Skip links

ಲಾವಂಚ

Scientific Name: Vetiveria zizanioides

       ಉಶೀರ, ರಾಮಚ್ಚ, ಮುಡಿವಾಳ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹುಲ್ಲು ಜಾತಿಯ ಗಿಡ. ಪೊದೆಯಾಗಿ ಗುಚ್ಚಗಳಾಗಿ 4-5 ಅಡಿ ಎತ್ತರ ಬೆಳೆಯುತ್ತದೆ. 1-2 ಅಡಿ ಉದ್ದವಾಗಿ ಭತ್ತದ ಹುಲ್ಲಿನ ಎಲೆಯಂತೆ ಇರುತ್ತದೆ. ಪರಸ್ಪರ ಎದುರುಬದುರಾಗಿ ಕಾಂಡವನ್ನು ಆವರಿಸಿರುತ್ತದೆ. ಎಲೆಗಳ ಅಲಗು ಹರಿತವಾಗಿರುತ್ತದೆ. ಹೂ 1-1 1/2 ಅಡಿ ಉದ್ದವಿದ್ದು ಬ್ರಶ್‍ನಂತೆ ಪಿರಮಿಡ್ ಆಕಾರದಲ್ಲಿ ನಸು ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತದೆ. ಇದರ ಬೇರು ಸಪೂರ ಉದ್ದವಾಗಿ ಬೆಳೆಯುತ್ತದೆ. ಸುಗಂಧವಿರುವ ತೈಲ ಬೇರಿನಲ್ಲಿ ಇರುವುದರಿಂದ ಆಘ್ರಾಣಿಸುವಾಗ ಪರಿಮಳ ಸೂಸುತ್ತದೆ.  

ಬೇರಿನಿಂದ ಸಿಗುವ ತೈಲ(Essential oil)ವನ್ನು ವೆಟಿವೇರ್ ಆಯಿಲ್ಎ ನ್ನುತ್ತಾರೆ. ಇದರ ಪರಿಮಳ  ಮನಸ್ಸಿಗೆ ಸುಖ, ಆಹ್ಲಾದತೆಯನ್ನು ಕೊಡುತ್ತದೆ. ಚರ್ಮಕ್ಕೆ ಹಚ್ಚುವುದರಿಂದ ಉತ್ತಮ ರಕ್ತ ಪರಿಚಲನೆ ಮಾಡುವುದು. ನೋವು ಬಾವು ಕಡಿಮೆಯಾಗುವುದು. ಮಾಂಸಖಂಡ ಸೆಳೆತ,ತಲೆನೋವಿಗೂ ಪರಿಣಾಮಕಾರಿಯಾಗಿದೆ.   ಬೇರು ಔಷಧಿಗಾಗಿ ಉಪಯೋಗಿಸಲಾಗುತ್ತದೆ. ಶರೀರಕ್ಕೆ ತಂಪನ್ನು ನೀಡುವ ವನಸ್ಪತಿ.  

ಜೀರ್ಣಕ್ರಿಯೆ:

ಹೊಟ್ಟೆಯಲ್ಲಿ ಉರಿ ಜಾಸ್ತಿ ಇದ್ದರೆ ಜೀರ್ಣಕ್ರಿಯೆ ಸರಿ ಇಲ್ಲ ಎಂದರ್ಥ. ಆಮ್ಲದ (Acid) ಸ್ರಾವ ಹೊಟ್ಟೆಯಲ್ಲಿ ಅಧಿಕ ಉತ್ಪತ್ತಿಯಾಗುವುದರಿಂದ ಹೊಟ್ಟೆ ಉರಿಯ ಅನುಭವ ಆಗುತ್ತದೆ. ಬೇರನ್ನು ನೀರಲ್ಲಿ ಕುದಿಸಿದರೆ ಇದರಲ್ಲಿ ಇರುವ ತೈಲದ ಅಂಶ ಆವಿಯಾಗಿ ಹೋಗುತ್ತದೆ. ಬೇರನ್ನು ಸಣ್ಣದಾಗಿ ತುಂಡುಮಾಡಿ ಪಾತ್ರೆಗೆ ಹಾಕಿ ಅದಕ್ಕೆ ಕುದಿಯುವ ನೀರು ಸೇರಿಸಿ ಮುಚ್ಚಿಟ್ಟು ತಣಿದ ನಂತರ ಸೋಸಿ ಕುಡಿಯಬೇಕು. ಇದರೊಂದಿಗೆ ಕೊತ್ತಂಬರಿಯನ್ನು ಸೇರಿಸಿ ತಯಾರಿಸಿ ಕುಡಿದರೆ ಶೀಘ್ರವಾಗಿ ಹೊಟ್ಟೆ ಉರಿ ಕಡಿಮೆಯಾಗುವುದು.

ಲಾವಂಚ ಬೇರಿನ ಕಷಾಯದಿಂದ ಜ್ವರ, ಶರೀರದಲ್ಲಿ ಉರಿ, ಬಿಸಿಯಾದಂತೆ ಆಗುವ ಅನುಭವ ಕಡಿಮೆ ಆಗುವುದು. ಆಗಾಗ ಬಾಯಾರಿಕೆ (ದಾಹ) ಆಗುವುದಿದ್ದರೂ ಇದನ್ನು ಸೇವಿಸಬಹುದು.

ವಾಂತಿ:

ಲಾವಂಚ ಮತ್ತು ಕೊತ್ತಂಬರಿ ಪುಡಿಯನ್ನು ಬಿಸಿ ನೀರಿಗೆ ಹಾಕಿ ಕಲಸಿ ಸೋಸಿ ಆಗಾಗ ಕುಡಿಯುವುದರಿಂದ ವಾಂತಿ ಕಡಿಮೆಯಾಗುವುದು.

ಬೆವರುವಾಸನೆ:

ಕೆಲವರ ಬೆವರು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಲಾವಂಚದ ನಯವಾದ ಪುಡಿಯನ್ನು ನೀರಲ್ಲಿ ಕಲಸಿ ಮೈಗೆ ಹಚ್ಚಿ 1-2 ಗಂಟೆ ನಂತರ ಸ್ನಾನ ಮಾಡುವುದರಿಂದ ದುರ್ಗಂಧ ಕಡಿಮೆಯಾಗುವುದು. ದಡಿಕೆ, ತುರಿಕೆಗಳು ಇರುವಾಗಲೂ ಇದನ್ನು ಚರ್ಮಕ್ಕೆ ಲೇಪಿಸಬಹುದು.

ಉರಿಮೂತ್ರ:

ನೀರು ಕಡಿಮೆ ಕುಡಿಯುವವರಿಗೆ ಹೆಚ್ಚಾಗಿ ಉರಿಮೂತ್ರ ಕಂಡುಬರುತ್ತದೆ. ಉರಿಮೂತ್ರ ಶುರು ಆದರೆ ಜಾಸ್ತಿ ನೀರು ಕುಡಿದರೂ ಕಡಿಮೆ ಆಗುವುದಿಲ್ಲ. ಉಶೀರ ಬೇರನ್ನು ಕಷಾಯ ಮಾಡಿ ಆಗಾಗ ಕುಡಿಯುವುದರಿಂದ  ಉರಿಮೂತ್ರ ಕಡಿಮೆಯಾಗುವುದು.

ನಿಶ್ಯಕ್ತಿ :

ಡಿಸ್ಟಿಲೇಶನ್ ಮೂಲಕ ಪಡೆದ ಉಶೀರದ ಸತ್ವ ಒಂದು ಚಮಚ, ಅರ್ಧ ಲೀಟರ್ ನೀರಿಗೆ ಸೇರಿಸಿ ಜೇನು, ಕಲ್ಲುಸಕ್ಕರೆ, ಲಿಂಬೆಹುಳಿ ರಸದೊಂದಿಗೆ ಕುಡಿದರೆ ನಿಶ್ಯಕ್ತಿ ನಿತ್ರಾಣ ಕಡಿಮೆಯಾಗುವುದು. ಲಾವಂಚದ ಸತ್ವ ಸಿಗದಿದ್ದರೆ   ಲಾವಂಚದ ಕಷಾಯಕ್ಕೆ ಜೇನು, ಕಲ್ಲು ಸಕ್ಕರೆ, ಲಿಂಬೆರಸ ಸೇರಿಸಿ ಕುಡಿಯಬಹುದು.  

ರಕ್ತಸ್ರಾವ:

ಮುಟ್ಟಿನ ಅಧಿಕ ಸ್ರಾವದಲ್ಲಿಯೂ ಇದರ ಕಷಾಯ ಸೇವನೆ ಉತ್ತಮ ಪ್ರಯೋಜನಕಾರಿಯಾಗಿದೆ. ಲಾವಂಚದ ಬೇರನ್ನು ಉಪಯೋಗಿಸಿ ತಯಾರಿಸಿದ ಉಶೀರಾಸವ ಸೇವನೆಯಿಂದಲೂ ಗುಣವಾಗುವುದು. ಲಾವಂಚದ ಬೇರನ್ನು ಕಾರ್ಪೆಟ್, ಮ್ಯಾಟ್, ಬೀಸಣಿಗೆ, ಬ್ಯಾಗ್ಮುಂ ತಾದ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

 ಡಾ| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.