Skip links
Tulasi img

ತುಳಸಿ

Scientific Name: Ocimum sanctum

ನೂರಾರು ಪ್ರಭೇದಗಳು ತುಳಸಿಯಲ್ಲಿ ಕಂಡುಬoದರೂ ರಾಮ ತುಳಸಿ(ಬಿಳಿ) ಮತ್ತು ಕೃಷ್ಣ ತುಳಸಿ(ಕಪ್ಪು ) ಎರಡು ವಿಧ. ಕೃಷ್ಣ ತುಳಸಿ ಹೆಚ್ಚು ತೀಕ್ಷ್ಣ. ಔಷಧಿಗಾಗಿ ಕೃಷ್ಣ ತುಳಸಿ ಒಳ್ಳೆಯದು.ಆದ್ಮಾತ್ಮಿಕ, ಧಾರ್ಮಿಕ, ಪೌರಾಣಿಕ ಹಾಗೂ ವೈದ್ಯಕೀಯದಲ್ಲಿ ಉಲ್ಲೇಖಿಸಲ್ಪಟ್ಟ ವಿಶೇಷ ವನಸ್ಪತಿ. ತುಳಸಿ ಎಂಬ ಮೂರು ಅಕ್ಷರದ ಈ ಸಸ್ಯ ಹಿಂದೂ ಧರ್ಮದಲ್ಲಿ ಮಹತ್ವ ಪಡೆದಿದೆ. ತನಗೆ ಸ್ವಂತ ಮನೆ ಕಟ್ಟಿದಂತೆ ತುಳಸಿಗೂ ಒಂದು ಪ್ರಶಸ್ಥ ಸ್ಥಳದಲ್ಲಿ ಕಟ್ಟೆ ಕಟ್ಟಿ ನೆಲೆ ನೀಡಲಾಗುತ್ತದೆ. ಅದರ ಬುಡದಲ್ಲಿ ದೀಪ ಇಡಲು ಸಣ್ಣ ಸ್ಥಳ. ಬೆಳಗ್ಗೆ ಎದ್ದು ಗುಡಿಸಿ, ನೀರು ಎರೆದು, ರಂಗೋಲಿ ಹಾಕಿ, ದೀಪ ಇಟ್ಟು ಪ್ರದಕ್ಷಿಣೆ ಬರುತ್ತೇವೆ.

Tulasi img

ವಿಷ್ಣು ದೇವರ ಪ್ರಿಯ ಸಸ್ಯ, ಅತ್ಯಧಿಕ ಔಷಧಿ ಗುಣ ಇರುವ ತುಳಸಿ ಇಲ್ಲದೆ ಪೂಜೆ ನಡೆಯದು. ವಿಷ್ಣುವಿಗೆ, ಕೃಷ್ಣನಿಗೆ ಲಕ್ಷ, ಕೋಟಿ ತುಳಸಿ ಅರ್ಚನೆ ನಡೆಯುತ್ತದೆ.ನೈವೇದ್ಯ ಅರ್ಪಣೆಗೂ, ದಾನ ನೀಡಲೂ ತುಳಸಿ ಬೇಕೇ ಬೇಕು. ಜೀವನದ ಕೊನೆಯ ಕಾಲದಲ್ಲೂ ತುಳಸಿಗೆ ಸ್ಥಾನವಿದೆ. ಕೃಷ್ಣನನ್ನು ಚಿನ್ನದಲ್ಲಿ ತೂಗುತ್ತೇನೆಂದು ತನ್ನ ಎಲ್ಲಾ ಚಿನ್ನಾಭರಣವನ್ನು ಸೇರಿಸಿ ಸತ್ಯಭಾಮೆ ತೂಗಿ(ತುಲಾಭಾರ)ದರೂ ಕೃಷ್ಣನನ್ನು ತೂಗಲಾಗಲಿಲ್ಲ.ಆದರೆ ರುಕ್ಮಿಣಿ ಒಂದು ತುಳಸಿ ದಳವನ್ನು ಚಿನ್ನದೊಂದಿಗೆ ಇಟ್ಟಾಗ ಕೊಡಲೇ ಕೃಷ್ಣ ಕುಳಿತ ತಕ್ಕಡಿಯ ತಟ್ಟೆ ಮೇಲೆ ಬಂತು. ತುಳಸಿಯ ಮಹತ್ವವೇನೆಂದು ಪುರಾಣದಲ್ಲಿ ಮನದಟ್ಟು ಮಾಡಿದ್ದಾರೆ.

ಕೊರೊನಾ ಸಮಯದಲ್ಲಿ ತುಳಸಿಗೆ ಡಿಮಾಂಡೋ ಡಿಮಾಂಡು. ತುಳಸಿಯ ಮಹತ್ವ ಕಲಿಯುಗದಲ್ಲಿ ಕೊರೊನಾ ತೋರಿಸಿ ಕೊಟ್ಟಿತು.ಆಂಟಿವೈರಸ್ ಮತ್ತು ಇಮ್ಯುನಿಟಿ ವರ್ಧಿಸುವ ಶಕ್ತಿ ತುಳಸಿಗೆ ಇದೆ ಎಂದು ಸಾಬೀತಾಗಿದೆ. ತುಳಸಿಯೊಂದಿಗೆ ಶುಂಠಿ, ಒಳ್ಳೆ ಮೆಣಸು, ದಾಲ್ಚೀನಿ ಸೇರಿಸಿ ತಯಾರಿಸಿದ ಆಯುಷ್ ಕ್ವಾಥ ಎಂಬ ತಯಾರಿಕೆ ಕೊರೊನಾ ತಡೆಗಟ್ಟಲು ಹಾಗೂ ಸಣ್ಣ ಲಕ್ಷಣಗಳಿದ್ದರೂ ಉಪಯೋಗಿಸಬೇಕೆಂದು ಕೇಂದ್ರದ ಆಯುಷ್ ಇಲಾಖೆ ನಿರ್ದೇಶನ ನೀಡಿತ್ತು. ತುಳಸಿಯನ್ನು ಕೆಮ್ಮು, ಕಫ, ಜ್ವರ,ಚರ್ಮದ ತೊಂದರೆಗಳಲ್ಲಿ ವಿಶೇಷವಾಗಿ ಉಪಯೋಗಿಸಲಾಗುತ್ತದೆ.

Tulasi img

ಜ್ವರ:

ಅರ್ಧ ಮುಷ್ಟಿ ತುಳಸಿ ಎಲೆಯನ್ನು ೪ ಗ್ಲಾಸ್ ನೀರು ಹಾಕಿ ಕುದಿಸಿ ಒಂದು ಗ್ಲಾಸ್ ಮಾಡಿ ಸೋಸಿ ಕಾಲು ಚಮಚ ಒಳ್ಳೆ ಮೆಣಸು ಪುಡಿ ಸೇರಿಸಿ ದಿನಕ್ಕೆ ಮೂರು ಸಲ ಕುಡಿಯುವುದರಿಂದ ಶೀತ, ಜ್ವರ ಕಡಿಮೆಯಾಗುವುದು. ವೈರಲ್ ಜ್ವರದಲ್ಲಿ ವಿಶೇಷ ಪ್ರಯೋಜನವಾಗುವುದು.

ಮೂತ್ರ ಉರಿ ಮೂತ್ರ ಕಲ್ಲು:

೩ಗ್ರಾಂ ನಷ್ಟು ಬೀಜವನ್ನು ನೆನೆಹಾಕಿ ನಂತರ ಕುದಿಸಿ ಇಂಗಿಸಿ ಸೋಸಿ ಕುಡಿಯುವುದರಿಂದ ಮೂತ್ರ ಉರಿ ಕಡಿಮೆಯಾಗುವುದು. ಸಣ್ಣ ಸಣ್ಣ ಕಲ್ಲುಗಳು ಇದ್ದರೆ ೩-೪ ವಾರ ಕುಡಿಯುವುದರಿಂದ ಮೂತ್ರದೊಂದಿಗೆ ಹೊರಬರುವುದು.

Tulasi img

ವಾಂತಿ:

ತುಳಸಿ ಎಲೆ ರಸ ೧೦-೧೫ml ಸಂಗ್ರಹಿಸಿ ೧/೨ ಚಮಚ ಏಲಕ್ಕಿ ಮತ್ತು ೧/೨ ಚಮಚ ಜೇನು ಸೇರಿಸಿ ದಿನದಲ್ಲಿ ೩-೪ ಸಲ ಕುಡಿಯಲು ಕೊಡುವುದರಿಂದ ವಾಂತಿ ನಿಲ್ಲುವುದು.

ಹೊಟ್ಟೆನೋವು:

ಮುಟ್ಟಾಗುವಾಗ ಹೊಟ್ಟೆ ನೋವಿದ್ದರೆ ಮುಟ್ಟಾಗುವ ಒಂದು ವಾರ ಮೊದಲು ತುಳಸಿ ಬೇರು ೨೫-೩೦ಗ್ರಾಂ ಜಜ್ಜಿ ಕಷಾಯ ಮಾಡಿ ಬೆಳಗ್ಗೆ ಮತ್ತು ರಾತ್ರಿ ಸಣ್ಣ ತುಂಡು ಕಲ್ಲು ಸಕ್ಕರೆ ಸೇರಿಸಿ ೫ ದಿನ ಕುಡಿಯಬೇಕು.

Tulasi img

ಕಿವಿ ಸೋರುವುದು ಮತ್ತು ನೋವು:

೧೦೦ml ತುಳಸಿ ರಸವನ್ನು ೨೫ml ತೆಂಗಿನೆಣ್ಣೆಯಲ್ಲಿ ಕಾಯಿಸಿ ನೀರಿನ ಅಂಶ ಹೋಗುವಷ್ಟು ಪಾಕ ಮಾಡಿ ಸಂಗ್ರಹಿಸಿ ಕಿವಿಗೆ ಬಿಂದು ಪ್ರಮಾಣದಲ್ಲಿ ಬಿಡುವುದರಿಂದ ಕಿವಿನೋವು ಮತ್ತು ಸೋರುವುದು ಕಡಿಮೆಯಾಗುವುದು.

ಬೊಜ್ಜು:

ಶರೀರ ಅಧಿಕ ಭಾರ ಇದ್ದರೆ ಬೊಜ್ಜು ಕರಗಿಸಲು ವ್ಯಾಯಾಮದೊಂದಿಗೆ ೩ ಚಮಚ ತುಳಸಿ ರಸಕ್ಕೆ ಒಂದು ಚಮಚ ಜೇನು ಸೇರಿಸಿ ಪ್ರತಿದಿನ ಬೆಳಗ್ಗೆ ಒಂದು ಅಥವಾ ಎರಡು ತಿಂಗಳು ಸೇವಿಸುವುದರಿಂದ ಪರಿಣಾಮ ಕಂಡು ಕೊಳ್ಳಬಹುದು.

Tulasi img

ಕೆಮ್ಮು ದಮ್ಮು:

ಕೆಮ್ಮಿನೊಂದಿಗೆ ಅಸ್ತಮಾ ತೊಂದರೆ ಇದ್ದರೆ ೧೦ml ತುಳಸಿ ರಸಕ್ಕೆ ಒಳ್ಳೆ ಮೆಣಸು ಪುಡಿ ೧/೪ ಚಮಚ ಸೇರಿಸಿ ಒಂದು ಅಥವಾ ಎರಡು ವಾರ ಬೆಳಗ್ಗೆ ಕುಡಿಯುವುದರಿಂದ ಕಡಿಮೆಯಾಗುವುದು. ಈ ಚಿಕಿತ್ಸೆಯನ್ನು ತಿಂಗಳಲ್ಲಿ ಒಂದು ಸಲ ಆವರ್ತಿಸಬಹುದು.

ಬೆವರು ವಾಸನೆ:

ತುಳಸಿ ಎಲೆಯನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ ಸ್ನಾನ ಮಾಡುವ ಮೊದಲು ನೀರಲ್ಲಿ ಕಲಸಿ ಮೈಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಬೇಕು.ಇದರಿಂದ ಬೆವರು ವಾಸನೆ ಕಡಿಮೆಯಾಗುವುದರೊಂದಿಗೆ ಚರ್ಮ ತುರಿಕೆಯೂ ಕಡಿಮೆಯಾಗುತ್ತದೆ.

Tulasi img

ಕೃಷಿ:

ತುಳಸಿ ಗಿಡ ಇಲ್ಲದ ಮನೆ ಅಥವಾ ಹಿತ್ತಲು ಇರಲಿಕ್ಕಿಲ್ಲ. ಮನೆ ಔಷಧಿಗಾಗಿ ಉಪಯೋಗಿಸಲು ಸ್ವಲ್ಪ ಗಿಡಗಳಿದ್ದರೆ ಸಾಕಾಗಬಹುದು. ವಾಣಿಜ್ಯವಾಗಿ ಬಹಳ ಬೇಡಿಕೆ ಇರುವ ತುಳಸಿಯನ್ನು ಬೀಜ ಬಿತ್ತಿ ಮೊಳಕೆ ಬರಿಸಿ ನಾಟಿಮಾಡಿ ಬೆಳಸಲಾಗುತ್ತದೆ. ಹವಾಗುಣಕ್ಕೆ ಅನುಗುಣವಾಗಿ ಸುಲಭದಲ್ಲಿ ದಟ್ಟವಾಗಿ ಬೆಳೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಇದರ ಕೃಷಿ ಮಾಡುತ್ತಾರೆ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.