Skip links

ಕುಂಬಳ

Scientific Name: Banincasa hispida

    ಅಂಡಾಕಾರದ ಈ ಫಲ ಉರಿಯನ್ನು ಕಡಿಮೆಮಾಡುತ್ತದೆ ಎಂಬ ಅರ್ಥದಲ್ಲಿ ಇದನ್ನು ಕೂಷ್ಮಾಂಡ ಎಂದು ಕರೆಯುತ್ತಾರೆ. ನೆಲದಲ್ಲಿ ಹರಡಿ ಬೆಳೆಯುವುದಲ್ಲದೆ ದೊಡ್ಡ ಮರವನ್ನು ಏರಿಯೂ ಫಲ ನೀಡುತ್ತದೆ. ಹತ್ತು ಕಿಲೋ ಇರುವ ಕುಂಬಳ ಕಾಯಿಯೂ ಬಳ್ಳಿಯಲ್ಲಿ ನೇತಾಡಿ ಕೊಂಡಿರುತ್ತದೆ. ಇದರ ಬಳ್ಳಿ ಎಲೆಗಳು ರೋಮಶವಾಗಿದೆ. 4-6 ಇಂಚು ವ್ಯಾಸ ಇರುವ ಎಲೆ ಹೃದಯಾಕಾರ ಅಥವಾ ಉರುಟಾಗಿರುತ್ತದೆ. ಎರಡು ಇಂಚು ಅಗಲದ ಹಳದಿ ಹೂಗಳು ಕಂಡುಬರುತ್ತದೆ. ಹೊರಗಿನ ಭಾಗ ಬೆಳೆದಂತೆ ಗಟ್ಟಿಯಾಗಿದ್ದು ಒಳಭಾಗ ಮೃದುವಾಗಿ ಬಿಳಿಯಾಗಿರುತ್ತದೆ. ಹೊರಭಾಗ ಬಿಳಿಯಾಗಿ ಬೂದಿ ಹಚ್ಚಿದಂತೆ ಕಂಡು ಬಂದರೆ ಇದನ್ನು ಬೂದುಕುಂಬಳ ಎನ್ನುತ್ತಾರೆ. ಇದು ಔಷಧಿ ತಯಾರಿಕೆಗೆ ಶ್ರೇಷ್ಠ.

ಮೇದ್ಯ (ನೆನಪು ಶಕ್ತಿ ವೃದ್ಧಿಸುವ) ವಾಗಿ ಉಪಯೋಗಿಸುವ ಕುಂಬಳಕಾಯಿಯನ್ನು ತುಳುನಾಡಿನಲ್ಲಿ ಬೊಜ್ಜದ  ಊಟಕ್ಕೆ ಸೀಮಿತ ಮಾಡಿದ್ದಾರೆ. ದುಃಖ ತಪ್ತರು ಇದನ್ನು ತಿಂದನಂತರ ಒತ್ತಡದಿಂದ ಮುಕ್ತರಾಗಲು ಈ ಔಷಧಿ ಗುಣವುಳ್ಳ ಆಹಾರ ಸಹಕಾರಿ ಆಗುವುದೆಂಬ ಉದ್ದೇಶದಿಂದ ಇದನ್ನು ಕಡ್ಡಾಯವಾಗಿ ಬಳಸುತ್ತಿರಬಹುದು.

ಬಲಿ ಹಾಕಲು, ಅಡುಗೆಗೆ, ವೈದ್ಯಕೀಯ ಜಗತ್ತಿಗೆ, ಡಯಾಟೀಷಿಯನ್‍ರಿಗೆ ಕುಂಬಳಕಾಯಿಬೇಕು. ನೆನಪು ಶಕ್ತಿ, ದಾಹ, ಮನೋರೋಗ, ಹೊಟ್ಟೆಹುಣ್ಣು, ಹೊಟ್ಟೆಉರಿ, ನರದೌರ್ಬಲ್ಯ, ಅಪಸ್ಮಾರ, ಮೂತ್ರಕಲ್ಲು, ಕೃಶ ಶರೀರ ಚಿಕಿತ್ಸೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ವಿಶೇಷವೆಂದರೆ ಇದನ್ನು  ಕ್ಷೀಣ ಶರೀರಿಗಳನ್ನು ಪುಷ್ಠಿಮಾಡಲು ಹಾಗೂ ಬೊಜ್ಜು ತುಂಬಿ ಸ್ಥೂಲ ಶರೀರ ಇರುವವರ ಬೊಜ್ಜು ಕರಗಿಸಲೂ ಉಪಯೋಗಿಸಲ್ಪಡುತ್ತದೆ.

ಶರೀರ ಪುಷ್ಠಿ :

ಬೆಳೆದ ದೊಡ್ಡ ಕುಂಬಳಕಾಯಿಯನ್ನು ಸಿಪ್ಪೆ ತೆಗೆದು, ಬೀಜ ಬೇರ್ಪಡಿಸಿ ತುಂಡುಮಾಡಿ ಬೇಯಿಸಿ ತುಪ್ಪದಲ್ಲಿ ಹುರಿದು, ಕಲ್ಲುಸಕ್ಕರೆ, ಹಿಪ್ಲಿ, ಶುಂಠಿ,ಒಳ್ಳೆ ಮೆಣಸು, ದಾಲ್ಚೀನಿ, ಏಲಕ್ಕಿ, ಪತ್ರೆ ಪುಡಿಮಾಡಿ ಸೇರಿಸಿ ಪಾಕಮಾಡಿ ಪ್ರತಿದಿನ 20-30ಗ್ರಾಂ ಸೇವಿಸಿದರೆ ಶರೀರ ಪುಷ್ಠಿಯಾಗುವುದು. ಕೂಷ್ಮಾಂಡ ರಸಾಯನ ಎಂಬ ಲೇಹವನ್ನು ಹೀಗೆ ತಯಾರಿಸಲಾಗಿದೆ.  

ಬೊಜ್ಜು ಕರಗಲು:

ಕುಂಬಳ ಕಾಯಿಯ ಒಳಗಿನ ಭಾಗವನ್ನು ಬೀಜತೆಗೆದು 1-2 ಲೋಟ ಜ್ಯೂಸ್ ತಯಾರಿಸಿ ಸ್ವಲ್ಪ ಲಿಂಬೆಹುಳಿ, ಸ್ವಲ್ಪ ಉಪ್ಪು ಸೇರಿಸಿ ಪ್ರತಿದಿನ  ಬೆಳಗ್ಗೆ 2-3 ತಿಂಗಳು ಸೇವಿಸಬೇಕು. ಇದರೊಂದಿಗೆ ಪೂರಿ, ಮಸಾಲದೋಸೆ ತಿಂದರೆ ಪ್ರಯೋಜನವಾಗದು.  

ಜ್ಞಾಪಕ ಶಕ್ತಿಗಾಗಿ:

ಕುಂಬಳಕಾಯಿ ಜ್ಯೂಸನ್ನು ಊರ ದನದ ತುಪ್ಪಕ್ಕೆ ಸೇರಿಸಿ ಪಾಕಮಾಡಿಟ್ಟು ಆಹಾರದ ಒಂದು ಗಂಟೆ ಮೊದಲು ದಿನಕ್ಕೆ ಎರಡು ಸಲ 5-6 ತಿಂಗಳು ಸೇವಿಸಬೇಕು.  

ನರ ದೌರ್ಬಲ್ಯ:

ಎರಡು ಪಾಲು ಕೂಷ್ಮಾಂಡ ಜ್ಯೂಸ್‍ಗೆ ಒಂದು ಪಾಲು ಊರ ದನದ ತುಪ್ಪ ಸೇರಿಸಿ ಸ್ವಲ್ಪ ಯರಟಿ ವiಧುರ ಪುಡಿ ಸೇರಿಸಿ ಪಾಕಮಾಡಿ ತಯಾರಿಸಿ ಸೇವಿಸಿದರೆ ಪ್ರಾರಂಭ ಹಂತದ ಅಲ್ಪ ಪ್ರಮಾಣದ ಅಪಸ್ಮಾರ ಕಾಯಿಲೆಗಳನ್ನು ಗುಣಮಾಡುವುದು.  

ಬಾಯಾರಿಕೆ ಹಾಗೂ ಶರೀರ ಉರಿ :

ಬಾಯಾರಿಕೆ ಆಗುವಾಗ ಪ್ರಿಡ್ಜಿನ ತಂಪು ನೀರು, ಸಕ್ಕರೆ ಪಾನೀಯ ಪ್ರಯೋಜನವಾಗುವುದಿಲ್ಲ. ಇದರಿಂದ ಶರೀರಕ್ಕೆ ಪ್ರಯೋಜನವಿಲ್ಲ. ಕುಂಬಳ ಕಾಯಿ ಜ್ಯೂಸ್‍ಗೆ  ಒಂದು ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ದಾಹ, ಉರಿಗಳು ಕಡಿಮೆಯಾಗುವುದು. ಮಲಬದ್ದತೆಗೆ ಇದರ ಎಲೆಯ 5ml ರಸಕ್ಕೆ 5ml ಹರಳೆಣ್ಣೆ ಸೇರಿಸಿ ಕುಡಿದರೆ ನಿವಾರಣೆಯಾಗುವುದು.

ಮಳೆಗಾಲದಲ್ಲಿ ಕಾಲಿನಲ್ಲಿ ಬರುವ ನೀರು ಹುಣ್ಣಿಗೆ ಇದರ ಎಲೆಯನ್ನು ಸುಟ್ಟು ಮಸಿ ಮಾಡಿ ಬೆಣ್ಣೆಯಲ್ಲಿ ಮಿಶ್ರಮಾಡಿ ಹಚ್ಚಿದರೆ ಗುಣವಾಗುವುದು. ಹೊಟ್ಟೆ ಉರಿ(acidity), ಹೊಟ್ಟೆ ಹುಣ್ಣು ಇರುವವರು ಇದರ ಜ್ಯೂಸ್ ದಿನಕ್ಕೆರಡು ಸಲ ಕುಡಿದರೆ ಕಡಿಮೆಯಾಗುವುದು . ಇದರಲ್ಲಿ ಪ್ರೋಟಿನ್, ಕ್ಯಾಲ್ಸಿಯಂ, ವಿಟಮಿನ್-ಬಿ, ವಿಟಮಿನ್-ಸಿ, ಮೆಗ್ನೇಷಿಯಂ ಇರುವುದರಿಂದ ಇದೊಂದು ಪೌಷ್ಠಿಕ ಆಹಾರ, ಮಧುಮೇಹದಲ್ಲಿ ವಿಷ ಚಿಕಿತ್ಸೆಯಲ್ಲಿಯೂ ಇದನ್ನು ಉಪಯೋಗಿಸಿದ ಉಲ್ಲೇಖ ಆಯುರ್ವೇದ ಸಂಹಿತೆಗಳೆಲ್ಲ ಉಲ್ಲೇಖಿಸಲ್ಪಟ್ಟಿದೆ.

ಡಾ| ಹರಿಕೃಷ್ಣ ಪಾಣಾಜೆ


Leave a comment

This website uses cookies to improve your web experience.