿ) ಸರಿಯಾಗಿ ಬಳಕೆಯಾಗುವುದು. ೧೫-೨೦ಗ್ರಾಂ ಹಾಗಲಕಾಯಿ ತುಂಡುಮಾಡಿ ನೀರಲ್ಲಿ ೩೦ ನಿಮಿಷ ಇರಿಸಿ, ನಂತರ ಸ್ವಲ್ಪ ಉಪ್ಪು, ಲಿಂಬೆರಸ, ಸ್ವಲ್ಪ ಜೇನು, ಕಾಲು ಚಮಚ ಒಳ್ಳೆ ಮೆಣಸು ಪುಡಿ ಸೇರಿಸಿ ಜ್ಯೂಸ್ ಮಾಡಿ ಕುಡಿಯಬಹುದು.

ಕೊಲೆಸ್ಟ್ರಾಲ್:

ನಿರ್ಧಿಷ್ಟ ಪ್ರಮಾಣದಲ್ಲಿ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದು. ಯೂರಿಕ್ ಆಸಿಡ್ ರಕ್ತದಲ್ಲಿ ಜಾಸ್ತಿಯಾದರೆ ಗಂಟು ನೋವು ಅನುಭವಿಸುತ್ತೇವೆ. ಅಂತಹ ಸಂದರ್ಭದಲ್ಲಿ ಹಾಗಲಕಾಯಿ ಉಪಯೋಗಿಸಬಹುದು. ಯಾವುದೇ ಸಂಶಯಗಳಿದ್ದರೆ ವೈದ್ಯರ ಸಲಹೆಯೊಂದಿಗೆ ಉಪಯೋಗಿಸಿವುದು ಉತ್ತಮ.
ಪಿತ್ತ, ಕಫ ಜಾಸ್ತಿಯಾಗಿರುವಾಗ ಅನುಭವೀ ವೈದ್ಯರು ಹಾಗಲಕಾಯಿ ಎಲೆರಸವನ್ನು ಕುಡಿಸಿ ವಾಂತಿ ಅಥವಾ ಭೇದಿ ಮಾಡಿಸಿ ಶಮನ ಮಾಡುತ್ತಾರೆ.
ಹೊಟ್ಟೆಯಲ್ಲಿ ಕ್ರಿಮಿಗಳ ತೊಂದರೆ, ಲಿವರ್, ಪ್ಲೀಹಾ ವೃದ್ಧಿಯಾಗಿರುವಾಗ ಎಲೆರಸವನ್ನು ೫ ರಿಂದ ೧೦ಮಿಲಿ ಸೇವನೆ ಮಾಡಬಹುದು. ಚರ್ಮತುರಿಕೆಗೂ ಎಲೆಯನ್ನು ಅರೆದು ಹಚ್ಚುವುದರಿಂದ ಕಡಿಮೆಯಾಗುವುದು.
ಹಾಗಲಕಾಯಿ ಅತಿ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಆಹಾರ ಪದಾರ್ಥವಾಗಿ ವಿವಿಧ ತಿಂಡಿ ತಿನಿಸುಗಳಲ್ಲಿ ಉಪಯೋಗಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಔಷಧಿಯಾಗಿ ಉಪಯೋಗಿಸುವಾಗ ವೈದ್ಯರ ಸಲಹೆ ಪಡೆದು ಉಪಯೋಗಿಸಬೇಕು. ಇದರ ಬೇರು ತೀಕ್ಷ್ಣ ಗುಣವನ್ನು ಹೊಂದಿದ್ದು ಗರ್ಭಿಣಿಯರು ಬೇರನ್ನು ಸೇವಿಸಿದರೆ ಗರ್ಭಪಾತ ಸಂಭವಿಸಬಹುದು.

ಡಾ| ಹರಿಕೃಷ್ಣ ಪಾಣಾಜೆ


Leave a comment

This website uses cookies to improve your web experience.