Skip links

ವೀಳ್ಯದೆಲೆ

Scientific Name: Piper betle

        ಬಳ್ಳಿಯಲ್ಲಿ ಕಂಡುಬರುವ ಹೃದಯಾಕಾರದ ಈ ಎಲೆಗೆ ನಾಗವಲ್ಲಿ, ತಾಂಬೂಲ ಬಳ್ಳಿ, ವೀಳಯದೆಲೆ ಎಂದೂ ಕರೆಯುತ್ತಾರೆ. ಹಲವಾರು ವರುಷ ನಾಶವಾಗದೆ ಬದುಕಿ ಉಳಿಯುತ್ತದೆ. ಉತ್ತರ ಭಾರತದಿಂದ ಬರುವ ಪಾನ್ ಅಗಲವಾಗಿ ದುಂಡಾಗಿರುತ್ತದೆ. ತುಳುವಿನಲ್ಲಿ ಹೇಳುವ “ಬಚ್ಚಿರೆ ಬಜ್ಜಯಿ” ಇಲ್ಲದೆ ದೇವ ಕಾರ್ಯಗಳು, ದೈವ ಕಾರ್ಯಗಳು, ಶುಭಕಾರ್ಯಗಳು ನಡೆಯದು. ಜ್ಯೋತಿಷ್ಯದಲ್ಲೂ ತಾಂಬೂಲ ಪ್ರಶ್ನೆ ಎಂಬ ಚಿಂತನೆ ಇದೆ. ವೀಳ್ಯದೆಲೆ ಶುಭಕಾರ್ಯಗಳಿಗೆ ಮತ್ತು ಜಗಿದು ಉಗುಳಲು ಸೀಮಿತವಾಗಿರದೆ ಬಹಳಷ್ಟು ಔಷಧೀಯ ಗುಣಗಳ ಹೊಂದಿದೆ.

ಮರಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿ ಆಶ್ರಯಿಸಿದ ಮರಗಳ ಗುಣಗಳಿಗೆ ಅನುಸಾರ ತನ್ನ ಎಲೆಯಲ್ಲಿ ತೀಕ್ಷ್ಣ ಅಥವಾ ಸೌಮ್ಯ ಗುಣವನ್ನು ಹೊಂದಿರುತ್ತದೆ. ಬಳ್ಳಿ ಬೆಳೆಯಲು ಹೊಂಗಾರೆ ಅಥವಾ ನುಗ್ಗೆಮರಗಳನ್ನು ಆಧಾರವಾಗಿ ಬಳಸುತ್ತಾರೆ.

ಇದು ರುಚಿಯಲ್ಲಿ ಸ್ವಲ್ಪ ಖಾರ, ಚೊಗರು ಆಗಿದ್ದರೂ ಜಗಿದು ಹೊಟ್ಟೆಗೆ ಸೇರಿದರೆ ತನ್ನ ಉಷ್ಣ ಗುಣವನ್ನು ತೋರಿಸುತ್ತದೆ. ವೀಳ್ಯದೆಲೆಯನ್ನು ಸುಣ್ಣ, ಹೊಗೆ ಸೊಪ್ಪಿನೊಂದಿಗೆ ಸೇವಿಸಿದರೆ ‘ಎಲ್ಲಾ ಗುಣಮಸಿ ನುಂಗಿತು’ ಎನ್ನುವಂತೆ ಹೊಗೆ ಸೊಪ್ಪಿನ ದುಷ್ಟ ಪರಿಣಾಮ ಶರೀರಕ್ಕೆ ಆಗಬಹುದೇ ಹೊರತು ತಾಂಬೂಲದ ನೈಜ ಪರಿಣಾಮ ಬೀರದು.

 ವೀಳ್ಯದೆಲೆಯೊಂದಿಗೆ ಪಚ್ಚೆ ಕರ್ಪೂರ, ಜಾಯಿಕಾಯಿ, ಗಂಧಮೆಣಸು(ಬಾಲ ಮೆಣಸು) ಲವಂಗ, ಕಾಚು(ಖದಿರ ಸಾರ), ಅಡಿಕೆ, ಪತ್ರೆ, ಏಲಕ್ಕಿ ಸೇರಿಸಿ ಜಗಿದು ಸೇವಿಸಬೇಕು. ಇದರಿಂದ ದವಡೆ, ಹಲ್ಲು, ಒಸಡು, ಸ್ವರ ತಂತುಗಳ ಮೇಲಿರುವ ಕೊಳೆನಾಶವಾಗಿ ನಾಲಗೆಯನ್ನು ಶುಭ್ರಮಾಡುವ ಮೂಲಕ(ಅಗ್ರ ಕಡಿಮೆ ಮಾಡುವುದು) ಹಸಿವು ವೃದ್ಧಿಯಾಗಿ ಉತ್ತಮ ಜೀರ್ಣಕ್ರಿಯೆ ಉಂಟಾಗುವುದು.

ಧನ್ವಂತರಿ ನಿಘಂಟಿನಲ್ಲಿ “ತಾಂಬೂಲಂ ಕಾಮಾಗ್ನಿ ಸಂದೀಪನಂ” (ಕಾಮ ಉತ್ತೇಜಕ) ಎಂಬುದಾಗಿ ತಾಂಬೂಲದ ಬಗ್ಗೆ ವಿಷೇಶಗುಣವನ್ನು ಹೇಳಿದ್ದಾರೆ. ಮುದ್ದಣ ಮನೋರಮೆಯರ ಸಲ್ಲಾಪದಲ್ಲೂ ತಾಂಬೂಲದ ಪ್ರವೇಶವನ್ನು ನಾವು ಓದಿದ್ದೇವೆ.

ಸುಶ್ರುತ ಸಂಹಿತೆಯಲ್ಲಿ ಇದನ್ನು “ಸ್ವರ್ಯ” ವಾಗಿ (ಸ್ವರವನ್ನು ಉತ್ತಮಗೊಳಿಸುವ) ಉಪಯೋಗಿಸಬಹುದು ಎಂದು ಹೇಳಿದ್ದಾರೆ. ಇಲ್ಲಿ ವೀಳ್ಯದೆಲೆಯ ಬದಲು ಬೇರನ್ನು ಸ್ವಲ್ಪ ಬಿಸಿನೀರಿನೊಂದಿಗೆ ಜಗಿದು ಗಂಟಲಿಗೆ ತಾಗುವಂತೆ ಗುಳು ಗುಳು (gargle) ಮಾಡಿದರೆ ಸ್ವರದ ಮಾಧುರ್ಯ ಹೆಚ್ಚುವುದು.

 ಹೊಟ್ಟೆ ಉಬ್ಬರಿಸಿದಾಗ ವೀಳ್ಯದೆಲೆಯೊಂದಿಗೆ ಒಂದು ಕಲ್ಲು ಉಪ್ಪು, ಸಣ್ಣ ತುಂಡು ಓಟೆಹುಳಿ, ಹಸಿಶುಂಠಿ ಸೇರಿಸಿ ಜಗಿದು ನುಂಗಿದರೆ ಶಮನವಾಗುವುದು. ಶೀತ ಗಟ್ಟಿಯಾಗದೆ ನೀರಾಗಿ ಮೂಗಿನಿಂದ ಸೋರುತ್ತಿದ್ದರೆ ವೀಳ್ಯದೆಲೆಯನ್ನು ಬೆಂಕಿಯಲ್ಲಿ ಬಾಡಿಸಿ 1-2 ಚಮಚ ರಸ ತೆಗೆದು ಸೋಸಿ ಒಂದೆರಡು ದಿನ ಕುಡಿಯಬೇಕು. ಕೀಟಗಳು ಕಚ್ಚಿ ಬಾವು, ತುರಿಕೆ, ಕೆಂಪಾಗಿ ಚರ್ಮ ಕಂಡುಬಂದರೆ ವೀಳ್ಯದೆಲೆಯನ್ನು ನಯವಾಗಿ ಅರೆದು ಹಚ್ಚುವುದರಿಂದ ಕಡಿಮೆಯಾಗುವುದು.  

ಹುಳದ ಬಾದೆ ಇರುವಾಗ 10ml ವೀಳ್ಯದೆಲೆ ರಸಕ್ಕೆ ವಿಡಂಗ(ವಾಯು ವಿಳಂಗ) ಅರ್ಧ ಚಮಚ ಸೇರಿಸಿ 2 ದಿನ ಕುಡಿಯಬೇಕು. ಮಾಂಸಖಂಡ ಸೆಳೆತ ಇರುವಾಗ ವೀಳ್ಯದೆಲೆಯನ್ನು ಅರೆದು ಎಳ್ಳೆಣ್ಣೆಗೆ ಸೇರಿಸಿ ಬಿಸಿಮಾಡಿ ಹದ ಬಿಸಿ ಇರುವಾಗ ಮಾಂಸಖಂಡಗಳಿಗೆ ಹಚ್ಚಬೇಕು. ನೋವು ಬಾವು ಇರುವ ಸ್ಥಳಗಳಿಗೆ ವೀಳ್ಯದೆಲೆಯನ್ನು ಬಿಸಿ ಮಾಡಿ ನಿರಂತರ ಹತ್ತು ನಿಮಿಷ ಶೇಖ ಕೊಟ್ಟರೆ ಕಡಿಮೆಯಾಗುವುದು.

ವೀಳ್ಯದೆಲೆಯನ್ನು ಉಪಯೋಗಿಸಿ ತಯಾರಿಸುವ “ತಾಂಬೂಲಾಸವ” ಕಫವನ್ನು ಕಡಿಮೆ ಮಾಡುವುದು, ವೀರ್ಯವೃದ್ಧಿ ಮಾಡುವುದು, ಶರೀರಕ್ಕೆ ಶಕ್ತಿಯನ್ನು ಕೊಡುವುದು. “ಗದನಿಗ್ರಹ” ಗ್ರಂಥದಲ್ಲಿ ಈ ಔಷಧಿಯನ್ನು ಒಂದು ವರ್ಷಕಾಲ ಸೇವಿಸಿದರೆ ಆಯುಷ್ಯ ವೃದ್ಧಿಸುವುದೆಂದು ಉಲ್ಲೇಖಿಸಿದ್ದಾರೆ. ಅಂದರೆ ಆರೋಗ್ಯ ಕಾಪಾಡುವ ಟಾನಿಕ್ ಇದಾಗಿದೆ.

ಡಾ|| ಹರಿಕೃಷ್ಣ ಪಾಣಾಜೆ

Leave a comment

This website uses cookies to improve your web experience.