Skip links

ಕೇಪುಳ

Scientific Name: Ixora coccinea

        ಕಿಸ್ಕಾರ ಎಂದು ಕನ್ನಡದಲ್ಲಿ ಕರೆದರೆ ಪಾರಂತಿ, ಬಿಂದುಕ ಎಂಬ ಸಂಸ್ಕøತ ಹೆಸರೂ ಇದೆ. ಕೇಪುಳ ಹೂ ತ್ರಿಕಾಲ ಪೂಜೆ, ದುರ್ಗಾ ಪೂಜೆಯಲ್ಲಿ ವಿಶೇಷವಾಗಿ ಉಪಯೋಗಿಸಲ್ಪಡುತ್ತದೆ. ತುಳುನಾಡಿನ ಭೂತಾರಾದನೆಯಲ್ಲಿಯೂ  ವಿಶೇಷ ಸ್ಥಾನವಿದೆ. ತುಳುನಾಡಿನ ಗದ್ದೆ ಗುಡ್ಡೆ ಮನೆಯ ಸುತ್ತ ಹೇರಳವಾಗಿ ಕಂಡುಬರುವ ಕೇಪುಳ ಗಿಡ ಕಾಂಕ್ರೀಟೀಕರಣದಿಂದ ಇದರ ಇರುವಿಕೆ ಕಡಿಮೆಯಾಗಿದೆ. ಬೇಸಿಗೆಯಲ್ಲಿ ಕಡುಬಿಸಿಲಿನಲ್ಲಿ ನೀರಿಲ್ಲದ ಗುಡ್ಡೆಗಳಲ್ಲಿ ಮಾತ್ರವಲ್ಲದೆ ಮುರ ಕಲ್ಲಿನ ಕೋರೆಗಳಲ್ಲಿಯೂ ಮೀಟರ್ಉ ದ್ದಕ್ಕೆ ಬೇರು ಬಿಟ್ಟು ಬೆಳೆದು ಹೂ ಬಿಡುವುದು. ನಿಸರ್ಗಕ್ಕೆ ರಂಗು ತುಂಬುವ, ಮನಸ್ಸಿಗೆ ಮುದ ನೀಡುವ, ಮದ್ದಿಗೂ, ಪೂಜೆಗೂ ಅಗತ್ಯವಿರುವ ಈ ಗಿಡ ದಟ್ಟವಾಗಿ ಬಹು ಕವಲೊಡೆದು ನಿತ್ಯ ಹರಿದ್ವರ್ಣದಿಂದ ಕಂಗೊಳಿಸುತ್ತದೆ. ಒಳಾಂಗಣಕ್ಕೂ ಆಗುತ್ತದೆ. ಫೂಲ್ ಸೈಡ್‍ನಲ್ಲಿಯೂ ಶೋಭಿಸುತ್ತದೆ.

ಆಯುರ್ವೇದ ಗ್ರಂಥಗಳಲ್ಲಿ ಇದರ ಉಲ್ಲೇಖ ಉಪಯೋಗ ಹೆಚ್ಚಾಗಿ ಕಂಡು ಬಾರದಿದ್ದರೂ ನಾಟೀ ವೈದ್ಯಲೋಕದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗಿಸಿ ಪ್ರಯೋಜನ ಕಂಡುಕೊಂಡಿದ್ದಾರೆ.  

ಅಜೀರ್ಣ, ಬೇದಿ, ಚರ್ಮದ ತುರಿಕೆ ಕಜ್ಜಿಗಳಲ್ಲೂ ಇದರ ಹೂ, ಎಲೆ, ಬೇರುಗಳನ್ನು ಉಪಯೋಗಿಸಲಾಗುತ್ತದೆ.   ಹುಟ್ಟಿದ ಮಗುವಿಗೆ ಬಿ-ಕಾಂಪ್ಲೆಕ್ಸ್ ಅಥವಾ ಇನ್ನಿತರ ಪೋಷಕ ಪರಿಣಾಮ ಬೀರುವ ಡ್ರಾಪ್ಸ್‍ಗಳನ್ನು ಕೊಡುವುದು ಎಲ್ಲರಿಗೂ ಗೊತ್ತಿದೆ. ಆದರೆ ಮನೆಯಲ್ಲಿಯೇ ಪ್ರಸವವಾಗುತ್ತಿರುವ ದಿನಗಳಲ್ಲಿ ಮಗುವಿಗೆ ಕೇಪುಳ ಹೂವಿನ ಕೇಸರ ತೆಗೆದು ಒಂದೆರೆಡು ಹೂ, ಕೇಪುಳ ಹಣ್ಣು, ಪೇರಳೆ, ಎಂಜಿರ್, ಕುಂಟನೇರಳೆ ಚಿಗುರು, ಚೇರೆ ಮರದ ಚಿಗುರೆಲೆಯನ್ನು ತೊಳೆದು ಒದ್ದೆತೆಗೆದು ಜಜ್ಜಿ, ಅರೆದು ಶುಭ್ರ ಬಟ್ಟೆಯಲ್ಲಿ ಹಾಕಿ ಹಿಂಡಿದಾಗ ಸಿಗುವ 5-6 ಬಿಂದುಗಳನ್ನು ಮಗುವಿಗೆ ಕೊಟ್ಟು ಎಲ್ಲಾ ವಿಟಮಿನ್‍ಗಳು ಸಿಗುವಂತೆ ಮಾಡುತ್ತಿದ್ದರು. ಇದನ್ನೇ ಮಗುವಿಗೆ ಕನೆರು ಕೊಡುವುದು ಎಂದು ಹೇಳುತ್ತಿದ್ದರು. ನಾವು ಆಧುನಿಕರಾದಂತೆ ಇದೆಲ್ಲವೂ ಮಾಯವಾಗಿದೆ.  

ದಡಿಕೆ, ಬೆಸರ್ಪು:

ಆಧುನಿಕ ಜಗತ್ತಿನಲ್ಲಿ ಕೃತ್ರಿಮ ವಸ್ತುಗಳಿಗೆ ಪ್ರಾಶಸ್ಯ್ತ, ಹೋಟೇಲುಗಳಲ್ಲಿ ಊಟವಾದ ನಂತರ ಕೈ ತೊಳೆಯಲು Finger bowl ಕೊಡುತ್ತಾರೆ. ಅದರಲ್ಲಿ ಬಿಸಿನೀರಿನೊಂದಿಗೆ ಲಿಂಬೆಹಣ್ಣಿನ ಒಂದು ತುಂಡು ಇರುತ್ತದೆ. ಕೈಯನ್ನು ಅದರಲ್ಲಿ ಮುಳುಗಿಸಿ ಲಿಂಬೆ ಹುಳಿಯನ್ನು ಹಿಸುಕಿ ಕೈ ತೊಳೆದು ತೃಪ್ತಿ ಪಡುತ್ತೇವೆ. ಆದರೆ ಬಾಯಾರಿಕೆಗೆ ಲಿಂಬೆ ಹಣ್ಣಿನ essence ಹಾಕಿದ  ಸಕ್ಕರೆ ಪಾನಕ ಕುಡಿಯುತ್ತೇವೆ. ಇದರೊಂದಿಗೆ ರಾಸಾಯನಿಕ ಬಣ್ಣಗಳನ್ನೂ ಬಳಸಿದ ಪಾನೀಯವನ್ನು ಕುಡಿಯುತ್ತೇವೆ. ಅಥವಾ ಔಷಧಿ ಸಿಂಪಡಿಸಿದ ತರಕಾರಿ ಸೇವನೆಗಳಿಂದ ಮನುಷ್ಯನ ಶರೀರದಲ್ಲಿ ಅಲರ್ಜಿ ಸೂಚಕವಾಗಿ ತುರಿಕೆ, ದಡಿಕೆಗಳು ಕಂಡು ಬರುತ್ತದೆ. ವರ್ಷ ಗಟ್ಟಲೆ ತೊಂದರೆಯನ್ನು ಅನುಭವಿಸುತ್ತಾರೆ. ಇಂತಹ ಅಲರ್ಜಿಗೆ ಕೇಪುಳ ಬೇರನ್ನು ನೀರಲ್ಲಿ ಅರೆದು 30 ರಿಂದ 40 ದಿನ ಕುಡಿಯುವುದರಿಂದ ಗುಣವಾಗುವುದು. ಅಥವಾ ಕೇಪುಳ ಬೇರಿನೊಂದಿಗೆ ಹಸಿ ಅರಸಿನವನ್ನು ಸೇರಿಸಿ ಅರೆದು ಕುಡಿಯುವುದರಿಂದಲೂ ಪ್ರಯೋಜನ ಪಡೆಯಬಹುದು. ಚಿಕಿತ್ಸಾ ಸಮಯದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿ ಅಥವಾ ಮಾಂಸಾಹಾರ ವಜ್ರ್ಯ ಮಾಡಬೇಕು.

ಕೆಂಪಾಗಿ ಬಾವು, ಉರಿ ಇರುವಾಗಲೂ ಇದನ್ನು ಅರೆದುಲೇಪಿಸುವುದರಿಂದ ಗುಣವಾಗುವುದು.ಮಕ್ಕಳ ಬೆಳವಣಿಗೆ ಕುಂಠಿತವಾಗಲು ಯಾವುದೋ ಪೋಷಕಾಂಶ ಕಡಿಮೆಯಾಗಿರುವುದು ಕಾರಣವಾಗಿರಬಹುದು. ಅಂತಹ ಸಂದರ್ಭದಲ್ಲಿ ಕೇಸರ ತೆಗೆದ ಕೇಪುಳ ಹೂವನ್ನು ಅರೆದು ರಸ ತೆಗೆದು ಮಜ್ಜಿಗೆಯೊಂದಿಗೆ ಕುದಿಸಿ ಮಕ್ಕಳಿಗೆ ಕೊಡಬೇಕು.

ಅಜೀರ್ಣದಿಂದಾದ ಭೇದಿಗೆ ಕೇಪುಳ ಎಲೆಯ ರಸ 10ml ನಷ್ಟು 2-3 ಸಲ ಕುಡಿದರೆ ಕಡಿಮೆಯಾಗುವುದು. ತುಂಬಾ ಸಮಯದಿಂದ ಗುಣವಾಗದ ಹುಣ್ಣುಗಳಿಗೆ ಕೇಪುಳ ಹೂ, ಬೇರು, ಕರಿಜೀರಿಗೆ ಸೇರಿಸಿ ತೆಂಗಿನೆಣ್ಣೆಯಲ್ಲಿ ಪಾಕಮಾಡಿ ಹಚ್ಚಿದರೆ ವ್ರಣಗಳು ಗುಣವಾಗುವುದು. ಈಗ ನೂರಾರು ವಿಧದ ಬಣ್ಣದ ಅಲಂಕಾರಿಕ ಕೇಪುಳ ಗಿಡಗಳು ಲಭ್ಯ. ಆದರೆ ಔಷಧಿಗೆ ನಮ್ಮ ಗುಡ್ಡದಲ್ಲಿ ಸಿಗುವ ಕೇಪುಳ ಪ್ರಭ್ರೇದವೇ ಸೂಕ್ತ.

ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.