Skip links

ಏಕನಾಯಕ

Scientific Name: Salacia chinensis

ಸಪ್ತ ಚಕ್ರ ಎಂಬ ಇನ್ನೊಂದು ಹೆಸರು ಇರುವ ಇದರ ಮೂಲವನ್ನು ಎರಡು ತುಂಡು ಮಾಡಿದರೆ ಏಳು ಚಕ್ರಗಳು ಸುತ್ತು ವರಿದಂತೆ ಕಾಣುತ್ತದೆ. ಬೇರಿನ ಹೊರ ಭಾಗ ಚಿನ್ನದ ತೆಳು ಹೊದಿಕೆಯಂತೆ ಹಳದಿ ತೆಳು ಪದರ ಕಂಡುಬರುವುದರಿಂದ “ಸ್ವರ್ಣ ಮೂಲ” ಎಂದೂ ಕರೆಯುತ್ತಾರೆ. ನಿತ್ಯ ಕಡು ಪಚ್ಚೆ ಬಣ್ಣದಿಂದ ಕಂಗೊಳಿಸುವ ಸಣ್ಣ ವೃಕ್ಷ. ದಪ್ಪ ಕಾಂಡವೇ ಬಳ್ಳಿಯಂತೆ ಹರಡಿ ಸಾಂದ್ರವಾಗಿ ಬೆಳೆದು ನಿಂತಿರುತ್ತದೆ. ಎಲೆಯ 3-6 ಇಂಚು ಉದ್ದ ಹಾಗೂ ಒಂದರಿಂದ ಎರಡು ಇಂಚು ಅಗಲ ಇರುತ್ತದೆ. ಕಂದು ಬಣ್ಣದ ಹೂಗಳು ಪ್ರತ್ಯೇಕ ಗುಚ್ಚಗಳಲ್ಲಿ ಮೂಡಿಬರುತ್ತದೆ. ಗೋಲಾಕಾರದ ಫಲ ಹಣ್ಣಾದಾಗ ಕೆಂಪಾಗಿ ಸುಂದರವಾಗಿ ಕಾಣುತ್ತದೆ. ಹಣ್ಣಿನ ಒಳಭಾಗ ಬಿಳಿಯಾಗಿದ್ದು ತಿನ್ನಲು ಯೋಗ್ಯವಾಗಿರುತ್ತದೆ. ಇದು ಮಡಿಕೇರಿಯಿಂದ ಮುಂಯಿ ವರೆಗಿನ ಸಮುದ್ರದ ಸಮೀಪದ ಕಾಡುಗಳಲ್ಲಿ ಹುಲುಸಾಗಿ ಕಂಡುಬರುತ್ತದೆ.  

ಕಹಿ ಚೊಗರು ರಸವನ್ನು ಹೊಂದಿದ ಬೇರು ಔಷಧಿಗಾಗಿ ಉಪಯುಕ್ತ ಭಾಗ. ಆಯುರ್ವೇದದ ಮೂಲ ಗ್ರಂಥಗಳಲ್ಲಿ ಹೆಚ್ಚು ಉಲ್ಲೇಖಿಸಲ್ಪಡದಿದ್ದರೂ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆಯುಳ್ಳ ವನಸ್ಪತಿಯಾಗಿದೆ. ಮೇಹದಲ್ಲಿ ಹೆಚ್ಚು ಉಪಯೋಗಿಸಲ್ಪಡುವ ಇದನ್ನು ಬೊಜ್ಜು ಕರಗಿಸಲು, ಬಾವು ನೋವು ಇರುವಲ್ಲಿ, ಸ್ತ್ರೀ ವ್ಯಾದಿಗಳಲ್ಲಿಯೂ ಉಪಯೋಗಿಸುತ್ತಾರೆ.  

ಮಧುಮೇಹ: ಮಧುಮೇಹದಿಂದ ಬಳಲುತ್ತಿರುವ ದೇಶಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಹೆಚ್ಚಾಗಿ 50 ವರುಷಗಳ ನಂತರ ಗೋಚರಿಸುವ ಮಧುಮೇಹ ಈಗ 30-40 ವರ್ಷದವರಲ್ಲಿ ಅಧಿಕ ಕಂಡುಬರುತ್ತಿದೆ. ವ್ಯಾಯಾಮರಹಿತ ಜೀವನ, ಶ್ರಮರಹಿತ ಕೆಲಸ, ಬಗೆಬಗೆಯ ವಿಶೇಷ ಆಹಾರಗಳ ಸೇವನೆ, ಆಧುನಿಕ ಜೀವನ ಶೈಲಿಯಲ್ಲಿ ತೇಲಾಡುವ ಜನರಲ್ಲಿ ಮಧುಮೇಹ ಬಿಡಾರ ಮಾಡಿದೆ. ಜೀರ್ಣಕ್ರಿಯೆಯ ವ್ಯತ್ಯಯ ಮಧು ಮೇಹಕ್ಕೆ ಮೂಲಕಾರಣ. ಜೀವನ ಶೈಲಿಯ ಬದಲಾವಣೆ ಆಹಾರದಲ್ಲಿ ಬದಲಾವಣೆಯಾದರೆ ಸೂಕ್ತ ಔಷಧಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೂ ಮಧುಮೇಹವನ್ನು ನಿಯಂತ್ರಿಸಬಹುದು.ಸಸ್ಯ ಮೂಲದ ಮೂಲಕ ಮಧು ಮೇಹ ನಿಯಂತ್ರಿಸಲ್ಪಡುತ್ತದೆ ಎನ್ನುವುದು ಆಶಾದಾಯಕ.

ಏಕನಾಯಕ ಬೇರನ್ನು (5-6ಗ್ರಾಂ) ಕಷಾಯಮಾಡಿ ದಿನಕ್ಕೆರಡು ಸಲ ಕುಡಿಯಬಹುದು ಅಥವಾ ಇದರ ಪುಡಿಯನ್ನು ನೀರಲ್ಲಿ ಕಲಸಿ ಕುಡಿಯುವುದರಿಂದ ಕೆಲವು ವಿಧದ ಮಧುಮೇಹವನ್ನು ನಿಯಂತ್ರಿಸಬಹುದು.

ಇದನ್ನು ಇನ್ನಿತರ ವನಸ್ಪತಿಯೊಂದಿಗೆ ಸೇರಿಸಿ ಕಷಾಯ ಮಾಡಿಕುಡಿದರೂ ಉತ್ತಮ ಪರಿಣಾಮ ಕಂಡುಬರುವುದು. ಏಕನಾಯಕ ಟೀ ಸ್ಯಾಚೆಟ್‍ಗಳೂ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬೊಜ್ಜು :

ಜೀರ್ಣಕ್ರಿಯೆಯ ವ್ಯತ್ಯಯದಿಂದಲೇ ಶರೀರ ದಪ್ಪವಾಗಿ ಬೆಳೆಯುತ್ತದೆ. ಇದು ಪಚನ ಕ್ರಿಯೆಯನ್ನು ಸೂಕ್ತವಾಗಿ ನಿಯಂತ್ರಿಸುವುದರಿಂದ ಶರೀರದಲ್ಲಿ ಬೊಜ್ಜು ತುಂಬುವುದನ್ನು ನಿಯಂತ್ರಿಸುತ್ತದೆ. 2-3ಗ್ರಾಂ ಪುಡಿಯನ್ನು ಪ್ರತಿ ನಿತ್ಯ ಆಹಾರದ ಮೊದಲು ಸೇವಿಸಿ ನೀರು ಕುಡಿಯಬೇಕು.  

ನೋವು ಬಾವು :

ನೋವು ಇರುವ ಭಾಗದಲ್ಲಿ ಬಾವು ಇರುತ್ತದೆ. ಇದನ್ನು ನೀರಲ್ಲಿ ಅರೆದು ನೋವು ಬಾವು ಇರುವ ಭಾಗಕ್ಕೆ ಹಚ್ಚಿದರೆ ಕಡಿಮೆಯಾಗುವುದು.  

ಸ್ತ್ರೀ ವ್ಯಾಧಿಗಳಲ್ಲಿ:

ಮುಟ್ಟಾಗುವಾಗ ಹೊಟ್ಟೆ ನೋವು ಇದ್ದರೆ ಇದರ 2-3ಗ್ರಾಂ ಪುಡಿಯನ್ನು ನೀರಲ್ಲಿ ಸೇರಿಸಿ ಕುಡಿಯಬೇಕು. ಕಡಿಮೆ ಮುಟ್ಟು ಸ್ರಾವ ಇರುವವರು ಇದರ ಪುಡಿಯನ್ನು ದಿನಕ್ಕೆರಡು ಸಲ 28 ದಿನ ಸೇವಿಸಬೇಕು.  

ಸುಮ್ಮನೇ ಕುಳಿತರೂ ಅತಿ ಬೆವರುವವರು ಇದರ ಕಷಾಯವನ್ನು 7-14 ದಿನ ಸೇವಿಸಬೇಕು.  ಮೈ ತುರಿಕೆ, ನಂಜು ಹುಣ್ಣುಗಳು ಮೈಮೇಲೆ ಬೀಳುತ್ತಿದ್ದರೆ ಇದರ ಬೇರಿನ ಕಷಾಯ 2 ವಾರ ಸೇವಿಸಬೇಕು. ಗರ್ಬಿಣಿ ಸ್ತ್ರೀಯರು ಪ್ರಮಾಣಕ್ಕಿಂತ ಅಧಿಕ ಸೇವಿಸಲೇಬಾರದು.

  ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.