Skip links

ಅತ್ತಿ

Scientific Name: Ficus glomerata

ಅರ್ತಿ ಮರ ಎಂದು ತುಳುವಿನಲ್ಲಿ ಕರೆದರೆ ಸಂಸ್ಕೃತದಲ್ಲಿ ಉದುಂಬರ ಎನ್ನುತ್ತಾರೆ. ಇದರ ಹಣ್ಣುಗಳಲ್ಲಿ ಹೆಚ್ಚಾಗಿ ಹುಳಗಳು ತುಂಬಿರುವುದರಿಂದ “ಜಂತು ಫಲ”ಎಂದು ಕರೆಯುತ್ತಾರೆ. ೩೦ ರಿಂದ ೬೦ ಅಡಿ ಎತ್ತರ ಬೆಳೆಯುವ ಮರ. ಸುಲಭದಲ್ಲಿ ಹುಟ್ಟಿಕೊಂಡು ಸ್ವಲ್ಪ ಸಮಯದಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ. ಇದರ ಕಾಂಡ ನಸುಕಪ್ಪು ಹಾಗು ಬೂದು ಬಣ್ಣದಿಂದ ಕೂಡಿದ್ದರೆ ತೊಗಟೆಯ ಒಳಭಾಗ ಕೆಂಪಾಗಿರುತ್ತದೆ. ತೊಗಟೆಯನ್ನು ಮರದಿಂದ ಬೇರ್ಪಡಿಸುವಾಗ ಹಾಲಿನಂತಹ ದ್ರವ ಹೊರಬರುವುದು. ಎಲೆಯನ್ನು ಕಿತ್ತರೂ ಬಿಳಿ ದ್ರವ ಹೊರ ಸೂಸುವುದು. ಆಯುರ್ವೇದ ಗ್ರಂಥಗಳಲ್ಲಿ ಪಂಚಕ್ಷೀರೀ ವೃಕ್ಷಗಳಲ್ಲಿ (ಐದು ಹಾಲಿನಂತಹ ದ್ರವ ಹೊರಹಾಕುವ ಮರಗಳು) ಒಂದಾದ ಅತ್ತಿ ಮರದ ಎಲೆ ಆಯತಾಕಾರ ಅಥವಾ ಅಂಡಾಕಾರವಾಗಿದೆ. ಎಲೆ ಚೂಪಾದ ಅಗ್ರಭಾಗವನ್ನು ಹೊಂದಿದೆ. ಹೂಗಳು ಕಾಣಸಿಗದೆ ಕೇವಲ ಕಾಯಿಗಳು, ಹಣ್ಣುಗಳು ಮಾತ್ರ ಮರದ ಕಾಂಡದ ಸುತ್ತಲೂ ಗೊಂಚಲಾಗಿ ಹರಡಿ ಕೊಂಡಿರುತ್ತದೆ. ಆರಂಭದಲ್ಲಿ ಹಸಿರಾಗಿ ಕಂಡರೆ ಹಣ್ಣಾದಾಗ ಕೆಂಪು ವರ್ಣಕ್ಕೆ ತಿರುಗುವುದು. ಮಾರ್ಚ್ನಿಂದ ಜೂನ್ ತಿಂಗಳಲ್ಲಿ ಹಣ್ಣುಗಳು ಕಂಡುಬರುವುದು.

ಭಾರತದ ಎಲ್ಲಾ ಭಾಗಗಳಲ್ಲಿಯೂ ಕಂಡುಬರುವ ಈ ವೃಕ್ಷ ಯಜ್ಞ ಯಾಗಾದಿಗಳಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ. ವಾಸ್ತು ಪ್ರಕಾರ ಈ ಮರ ಮನೆಯ ದಕ್ಷಿಣ ಭಾಗದಲ್ಲಿ ಇದ್ದರೆ ಶುಭ. ಉತ್ತರ ಭಾಗದಲ್ಲಿ ಇದ್ದರೆ ಅಶುಭ. ಗ್ರಹಗಳಲ್ಲಿ ಶುಕ್ರನಿಗೆ ಸೇರಿಸಿದರೆ, ಜನ್ಮ ನಕ್ಷತ್ರ “ಕೃತಿಕಾ” ಈ ವೃಕ್ಷಕ್ಕೆ ಸಂಭAದಿಸಿರುತ್ತದೆ.

ಇದರ ಚಿಗುರು, ಎಲೆ, ಕಾಯಿ, ಹಣ್ಣು, ತೊಗಟೆ ಇದು ಸೂಸುವ ಹಾಲಿನಂತಹ ದ್ರವ ಹಾಗೂ ಕಾಂಡದಿಂದ ಒಸರುವ ತಿಳಿಯಾದ ದ್ರವ ಹಲವಾರು ರೋಗಗಳನ್ನು ಗುಣ ಪಡಿಸುವುದು. “ಯಜ್ಞಾಂಗ” ಎಂದು ಕರೆಯುವ ಅತ್ತಿ ಮರವನ್ನು ಧನ್ವಂತರೀ ಹೋಮ, ಸಂಧಿ ಶಾಂತಿ ಹೋಮಗಳಲ್ಲಿ ಉಪಯೋಗಿಸುತ್ತಾರೆ.

ತೊಗಟೆ:

ಮರದ ತೊಗಟೆಯನ್ನು ಜಜ್ಜಿ ಕಷಾಯ ಮಾಡಿ ಕುಡಿದರೆ ಅಲ್ಪ ಪ್ರಮಾಣದ ಮಧುಮೇಹ ನಿಯಂತ್ರಣಕ್ಕೆ ಬರುವುದು. ಸ್ತ್ರೀಯರ ಮುಟ್ಟಿನ ಅತಿಸ್ರಾವದಲ್ಲಿ ಕಷಾಯಮಾಡಿ ಸೋಸಿ ಕಲ್ಲುಸಕ್ಕರೆ ಹಾಕಿ ಕುಡಿಯಬೇಕು. ನಿರಂತರ ಸಂಭವಿಸುವ ಗರ್ಭಪಾತ ತಡೆಯಲು ಇದನ್ನು ಸ್ತ್ರೀಸ್ತನ್ಯದಲ್ಲಿ ಅರೆದು ಪ್ರತಿ ನಿತ್ಯ ಸೇವಿಸಬೇಕು. ವರ‍್ಯಾಣು ವಧÀðಕವಾಗಿ ಇದರ ಪುಡಿಯನ್ನು ಹಾಲಿನಲ್ಲಿ ಮಿಶ್ರಮಾಡಿ ಕುಡಿಯಬೇಕು. ರಕ್ತ ಬೇದಿಯಾಗುವಾಗಲೂ ಕಷಾಯ ಮಾಡಿ ಕುಡಿಯಬಹುದು. ಗುಣವಾಗದ ಹುಣ್ಣುಗಳನ್ನು ಇದರ ಕಷಾಯದಲ್ಲಿ ತೊಳೆಯುವುದರಿಂದ ಬೇಗ ಗುಣವಾಗುವುದು.

ಹಾಲಿನಂತಹ ದ್ರವ:

ಕಾಂಡವನ್ನು ಸ್ವಲ್ಪ ತುಂಡರಿಸಿದರೆ ಹಾಲು ಹೊರಬರುವುದು. ಅದನ್ನು ಸಂಗ್ರಹಿಸಿ ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಬೇದಿಯಾಗುವುದಿದ್ದರೆ ೫-೬ ಬಿಂದು ಒಂದು ಚಮಚ ನೀರಿನೊಂದಿಗೆ ಬೆರೆಸಿ ಮಕ್ಕಳಿಗೆ ಕೊಡುವುದರಿಂದ ಕಡಿಮೆಯಾಗುವುದು. ಕಣ್ಣಿನ ರೆಪ್ಪೆಯಲ್ಲಿ ಏಳುವ ಕುರಗಳಿಗೆ ಇದನ್ನು ಆಗಾಗ ಹಚ್ಚುವುದರಿಂದ ಕುರ ಮಾಯವಾಗುವುದು. ಹುಣ್ಣುಗಳಿದ್ದರೆ ಅದರ ಮೇಲೆ ಸವರುವುದರಿಂದ ಗುಣವಾಗುವುದು.

ಅತ್ತಿ ಮರದ ನೀರು: 

ಮಣ್ಣಿನ ಮೇಲ್ಪದರದಲ್ಲಿ ಹರಡಿದ ಬೇರನ್ನು ತುಂಡರಿಸಿದಾಗ ಅದರೊಳಗಿಂದ ನೀರು ಸ್ರವಿಸುವುದು. ಬೇರನ್ನು ಪಾತ್ರೆಯೊಳಗಿಟ್ಟು ನೀರನ್ನು ಸಂಗ್ರಹಿಸಿ ಸೋಸಿ ಉಪಯೋಗಿಸಬೇಕು. ಉರಿಮೂತ್ರ ಇರುವಾಗ ಈ ನೀರನ್ನು ಕಲ್ಲು ಸಕ್ಕರೆ ಸೇರಿಸಿ ಒಂದು ಲೋಟದಷ್ಟು ಕುಡಿಯಬೇಕು. ದಿನಕ್ಕೆ ೨-೩ ಸಲ ೩-೪ ದಿನ ಕುಡಿಯಬಹುದು. ಮೂತ್ರ ಮಾಡುವಾಗ ಕಷ್ಟವಾಗುವುದಿದ್ದರೂ ಇದನ್ನು ಉಪಯೋಗಿಸಬಹುದು.

ಅತ್ತಿ ಚಿಗುರು:

ಎದೆಉರಿ, ಹೊಟ್ಟೆಉರಿ ಇದ್ದರೆ ಅಸಿಡಿಟಿ ಎನ್ನುತ್ತಾರೆ. ಒಂದು ಮುಷ್ಠಿ ಚಿಗುರೆಲೆಯನ್ನು ಕೆಮಿಕಲ್ ರಹಿತವಾಗಿರುವ ಕುಚ್ಚಲಕ್ಕಿ ತೊಳೆದ ನೀರಿನಲ್ಲಿ ಅರೆದು ಕಲ್ಲು ಸಕ್ಕರೆ ಅಥವಾ ಸಾವಯುವ ಕಪ್ಪು ಬೆಲ್ಲ ಸೇರಿಸಿ ಕುಡಿಯಬೇಕು. ೨-೩ವಾರ ಸೇವಿಸುವುದರಿಂದ ಪ್ರಯೋಜನ ಕಂಡುಬರುವುದು.

ಅತ್ತಿ ಎಲೆ:

ಶರೀರದ ಹುಣ್ಣು ತೊಳೆಯಲು ಎಲೆಯನ್ನು ಕಷಾಯ ಮಾಡಿ ಉಪಯೋಗಿಸಬಹುದು ಅಥವಾ ಬಾಯಿ ಹುಣ್ಣು ಇರುವಾಗ ಕಷಾಯದಿಂದ ಬಾಯಿ ಮುಕ್ಕಳಿಸಬಹುದು.

ಅತ್ತಿ ಕಾಯಿ: 

ಬಾಯಿ ಹುಣ್ಣು ಇರುವಾಗ ಕೊಟ್ಟೆಮುಳ್ಳು ಕಷಾಯ ಮಾಡಿ ಬಾಯಿ ಮುಕ್ಕಳಿಸುತ್ತಾರೆ. ಹಾಗೆಯೇ ಇದರ ಕಾಯಿಯನ್ನು ಜಜ್ಜಿ ಕಷಾಯ ಮಾಡಿ ಬಾಯಿ ಮುಕ್ಕಳಿಸಬಹುದು. ಮಕ್ಕಳಲ್ಲಿ ಬೇದಿ ಆಗುವಾಗ ಅತ್ತಿಕಾಯಿ ಜಜ್ಜಿ ಒಂದು ಚಮಚದಷ್ಟು ರಸ ತೆಗೆದು ಅದಕ್ಕೆ ಮೊಸರಿನ ನೀರು ಸೇರಿಸಿ ಕುಡಿಸುವುದರಿಂದ ಗುಣವಾಗುವುದು.

ಅತ್ತಿ ಹಣ್ಣು:

ಗರ್ಭಿಣಿಯರಿಗೆ ಎಲ್ಲಾ ಔಷಧಿಗಳನ್ನು ಕೊಡಲಾಗುವುದಿಲ್ಲ. ಅವರಿಗೆ ಬೇದಿಯಾಗುತ್ತಿದ್ದರೆ ಹುಳ ಇಲ್ಲದ ಸ್ವಚ್ಚ ಗೊಳಿಸಿದ ಹಣ್ಣನ್ನು ಜೇನಿನೊಂದಿಗೆ ಅರೆದು ೨-೩ ಸಲ ಸೇವಿಸುವುದರಿಂದ ಕಡಿಮೆಯಾಗುವುದು.

ಡಾ| ಹರಿಕೃಷ್ಣ ಪಾಣಾಜ

Leave a comment

This website uses cookies to improve your web experience.