Skip links

ಕಡೀರ ಬೇರು

Scientific Name: Sida cordifolia

         ಮಳೆ ಬಿದ್ದ 1-2 ವಾರಗಳÉಲ್ಲಿ ಚಿಗುರೊಡೆದು ಶೀಘ್ರ ಬೆಳವಣಿಗೆ ಕಾಣುವ ಗಿಡ. ಇದಕ್ಕೆ “ಬಲಾ” ಅಥವಾ “ಬಲಾ ಮೂಲ” ಎಂದು ಕರೆಯುತ್ತಾರೆ. ಇದರ ಕಾಂಡ, ಬೇರು ಬಹಳ ಗಟ್ಟಿ. ಇದನ್ನು ಭೂಮಿಯಿಂದ ಕೀಳ ಬೇಕಾದರೆ ನಾವು ಬಹಳಷ್ಟು ಬಲ ಹಾಕಬೇಕು. ಮಳೆಗಾಲ ಕಳೆದರೆ ಇದರ ಬೇರನ್ನು ತೆಗೆಯಲು ನಮ್ಮ ತೋಳಿನ ಬಲ ಸಾಕಾಗದು. ಮಳೆಗಾಲದಲ್ಲಿಯೇ ಇದನ್ನು ಸಂಗ್ರಹಿಸಬೇಕು.  

ಎರಡರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ. ಕ್ರಮಾಗತವಾಗಿ ಬೆಳೆಯುವ ಇದರ ಎಲೆ 1-3 ಇಂಚು ಉದ್ದ 1-2 ಇಂಚು  ಅಗಲ ಇರುತ್ತದೆ. ಸೂಕ್ಷ್ಮ ರೋಮಗಳಿಂದ ಕೂಡಿದ ಎಲೆ ಸ್ಪರ್ಶಕ್ಕೆ ದೊರಗಾಗಿರುತ್ತದೆ. ಪ್ರಾರಂಭದ ಎಲೆಗಳು ಅರ್ಧ ತುಂಡಾದಂತೆ ಇದ್ದು ನಂತರ ಸ್ವಲ್ಪ ಉದ್ದವಾಗಿ ಬೆಳೆಯುತ್ತದೆ. ಎಲೆಗಳು ಗರಗಸದಂತೆ ಅಲಗನ್ನು ಹೊಂದಿರುತ್ತದೆ. ಹೂ ಹಳದಿ ವರ್ಣದಲ್ಲಿ ಕಂಡುಬಂದರೆ ಸಣ್ಣ ಚಟ್ಟೆಯಾದ ಬೀಜಗಳು ಕಪ್ಪಾಗ ಕಂಡುಬರುತ್ತದೆ.  ಇದನ್ನು ವಾತರೋಗದಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ನೋವನ್ನು ಕಡಿಮೆಮಾಡುತ್ತದೆ. ಶರೀರಕ್ಕೆ ಶಕ್ತಿ, ದೃಢÀತೆಯನ್ನು ಕೊಡುತ್ತದೆ. ಹೃದಯ ದೌರ್ಬಲ್ಯ, ಗರ್ಭಾಶಯ ದೌರ್ಬಲ್ಯದಲ್ಲಿಯೂ ಸಹಾಯ ಮಾಡುವುದು. ಭ್ರೂಣದ ಬೆಳವಣಿಗೆಯಲ್ಲಿ, ವೀರ್ಯಾಣು ವರ್ಧಕವಾಗಿ ಕೆಲಸ ಮಾಡುವುದು. ಸೆಂಟ್ರಲ್ ನರ್ವಸ್ ಸಿಸ್ಟಮ್ ನ ಮೇಲೆಯೂ ಪ್ರಭಾವ ಬೀರುವುದು.

ಎಲೆ:

ರಕ್ತ ಸ್ರಾವ ಇರುವ ಮೂಲ ವ್ಯಾಧಿಗಳಲ್ಲಿ ಇದರ ಎಲೆಯನ್ನು ಅರೆದು ಕುಡಿಯಬಹುದು. ಅಥವಾ ಸಣ್ಣದಾಗಿ ತುಂಡುಮಾಡಿದ ಎಲೆಯನ್ನು ಬೇಯಿಸಿ ತಿನ್ನಬಹುದು. ತಲೆಯ ಹೊಟ್ಟು ಇರುವಾಗ, ಕೂದಲು ದೊರಗಾಗಿ ಇರುವಾಗ ಇದರ ಎಲೆಯನ್ನು ಕಿವುಚಿ ಸಂಗ್ರಹಿಸಿದ ಲೋಳೆಯಂತಿರುವ ರಸವನ್ನು ಸೋಸಿ ತಲೆಗೆ ಹಾಕಿ ಸ್ನಾನ ಮಾಡಬೇಕು.  

ಬೇರು:

ಮುಖ್ಯವಾಗಿ ಬೇರನ್ನು ಔಷಧಿಗಾಗಿ ಬಳಸಲಾಗುತ್ತದೆ. ಕಾಲಿನ ಮಾಂಸ ಖಂಡ ಸೆಳೆತ (ಮಸಲ್ಕ್ಯಾಚ್) ಇರುವಾಗ ಇದರ 4-5 ಬೇರುಗಳನ್ನು ಸಣ್ಣದಾಗಿ ತುಂಡುಮಾಡಿ ಅರ್ಧ ಚಮಚ ಜೀರಿಗೆ ಸೇರಿಸಿ ಕುದಿಸಿ ಸೋಸಿ ದಿನಕ್ಕೆ ಎರಡು ಸಲ ಒಂದು ವಾರ ಕುಡಿಯಬೇಕು.

ಗ್ರಾಮ್ಯ ಭಾಷೆಯಲ್ಲಿ ಹೇಳುವ ಕೊಳ್ಪು ನೋವಿಗೆ, ಸೊಂಟನೋವಿಗೆ ಇದು ಶ್ರೇಷ್ಠ ಔಷಧಿ. 4-5 ಬೇರುಗಳನ್ನು ಸಣ್ಣದಾಗಿ ತುಂಡುಮಾಡಿ ಅರ್ಧ ಚಮಚ ಕೊತ್ತಂಬರಿ ಅಥವಾ ಹರಳ ಬೇರು (ಆಲುಂಬುಡ) ಒಂದು ತುಂಡು ಸೇರಿಸಿ ಕಷಾಯ ಮಾಡಿ ಸೋಸಿ ಒಂದು ಚಮಚ ತುಪ್ಪ ಸೇರಿಸಿ ಒಂದು ವಾರ ಕುಡಿಯಬೇಕು .

ಗರ್ಭಿಣಿಯರಿಗೆ ಹೆಚ್ಚಾಗಿ ಸೊಂಟನೋವು, ಕಿಬ್ಬೊಟ್ಟೆ ನೋವು ಇರುತ್ತದೆ. 3-4 ಕಡೀರು ಬೇರು ತುಂಡು ಮಾಡಿ ಕಷಾಯ ಮಾಡಿ ಸೋಸಿ ಅದಕ್ಕೆ ಹಾಲು ಸೇರಿಸಿ ಕೆನೆ ಕಟ್ಟದಂತೆ ಪುನಃ ಕುದಿಸಿ ಕುಡಿಯಬೇಕು.

ಕ್ಷೀರಬಲಾ(101)ಆವರ್ತನ:

ಇದು ಮಾರ್ಕೆಟ್ಟಿನಲ್ಲಿ ಸಿಗುವ ಅತ್ಯಂತ ಪ್ರಚಲಿತ ಔಷಧಿ. ಇದರಲ್ಲಿ ಇರುವ ಮುಖ್ಯ ವನಸ್ಪತಿ ಕಡೀರ ಬೇರು. ಇದನ್ನು ತಯಾರು ಮಾಡುವ ಬಗ್ಗೆ ತಿಳಿದರೆ ಆಶ್ಚರ್ಯ ಆಗಬಹುದು. ಒಂದು ಲೀಟರ್ ಶುದ್ಧ ಎಳ್ಳೆಣ್ಣೆಗೆ ನಾಲ್ಕು ಲೀಟರ್ ಕಡೀರಬೇರು ಕಷಾಯ, ನಾಲ್ಕು ಲೀಟರ್ ಹಾಲು, 250ಗ್ರಾಂ ಕಡೀರಬೇರು ಪುಡಿಸೇರಿಸಿ ಪಾಕ ಮಾಡಿ ಸೋಸಿ ಸಂಗ್ರಹಿಸಬೇಕು. ಆಗ ಒಂದು ಆವರ್ತನ ಆಗುತ್ತದೆ. ಇದಕ್ಕೆ ಪುನಃ ನಾಲ್ಕು ಲೀಟರ್ ಕಡೀರಬೇರು ಕಷಾಯ, ನಾಲ್ಕು ಲೀಟರ್ ಹಾಲು ಹಾಗೂ 250ಗ್ರಾಂ ಕಡೀರ ಬೇರು ಪುಡಿ ಸೇರಿಸಿ ಪಾಕಮಾಡಿ ಸೋಸಿದಾಗ ಎರಡನೇ ಆವರ್ತನ ಆಗುತ್ತದೆ. ಹೀಗೆ ನೂರ ಒಂದು ಸಲ ಮಾಡಿದಾಗ ಕ್ಷೀರಬಲಾ(101)ಆವರ್ತನ ಆಗುತ್ತದೆ. ಇದನ್ನು 8-10 ಬಿಂದುಗಳಷ್ಟು ಬಿಸಿನೀರಿಗೆ ಸೇರಿಸಿ ಕುಡಿದರೆ ಹಲವಾರು ಶಾರೀರಿಕ ತೊಂದರೆಗಳನ್ನು ನಿವಾರಿಸಬಹುದು.  

ಅನೇಕ ವ್ಯಾಧಿಗಳನ್ನು ಸಮರ್ಥವಾಗಿ ಗುಣ ಪಡಿಸಲು ಉಪಯೋಗಿಸುವ ನಮ್ಮ ಹಿತ್ತಲಲ್ಲಿ ನಮ್ಮ ಕಾಲಿನಡಿಗೆ ಸಿಗುವ ವಿಶೇಷ ಗಿಡಮೂಲಿಕೆ ಕಡೀರಬೇರು.  

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.