Scientific Name: Syzygium cumini
ನೇರಳೆ ಹಣ್ಣಿನ ರುಚಿ ತಿಳಿಯದವರಿಲ್ಲ. ಸಿಹಿಯೊಂದಿಗೆ ಚೊಗರು, ಸ್ವಲ್ಪ ಹುಳಿ ಸೇರಿ ಆಸ್ವಾದಿಸಲು ಖುಷಿ ಆಗುತ್ತದೆ. ಹಣ್ಣಿನ ರುಚಿ ನೊಡಿದ್ದೇವೆಯೇ ಹೊರತು ಔಷಧಿಯಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ನೇರಳೆ ಮರ ಹಚ್ಚ ಹಸಿರಾಗಿ ನೂರು ಅಡಿಗಿಂತಲೂ ಎತ್ತರ ಬೆಳೆಯುತ್ತದೆ. ತುಂಬಾ ಗಟ್ಟಿ ಮರವೂ ಹೌದು. ಎಲೆಗಳು ನಯವಾಗಿ ಬಿಸಿಲು ಬೀಳುವಾಗ ಮಿನುಗುತ್ತದೆ. ಹೂ ಬಿಳಿ ವರ್ಣದಲ್ಲಿ ವೃತ್ತಾಕಾರವಾಗಿ ನೀಳ ಕಡ್ಡಿಯಂತಹ ಸುಂದರ ದಳಗಳಿಂದ ಸುಗಂಧ ಭರಿತವಾಗಿರುತ್ತದೆ. 1-11/2 ಇಂಚು ಉದ್ದದ ಹಣ್ಣು ಪ್ರಾರಂಭದಲ್ಲಿ ಹಸಿರು ವರ್ಣದಲ್ಲಿ ಬೆಳೆದಾಗ ಕೆಂಪಾಗಿ ಹಣ್ಣಾದಾಗ ಕಡುನೀಲ ವರ್ಣದಲ್ಲಿ ಕಂಡುಬರುತ್ತದೆ. ಹಣ್ಣಿನ ಒಳಗೆ ಒಂದು ಬೀಜವಿರುತ್ತದೆ. ಎಪ್ರಿಲ್ ಜೂನ್‍ನಲ್ಲಿ ಹೂ ಕಂಡುಬಂದರೆ ಜೂನ್ ಜುಲಾಯಿಯಲ್ಲಿ ಹಣ್ಣುಗಳು ಗೊಂಚಲಿನಲ್ಲಿ ಕಂಡುಬರುತ್ತದೆ. ವರ್ಷದಲ್ಲಿ 1-2 ತಿಂಗಳು ಸಿಗುವ ಫಲ ವಿಶೇಷ ಔಷಧೀಯ ಗುಣಗಳನ್ನು ಹೊಂದಿದೆ.
ಇದನ್ನು ಆಯಾಸ ನಿವಾರಿಸಲು, ಪಿತ್ತ, ದಾಹ ಕಡಿಮೆಮಾಡಲು, ಮಧುಮೇಹ ನಿಯಂತ್ರಿಸಲು, ಬಾಯಿ ಒಳಗಿನ, ಹೃದಯದ, ಚರ್ಮದ ಆರೋಗ್ಯಕ್ಕಾಗಿ ಹಾಗೂ ಜೀರ್ಣಕ್ರಿಯೆ ಉತ್ತಮ ಮಾಡಲು ಉಪಯೋಗಿಸಲಾಗುತ್ತದೆ. ಎಲೆ, ತೊಗಟೆ, ಹಣ್ಣು, ಬೀಜ ಇವೆಲ್ಲವನ್ನು ಔಷಧಿಗಾಗಿ ಉಪಯೋಗಿಸಲಾಗುತ್ತದೆ. ನೇರಳೆ ಬೀಜ ಅತ್ಯಧಿಕವಾಗಿ ಉಪಯೋಗಿಸಲ್ಪಡುತ್ತದೆ.
ನೇರಳೆ ಬೀಜದಲ್ಲಿ ನಮ್ಮ ಶರೀರಕ್ಕೆ ಅಗತ್ಯವಿರುವ ವಿಟಮಿನ್-ಸಿ, ಕ್ಯಾಲ್ಸಿಯಂ, ಸೋಡಿಯಂ, ಪೋಟಾಸಿಯಂ, ಮೆಗ್ನೇಷಿಯಂ ಲಭ್ಯವಿದೆ. ಇವು ಶರೀರ ಪೋಷಣೆಗೆ ನೆರವಾಗುತ್ತದೆ.
ಮಧುಮೇಹ:
ಇದರ ತೊಗಟೆಯ ಕಷಾಯ ಅಥವಾ ಬೀಜವನ್ನು ಪುಡಿಮಾಡಿ ಕಷಾಯ ಮಾಡಿ ಕುಡಿಯಬೇಕು. ಶರೀರದಲ್ಲಿರುವ ಪಿಷ್ಠ (starch)ವನ್ನು ಕರಗಿಸಿ ಶಕ್ತಿ(energy) ನೀಡುವ ಮೂಲಕ ಶರೀರದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದು. 5 ಗ್ರಾಂ ಬೀಜದ ಪುಡಿಯನ್ನು ನೀರಲ್ಲಿ ಸೇರಿಸಿ ದಿನಕ್ಕೆ ಎರಡು ಸಲ ಕುಡಿಯಬೇಕು. ನೇರಳೆ ಹಣ್ಣನ್ನು ಜ್ಯೂಸ್ ಮಾಡಿ ಮಣ್ಣಿನ ಪಾತ್ರೆಗೆ ಹಾಕಿ ಅದಕ್ಕೆ ಬೇಂಗದ ತಿರುಳು, ಏಕನಾಯಕ, ಏಲಕ್ಕಿ, ಜಾಯಿಪತ್ರೆ, ದಾಲ್ಚೀನಿ, ಧಾತಕಿ ಹೂ ಪುಡಿಮಾಡಿ ಸೇರಿಸಿ ಮುಚ್ಚಳ ಹಾಕಿ ಇಟ್ಟು 40 ರಿಂದ 60 ದಿನ ನಂತರ ಮುಚ್ಚಳ ತೆಗೆದು ಸೋಸಿ ಸೇವಿಸಿದರೆ ಮಧುಮೇಹದಲ್ಲಿ ಪರಿಣಾಮಕಾರಿ ಔಷಧಿ.
ಬಾಯಿ ಆರೋಗ್ಯ:
ಬಾಯಿ ಹುಣ್ಣಿನಲ್ಲಿ ತೊಗಟೆ ಮತ್ತು ಎಲೆಯ ಕಷಾಯ ಮಾಡಿ ಬಾಯಿ ಮುಕ್ಕಳಿಸಬೇಕು. ಕ್ರಿಮಿನಾಶಕ ಗುಣ ಇರುವುದರಿಂದ ಗಂಟಲಿನ ತೊಂದರೆಗಳನ್ನು ನಿವಾರಿಸುವುದು. ಹೃದಯದ ಆರೋಗ್ಯ: ರಕ್ತನಾಳಗಳ ಆರೋಗ್ಯಕ್ಕೆ ಪೊಟಾಸಿಯಂ ಬೇಕು. ಇದರ 100 ಗ್ರಾಂ ಬೀಜದಲ್ಲಿ 55mg ಪೊಟಾಸಿಯಂ ಇದೆ. ಆದ ಕಾರಣ ಹೃದಯದ ತೊಂದರೆ ನಿವಾರಣೆಗೆ ಸಹಕಾರಿಯಾಗಿದೆ.
ಚರ್ಮದ ಆರೋಗ್ಯ :
ಇದರಲ್ಲಿ ವಿಟಮಿನ್-ಸಿ ಅಧಿಕ ಇರುವುದರಿಂದ ಚರ್ಮದ ಸೌಂದರ್ಯ ವೃದ್ಧಿಗೆ ಸಹಕರಿಸುವುದು. ಮುಖದಲ್ಲಿ ಎಣ್ಣೆ ಅಂಶ(oily skin) ಜಾಸ್ತಿ ಇದ್ದರೆ ಮೊಡವೆ ಮುಖದಲ್ಲಿ ಬೀಳುತ್ತದೆ. ಬೀಜದ ಪುಡಿಯನ್ನು ನಯವಾಗಿ ಪುಡಿಮಾಡಿ ಗುಲಾಬಿ ಅರ್ಕ (rose water)ದಲ್ಲಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಎಣ್ಣೆ ಅಂಶ ಕಡಿಮೆಯಾಗಿ ಮೊಡವೆ ಕಡಿಮೆಯಾಗುವುದು.
ಜೀರ್ಣಕ್ರಿಯೆಗೂ ಸಹಕಾರ ನೀಡುವುದು. ನೇರಳೆ ಹಣ್ಣಿನ ರಸಕ್ಕೆ ಸ್ವಲ್ಪ ಜೀರಿಗೆ, ಬಿಡ ಲವಣ (black salt) ಸ್ವಲ್ಪ ಸೇರಿಸಿ ಕುಡಿದರೆ ಹಸಿವು ಉಂಟಾಗುವುದು.
ಒಂದು ವನಸ್ಪತಿ ತುಂಬಾ ಕಾಯಿಲೆಗಳನ್ನು ಗುಣಮಾಡುತ್ತದೆ ಎಂಬುದಾಗಿ ಓದುವಾಗ ಕೆಲವರಿಗೆ ಖುಷಿಯಾದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಅದು ಹೇಗೆ ಸಾದ್ಯ?…… ಪ್ರತಿ ಗಿಡಮೂಲಿಕೆ ವಾತ ಪಿತ್ತ ಕಫಗಳಲ್ಲಿ ಒಂದು ಅಥವಾ ಎರಡನ್ನು ಶಮನಮಾಡುವುದು. ಉಪಯೋಗಿಸುವ ರೋಗಿಯಲ್ಲಿನ ವಾತಪಿತ್ತ ಕಫಗಳ ಸರಿಯಾದ ಅರಿವು ಇದ್ದು ಉಪಯೋಗಿಸಿದರೆ ಮಾತ್ರ ಪರಿಣಾಮ ಕಂಡುಬರುವುದು.
ಡಾ| ಹರಿಕೃಷ್ಣ ಪಾಣಾಜೆ