Skip links

ರೆಂಜೆ

Scientific Name: Mimusops elengi

ನೇರ ಎತ್ತರ ಬೆಳೆಯುವ ಗಟ್ಟಿ ಮರ. ದಟ್ಟವಾಗಿ ಎಲೆಗಳಿಂದ ಕೂಡಿದೆ. ಗಾಳಿ ಬಂದರೆ ಪಳ ಪಳ ಹೊಳೆಯುತ್ತದೆ. ಮರದ ಸುತ್ತ ಬಿದ್ದು ಹರಡಿರುವ ಬಿಳಿ ಅಥವಾ ನಸುಹಳದಿ ಹೂಗಳನ್ನು ಹೆಕ್ಕಿ ತಂದು ಪೋಣಿಸಿ ಮಾಲೆ ಮಾಡುವುದು, ಬಿದ್ದ ಕೇಸರಿ ಬಣ್ಣದ ಹಣ್ಣುಗಳನ್ನು ತಿಂದು ಆಸ್ವಾದಿಸಿದ ನೆನಪು ಹಲವರಿಗೆ ಇರಬಹುದು. ೪೦-೫೦ ಅಡಿ ಎತ್ತರ ಬೆಳೆಯುವ ಮರ. ಕಾಂಡ ಬಿಳಿವರ್ಣದಿಂದ ಕೂಡಿದೆ. ತೊಗಟೆ ಕಿತ್ತರೆ ಒಳಭಾಗ ಕೆಂಪಾಗಿರುತ್ತದೆ. ಹಾಲು ಒಸರಲು ಪ್ರಾರಂಭವಾಗುತ್ತದೆ. ತೊಗಟೆ ದಪ್ಪವಾಗಿದೆ. ಹೂವು ದೂರದಿಂದ ನೋಡುವಾಗ ನಕ್ಷತ್ರಗಳಂತೆ ಬಿಳಿ ಅಥವಾ ನಸುಹಳದಿ ಬಣ್ಣದಲ್ಲಿ ಕಂಡುಬರುತ್ತದೆ. ಹತ್ತಿರದಿಂದ ನೋಡಿದರೆ ಅರಳಿದ ಕಮಲದ ಹೂವಿನಂತೆ ಸುತ್ತಲೂ ಅರಳಿದ ದಳಗಳ ಮದ್ಯೆ ಅರಳದೆ ಮುದುಡಿ ನಿಂತ ಒಂದಷ್ಟು ದಳದಿಂದ ಶೋಭಿಸುತ್ತದೆ. ಸುಗಂಧಮಯವಾಗಿದೆ. ಹೂವನ್ನು ಪೋಣಿಸಿ ಇಟ್ಟರೆ ೨-೩ ವರ್ಷ ಕಳೆದರೂ ಆಕಾರ ಕಳೆದು ಕೊಳ್ಳದೆ ಸ್ವಲ್ಪ ಪರಿಮಳವನ್ನು ಹೊಂದಿರುತ್ತದೆ. ಎಳೆಯ ಅಡಿಕೆಯಂತೆ ಬಿಡಿಬಿಡಿಯಾಗಿ ಹಸಿರು ಬಣ್ಣದಲ್ಲಿ ರೆಂಜೆ ಕಾಯಿ ಕಂಡು ಬಂದರೆ ಹಣ್ಣಾದಾಗ ಕೇಸರಿ ವರ್ಣಕ್ಕೆ ಬದಲಾಗುತ್ತದೆ. ಹಣ್ಣಿನ ಹೊರಭಾಗ ತಿನ್ನಲು ರುಚಿಯಾಗಿದ್ದರೆ ದೊಡ್ಡದಾದ ಬೀಜವನ್ನು ಹೊಂದಿದ ಕಾರಣ ಹಣ್ಣಿನ ಅಂಶ ಕಡಿಮೆ ಇರುತ್ತದೆ.

ರೆಂಜೆಯ ಹೂ, ಹಣ್ಣು, ತೊಗಟೆಯನ್ನು ಔಷಧಿಯಾಗಿ ತಲೆನೋವು, ವಸಡು ಮತ್ತು ಹಲ್ಲಿನ
ತೊಂದರೆಗಳಲ್ಲಿ ಹಾಗೂ ಶರೀರ ನಿತ್ರಾಣದಲ್ಲಿ ಉಪಯೋಗಿಸಲಾಗುತ್ತದೆ. ಇದರ ಎಲೆಗಳು ಬಲಿ ಹಾಕಲು, ಕ್ಷೇತ್ರ ಶುದ್ಧಿಗಳಿಗೆ ಬಳಸುತ್ತಾರೆ. ವಿಷ್ಣುದೇವರ ಸಾನಿಧ್ಯ ಈ ಮರಕ್ಕೆ ಇದೆ ಎಂಬ ಕಥೆಯೂ ಇದೆ.

ತೊಗಟೆ:

ಔಷಧಿಗಾಗಿ ಹೆಚ್ಚು ಉಪಯೋಗಿಸುವ ಭಾಗ ತೊಗಟೆಯಾಗಿದೆ. ವಸಡು ಮತ್ತು ಹಲ್ಲಿನ ರಕ್ಷಣೆಗೆ ವಿಶೇಷ ಪ್ರಯೋಜನಕಾರಿಯಾಗಿದೆ. “ಚಲದಂತ ಸ್ಥಿರಕರಂ ಕರ‍್ಯಾದ್ಬಕುಲ ಚರ್ವಣಂ” ಚರಕ ಸಂಹಿತೆಯಲ್ಲಿ ಈ ಶ್ಲೋಕವನ್ನು ಕಾಣಬಹುದು. ಈ ಶ್ಲೋಕದ ಅರ್ಥವೇನೆಂದರೆ ರೆಂಜೆಮರದ ತೊಗಟೆಯನ್ನು ಜಗಿಯುವುದರಿಂದ ಅಲ್ಲಾಡುವ ಹಲ್ಲುಗಳು ಗಟ್ಟಿಯಾಗುತ್ತದೆ ಎಂಬುದಾಗಿದೆ. ಇದು ನಿಜವೂ ಹೌದು. ಜಗಿಯುವ ಬದಲು ತೊಗಟೆಯ ಒಂದು ತುಂಡನ್ನು ಜಜ್ಜಿ ನೀರು ಸೇರಿಸಿ ಕುದಿಸಿ ನಂತರ ಸೋಸಿ ಬಾಯಿ ಮುಕ್ಕಳಿಸುವುದರಿಂದ ( ದಿನಕ್ಕೆ ೩-೪ ಸಲ) ಖಂಡಿತವಾಗಿಯೂ ಹಲ್ಲುಗಳು ಗಟ್ಟಿಯಾಗುತ್ತದೆ. ಹಲ್ಲುಗಳು ಗಟ್ಟಿಯಾಗಿಯೇ ಇರುತ್ತದೆ. ಆದರೆ ವಸಡು ರೋಗ ಗ್ರಸ್ತವಾದರೆ ಹಲ್ಲುಗಳು ಸಡಿಲಗೊಂಡು ದಂತ ವೈದ್ಯರು ಸುಲಭವಾಗಿ ಹಲ್ಲು ಕೀಳಬಹುದು. ವಸಡಿನಿಂದ ಕೀವು, ರಕ್ತ ಬರುತ್ತಿದ್ದರೆ ಬಾಯಿ ವಾಸನೆಯೂ ಬರುತ್ತದೆ. ಹಲ್ಲುಗಳು ಸುಲಭದಲ್ಲಿ ಬಿದ್ದು ಹೋಗವುದು. ಇಂತಹ ಸಂದರ್ಭದಲ್ಲಿ ತೊಗಟೆ ಕಷಾಯ ಉತ್ತಮ ಪರಿಣಾಮಬೀರುವುದು. ರೆಂಜೆಯ ಸಣ್ಣ ಕೊಂಬೆಗಳನ್ನು ಕಡ್ಡಿಗಳಾಗಿ ತುಂಡುಮಾಡಿ ಬ್ರಶ್‌ನಂತೆ ಮಾಡಿ ಹಲ್ಲು ಉಜ್ಜುವುದರಿಂದ ವಸಡಿನ ಹಾಗೂ ಹಲ್ಲಿ
ಆರೋಗ್ಯ ರಕ್ಷಿಸಬಹುದು. ನೂರಾರು ರುಪಾಯಿ ವ್ಯಯಿಸಿ ಟೂತ್‌ಪೇಸ್ಟ್ ಖರೀದಿಸಿ ಉಪಯೋಗಿಸಿ ಪ್ರಯೋಜನ
ಪಡೆಯದವರು ಇದನ್ನು ಖಂಡಿತ ಉಪಯೋಗಿಸಬಹುದು ಅಥವಾ ತೊಗಟೆಯನ್ನು ಸೇರಿಸಿ ತಯಾರಿಸಿದ ದಂತ ಮಂಜನ ಪುಡಿಯನ್ನು ಉಪಯೋಗಿಸಬಹುದು.

ಹೂ:

ಸುಗಂಧ ಭರಿತ ಹೂವಿನ ಆಸ್ವಾದನೆ ಮನಸ್ಸಿಗೆ ಖುಷಿ ನೀಡುತ್ತದೆ. ಹೂವನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ
ಬಟ್ಟೆಯಲ್ಲಿ ಗಾಳಿಸಿ ನಯವಾದ ಪುಡಿಯನ್ನು ಸಂಗ್ರಹಿಸಿ ನಸ್ಯದಂತೆ ಉಪಯೋಗಿಸುವುದರಿಂದ ತಲೆನೋವು
ಕಡಿಮೆಯಾಗುವುದು ಅಥವಾ ಹೂವಿನ ಪುಡಿಯನ್ನು ನೀರಲ್ಲಿ ಕಲಸಿ ಬಟ್ಟೆಯಲ್ಲಿ ಸೋಸಿ ಸಂಗ್ರಹಿಸಿ ೨-೩ ಬಿಂದು ಮೂಗಿಗೆ ಬಿಡುವುದರಿಂದ ತಲೆನೋವು ಅಥವಾ ನಾವು ಗ್ರಾಮ್ಯ ಭಾಷೆಯಲ್ಲಿ ಹೇಳುವ “ಒರ್ಕೆನ್ನಿ” ನೋವು ಕಡಿಮೆಯಾಗುವುದು

ಹಣ್ಣು:

ಎಳತು ಅಡಿಕೆಯಂತೆ ಅಂಡಾಕಾರದಲ್ಲಿ ಕಂಡುಬರುತ್ತದೆ. ಎಳತು ಕಾಯಿ ಚೊಗರು ರಸದಿಂದ ಕೂಡಿದ್ದು ತುಂಡುಮಾಡಿದರೆ ಹಾಲು ತೊಟ್ಟಿಕ್ಕುತ್ತದೆ. ಬೆಳೆದು ಕೇಸರಿ ವರ್ಣಕ್ಕೆ ತಿರುಗಿದ ನಂತರ ಚೊಗರು ಮಿಶ್ರಿತ ಸಿಹಿ ರುಚಿಯನ್ನು ಹೊಂದುತ್ತದೆ. ಹಣ್ಣುಗಳನ್ನು ತಿನ್ನುವುದರಿಂದ ನಿಶ್ಶಕ್ತಿ ಕಡಿಮೆಯಾಗುತ್ತದೆ. ಇದರಲ್ಲಿ ಪ್ರೊಟೀನ್, ಗ್ಲುಕೋಸ್ ಅಂಶ ಅಧಿಕ ಇರುವುದರಿಂದ ಪ್ರಯೋಜನಕಾರಿಯಾಗಿದೆ. ತಲೆತಿರುಗುವುದಿದ್ದರೂ ಹಣ್ಣಿನ ಸೇವನೆ ಉತ್ತಮ.

ಡಾ| ಹರಿಕೃಷ್ಣ ಪಾಣಾಜೆ


Leave a comment

This website uses cookies to improve your web experience.