Skip links

ಭೃಂಗರಾಜ (ಗರ್ಗ)

Scientific name: Eclipta alba

ಇದಕ್ಕೆ ಕೇಶರಾಜ ಎಂಬ ಅನ್ವರ್ಥನಾಮ ಇದೆ. ಒಂದರಿಂದ ಎರಡು ಅಡಿ ಎತ್ತರ ಬೆಳೆಯುವ ಗಿಡ. ಇದರ ಕಾಂಡ ಕಪ್ಪಾಗಿ ರೋಮಶವಾಗಿರುತ್ತದೆ. ಒಂದರಿಂದ ನಾಲ್ಕು ಇಂಚು ಉದ್ದ ಅರ್ಧದಿಂದ ಒಂದು ಇಂಚು ಅಗಲದ ಎಲೆಗಳು ಅಭಿಮುಖವಾಗಿ ಕಾಂಡದಿಂದ ಹುಟ್ಟಿಕೊಳ್ಳುತ್ತದೆ. ಕಾಂಡದಿಂದ ಅನೇಕ ಶಾಖೆಗಳು ಬೆಳೆದು ಶಾಖೆಗಳಲ್ಲಿ ದೂರ ದೂರ ಎಲೆಗಳು ಕಂಡುಬರುತ್ತದೆ. ಕವಲೊಡೆದು ಬೆಳೆದ ಪ್ರತಿ ತುದಿಗಳಲ್ಲಿಯೂ ಬಿಳಿವರ್ಣದ ಉರುಟಾದ ಹೂಗಳು ಕಂಡುಬರುತ್ತದೆ. ಚೆಂಡು ಹೂವಿನಂತೆ ದಳಗಳು ವೃತ್ತಾಕಾರದಲ್ಲಿ ದಟ್ಟವಾಗಿ ಹರಡಿಕೊಂಡಿರುತ್ತದೆ. ಇದುವೇ ಬೀಜವಾಗಿ ಒಣಗಿ ಒಡೆದು ಭೂಮಿಗೆ ಬೀಳುತ್ತದೆ.

ಜಲಾಶ್ರಯ ಅಧಿಕ ಇರುವಲ್ಲಿ ಭಾರತದ ಉದ್ದ ಅಗಲಕ್ಕೂ ಕಂಡು ಬರುತ್ತದೆ. ಕೇಶರಾಜ ಎಂದು ಕರೆಯುವ ಈ ಗಿಡ ಮೂಲಿಕೆಯ ಉಪಯೋಗದಿಂದ ಕೂದಲು ಉದುರುವುದು ನಿಲ್ಲುವುದು, ಕೂದಲು ಚೆನ್ನಾಗಿ ಬೆಳೆಯಲು ಸಹಕರಿಸುವುದು. ಯಕೃತ್‍ನ ತೊಂದರೆಯಲ್ಲಿ, ಹಸಿವು ಕಡಿಮೆ ಅಥವಾ ಬಾಯಿ ರುಚಿ ಇಲ್ಲದಿರುವಲ್ಲಿ, ತಲೆನೋವು, ಡಯಾಬಿಟಿಸ್‍ನಲ್ಲಿಯೂ ಪ್ರಯೋಜನಕಾರಿಯಾಗಿದೆ.

ಇದರಲ್ಲಿ ಇರುವ ಸಸ್ಯಜನಿತ ಸತ್ವವಾದ Wedelolactone  ಕೂದಲಿನ ಬೆಳವಣಿಗೆಯಲ್ಲಿ, ಲಿವರಿನ ತೊಂದರೆಯಲ್ಲಿ, ಹಸಿವು ಇಲ್ಲದಿರುವಲ್ಲಿ, ಸಣ್ಣ ಪ್ರಮಾಣದಲ್ಲಿ ಬಳಲುತ್ತಿರುವ ಮಧುಮೇಹಿಗಳಲ್ಲೂ ಪ್ರಯೊಜನಕಾರಿಯಾಗಿದೆ ಎಂದು ಸಂಶೋದಿಸಲ್ಪಟ್ಟಿದೆ. “ಭಾವ ಪ್ರಕಾಶ” ಗ್ರಂಥದಲ್ಲಿಯೂ ಇದೇ ಉಪಯೋಗಗಳನ್ನು ಉಲ್ಲೇಖಿಸಿದ್ದಾರೆ.  

ಕೂದಲು ಉದುರುವಿಕೆ:

           ನಮ್ಮ ಊರಲ್ಲಿ ಮನೆ ಮನೆಗಳಲ್ಲಿ ಗರ್ಗದ ಎಣ್ಣೆ ತಯಾರಿಸಿ ತಲೆಗೆ ಹಚ್ಚುತ್ತಾರೆ. ಕೂದಲಿನ ಆರೋಗ್ಯಕ್ಕೆ  ಒಳ್ಳೆಯದೆಂದುನಮ್ಮ ಹಿರಿಯರು ಕಂಡು ಕೊಂಡಿರುವ ಸತ್ಯ  ಇದರ ಕಾಂಡ ಸಹಿತ ಎಲೆಯ ರಸವನ್ನು ಸಂಗ್ರಹಿಸಿ ಎಳ್ಳೆಣ್ಣೆಗೆ ಹಾಕಿ ಎಳ್ಳೆಣ್ಣೆಯೊಂದಿಗೆ   ಸ್ವಲ್ಪ ಜೇಷ್ಠಮಧು ಪುಡಿ ಮಿಶ್ರಮಾಡಿ ತೈಲ ಪಾಕ ಮಾಡಿ ಪ್ರತಿನಿತ್ಯ ತಲೆಗೆ ಹಚ್ಚಿ ಸ್ನಾನ ಮಾಡಿದರೆ ದೀರ್ಘಕಾಲ ಕೂದಲು ಕಪ್ಪಾಗಿಯೇ ಇರುತ್ತದೆ.

ಸಣ್ಣ ಪ್ರಾಯದಲ್ಲಿ ಕಂಡುಬರುವ ಬಾಲ ನೆರೆಯೂ ಮಾಯವಾಗುತ್ತದೆ. ತಲೆಯ ಚರ್ಮದ ಒಣಗುವಿಕೆಯನ್ನು ತಡೆಗಟ್ಟುತ್ತದೆ. ತಲೆ ಹೊಟ್ಟು ಕಡಿಮೆ ಮಡುತ್ತದೆ. ತಲೆಯ ಚರ್ಮದಲ್ಲಿ ಕಂಡುಬರುವ ಕೆಲವು ಚರ್ಮದ ತೊಂದರೆಗಳನ್ನು ನಿವಾರಿಸಿ ಕೂದಲು ದಟ್ಟವಾಗಿ ಹುಟ್ಟಲು ಸಹಕರಿಸುತ್ತದೆ. ಎಣ್ಣೆಯ ನಾಲ್ಕು ಪಾಲು ರಸ ಸೇರಿಸಿ ಸರಿಯದ ಕ್ರಮದಲ್ಲಿ ತೈಲ ಪಾಕ ಮಾಡಿದರೆ ಮಾತ್ರ ಪ್ರಯೋಜನ ಕಂಡುಬರುವುದು. ತಲೆಗೆ ಸ್ನಾನ ಮಾಡುವಾಗ ರಾಸಾಯನಿಕ ಯುಕ್ತ ಸೋಪು ಶ್ಯಾಂಪುಗಳನ್ನು ಬಳಸಿದರೂ ತೈಲದಿಂದ ಪ್ರಯೋಜನ ಸಿಗಲಾರದು.

ಯಕೃತ್:(liver) 

ಯಕೃತ್ ದಪ್ಪವಾಗುವುದು, ಯಕೃತ್‍ನಲ್ಲಿ ಬೊಜ್ಜು ತುಂಬುವುದು (Fatty liver), ಜಾಂಡಿಸ್ ಇರುವಾಗಲೂ ಇದರ ರಸವನ್ನು ಕಾಲು ಚಮಚ ಒಳ್ಳೆಮಣಸಿನ ಪುಡಿಯೊಂದಿಗೆ 24ರಿಂದ 30 ದಿನ ಸೇವಿಸಬೇಕು. ಗಿಡವನ್ನು ಚೆನ್ನಾಗಿ ತೊಳೆದು ನೆರಳಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಸಂಗ್ರಹಿಸಬೇಕು. ಇದನ್ನು ಅರ್ಧ ಚಮಚದಷ್ಟು ನೀರಿನಲ್ಲಿ ಕಲಸಿ ದಿನಕ್ಕೆರಡು ಸಲ ಸೇವಿಸಬಹುದು.

ಹಸಿವು:

ಹಸಿವು ಇಲ್ಲದಿದ್ದರೆ, ಬಾಯಿ ರುಚಿ ಕಳೆದುಕೊಂಡರೆ ಆಹಾರ ಸೇವಿಸಲಾಗುವುದಿಲ್ಲ. ಭೃಂಗರಾಜದ ಪುಡಿಯನ್ನು ದಿನಕ್ಕೆರಡು ಸಲ ಅರ್ಧ ಚಮಚದಷ್ಟು ಸೇವಿಸುವುದರಿಂದ ಯಕೃತ್‍ನ ಕಾರ್ಯಕ್ಷಮತೆ ವೃದ್ದಿಯಾಗುವುದು ಹಾಗೂ ಹಸಿವು ಉಂಟಾಗುವುದು.

ಮಧುಮೇಹ:

            ರಕ್ತದಲ್ಲಿ ಇನ್ಸುಲಿನ್ ಕಡಿಮೆಯಾದರೆ ಮಧುಮೇಹ ಕಂಡುಬರುತ್ತದೆ. ಭೃಂಗರಾಜ ಪಾನ್‍ಕ್ರಿಯಾಟಿಕ್ಬೀ ಟಾಸೆಲ್‍ಗಳನ್ನು ಪ್ರಚೋದಿಸುವುದರಿಂದ ಇನ್ಸುಲಿನ್  ಉತ್ಪತ್ತಿ ಅಧಿಕವಾಗುವುದು. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು. ಎಲ್ಲಾ ವಿಧದ ಮಧುಮೇಹಿಗಳಲ್ಲಿಯೂ ಅನುಕೂಲವಾಗದು. ರೋಗಿಯಲ್ಲಿ ಕಾಣುವ  ದೋಷಾನುಸಾರ (ವಾತ, ಪಿತ್ಥ, ಕಫ) ಉಪಯೋಗಿಸಿ ಪ್ರಯೋಜನ ಪಡೆಯಬಹುದು.

∙ಆರೋಗ್ಯ ವರ್ಧಕ:

ಒಂದು ತಿಂಗಳು ಪ್ರತಿನಿತ್ಯ 10ml ನಷ್ಟು ಇದರ ರಸ (juice) ಸೇವಿಸಿದರೆ ತಲೆನೋವು ಕಡಿಮೆಯಾಗುವುದು, ವೀರ್ಯವರ್ಧನೆ ಹಾಗೂ ಬಲವೃದ್ದಿಯಾಗುವುದು. ಉಪಯೋಗಿಸುವ ಗಿಡ ನೈಸರ್ಗಿಕವಾಗಿ ಬೆಳೆದಿರಬೇಕು, ಸ್ವಚ್ಚವಾಗಿರಬೇಕು. ಏಕಮೂಲಿಕಾ ಪ್ರಯೋಗ ಆಯುರ್ವೇದದಲ್ಲಿ ವಿಶೇಷ ಮಹತ್ವ ಪಡೆದಿದೆ. ಆದರೆ ಉಪಯೋಗಿಸುವ ವ್ಯಕ್ತಿಯ ಪ್ರಕೃತಿ ಯಾವುದೆಂಬ ಜ್ಞಾನ ಇದ್ದರೆ ಮಾತ್ರ ಸರಿಯಾದ ಪರಿಣಾಮ ಕಂಡುಬರುವುದು.

                                            

ಡಾ|| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.